‘ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗದೇ ಇರುತ್ತದೆಯೆ?’ ಎಂಬುದು ಆಗಾಗ ಹಿರಿಯರು ಹೇಳುವ ವಾಡಿಕೆಯ ಮಾತು. ಈ ಮಾತನ್ನು ಹಿರಿಯರು ಸುಮ್ಮನೆ ಹೇಳಿಲ್ಲ. ಅನುಭವದಿಂದಲೇ ಹೇಳಿದ್ದಾರೆ. ಇದಕ್ಕೊಂದು ಇತ್ತೀಚಿನ ತಾಜಾ ನಿದರ್ಶನ – ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸಿ, ಅನಾಹುತವನ್ನು ಮೈಮೇಲೆ ಎಳೆದುಕೊಂಡಿದ್ದು. ಟಿಪ್ಪು ಜಯಂತಿಯನ್ನು ಅಧಿಕೃತವಾಗಿ ಸರ್ಕಾರದ ಕಡೆಯಿಂದ ಆಚರಿಸಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ತಲೆಗೆ ಹುಳಬಿಟ್ಟವರು ಯಾರೋ ಗೊತ್ತಿಲ್ಲ. ಆದರೆ ಸಿದ್ಧರಾಮಯ್ಯ ಯಾರೋ ನೀಡಿದ ಇಂತಹ ಸಲಹೆಯನ್ನು ಗಂಭೀರವಾಗಿ ಸ್ವೀಕರಿಸಿದ್ದೇ ವರ್ತಮಾನದ ಎಲ್ಲ ಅನಾಹುತಗಳಿಗೆ ಕಾರಣವಾಗಿದೆ.
ರಾಜ್ಯದಲ್ಲಿ ಅಂಬೇಡ್ಕರ್ ಜಯಂತಿ, ಕನಕದಾಸ ಜಯಂತಿ, ಪುರಂದರದಾಸರ ಆರಾಧನೆ, ಬಸವೇಶ್ವರ ಜಯಂತಿ, ವಾಲ್ಮೀಕಿ ಜಯಂತಿ, ಶ್ರೀರಾಮನವಮಿ… ಹೀಗೆ ಅದೆಷ್ಟೋ ಮಹಾಪುರುಷರ ಜಯಂತಿಗಳು ನಡೆಯುತ್ತಲೇ ಇರುತ್ತವೆ. ಆ ಎಲ್ಲ ಸಂದರ್ಭಗಳಲ್ಲಿ ಜನರು ಜಯಂತಿಯಲ್ಲಿ ಪಾಲ್ಗೊಂಡು ಸಂಭ್ರಮ ಪಡುತ್ತಾರೆ. ಯಾವ ಅನಾಹುತವಾಗಲೀ, ಅನಿಷ್ಟವಾಗಲೀ ಅಲ್ಲಿ ಸಂಭವಿಸುವುದಿಲ್ಲ. ಏಕೆಂದರೆ ಅಂಬೇಡ್ಕರ್, ಕನಕ, ಪುರಂದರ, ಬಸವೇಶ್ವರ, ವಾಲ್ಮೀಕಿ, ಶ್ರೀರಾಮ… ಮುಂತಾದ ಎಲ್ಲ ಮಹನೀಯರು ಸಮಾಜಕ್ಕೆ ಆದರ್ಶ ಪುರುಷರಾಗಿಯೇ ಕಂಡಿದ್ದಾರೆ. ಜನತೆಯ ಮನದಲ್ಲಿ ಈ ಎಲ್ಲ ಪ್ರಾತಃಸ್ಮರಣೀಯರ ಬಗ್ಗೆ ಅಪಾರ ಗೌರವ ನೆಲೆಸಿದೆ.
ಈ ಜಯಂತಿಗಳನ್ನು ಆಚರಿಸಿದಂತೆ ರಾವಣ ಜಯಂತಿ, ನರಕಾಸುರ ಜಯಂತಿ, ದುರ್ಯೋಧನ ಜಯಂತಿಗಳನ್ನು ಯಾರೂ ಆಚರಿಸುವುದಿಲ್ಲ. ಏಕೆಂದರೆ ರಾವಣ, ನರಕಾಸುರ, ದುರ್ಯೋಧನ ಮುಂತಾದವರು ಅಧರ್ಮದ, ಅಸತ್ಯದ, ರಾಕ್ಷಸೀ ಪ್ರವೃತ್ತಿಯ ಸಂಕೇತಗಳು. ರಾವಣನನ್ನು ಸಂಹರಿಸಿದ ದಿನವನ್ನು ವಿಜಯದಶಮಿಯಾಗಿ ಆಚರಿಸಲಾಗುತ್ತದೆ. ಅದೇ ರೀತಿ ನರಕಾಸುರನನ್ನು ಶ್ರೀಕೃಷ್ಣ ಸಂಹರಿಸಿದ ದಿನವನ್ನು ದೀಪಾವಳಿಯಾಗಿ ಆಚರಿಸಲಾಗುತ್ತದೆ. ದುಷ್ಟರ ಸಂಹಾರದ ದಿನಗಳನ್ನು ಆಚರಿಸಲಾಗುತ್ತದೆಯೇ ಹೊರತು, ದುಷ್ಟರ ಜಯಂತಿಯನ್ನು ಯಾರೂ ಆಚರಿಸುವುದಿಲ್ಲ. ಇತಿಹಾಸ ಬಲ್ಲವರಿಗೆ ಇದು ಗೊತ್ತಿರುವ ಸತ್ಯ. ಆದರೆ ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಈ ಸತ್ಯವೇ ತಿಳಿದಿಲ್ಲದಿರುವುದು ಮರುಕದ ಸಂಗತಿ. ಟಿಪ್ಪು ಸುಲ್ತಾನ್ ಒಬ್ಬ ಪ್ರಾತಃಸ್ಮರಣೀಯ ವ್ಯಕ್ತಿ ಎಂದು ಕೆಲವು ಪ್ರಗತಿಪರ ಬುದ್ಧಿಜೀವಿಗಳು, ಡೋಂಗಿ ಇತಿಹಾಸಕಾರರು, ಮುಸ್ಲಿಮರನ್ನು ಓಲೈಸುವ ರಾಜಕಾರಣಿಗಳು ಹಾಗೂ ಎಡಪಂಥೀಯ ಪತ್ರಕರ್ತರು, ಸಾಹಿತಿಗಳು ಕೊಂಡಾಡಬಹುದು. ವಾಸ್ತವ ಮಾತ್ರ ಬೇರೆಯೇ. ಟಿಪ್ಪು ಜಾತ್ಯತೀತ ಆಡಳಿತಗಾರನಾಗಿದ್ದನೆಂದೂ, ಆತ ಹಿಂದುಗಳ ವಿರೋಧಿಯಾಗಿರಲಿಲ್ಲವೆಂದೂ ಗಿರೀಶ್ ಕಾರ್ನಾಡ್, ಪಾಟೀಲ ಪುಟ್ಟಪ್ಪ ಮೊದಲಾದ ಮಹನೀಯರು ಯಾವುದೇ ದಾಖಲೆ ಒದಗಿಸದೇ ಮಾಧ್ಯಮಗಳ ಮೂಲಕ ಹೇಳಿಕೆ ನೀಡುತ್ತಿದ್ದಾರೆ. ಟಿವಿ ವಾಹಿನಿಗಳಲ್ಲಿ ಟಿಪ್ಪು ಕುರಿತ ಪರ-ವಿರೋಧ ಚರ್ಚೆಗಳಲ್ಲಿ ಮಾತನಾಡುವವರು ಕೂಡ ಆಧಾರ, ದಾಖಲೆಗಳಿಲ್ಲದೆ ವಿತಂಡವಾದ ಮಂಡಿಸುವುದನ್ನು ನೋಡಿದರೆ ನಗಬೇಕೋ, ಅಳಬೇಕೋ ತಿಳಿಯುತ್ತಿಲ್ಲ.
ಪ್ರಚಲಿತ ಇತಿಹಾಸ ಕಥನಕ್ಕೂ ಖಚಿತ ಸಾಕ್ಷ್ಯಗಳಿಂದ ಹೊಮ್ಮುವ ಚಿತ್ರಕ್ಕೂ ನಡುವೆ ಹಲವೊಮ್ಮೆ ಎಷ್ಟು ಅಗಾಧ ಅಂತರ ಇರುತ್ತದೆ ಎಂಬುದಕ್ಕೆ ನಿಚ್ಚಳ ನಿದರ್ಶನ- ಟಿಪ್ಪು ಚರಿತ್ರೆ. ಟಿಪ್ಪು ಮೊಟ್ಟಮೊದಲ ಸ್ವಾತಂತ್ರ್ಯ ಯೋಧ, ಮಹಾನ್ ರಾಷ್ಟ್ರೀಯವಾದಿ -ಎಂಬಂತಹ ಚಿತ್ರಣಕ್ಕೆ ಆಧಾರಭೂತ ಇತಿಹಾಸದಿಂದ ಸಮರ್ಥನೆ ಹುಡುಕಿದರೂ ಸಿಗದು. ಭಾರತದ ಮೇಲೆ ಆಕ್ರಮಣ ನಡೆಸಿ ಮುಸ್ಲಿಂ ಆಳ್ವಿಕೆಯನ್ನು ಸ್ಥಾಪಿಸುವಂತೆ ಅಫಘಾನಿಸ್ಥಾನ, ಪರ್ಷಿಯಾ, ತುರ್ಕಿ, ಅರೇಬಿಯಾದ ಪ್ರಭುಗಳಿಗೆ ಮೇಲಿಂದ ಮೇಲೆ ಪತ್ರಗಳನ್ನು ಬರೆಯುತ್ತಿದ್ದ ಟಿಪ್ಪುವನ್ನು ರಾಷ್ಟ್ರೀಯವಾದಿ ಎಂದು ಕೀರ್ತಿಸುವುದು ಹಾಸ್ಯಾಸ್ಪದ. ಟಿಪ್ಪುವಿನ ಮತಾಂಧತೆ ಜನಜನಿತ. ದೇವಾಲಯ ವಿಧ್ವಂಸ, ಬಲಾತ್ಕಾರದ ಮತಾಂತರದಲ್ಲಿ ಕ್ರೌರ್ಯದ ಹೊಸ ದಾಖಲೆಗಳನ್ನು ನಿರ್ಮಿಸಿದವರಿದ್ದರೆ ಅದರ ಕೀರ್ತಿ ಟಿಪ್ಪುವಿಗೇ ಸಲ್ಲಬೇಕು! ಗವರ್ನರ್ ಜನರಲ್ಗಳ ಆಡಳಿತ ವ್ಯವಸ್ಥೆಗೊಳ್ಳುತ್ತಿದ್ದ ಪ್ರಾರಂಭಿಕ ಹಂತದಲ್ಲಿ ಆಂಗ್ಲರ ಮೇಲೆ ಬಾಡಿಗೆ ಸೈನಿಕರ ನೆರವಿನಿಂದ ಸಾಧಿಸಿದ ವಿಜಯಗಳನ್ನು ಹೊರತುಪಡಿಸಿದರೆ ಟಿಪ್ಪುವಿನದು ದೀರ್ಘ ವಿಫಲ ಪ್ರಯಾಸವೇ. ಮೈಸೂರು ಸಂಸ್ಥಾನದ ಮೇಲಿನ ಅಧಿಕಾರವನ್ನು ನ್ಯಾಯಬಾಹಿರವಾಗಿ ಟಿಪ್ಪು ಸ್ವಾಯುತ್ತ ಮಾಡಿಕೊಂಡಿದ್ದಷ್ಟೇ ಅಲ್ಲ, ತೀವ್ರ ಜನವಿರೋಧಿ ಎಂಬ ‘ಕೀರ್ತಿ’ ಪಡೆದುಕೊಂಡ. ಭಾರತದ ಇತರೆ ಭಾಗಗಳ ಮುಸ್ಲಿಂ ನವಾಬರಿಂದಲೂ ತಾತ್ಸಾರಕ್ಕೆ ತುತ್ತಾಗಿದ್ದ ಟಿಪ್ಪು ಬಿಟ್ಟುಹೋದ ನೆನಪು ಜನ-ಕಂಟಕನೆಂಬುದು ಮಾತ್ರ.
ಟಿಪ್ಪುವಿಗೆ ದೊರೆತಿದ್ದ ಶಿಕ್ಷಣ ಮತಾಂಧತೆಯನ್ನು ಬೆಳೆಸುವುದು ಮಾತ್ರವೇ ಆಗಿತ್ತು ಎಂದು ಟಿಪ್ಪುವಿನ ತಂದೆ ಹೈದರ್ ಆಲಿಯೇ ಕ್ರೋಧಗೊಂಡಿದ್ದನೆಂದು ಅಸಂದಿಗ್ಧ ದಾಖಲೆ ಇದೆ. ಟಿಪ್ಪುವಿನಲ್ಲಿ ಅತ್ಯಲ್ಪ ಸಹಿಷ್ಣುತೆಯಾದರೂ ಇದ್ದಿದ್ದರೆ ಮಂಗಳೂರು, ಕೊಡಗು, ವೈನಾಡು, ಕಣ್ಣಾನೂರು, ಕೊಚ್ಚಿ, ತಿರುವಾಂಕೂರು, ತಂಜಾವೂರು, ಕೊಯಮತ್ತೂರು, ಹೊನ್ನಾವರ ಮೊದಲಾದ ಹಲವು ಕಡೆಗಳಲ್ಲಿ ಅವನ ವಿರುದ್ಧ ಜನತೆ ಆತನ ಆಡಳಿತದ ಅವಧಿಯುದ್ಧಕ್ಕೂ ಬಂಡಾಯ ನಡೆಸಿದ್ದೇಕೆ?
ಟಿಪ್ಪು ಎಸಗಿದ ಅನಾಹುತಗಳ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಟಿಪ್ಪು ಹಿಂದೆ ಸರಿಯುವುದಾದರೆ ಅಪಾರ ಹಣ ನೀಡುವೆವೆಂದ ಚಿರಕ್ಕಲ್ ರಾಜರಿಗೆ ಟಿಪ್ಪು ಹೇಳಿದ್ದು: ‘ಇಡೀ ಜಗತ್ತನ್ನು ನನಗೆ ಉಡುಗೊರೆಯಾಗಿ ನೀಡಿದರೂ ನಾನು ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡದಿರಲಾರೆ’ (Sardar K.M. Panikkar : Freedom Struggle). ಚಿರಕ್ಕಲ್ ರಾಜ ಪರಿವಾರವನ್ನೆಲ್ಲ ಅಮಾನುಷವಾಗಿ ಟಿಪ್ಪು ಪಡೆಯವರು ಕೊಂದರು. ಕೊಂದ ಮೇಲೂ ಶವಗಳನ್ನು ಪರಿಪರಿಯಾಗಿ ಅವಮಾನಿಸಿದರು. ಶವಗಳನ್ನು ಆನೆಗಳಿಂದ ಬೀದಿಗಳಲ್ಲಿ ಎಳೆದೊಯ್ದರು. ಅಷ್ಟೇ ಅಲ್ಲ, ಶವಗಳನ್ನು ಮರಗಳ ಮೇಲೆ ತೂಗು ಹಾಕಿದರು.
ಇಡೀ ಮಲಬಾರನ್ನು (ಈಗಿನ ಕೇರಳ) ಇಸ್ಲಾಮೀಕರಿಸುವ ಭವ್ಯ ಗುರಿಯನ್ನು ಟಿಪ್ಪು ಹೊಂದಿದ್ದ. ಕಡತನಾಥ್ ಮನೆತನದ ನೆಲೆಯಾದ ಕುಟ್ಟಿಪುರಂನಲ್ಲಿದ್ದ ೨೦೦೦ದಷ್ಟು ನಾಯರ್ ಕುಟುಂಬಗಳಿಗೆ ಟಿಪ್ಪು ಬಲಾತ್ಕಾರವಾಗಿ ಸುನ್ನತ್ ಮಾಡಿಸಿ ಗೋಮಾಂಸ ತಿನ್ನಿಸಿದ.
1789 ರಲ್ಲಿ ತನ್ನ ವಶದಲ್ಲಿದ್ದ ಅಸಂಖ್ಯ ಯುದ್ಧ ಕೈದಿಗಳನ್ನು ಟಿಪ್ಪು ಬಲಾತ್ಕಾರದಿಂದ ಮತಾಂತರಿಸಿದ್ದನ್ನು 1800 ರಲ್ಲಿ ಬುಖಾನನ್ ಬರೆದ ವರದಿಯಲ್ಲಿ ದಾಖಲಿಸಿದ್ದಾನೆ.
1788 ರ ಮಾರ್ಚ್ 22 ರಂದು ಟಿಪ್ಪು ಸುಲ್ತಾನ್ ಅಬ್ದುಲ್ ಖಾದರನಿಗೆ ಬರೆದ ಪತ್ರ: “12 ಸಾವಿರಕ್ಕೂ ಹೆಚ್ಚುಮಂದಿ ಹಿಂದುಗಳಿಗೆ ಇಸ್ಲಾಂ ಧರ್ಮದ ಗೌರವವನ್ನು ಸಮನಿಸಲಾಯಿತು. ಅವರಲ್ಲಿ ಅನೇಕರು ನಂಬೂದರಿಗಳಾಗಿದ್ದರು. ಈ ಸಾಧನೆಗೆ ಹಿಂದುಗಳ ನಡುವೆ ವ್ಯಾಪಕವಾದ ಪ್ರಚಾರ ನೀಡಬೇಕು. ಸ್ಥಳೀಯ ಹಿಂದುಗಳನ್ನು ನಿಮ್ಮೆದುರು ತಂದು ನಿಲ್ಲಿಸಬೇಕು. ಅನಂತರ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಗೊಳಿಸಬೇಕು…”
ಕಲ್ಲಿಕೋಟೆಯಲ್ಲಿ ತನ್ನ ಸೇನಾಪತಿಗೆ 1778 ರ ಡಿ.14ರಂದು ಟಿಪ್ಪು ಬರೆದ ಪತ್ರ: “ನನ್ನ ಇಬ್ಬರು ಅನುಯಾಯಿಗಳನ್ನು ಮೀರ್ ಹುಸೇನ್ ಅಲಿ ಅವರ ಜೊತೆಯಲ್ಲಿ ಕಳುಹಿಸಿ ಕೊಡುತ್ತಿದ್ದೇನೆ. ಅವರ ಜೊತೆಗೆ, ಎಲ್ಲ ಹಿಂದುಗಳನ್ನು ನೀವು ಸೆರೆಹಿಡಿದು ಕೊಲ್ಲಬೇಕು. 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಸೆರೆಮನೆಯಲ್ಲಿಟ್ಟಿರಬೇಕು. ಉಳಿದವರಲ್ಲಿ 5 ಸಾವಿರ ಮಂದಿಯನ್ನು ಮರದ ಕೊಂಬೆಗಳಿಗೆ ನೇಣುಹಾಕಿ ಕೊಲ್ಲಬೇಕು. ಇದು ನನ್ನ ಕಟ್ಟಪ್ಪಣೆ.”
ಟಿಪ್ಪು ಬರೆದ ಇಂತಹ ಇನ್ನೂ ಅದೆಷ್ಟೋ ಪತ್ರಗಳು ಖ್ಯಾತ ಇತಿಹಾಸಕಾರ ಸರ್ದಾರ್ ಕೆ.ಎಂ. ಪಣಿಕ್ಕರ್ ಅವರ ಕೃತಿಗಳಲ್ಲಿ ದಾಖಲಾಗಿವೆ. ಆ ಪತ್ರಗಳನ್ನು ಒಮ್ಮೆ ತಿರುವಿ ಹಾಕಿದರೆ ಟಿಪ್ಪುವಿನ ನಿಜ ಸ್ವರೂಪ ಏನೆಂಬುದು ಸ್ಪಷ್ಟವಾಗುತ್ತದೆ. ಈಗ ಟಿಪ್ಪುವನ್ನು ಜಾತ್ಯತೀತ ಆಡಳಿತಗಾರನೆಂದು ಪರಾಕು ಹೇಳುವವರು ಇದನ್ನೆಲ್ಲ ಬೇಕೆಂದೇ ಬಾಯಿಬಿಡುತ್ತಿಲ್ಲ. ಟಿಪ್ಪುವನ್ನು ಹೊಗಳುವ ಕಾರ್ನಾಡ್, ಪಾಪು ಮೊದಲಾದವರಿಗೆ ಟಿಪ್ಪುವಿನ ನೈಜ ಇತಿಹಾಸ ಗೊತ್ತಿಲ್ಲದೇ ಇಲ್ಲ. ಆದರೆ ನೈಜ ಇತಿಹಾಸವನ್ನು ಸಂಶೋಧಕ ಎಂ.ಚಿದಾನಂದಮೂರ್ತಿಯವರಂತೆ ದಿಟ್ಟತನದಿಂದ ತೆರೆದಿಡುವ ಗಟ್ಟಿ ಹೃದಯ ಇವರಾರಿಗೂ ಇಲ್ಲ. ಪ್ರಸಿದ್ಧಿ, ಸರ್ಕಾರಿ ಪ್ರಶಸ್ತಿಗಳ ಮೇಲೆಯೇ ಸದಾ ಕಣ್ಣಿಟ್ಟಿರುವ ಈ ಮಂದಿಗೆ ಸತ್ಯ ಹೇಳಿದರೆ ಪ್ರಸಿದ್ಧಿ ಅಥವಾ ಪ್ರಶಸ್ತಿ ದೊರಕದು ಎಂಬ ಸತ್ಯ ಗೊತ್ತಿz ಟಿಪ್ಪುವನ್ನು ವೈಭವೀಕರಿಸುವ ಕೀಳುತನಕ್ಕೆ ಇಳಿದಿದ್ದಾರೆ. ಟಿಪ್ಪುವನ್ನು ಹಾಡಿ ಹೊಗಳುವ ಭರದಲ್ಲಿ ಕಾರ್ನಾಡ್ ನಾಡಪ್ರಭು ಕೆಂಪೇಗೌಡರನ್ನು ಟೀಕಿಸಿದ್ದು ಈಗ ವಿವಾದದ ಭುಗಿಲು ಹೊತ್ತಿಕೊಳ್ಳುವುದಕ್ಕೆ ಕಾರಣವಾಗಿದೆ. ಟಿಪ್ಪುವನ್ನು ಶಿವಾಜಿ ಮಹಾರಾಜರಿಗೆ ಹೋಲಿಸಿ ಅತ್ತ ಮಹಾರಾಷ್ಟ್ರ ಜನತೆಯ ಕೋಪಕ್ಕೂ ಕಾರ್ನಾಡ್ ತುತ್ತಾಗಿದ್ದಾರೆ. ಕಾರ್ನಾಡ್ ಈ ಮಾತನ್ನು ಧೈರ್ಯವಿದ್ದರೆ ಮಹಾರಾಷ್ಟ್ರಕ್ಕೆ ಬಂದು ಹೇಳಲಿ, ನೋಡೋಣ ಎಂದು ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರೊಬ್ಬರು ಗುಡುಗಿದ್ದಾರೆ. ಕಾರ್ನಾಡ್ ಹೀಗೆ ಬಾಯಿಗೆ ಬಂದಂತೆ ಮಾತನಾಡುವುದನ್ನು ನೋಡಿದರೆ ಅವರಿಗೆ ಏನೋ ಗಂಭೀರ ಮಾನಸಿಕ ಸಮಸ್ಯೆ ಇದೆಯೆಂಬುದು ಮಾತ್ರ ಗ್ಯಾರಂಟಿ !
ಟಿಪ್ಪುವಿನ ಖಡ್ಗವನ್ನು ಲಂಡನ್ನಿಂದ ಖರೀದಿಸಿ ತಂದ ಉದ್ಯಮಿ ವಿಜಯಮಲ್ಯ, ಅನಂತರ ಅದರ ದುಷ್ಪರಿಣಾಮಗಳನ್ನು ಎದುರಿಸಬೇಕಾಯಿತು. ಮೊದಲು ಮಲ್ಯ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿತ್ತು. ಟಿಪ್ಪು ಖಡ್ಗ ತಂದ ಬಳಿಕ ಮಲ್ಯ ಮುಟ್ಟಿದ್ದೆಲ್ಲ ಮಣ್ಣಾಯಿತು. ತನ್ನ ಕಿಂಗ್ಫಿಷರ್ ವಿಮಾನಯಾನ ಸಂಸ್ಥೆಯನ್ನೇ ಮುಚ್ಚಬೇಕಾಯಿತು. ಮಲ್ಯ ಒಡೆತನದ ಐಪಿಎಲ್ನ ಬೆಂಗಳೂರು ಕ್ರಿಕೆಟ್ ತಂಡ ತೀವ್ರ ನಷ್ಟಕ್ಕೆ ಗುರಿಯಾಯಿತು. ಸಾವಿರಾರು ಅಮಾಯಕರನ್ನು ಬಲಿಪಡೆದ ರಕ್ತಸಿಕ್ತ ಖಡ್ಗವನ್ನು ಖರೀದಿಸಿದರೆ ಅದರಿಂದ ಒಳಿತಾಗಲು ಹೇಗೆ ಸಾಧ್ಯ?
ಈಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಠಕ್ಕೆ ಬಿದ್ದು ಟಿಪ್ಪು ಜಯಂತಿ ಆಚರಿಸಿ ಉಂಟಾಗಿರುವ ಪರಿಣಾಮ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ರಾಜ್ಯದಲ್ಲಿ ಮತ್ತೆ ಕೋಮು ಸಾಮರಸ್ಯಕ್ಕೆ ಬೆಂಕಿ ಹಚ್ಚಿದಂತಾಗಿದೆ. ಈಗಾಗಲೇ ಕೋಮು ಗಲಭೆಗೆ ನಾಲ್ಕೈದು ಮಂದಿ ಬಲಿಯಾಗಿದ್ದಾರೆ. ಟಿಪ್ಪು ಜಯಂತಿ ಆಚರಣೆ ವೇಳೆ ಆಧುನಿಕ ಟಿಪ್ಪುಗಳು ಎಸಗಿದ ದಾಳಿಯೇ ಇದಕ್ಕೆ ಕಾರಣವೆಂಬುದು ಹಗಲಿನಷ್ಟು ನಿಚ್ಚಳ. ಹಾಗಿದ್ದರೂ ಸಿದ್ಧರಾಮಯ್ಯ ಮಡಿಕೇರಿಯಲ್ಲಿ ಘಟಿಸಿದ ಕುಟ್ಟಪ್ಪ ಎಂಬ ವಿಹಿಂಪ ಕಾರ್ಯಕರ್ತರ ಹತ್ಯೆಯನ್ನು ‘ಆಕಸ್ಮಿಕ’ ಎಂದಿರುವುದು ಅವರ ಮುಸ್ಲಿಂ ತುಷ್ಟೀಕರಣ ನೀತಿಗೆ ಅಪ್ಪಟ ನಿದರ್ಶನ. ಹಿಂದುಗಳು ಹತ್ಯೆಗೀಡಾದರೆ ಅದು ಆಕಸ್ಮಿಕ, ಅದೇ ಮುಸ್ಲಿಂ ವ್ಯಕ್ತಿಗಳು ಹತ್ಯೆಗೀಡಾದರೆ ಅದು ಉದ್ದೇಶಪೂರ್ವಕ ಎನ್ನುವುದು ರಾಜಕೀಯ ಓಲೈಕೆಯಲ್ಲದೇ ಮತ್ತೇನು? ಮಹಾತ್ಮಾ ಗಾಂಧಿ ಜಯಂತಿಗೆ ಪತ್ರಿಕೆಗಳಿಗೆ ಕೇವಲ ಅರ್ಧಪುಟ ಜಾಹೀರಾತು ನೀಡುವ ಸಿದ್ಧರಾಮಯ್ಯ ಸರ್ಕಾರ ಟಿಪ್ಪು ಜಯಂತಿಗೆ ಬರೋಬ್ಬರಿ ಒಂದು ಪುಟ ಜಾಹೀರಾತು ನೀಡಿದೆ ! ಮಹಾತ್ಮ ಗಾಂಧಿಗಿಂತಲೂ ಟಿಪ್ಪು ಪರಮ ಸಹಿಷ್ಣು ಹಾಗೂ ಶ್ರೇಷ್ಠ ವ್ಯಕ್ತಿ ಎಂದು ಬಿಂಬಿಸುವ ಹುನ್ನಾರವೇ ಇದು?
ಆಗಿಹೋದ ಇತಿಹಾಸದ ಪ್ರಮಾದಗಳನ್ನು ಮತ್ತೆ ಕೆದುಕಲು ಜನರು ತಾವಾಗಿಯೇ ಇಷ್ಟಪಡುವುದಿಲ್ಲ. ಮತಾಂಧ ಟಿಪ್ಪುವನ್ನು ಮರೆಯಲು ಪ್ರಯತ್ನಿಸುತ್ತಿರುವಾಗಲೇ ಮತ್ತೆ ಆತನನ್ನು ಎಳೆದುತಂದು ವೈಭವೀಕರಿಸುವ ಪ್ರಗತಿಪರರ ಹುನ್ನಾರವನ್ನು ಜನತೆ ಖಂಡಿತ ಸಹಿಸಲಾರರು. ಇತಿಹಾಸದ ಆಳವಾದ ಕೋಮು ಗಾಯಗಳನ್ನು ಸಾಮರಸ್ಯದ ಮುಲಾಮು ಸವರಿ ವಾಸಿ ಮಾಡಬೇಕೇ ಹೊರತು ಅದರ ಮೇಲೆ ಬರೆ ಎಳೆಯುವ ಕುತ್ಸಿತ ಪ್ರಯತ್ನ ಸಲ್ಲದು. ಇತಿಹಾಸದ ಗಾಯದ ಮೇಲೆ ಬರೆ ಎಳೆಯಲು ಯತ್ನಿಸಿದರೆ ಅನಾಹುತ ಖಂಡಿತ ತಪ್ಪಿದ್ದಲ್ಲ. ಸರ್ಕಾರದ ಸೂತ್ರಧಾರಿಗಳು ಇದನ್ನು ಎಷ್ಟು ಬೇಗ ಅರಿತರೆ ಅಷ್ಟು ಒಳ್ಳೆಯದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.