ಬೆಳ್ತಂಗಡಿ : ನಾಯಕತ್ವದ ಗುಣ ಹೊಂದಿರುವ ಬಂಟ ಸಮುದಾಯಕ್ಕೆ ಸಮಾಜವನ್ನು ಮುನ್ನಡೆಸುವ, ಬೆಳೆಸುವ ವಿಶೇಷ ಶಕ್ತಿ ಇದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಸೋಮವಾರ ಗುರುವಾಯನಕೆರೆಯಲ್ಲಿರುವ ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇವರು ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ 4 ಅಂತಸ್ತಿನ ಹವಾನಿಯಂತ್ರಿತ ಬಂಟರ ಭವನದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಬಂಟ ಸಂಸ್ಕೃತಿ ಎಂಬುದು ಊರ್ಧ್ವಮೂಲವಾದದ್ದು. ಊಳುವವನೇ ಹೊಲದೊಡೆಯ ಎಂಬ ಯೋಜನೆ ಬಂದಾಗ ಆ ಸಂದರ್ಭ ಭೂಮಿ ಹಂಚಿಹೋಗಿದ್ದರೂ ನಮ್ಮತನವನ್ನು ಬಿಡದೆ ಮೇಲೆದ್ದು ಬಂದಿರುವುದು ಬಂಟ ಸಮಾಜ. ಹಣ ಬಲಕ್ಕಿಂತಲ್ಲೂ ಹೃದಯ ಶ್ರೀಮಂತಿಕೆ ಮುಖ್ಯ ರಾಷ್ಟ್ರ ನಿರ್ಮಾಣದ ಮೂಲ ಪ್ರಕ್ರಿಯೆ ಬಂಟ ಸಮುದಾಯಕ್ಕಿದೆ ಎಂದ ಶ್ರೀಗಳು ಇಂದಿನ ಯುವಜನತೆ ಆಡಂಬರದ ಮದುವೆಯತ್ತ ಗಮನ ಹರಿಸದೆ ಸರಳವಾಗಿ ಸಾಮೂಹಿಕ ಮದುವೆಯ ಕಾರ್ಯಕ್ರಮಗಳಲ್ಲಿ ಮದುವೆಯಾಗಿ ಆದರ್ಶ ಮೆರೆಯಬೇಕು ಎಂದು ಆಶಿಸಿದರು.
ಭವನವನ್ನು ಉದ್ಘಾಟಿಸಿ, ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಎಂ.ಆರ್.ಜಿ. ಗ್ರೂಪ್ಸ್ ಬೆಂಗಳೂರು ಇದರ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಅವರು, ಬಂಟ ಸಮುದಾಯ ಪ್ರವೇಶಿಸದ ಕ್ಷೇತ್ರವೇ ಇಂದು ಇಲ್ಲ. ಚರಿತ್ರೆಯನ್ನು ಸೃಷ್ಟಿಸುವ ತಾಕತ್ತು ಬಂಟರಿಗೆ ಇದೆ. ನಮ್ಮ ಗಳಿಕೆಯು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ಮುನ್ನಡೆಸುವ ಕಾರ್ಯವೂ ಆಗಬೇಕಾಗಿದೆ. ನಾವು ಸಮಾಜದಿಂದ ಗುರುತಿಸಿಕೊಂಡಿದ್ದೇವೆ. ಆದರೆ ನಾವು ಇದೇ ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬ ಆತ್ಮಾವಲೋಕನ ಇಂದಿನ ಅಗತ್ಯವಾಗಿದೆ. ಬೆಳ್ತಂಗಡಿಯ ಬಂಟರ ಸಂಘ ಬಹಳಷ್ಟು ಸಾಧನೆ ಮಾಡಿ ಅಪೂರ್ವವಾದಿ ಭವನವನ್ನು ನಿರ್ಮಿಸಿದ್ದಾರೆ. ಇದು ಎಲ್ಲಾ ವರ್ಗದವರಿಗೂ ಅನುಕೂಲಕರವಾಗಿದೆ. ಇಂತಹ ಕಾರ್ಯಗಳಿಂದ ಸಂಘಟನೆ ಇನ್ನಷ್ಟು ಎತ್ತರಕ್ಕೇರುತ್ತದೆ ಎಂದರು.
ಸಾಂಸದ ನಳೀನ್ ಕುಮಾರ್ ಕಟೀಲು ಅವರು, ದ.ಕ.ಜಿಲ್ಲೆಯಲ್ಲಿ ಬಂಟ ಸಮುದಾಯದ ಇತಿಹಾಸದಲ್ಲಿ ಇಂದಿನ ನೂತನ ಭವನ ಉದ್ಘಾಟನೆಗೊಂಡಿರುವುದು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ಇದು ತುಳು ಸಾಂಸ್ಕೃತಿಕ ಔನತ್ಯಕ್ಕೆ ಒತ್ತು ನೀಡುವಂತಹ ತುಳು ಭವನವಾಗಿ ಕಾಣಲಿ ಎಂದು ಆಶಿಸಿದ ಅವರು ಸಂಸದರ ನಿಧಿಯಿಂದ ರೂ. ೧೦ ಲಕ್ಷ ವನ್ನು ಭವನದ ಕಾರ್ಯಕ್ಕೆ ನೀಡಲಾಗುವುದು ಎಂದು ಪ್ರಕಟಿಸಿದರು.
ಮುಂಬಯಿ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಅವರು, ಬಂಟ ಸಮಾಜ ಶಿಕ್ಷಣಕ್ಕೆ ಮತ್ತು ವರದಕ್ಷಿಣೆ ರಹಿತ ಮದುವೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ಕುಮಾರ್ ರೈ ಮಾಲಾಡಿ ಅವರು, ಇಲ್ಲಿನ ಬಂಟರ ಸಂಘದವರು ಆತ್ಮವಿಶ್ವಾಸದಿಂದ ಸುಂದರವಾದ, ಆಕರ್ಷಕ ಭವನವನ್ನು ನಿರ್ಮಿಸಿದ್ದಾರೆ. ಸಂಘಟನೆಯ ಜವಾಬ್ದಾರಿಯನ್ನು ಹೊಂದಿರುವವರು ಒಮ್ಮತದಿಂದ ಸಂಘವನ್ನು ಮುನ್ನಡೆಸಿದರೆ ಮಾತ್ರ ಸಂಘವು ಕೈಗೊಳ್ಳುವ ಯಾವುದೇ ಕಾರ್ಯ ಯಶಸ್ಸು ಹೊಂದಲು ಸಾಧ್ಯ. ಒಗ್ಗಟ್ಟಿನಿಂದ ಶ್ರಮಿಸಿದರೆ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಭವನ ನಿರ್ಮಿಸುವ ಮೂಲಕ ಬೆಳ್ತಂಗಡಿಯ ಸಂಘ ತೋರಿಸಿಕೊಟ್ಟಿದೆ ಎಂದ ಅವರು ಸಮಾಜದ ಕಾರ್ಯಕ್ರಮಗಳಲ್ಲಿ ಯುವಜನರು ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು. ಪೋಷಕರು ಮಕ್ಕಳಲ್ಲಿ ಸಮಾಜದ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯಬೇಕು ಎಂದರು.
ಮುಂಬಯಿ ಉದ್ಯಮಿ ಚಂದ್ರಹಾಸ ಬಿ.ರೈ ಬೊಳ್ನಾಡುಗುತ್ತು, ಕೆನರಾ ಬ್ಯಾಂಕಿನ ವಿಭಾಗೀಯ ಪ್ರಬಂಧಕ ವಸಂತ ಶೆಟ್ಟಿ, ಬಂಟ್ವಾಳ ತಾ|ಬಂಟರ ಸಂಘದ ಅಧ್ಯಕ್ಷ ನಗ್ರಿ ವಿವೇಕ ಶೆಟ್ಟಿ ಶುಭ ಹಾರೈಸಿದರು.ವೇದಿಕೆಯಲ್ಲಿ ಕಟ್ಟಡ ಸಮಿತಿ ಅಧ್ಯಕ್ಷ ಉಳಿಪ್ಪಾಡಿ ಗುತ್ತು ರಾಜೇಶ್ ನಾಕ್, ಕಾರ್ಯದರ್ಶಿ ಟಿ. ಆರ್.ಅಡ್ಯಂತಾಯ, ಬಂಟರ ಸಂಘದ ಜತೆ ಕಾರ್ಯದರ್ಶಿ ಅನಿಲ್ ನಾಯ್ಗ ಬಳೆಂಜ, ಖಜಾಂಜಿ ಟಿ. ಕೃಷ್ಣ ರೈ, ಮಹಿಳಾ ವಿಭಾಗ ಅಧ್ಯಕ್ಷೆ ಸಾರಿಕಾ ಡಿ. ಶೆಟ್ಟಿ, ಯುವ ವಿಭಾಗ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ ಉಪಸ್ಥಿತರಿದ್ದರು.
ಬಂಟರ ಸಂಘದ ಅಧ್ಯಕ್ಷ ರಘುರಾಮ ಶೆಟ್ಟಿ ಸಾಧನ, ಕಟ್ಟಡ ಸಮಿತಿ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ, ಸಹಭೋಜನದ ಪ್ರಾಯೋಜಕರಾದ ಕಾಶಿ ಶೆಟ್ಟಿ ನವಶಕ್ತಿ, ಶಕ್ತಿನಗರ, ಕಟ್ಟಡದ ಗುತ್ತಿಗೆದಾರ ದಿವಾಕರ ಇವರನ್ನು ಸಮ್ಮಾನಿಸಲಾಯಿತು. ಕಟ್ಟಡ ಕಾಮಗಾರಿಯ ನೇತೃತ್ವ ವಹಿಸಿದವರನ್ನು ಗುರುತಿಸಲಾಯಿತು. ಸಭಾಂಗಣವನ್ನು ಕಾದಿರಿಸಿದ ಪ್ರಥಮ ಗ್ರಾಹಕರನ್ನು ಗೌರವಿಸಲಾಯಿತು.
ಸಂಘದ ಅದ್ಯಕ್ಷ ರಘುರಾಮ ಶೆಟ್ಟಿ ಸ್ವಾಗತಿಸಿದರು. ಕಟ್ಟಡ ಸಮಿತಿ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಪ್ರಸ್ತಾವಿಸಿದರು. ಕಟ್ಟಡ ಸಮಿತಿ ಸದಸ್ಯ ಪ್ರಕಾಶ್ ಶೆಟ್ಟಿ ನೊಚ್ಚ ಹಾಗು ಪೂಜಾ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಕೆ. ವಿಠಲ ಶೆಟ್ಟಿ ವಂದಿಸಿದರು.
ಪ್ರಕೃತಿಯೇ ನಮಗೆ ಮೂಲ. ಇದನ್ನು ಉಳಿಸಿ ಬೆಳೆಸುವಲ್ಲಿ ರಾಜಕೀಯ ರಹಿತ ಹೋರಾಟ ಮಾಡಬೇಕು. ಎತ್ತಿನಹೊಳೆ ಯೋಜನೆ ರದ್ದತಿಗೆ ಹೋರಾಟ ಅನಿವಾರ್ಯ. ಸರಕಾರವನ್ನು ಎಚ್ಚರಿಸುವ ಕೆಲಸ ಎಲ್ಲರಿಂದಲೂ ನಡೆಯಬೇಕು – ಒಡಿಯೂರು ಶ್ರೀ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.