ಬೆಳ್ತಂಗಡಿ : ಆರ್ಸೆಟಿಗಳಲ್ಲಿ ಕೌಶಲಾಭಿವೃದ್ಧಿ ತರಬೇತಿ ನೀಡಿದ ಬಳಿಕ ಪ್ರಧಾನ ಮಂತ್ರಿ ಉದ್ಯೋಗ ಖಾತರಿ ಯೊಜನೆಯಡಿಯಲ್ಲಿ ಉದ್ಯಮ ಪ್ರಾರಂಭಿಸಲು ಅರ್ಜಿಗಳನ್ನು ಸ್ವೀಕರಿಸುವುದರಿಂದ ಸಾಲ ಮಂಜೂರಾತಿಯಲ್ಲಿ ಅನಗತ್ಯ ವಿಳಂಬವಾಗುವುದನ್ನು ತಡೆಗಟ್ಟಬಹುದು. ಹೊಸ ಉದ್ಯಮಿಗಳಿಗೆ ಗುಣಮಟ್ಟದ ತರಬೇತಿ ನೀಡುವುದಕ್ಕಾಗಿ ಆರ್ಸೆಟಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಕಲ್ರಾಜ್ ಮಿಶ್ರಾ ಹೇಳಿದರು.
ಅವರು ಸೋಮವಾರ ಧರ್ಮಸ್ಥಳದ ಶ್ರೀಸನ್ನಿಧಿ ಅತಿಥಿ ಗೃಹದಲ್ಲಿ ಪ್ರಧಾನಮಂತ್ರಿ ಉದ್ಯೋಗ ಖಾತರಿ ಯೋಜನೆಯ ಸಲಹಾ ಸಮಿತಿಯ ಪ್ರಥಮ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಸ್.ಎಸ್.ಎಲ್.ಸಿ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೆ ವೃತ್ತಿಪರ ತರಬೇತಿ ನೀಡಿ ನಿರುದ್ಯೋಗ ಸಮಸ್ಯೆ ನಿವಾರಿಸಲು ಪ್ರಯತ್ನಿಸಲಾಗುವುದು. ಸ್ವ – ಉದ್ಯೋಗದ ಮೂಲಕ ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವುದೇ ಯೋಜನೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಯುವಜನತೆ ಸ್ವ-ಉದ್ಯೋಗ ಪ್ರಾರಂಭಿಸಿ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು. ಸ್ವ-ಉದ್ಯೋಗ ತರಬೇತಿ, ಮದ್ಯವರ್ಜನ ಶಿಬಿರ ಹಾಗೂ ಮಹಿಳಾ ಸಬಲೀಕರಣ ಮೊದಲಾದ ಸೇವಾ ಕಾರ್ಯಗಳ ಮೂಲಕ ಹೆಗ್ಗಡೆಯವರು ಮಾಡುತ್ತಿರುವ ಚಟುವಟಿಕೆಗಳನ್ನು ಅವರು ಶ್ಲಾಘಿಸಿ ಅಭಿನಂದಿಸಿದರು. ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ಪ್ರಗತಿಯಲ್ಲಿ ಮೂರು ತಿಂಗಳಲ್ಲಿ ಆದ ಸಾಧನೆ ಬಗ್ಗೆ ತಮಗೆ ವರದಿ ನೀಡಬೇಕೆಂದು ಸಚಿವರು ಅಧಿಕಾರಿಗಳಿಗೆ ಮತ್ತು ಬ್ಯಾಂಕ್ ಅಧಿಕಾರಿಗಳಿಗೆ ಆದೇಶ ನೀಡಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ರುಡ್ಸೆಟ್ ಸಂಸ್ಥೆಯಲ್ಲಿ ನೀಡುವ ಅಲ್ಪಾವಧಿ ತರಬೇತಿಯಲ್ಲಿ ಮಾನವೀಯ ಮೌಲ್ಯಗಳ ಉದ್ದೀಪನದೊಂದಿಗೆ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸಲಾಗುತ್ತದೆ. ಅವರಲ್ಲಿರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ನಿವಾರಿಸಿ ನಿರಾಶೆಯನ್ನು ಹೋಗಲಾಡಿಸಿ ಧೈರ್ಯ ಮತ್ತು ಆತ್ಮವಿಶ್ವಾಸದೊಂದಿಗೆ ನವಚೈತನ್ಯ ಮೂಡಿಸಲಾಗುತ್ತದೆ ಎಂದ ಅವರು ರುಡ್ಸೆಟಿ ತರಬೇತಿಯಲ್ಲಿ ಕೃಷಿ, ಹೈನುಗಾರಿಕೆ, ಗ್ರಾಮೀಣ ಗುಡಿ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ರುಡ್ಸೆಟ್ ಸಂಸ್ಥೆಗಳ ರಾಷ್ಟ್ರೀಯ ಅಕಾಡೆಮಿಯ ಕಟ್ಟಡಕ್ಕಾಗಿ ಮೂರೂವರೆ ಎಕ್ರೆ ಜಾಗ ಮಂಜೂರಾಗಿದ್ದು ಕಟ್ಟಡದ ಕಾಮಗಾರಿಗೆ 15 ಕೋಟಿ ರೂ. ಬೇಕಾಗಿದ್ದು ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಕೋರಿದರು.
ಸಾಂಸದ ನಳಿನ್ಕುಮಾರ್ ಕಟೀಲ್ ಮಾತನಾಡಿ, ಫಲಾನುಭವಿಗಳಿಗೆ ಸೂಕ್ತ ಮಾಹಿತಿಯ ಕೊರತೆಯಿಂದಾಗಿ ಸರ್ಕಾರದ ಯೋಜನೆಗಳು ವಿಫಲವಾಗುತ್ತಿವೆ. ಖಾದಿ ಗ್ರಾಮೋದ್ಯೋಗ ಯೋಜನೆಯಡಿ ಕಳೆದ ವರ್ಷ ಜಿಲ್ಲೆಯಲ್ಲಿ 33 ಯೋಜನೆಗಳಿಗೆ ಮಂಜೂರಾತಿ ದೊರಕಿದ್ದರೂ 20 ಕ್ಕೆ ಮಾತ್ರ ಸಾಲ ನೀಡಲಾಗಿದೆ. ಸಾಲ ಮಂಜೂರಾತಿಯಲ್ಲಿ ಆಗುವ ಅನಗತ್ಯ ವಿಳಂಬದಿಂದಾಗಿ ಶೇ. 50
ರಷ್ಟು ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತ ಪಡಿಸಿದರು. ಮುದ್ರಾ ಯೋಜನೆ ಬಗ್ಗೆಯೂ ಗ್ರಾಹಕರಿಗೆ ಸೂಕ್ತ ಮಾಹಿತಿ ಇಲ್ಲ ಎಂದರು.
ಎಂ.ಎಸ್.ಎಂ.ಇ ಜಂಟಿ ಕಾರ್ಯದರ್ಶಿ ಬಿ.ಎಚ್. ಅನಿಲ್ಕುಮಾರ್ ಮಾತನಾಡಿ ಉದ್ಯೋಗ ಖಾತರಿ ಯೋಜನೆಯಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ಸಾ ಮಂಜೂರಾತಿ ಹಾಗೂ ವಿತರಣೆಯಲ್ಲಿ ಅನಗತ್ಯ ವಿಳಂಬವಾಗುತ್ತದೆ. ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಮಾದರಿ ಕ್ರಿಯಾ ಯೋಜನೆ ರೂಪಿಸಿ ನಿರ್ದಿಷ್ಟ ಗುರಿ ಸಾಧಿಸಲು ಉದ್ದೇಶಿಸಲಾಗಿದೆ ಎಂದರು.
ಆರ್ಸೆಟಿಯ ರಾಷ್ಟ್ರೀಯ ನಿರ್ದೇಶಕ ಕೆ.ಎನ್ ಜನಾರ್ದನ್ ಮಾತನಾಡಿ ಕೌಶಲಾಭಿವೃದ್ಧಿ ತರಬೇತಿಯ ಸಮಗ್ರ ಮಾಹಿತಿ ನೀಡಿದರು. ಟಿ.ಸಿ ಜಗದೀಶ್ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.