ಬೆಳ್ತಂಗಡಿ : ಇಂದಿನ ತಂತ್ರಜ್ಞಾನವು ಭಜನೆಗೆ ಹೊಸತನವನ್ನು ತಂದುಕೊಟ್ಟಿದೆ. ಇದರಿಂದ ಭಜನೆ ಇನ್ನಷ್ಟು ಜನಪ್ರಿಯಗೊಳಿಸುವತ್ತ ಸಾಗಿದೆ. ಎಳವೆಯಲ್ಲಿಯೇ ಭಜನಾ ಸಂಸ್ಕಾರ ದೊರೆತಲ್ಲಿ ಭಗವಂತನ ವಿರಾಟ್ ಸ್ವರೂಪದ ದರ್ಶನ ಸಾಧ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಧರ್ಮಸ್ಥಳ ಹಾಗೂ ಶ್ರೀ ಶಂಕರ ಟಿವಿ ಸಹಯೋಗದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಸಂತ್ ಮಹಲ್ನಲ್ಲಿ ನಡೆಯಲಿರುವ ಎರಡು ದಿನಗಳ ಭಜನ್ ಸಮ್ರಾಟ್ ಸೀಸನ್-4, ಭಜನ್ ಸಮ್ರಾಟ್ ಜೂನಿಯರ್-2, ರ ಆಡಿಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮತನಾಡಿದರು.
ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಹೊಸತನವಿದ್ದು, ಆಧುನಿಕತೆಯಿಂದಾಗ ಪರಿವರ್ತನೆಯಾಗುತ್ತಿದೆ. ಇದು ಭಜನಾ ಕ್ಷೇತ್ರವನ್ನೂ ಬಿಟ್ಟಿಲ್ಲ. ಇಲ್ಲೂ ಸಂಗೀತ ಉಪಕರಣಗಳಲ್ಲಿ ನಾವಿನ್ಯತೆಯನ್ನು ಕಾಣಬಹುದಾಗಿದೆ. ಇದರಿಂದ ಭಜನೆ ಇಂದು ಅಪ್ಯಾಯಮಾನವಾಗುತ್ತಿದೆ. ಹಿಂದೆ ಸಂತರು, ಹಿರಿಯರು ಸಂಸ್ಕೃತ ಶ್ಲೋಕಗಳ ಮೂಲಕ ಭಗವಂತನ ಆರಾಧನೆ ಮಾಡುತ್ತಿದ್ದರು. ಶ್ರೀಸಾಮಾನ್ಯನಿಗೆ ಭಗವಂತನ ಆರಾಧನೆ ಮಾಡಲು ಭಜನೆ ಅತ್ಯಂತ ಸುಲಭವಾದ ಮಾಧ್ಯಮವಾಗಿದೆ ಎಂದರು.
ಭಜನೆಯನ್ನು ಉಳಿಸಿ, ಬೆಳೆಸುವುದು ಮುಖ್ಯ. ಬದುಕನ್ನು ರೂಪಿಸಿಸುವ ಇದು ಮನೆಮನೆಗಳಲ್ಲಿ ನಿರಂತರವಾಗಿ ಇರಬೇಕು. ಕ್ಷೇತ್ರದಲ್ಲೂ ಶ್ರೀ ಮಂಜುನಾಥ ಸ್ವಾಮಿಗೆ ನಿತ್ಯವೂ ಸೇವೆ, ಆರಾಧನೆ, ಅಭಿಷೇಕ, ಉತ್ಸವಾದಿಗಳ ಜೊತೆ ಭಜನಾ ಸೇವೆಯೂ ನಡೆಯುತ್ತಿದೆ ಎಂದ ಅವರು ಶ್ರೀ ಶಂಕರ ವಾಹಿನಿಯವರು ಮನರಂಜನೆಗೆ ಒತ್ತು ಕೊಡದೆ ಧಾರ್ಮಿಕತೆಯನ್ನು ಉದ್ದೀಪನಗೊಳಿಸುವ ಕೆಲಸ ಮಾಡುತ್ತಿದ್ದು ಅದರ ಅಂಗವಾಗಿ ಭಜನೆಯನ್ನು ರಿಯಾಲಿಟಿ ಶೋದ ಮೂಲಕ ಜನಪ್ರಿಯಗೊಳಿಸುತ್ತಿರುವುದು ಶ್ಲಾಘನೀಯ ಎಂದರು.
ಧರ್ಮಸ್ಥಳದ ಹೇಮಾವತಿ ವೀ. ಹೆಗಡೆ ಅವರು, ಕ್ಷೇತ್ರದಲ್ಲಿ ಭಜನಾ ಕಮ್ಮಟದ ಮೂಲಕ ಭಜನೆಗೆ ಹೊಸ ಆಯಾಮವನ್ನು ನೀಡುವ ಕೆಲಸ ಕಳೆದ ಹದಿನೇಳು ವರ್ಷಗಳಿಂದ ನಡೆಯುತ್ತಿದೆ. ಟಿವಿ ವಾಹಿನಿಯ ಮೂಲಕ ಭಜನೆಯನ್ನು ಮನೆ ಮನೆಗಳಿಗೆ ಪಸರಿಸುತ್ತಿರುವುದು ಅನುಕರಣೀಯ ಎಂದರು.
ವೇದಿಕೆಯಲ್ಲಿ ಡಿ. ಹರ್ಷೇಂದ್ರ ಕುಮಾರ್, ಸುಪ್ರೀಯ ಹರ್ಷೇಂದ್ರ ಕುಮಾರ್, ಶಂಕರ ಟಿವಿಯ ಕಾರ್ಯನಿರ್ವಹಣಾಧಿಕಾರಿ ಕೆ. ಸುರೇಶ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಹರಿಕೃಷ್ಣ, ಭಜನಾ ಪರಿಷತ್ ಸಂಯೋಜಕ ಬಿ. ಸೀತಾರಾಮ ತೋಳ್ಪಡಿತ್ತಾಯ, , ಗಣೇಶ್ ಭಟ್ ಉಪಸ್ಥಿತರಿದ್ದರು. ವಾಹಿನಿಯ ವತಿಯಿಂದ ಡಾ| ಹೆಗ್ಗಡೆ ಕುಟುಂಬದವರನ್ನು ಸಮ್ಮಾನಿಸಲಾಯಿತು.
ಭಜನಾ ಪರಿಷತ್ ಕಾರ್ಯದರ್ಶಿ ಪ್ರಸ್ತಾವಿಸಿ, ಸ್ವಾಗತಿಸಿದರು. ಶಂಕರ್ ಟಿವಿಯ ನಿರೂಪಕ ವಿಜಯ್ ಕಾರ್ಯಕ್ರಮ ನಿರ್ವಹಿಸಿದರು. ಮಂಗಳೂರು, ಉಡುಪಿ, ಕಾಸರಗೋಡು ಮುಂತಾದ ಸುತ್ತಮುತ್ತಲಿನ ಎಲ್ಲಾ ಜಿಲ್ಲೆಗಳ 14 ಜೂನಿಯರ್ ಭಜನಾ ತಂಡಗಳು ಈ ಅರ್ಹತಾ ಸುತ್ತಿನ (ಆಡಿಷನ್ಸ್) ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.