ಬೆಳ್ತಂಗಡಿ : ರೋಗ ಲಕ್ಷಣಗಳು ಕಂಡು ಬಂದಲ್ಲಿ ಅದನ್ನು ತಡಮಾಡದೆ ವೈದ್ಯರಲ್ಲಿ ಹೇಳಿದಲ್ಲಿ ಅದಕ್ಕೆ ತಕ್ಕಂತೆ ಸಮರ್ಪಕವಾಗಿ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಸೋಮವಾರ ವಿಜಯಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ನಡೆಯುವ ಆರೋಗ್ಯ ಉಚಿತ ತಪಾಸಣಾ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಕ್ಷೇತ್ರವು ಚತುರ್ದಾನ ಪರಂಪರೆಯನ್ನು ಅನುಸರಿಸುತ್ತಾ ಬಂದಿದೆ. ಅನ್ನದಾನದ ಜೊತೆಗೆ ಔಷಧ ದಾನವನ್ನೂ ನೀಡಲಾಗುತ್ತದೆ. ಹಲವಾರು ವರ್ಷಗಳಿಂದ ಕ್ಷೇತ್ರದ ಮೂಲಕ ಸಂಚಾರಿ ಆಸ್ಪತ್ರೆಯು ತಾಲೂಕಿನಾದ್ಯಂತ ಕಾರ್ಯನಿರ್ವಹಿಸುತ್ತಾ ಜನತೆಯ ಆರೋಗ್ಯದ ಕಾಳಜಿಯನ್ನು ವಹಿಸುತ್ತಾ ಬಂದಿದೆ. ಉಜಿರೆಯಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿ ಜನರಿಗೆ ಆದಷ್ಟು ಕಡಿಮೆ ಖರ್ಚಿನಲ್ಲಿ ವೈದ್ಯಕೀಯ ನೆರವು ನೀಡಬೇಕಂಬ ಉದ್ದೇಶದಿಂದ ಈ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ ಎಂದ ಅವರು ಜನರು ಅದರಲ್ಲೂ ಮಹಿಳೆಯರು ತಮಗೆ ಯಾವುದೇ ರೋಗ ಲಕ್ಷಣಗಳು ಕಂಡು ಬಂದಲ್ಲಿ ಅದನ್ನು ಶೀಘ್ರವಾಗಿ ತಜ್ಞರಲ್ಲಿ ಹೇಳುವುದರಿಂದ ಸಂಭಾವ್ಯ ರೋಗವನ್ನು ಕೂಡಲೇ ನಿವಾರಿಸಬಹುದಾಗಿದೆ. ವೈದ್ಯರ ಹತ್ತಿರ ಹೋಗಲು ಸಂಕೋಚ ಪಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ವಿಜಯಾ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಸಾನ್ಸಿ ಬೆಂಗಳೂರು, ಮಹಾಪ್ರಬಂಧಕ ಸತೀಶ್ ಬಲ್ಲಾಳ್ ಬೆಂಗಳೂರು, ಉಪ ಮಹಾಪ್ರಬಂಧಕ ಅನಿಲ್ ಕೆ. ಶೆಟ್ಟಿ ಮಂಗಳೂರು, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಳದ ಆಡಳ್ತೆ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಇದ್ದರು.
ಉಜಿರೆ ಬ್ಯಾಂಕಿನ ಪ್ರಬಂಧಕ ಅನಿಲ್ ಕುಮಾರ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಅರ್ಚನಾ ಪ್ರಾರ್ಥಿಸಿದರು. ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನ್ಮಥ್ ಕುಮಾರ್ ಸ್ವಾಗತಿಸಿದರು. ಡಾ| ಪ್ರಭಾಶ್ ಕುಮಾರ್ ವಂದಿಸಿದರು. ನ. ೩೦ ರಿಂದ ಡಿ. ೬ ರವರೆಗೆ ವಿವಿಧ ರೋಗಗಳ ತಜ್ಞರು ಉಚಿತವಾಗಿ ತಪಾಸಣೆಯನ್ನು ಮಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.