ಮೂಡಬಿದಿರೆ: ಈ ಚಿತ್ರಗಾರನ ಕಲಾಕುಂಚಕ್ಕೆ ಕಣ್ಣ ಮುಂದಿನ ವಸ್ತುಗಳೇ ವಿಷಯಗಳು. ನೈಜತೆ ಮತ್ತು ಜನಜೀವನಕ್ಕೆ ಹತ್ತಿರವಾದ ಚಿತ್ರಗಳನ್ನು ಬರೆಯಬೇಕು ಮತ್ತು ಅವು ನೋಡುಗರನ್ನು ಆಕರ್ಷಿಸುವಂತಿರಬೇಕು ಎನ್ನುವುದು ಚಿತ್ರಗಾರ ಗಿರೀಶ್ ಕನಸು. ಕುಂದಾಪುರದ ಬೈಂದೂರು ಮೂಲದ ಗಿರೀಶ್ ಪ್ರತಿಭೆಗೆ ತಾಯಿಯೇ ಸ್ಫೂರ್ತಿ. 27ರ ಹರೆಯದ ಈತನಿಗೆ ಆರಂಭದಲ್ಲಿ ಗೆರೆಗಳ ಆಟವಾಗಿ ತೋರಿದ ಈ ಕಲೆ ಮುಂದೆ ಬದುಕಿನ ದಾರಿಯಾಯಿತು.
ಗಿರೀಶ್ ಎಂಬ ಚಿತ್ರಕಾರನ ಕಲಾಕುಂಚ ಆರಂಭಗೊಂಡಿದ್ದು ಬಾಲ್ಯದಲ್ಲಿ. ಯಾರೋ ಪ್ರಾಣಿಗಳನ್ನು ಕೊಲ್ಲಲು ಇಟ್ಟ ಸಿಡಿಮದ್ದು ಈತನ ಕೈಗಳನ್ನು ಕಿತ್ತುಕೊಂಡಿತ್ತು. ಆ ಘಟನೆಯ ನಂತರ ಬಾಲ್ಯದ ಆಸಕ್ತಿಯ ಕಲೆಯನ್ನು ಮುಂದುವರಿಸಲು ಇವರ ಕೈಗಳು ಸಹಕರಿಸಲಿಲ್ಲ. ಹಾಗೆಂದು ಗಿರೀಶ್ ಛಲ ಬಿಡಲಿಲ. ಬಲಗೈಗೆ ಸಾಧ್ಯವಾಗದ್ದನ್ನು ಎಡಗೈಯಲ್ಲಿ ಬರೆಯಲು ಪ್ರಯತ್ನಿಸಿದರು. ಫಲವಾಗಿ ತಾವು ಬಯಸಿದ ಕಲಾಕುಂಚ ಲೋಕಕ್ಕೆ ತನ್ನನ್ನು ಪರಿಚಯಿಸಿಕೊಂಡರು.
ಗಿರೀಶ್ ತಂದೆ ಗಣೇಶ್ ಗಾಣಿಗ ಮತ್ತು ತಾಯಿ ಸೀತಾ. ಪ್ರವೃತ್ತಿಯನ್ನು ವೃತ್ತಿಯಾಗಿ ಆರಿಸಿರುವ ಇವರು ಬಿ.ವಿ.ಎ ಪದವೀಧರರು. ಸದ್ಯ ಕುಂದಾಪುರದ ಬಸೂರಿನ ಶಾರದಾ ಆಂಗ್ಲಮಾದ್ಯಮ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ದುಡಿಯುತ್ತಿದ್ದಾರೆ. ತಾನು ಕಲಿತ ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕು ಎನ್ನುವ ಉತ್ಕಟ ಬಯಕೆ ಈತನದು. ಪೆನ್ನು ಮತ್ತು ಬಿಳಿಹಾಳೆಯಲ್ಲಿ ಬರೆವ ಇವರ ಚಿತ್ರಗಳು ಈ ಬಾರಿಯ ಆಳ್ವಾಸ್ ನುಡಿಸಿರಿಯಲ್ಲಿನ ಆರ್ಟ್ ಗ್ಯಾಲರಿಯ ಪ್ರಮುಖ ಆಕರ್ಷಣೆ.
ಹಿಂದೆ ವಾಟರ್ ಪೈಂಟ್ನಲ್ಲಿ ಚಿತ್ರ ರಚಿಸುತ್ತಿದ್ದ ಗಿರೀಶ್ ಸಧ್ಯ ಎಕ್ರಲೇಕ್ ಮೂಲಕ ಚಿತ್ರರಚನೆಯಲ್ಲಿ ತೊಡಗಿದ್ದಾರೆ. ಅರ್ಥಿಕ ಮುಗ್ಗಟ್ಟು ಇವರ ಕಲಾರಚನೆಗಳ ನಿರ್ವಹಣೆಗೆ ತೊಡಕಾಗಿದೆ. ಚಿತ್ರಕಲಾ ಕ್ಷೇತ್ರ ಉತ್ತಮವಾದರು ಅಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟ. ಯಾವುದೇ ಸರಕಾರಿ ಶಾಲೆಗಳಲ್ಲಿ ಇತ್ತೀಚಿನ ಹತ್ತು ವರ್ಷದಲ್ಲಿ ಚಿತ್ರಕಲಾ ಶಿಕ್ಷಕ ಹುದ್ದೆಗೆ ನೇಮಕವಾಗಿಲ್ಲ. ಇದು ಕಲಾಕಾರರ ಬದುಕಿನ ಕುರಿತು ಸರಕಾರದ ನಿಲುವನ್ನು ತೋರಿಸುತ್ತದೆ ಎನ್ನುತ್ತಾರೆ ಗಿರೀಶ್.
ಗಿರೀಶ್ ಹಲವು ವಸ್ತು ಪ್ರದರ್ಶನಗಳಲ್ಲಿ ಈಗಾಗಲೇ ತಮ್ಮ ಕಲಾರಚನೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು ಜನರ ಮಾನ್ಯತೆ ಪಡೆದಿದೆ. ಈಗ ನುಡಿಸಿರಿ ಅಂಗಳದಲ್ಲಿ ಗಿರೀಶ್ ರಚಿಸಿದ ಚಿತ್ರಗಳು ವೀಕ್ಷಣೆಗೆ ಮತ್ತು ಖರೀದಿಗೆ ಲಭ್ಯವಿದೆ. ನುಡಿಸಿರಿ ಆರ್ಟ್ ಗ್ಯಾಲರಿಯಲ್ಲಿನ ಇವರ ಚಿತ್ರಗಳು ಜನಾಕರ್ಷಣೆಗೆ ಪಾತ್ರವಾಗಿದೆ. ಈ ಬಾರಿ ಇವರು ರಚಿಸಿರುವ ೪೦ ಪ್ರಮುಖ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.