ಬೆಳ್ತಂಗಡಿ : ಉಜಿರೆಯ ಶ್ರೀ ಧ. ಮಂ. ಪದವಿ ಕಾಲೇಜು ಸಾರ್ಥಕ ಐವತ್ತು ವರ್ಷಗಳನ್ನು ಪೂರೈಸಿದೆ. ಸುವರ್ಣ ಮಹೋತ್ಸವದ ಸಂಭ್ರಮವನ್ನು ಡಿ. 17 ರಂದು ಅರ್ಥಪೂರ್ಣ ಚಟುವಟಿಕೆಗಳೊಂದಿಗೆ ಆಚರಿಸಲು ಸಿದ್ದವಾಗಿದೆ. ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿದ್ದು ವರ್ಷದುದ್ದಕ್ಕೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ಧ. ಮಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ.ಯಶೋವರ್ಮ ತಿಳಿಸಿದರು.ಅವರು ಬುಧವಾರ ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸುವರ್ಣ ಮಹೋತ್ಸವದ ವಿವರ ನೀಡಿದರು.
ಕಾಲೇಜು 1966ರಲ್ಲಿ ಆರಂಭಗೊಂಡು ಗುಣಾತ್ಮಕ ಶಿಕ್ಷಣದೊಂದಿಗೆ ಯಶಸ್ವಿಯಾಗಿ ಮುನ್ನಡೆದು ಬಂದಿದೆ. ಡಿ.17 ರಂದು ಬೆಂಗಳೂರಿನ ಪ್ರಸನ್ನ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಸುಖಬೋದಾನಂದ ಸ್ವಾಮೀಜಿಯವರು ಸುವರ್ಣ ಸಂಭ್ರಮದ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಟಿ. ಬಿ. ಜಯಚಂದ್ರ, ಮಂಗಳೂರು ವಿ.ವಿ. ಕುಲಪತಿ ಡಾ. ಕೆ. ಭೈರಪ್ಪ ಹಾಗೂ ಶಾಸಕ ಕೆ. ವಸಂತ ಬಂಗೇರ ಪಾಲ್ಗೊಳ್ಳುವರು.
ಡಿ. 18ರಂದು ಬೆಳಿಗ್ಗೆ ನೂತನವಾಗಿ ನಿರ್ಮಾಣಗೊಂಡಿರುವ ಸುವರ್ಣ ಮಹೋತ್ಸವದ ಸವಿನೆನಪಿನ ಈಜುಕೊಳದ ಉದ್ಘಾಟನಾ ಕಾರ್ಯಕ್ರಮವು ನಡೆಯಲಿದೆ. ರಾಜ್ಯದ ಅರಣ್ಯ ಸಚಿವ ರಮಾನಾಥ ರೈ ಅವರು ಈಜುಕೊಳವನ್ನು ಉದ್ಘಾಟಿಸಲಿದ್ದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್, ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಯುಜಿಸಿಯ ಉಪಕಾರ್ಯದರ್ಶಿ ಬೆಂಗಳೂರಿನ ಪ್ರಾದೇಶಿಕ ಕೇಂದ್ರದ ಡಾ. ಎನ್. ಗೋಪು ಕುಮಾರ ಹಾಗೂ ಸ್ಥಳೀಯ ಶಾಸಕ ವಸಂತ ಬಂಗೇರ ಅವರು ಪಾಲ್ಗೊಳ್ಳುವರು ಎಂದರು.
ಡಿ. 17 ಹಾಗೂ 18ರಂದು ಎರಡು ದಿನಗಳ ಕಾಲ ರಾಜ್ಯಮಟ್ಟದ ಖ್ಯಾತ ಕಲಾವಿದರ ತಂಡ ಹಾಗೂ ಎಸ್.ಡಿ.ಎಮ್. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಜರುಗಲಿದೆ. ಸುವರ್ಣಮಹೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಶ್ರೀ ವಸಂತ ಬಂಗೇರ ಅವರ ನೇತೃತ್ವದಲ್ಲಿ ಸ್ಥಳೀಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು, ಅವರು ಮಾರ್ಗದರ್ಶನ ನೀಡಲಿದ್ದಾರೆ. ದೇಶ ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿರುವ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಾಗಬೇಕೆಂಬುದು ಸಂಸ್ಥೆಯ ಅಪೇಕ್ಷೆ. ಈ ಉದ್ದೇಶಕ್ಕಾಗಿ ಮಾಧ್ಯಮಗಳ ಮೂಲಕ ಅದರಲ್ಲೂ ವಿಶೇಷವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಕಾರ್ಯಕ್ರಮಗಳ ವಿವರ ನೀಡಲಾಗುತ್ತದೆ ಎಂದು ಯಶೋವರ್ಮ ವಿವರಿಸಿದರು.
ಗೋಷ್ಠಿಯಲ್ಲಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್, ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಭಾಸ್ಕರ ಹೆಗಡೆ, ಉಪನ್ಯಾಸಕ ಡಾ| ಜಯಕುಮಾರ್ ಶೆಟ್ಟಿ ಇದ್ದರು.
ಆಕರ್ಷಕ ಈಜುಕೊಳ : 23ಲಕ್ಷ ಲೀಟರ್ ನೀರು ಹೊಂದುವ ಸಾಮರ್ಥ್ಯದ 50x2x1.80 ವಿಸ್ತೀರ್ಣದ ವಿಶಾಲ ಈಜುಕೊಳ ಉಜಿರೆ ಹಾಗೂ ಸುತ್ತಮುತ್ತಲಿನವರ ಪಾಲಿಗೆ ವಿಶೇಷ ಅವಕಾಶವಾಗಲಿದೆ. ಅಂತರ್ ರಾಷ್ಟ್ರೀಯ ಗುಣಮಟ್ಟದ ಸ್ಪರ್ಧೆಗನುಗುಣವಾಗಿ ವಿಶೇಷವಾಗಿ ರೂಪಿಸಲಾಗಿರುವ ಕೊಳದಲ್ಲಿ 8 ಲೇನ್ಗಳಿವೆ. ಯುಜಿಸಿಯ ಧನಸಹಾಯದೊಂದಿಗೆ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಈಜುಕೊಳ ನಿರ್ಮಾಣಗೊಂಡಿದೆ.
ವಸ್ತುಪ್ರದರ್ಶನ : ಸುವರ್ಣಮಹೋತ್ಸವ ಸಂಭ್ರಮದ ಪ್ರಯುಕ್ತ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದ ವ್ಯಾಪ್ತಿಯಲ್ಲಿ ವಿಶೇಷ ವಸ್ತು ಪ್ರದರ್ಶನ, ಆಹಾರ ಮಳಿಗೆಗಳ ವ್ಯವಸ್ಥೆಯಿದ್ದು, ಪಾರ್ಕಿಂಗ್ಗೆ ವಿಶೇಷ ಅನುಕೂಲ ಕಲ್ಪಿಸಲಾಗುವುದು.
ಹಳೆವಿದ್ಯಾರ್ಥಿ ಸಮಾವೇಶ : 2016 ರ ಮಾರ್ಚ್ ತಿಂಗಳಿನಲ್ಲಿ ಹಳೆ ವಿದ್ಯಾರ್ಥಿಗಳ ಬೃಹತ್ ಸಮಾವೇಶ ನಡೆಸಲು ತಯಾರಿ ನಡೆದಿದೆ. ಇದಕ್ಕಾಗಿ ಅಂತಿಮ ರೂಪುರೇಷೆ ನೀಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.