ಬೆಳ್ತಂಗಡಿ : 94ಸಿ ಯೋಜನೆಯ ಬಗ್ಗೆ ಬೆಳ್ತಂಗಡಿ ಕಂದಾಯ ಇಲಾಖೆಯು ಸ್ಪಂದನೆ ತೋರದಿರುವ ಬಗ್ಗೆ, ಪಂಚಾಯತ್ಗೆ ಮಂಜೂರಾದ ಭೂಮಿ ಮತ್ತು ಇತರೇ ಸರಕಾರಿ ಜಮೀನನ್ನು ಉಳ್ಳವರು ಅತಿಕ್ರಮಿಸುತ್ತಿರುವ ಕುರಿತು, ಸ್ಮಶಾನಕ್ಕೆ ಜಾಗಕಾದಿರಿಸದಿರುವ ವಿಚಾರವಾಗಿ ವಿಸ್ತೃತಚರ್ಚೆ ಗುರುವಾರ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ನಡೆದ ತಾ.ಪಂನ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ವಿಶೇಷ ಸಭೆಯಲ್ಲಿ ನಡೆಯಿತು.
ಪುತ್ತೂರು ಉಪವಿಭಾಗಾಧಿಕಾರಿ ಸತೀಶ್ಕುಮಾರ್, ಶಾಸಕ ಕೆ. ವಸಂತ ಬಂಗೇರ, ತಾ.ಪಂ. ಅಧ್ಯಕ್ಷೆ ಜಯಂತಿ ಪಾಲೇದು ಮತ್ತಿತರ ಸಮಕ್ಷಮದಲ್ಲಿ ಸಭೆ ನಡೆಯಿತು. ಕಂದಾಯ ಇಲಾಖೆ ಗ್ರಾಮೀಣ ನಿವೇಶನ ಯೋಜನೆಯ ಬಗ್ಗೆ ಕಾಳಜಿ ಪೂರ್ವಕ ಸ್ಪಂದನೆ ನೀಡುತ್ತಿಲ್ಲ. ಪ್ರತೀ ತಾ.ಪಂ. ಸಭೆಯಲ್ಲಿ ಚರ್ಚೆ ನಡೆಯುತ್ತದೆ. ಕಳೆದ ನಾಲ್ಕು ವರ್ಷಗಳಿಂದ ತಹಸೀಲ್ದಾರ್ ಯಾವುದೇ ಸಭೆ ಆಗಮಿಸುತ್ತಿಲ್ಲ. ನಾಲ್ಕು ವರ್ಷದಿಂದ ಶಾಸಕರಎದುರೇ ತಹಸೀಲ್ದಾರರು ಎಲ್ಲಾ ಸರಿಮಾಡಿಕೊಡುತ್ತೇನೆಂದು ಒಪ್ಪಿಕೊಂಡಿದ್ದಾರೆ. ಆದರೆ ಆ ಬಳಿಕ ತಿರುಗಿ ನೋಡಿಲ್ಲ. ಕೊಕ್ರಾಡಿಯಲ್ಲಿ ಕೆಲ ಫಲಾನುಭವಿಗಳಿಂದ ನಿವೇಶನಕ್ಕಾಗಿ ರೂ. 5000 ತೆಗೆದುಕೊಳ್ಳುತ್ತಿದ್ದಾರೆ. ಈ ಹಣ ಮೂರು-ನಾಲ್ಕು ಟೇಬಲುಗಳನ್ನು ದಾಟುತ್ತದೆ ಎಂದು ಸದಸ್ಯ ವಿಜಯಗೌಡ ಆರೋಪಿಸಿದರು. ಇದನ್ನ ಆ ಗ್ರಾಮದ ವಿಎ, ಪಿಡಿಒಗಳು ನಿರಾಕರಿಸಿದರು.
ಕೆಲವೆಡೆ ಸರಕಾರ ನೀಡಿದ ನಿವೇಶನದಲ್ಲಿ ಫಲಾನುಭವಿಗಳಿಲ್ಲದೆ ಬೇರೆ ಯಾರೋ ವಾಸ್ತವ್ಯವಿರುವ ಬಗ್ಗೆ ಸದಸ್ಯರೊಬ್ಬರು ತಿಳಿಸಿದರು. ಅದಕ್ಕೆ ಎಸಿಯವರು ಅರ್ಹ ಫಲಾನುಭವಿಗಳು ಸರಕಾರ ನೀಡಿದ ಜಾಗದಲ್ಲಿ ಮನೆ ಕಟ್ಟದೆ ಇದ್ದಲ್ಲಿ ಮತ್ತು ಆ ಜಾಗದಲ್ಲಿ ಬೇರೆಯಾರಾದರೂ ವಾಸ್ತವ್ಯವಿದ್ದಲ್ಲಿ ಆ ಜಾಗದ ಮಂಜೂರಾತಿಯನ್ನು ರದ್ದು ಮಾಡುವ ಅಧಿಕಾರ ತಹಸೀಲ್ದಾರರಿಗಿದೆ. ೯೪ಸಿ ಅಡಿಯಲ್ಲಿ ಅರ್ಜಿ ಸ್ವೀಕರಿಸಲು ಡಿ.೧೫ ಕೊನೆಯ ದಿನಾಂಕವಾಗಿರುತ್ತದೆ ಎಂದರು.
ತೆಕ್ಕಾರುವಿನ ವಿಎ, ಉಗ್ರಾಣಿ ಸರಕಾರ ಜಾಗಾ ಮಾರಾಟ ಮಾಡುವುದರಲ್ಲಿ ಶಾಮೀಲಾಗಿದ್ದಾರೆ ಎಂದು ಸದಸ್ಯ ಮಂಜುನಾಥ ಸಾಲಿಯಾನ್ ಆರೋಪಿಸಿದಾಗ ಇದಕ್ಕೆ ಅಲ್ಲಿನ ವಿಎ ಆಕೋಶಗೊಂಡು ಅಲ್ಲಿನ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮಗಣಿಗಾರಿಕೆ, ಅಕ್ರಮ ಮರಳುಗಾರಿಕೆಯನ್ನು ತಡೆದಿದ್ದೇನೆ. ಯಾವುದೋ ವೈಯಕ್ತಿಕ ಕಾರಣಗಳಿಂದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದಾಗ ಆ ಬಗ್ಗೆ ಚರ್ಚೆ ಅಲ್ಲಿಗೇ ನಿಂತಿತು.ವೇಣೂರಿನಲ್ಲಿಎಂಟೂವರೆಎಕರೆಯಲ್ಲಿ ವ್ಯಾಪಿಸಿದ್ದ ಅಜಿಲ ಕೆರೆ ಇದೀಗ 4 ಎಕರೆಯಲ್ಲಿ ಮಾತ್ರಇದೆ. ಅಲ್ಲದೆ ಹಾಕಿದ ಬೇಲಿ ತೆಗೆಯಲಾಗಿದೆ. ಈ ಬಗ್ಗೆ ಕಳೆದ 5 ವರ್ಷದಿಂದ ಸಭೆಯಲ್ಲಿ ಪ್ರಸ್ತಾಪಿಸುತ್ತಾ ಬಂದಿದ್ದೇನೆ ಎಂದು ವಿಜಯಗೌಡ ಹೇಳಿದಾಗ ಈ ವಿಚಾರವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಎಸಿ ಆಶ್ವಾಸನೆ ಇತ್ತರು. ಅದೇ ರೀತಿ ಗುರುವಾಯನಕೆರೆ ಹಾಗೂ ಸುಣ್ಣದಕರೆಯ ಗಡಿಗುರುತು ಆಗಬೇಕು ಎಂದು ಕುವೆಟ್ಟು ಗ್ರಾ.ಪಂ.ಅಧ್ಯಕ್ಷ ಅಶೋಕ್ ಮನವಿ ಮಾಡಿದರು.
ಕೆಲವೆಡೆ ಪಂಚಾಯತ್ ಕಚೇರಿಗೇ ಬೇಕಾದ ಜಾಗ ಮಂಜೂರಾಗದಿರುವ ಬಗ್ಗೆ ಮತ್ತು ಇದ್ದ ಜಾಗ ಖಾಸಗಿಯವರು ಕಬಳಿಸುತ್ತಿರುವ ಬಗ್ಗೆ ಸದಸ್ಯ ಸುಧೀರ್ ಸುವರ್ಣ ಗಮನ ಸೆಳೆದಾಗ ಪಂಚಾಯತ್ನವರು ಅಲ್ಲಿರುವ ಜಾಗವನ್ನು ಅನ್ಯ ಇಲಾಖೆಗೆ, ಸಾರ್ವಜನಿಕ ಉದ್ದೇಶಕ್ಕೆ ಮೀಸಲಿರಿಸಿದಲ್ಲಿ ಆ ಜಾಗಗಳು ಸರಕಾರದ ವಶದಲ್ಲೇ ಇರುತ್ತವೆ ಎಂದು ಎಸಿ ಸಲಹೆ ನೀಡಿದರು. ಇಂತಹ ಸಾವಿರಾರು ಸಮಸ್ಯೆಗಳಿವೆ. ಇವು ಒಂದೆರಡು ಸ್ಯಾಂಪಲ್ಗಳು ಮಾತ್ರ ಎಂದು ವಿಜಯಗೌಡ ಹೇಳಿದರು. ಬಳಿಕ ಗ್ರಾಮ ಪಂಚಾಯತ್ವಾರು ನಿವೇಶನ ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ನಡ, ನಾವೂರು, ಕುತ್ಲೂರು, ಧರ್ಮಸ್ಥಳ ಮೊದಲಾದೆಡೆ ಪಂಚಾಯತ್ ವ್ಯಾಪ್ತಿಯ ಸರಕಾರ ಜಮೀನನನ್ನು ಅತಿಕ್ರಮಿಸಿರುವ ಬಗ್ಗೆ ವಿಎಗಳು ಮಾಹಿತಿ ನೀಡಿದರು. ಅತಿಕ್ರಮಣಗಳ ಬಗ್ಗೆ ನೋಟಿಸು ಜವಾಬ್ದಾರಿ ವಿಎಗಳದ್ದು ಅದನ್ನು ಸಶಕ್ತವಾಗಿ ಮಾಡಬೇಕುಎಂದು ಎಸಿ ಸೂಚಿಸಿದರು.
ನಿವೇಶನದ ಬಗ್ಗೆ ಬೇಡಿಕೆ ಬಂದಾಗಲೇ ವಿಎ ಮತ್ತು ಪಿಡಿಓಗಳು ಜಮೀನು ಇದೆಯೋ ಇಲ್ಲವೋ ಎಂದು ಜಂಟಿ ವರದಿ ತಯಾರಿಸಬೇಕು. ಆರು ಅಥವಾ ವರ್ಷದ ನಂತರ ಜಮೀನುಇಲ್ಲ ಎಂದು ಹೇಳುವುದು ಉಚಿತವಲ್ಲ. ವಿಎಗಳು ತಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಎಷ್ಟು ಸರಕಾರಿ ಜಾಗ ಲಭ್ಯವಿದೆ ಎಂಬ ಪಟ್ಟಿಯನ್ನು ತಮ್ಮ ಕಚೇರಿಯಲ್ಲಿ ಇಟ್ಟುಕೊಳ್ಳಬೇಕು ಮತ್ತು ಅದನ್ನು ಅಗ್ಗಾಗ್ಗೆ ಅಪ್ಡೇಟ್ ಮಾಡುತ್ತಿರಬೇಕು. ಗ್ರಾಮದಲ್ಲಿ ಉತ್ತಮ ಕೆಲಸ ಮಾಡಿ ಒಳ್ಳಯತನವನ್ನು ಕಾಪಾಡಿಕೊಳ್ಳಬೇಕು ಎಂದು ಬಳಿಕ ಶಾಲೆಗಳ ಪಹಣಿ ದಾಖಲಾತಿ ಮತ್ತು ಗಡಿಗುರುತು ಮಾಡುವ ಕುರಿತು, ಸ್ಮಶಾನ ಜಮೀನಿನ ಬಗ್ಗೆ ಚರ್ಚೆ ನಡೆಯಿತು. ಘನತ್ಯಾಜ್ಯಕ್ಕೆ ಬೇಕಾದಜಾಗದ ಬಗ್ಗೆ ಚರ್ಚೆ ನಡೆಯಿತು. ಕಂದಾಯ ಮತ್ತುಅರಣ್ಯಇಲಾಖೆಯ ವಶದಲ್ಲಿರುವ ಜಾಗದ ಬಗ್ಗೆ ಇರುವ ಗೊಂದಲದ ಕುರಿತೂ ಚರ್ಚೆ ನಡೆಯಿತು. ಕೆಲವೆಡೆ ಬಫರ್ ಭೂಮಿಯಾರಿಗೆ ಸೇರಿದ್ದು ಎಂಬ ಗೊಂದಲ ಇರುವ ಬಗ್ಗೆ ಎಸಿಯವರೇ ಗಮನಕ್ಕೆ ತಂದರು.
ಜಿ.ಪಂ. ಸದಸ್ಯೆಲ್ಲದಸಿ.ಕೆ.ಚಂದ್ರಕಲಾ, ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ್, ತಾ.ಪಂ.ಉಪಾಧ್ಯಕ್ಷ ವಿಷ್ಣು ಮರಾಠೆ ವೇದಿಕೆಯಲ್ಲಿದ್ದರು. ಸಭೆಯಲ್ಲಿ ವಿವಿಧ ಗ್ರಾ.ಪಂ.ನ ಪಿಡಿಒಗಳು, ವಿಎಗಳು, ವಿವಿಧ ಗ್ರಾ.ಪಂ.ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಗುರುವಾರದ ಸಭೆಯನ್ನು ಜಿಲ್ಲಾಧಿಕಾರಿಯವರೇ ಏರ್ಪಾಡು ಮಾಡಿದ್ದರು. ಆದರೆ ಅವರೇ ಗೈರು ಹಾಜರಾಗಿದ್ದರು.ಧರ್ಮಸ್ಥಳದಲ್ಲಿ ಸುಮಾರು ಒಂದೂವರೆ ಎಕರೆ ಪಂಚಾಯತ್ ಜಾಗದ ಸರ್ವೇಯನ್ನು ಶಾಸಕರ ಎದುರೇ ಮಾಡಲಾಗಿತ್ತು. ಆದರೆ ಸಭೆಯಲ್ಲಿ ವಿಎ, ಪಿಡಿಓಗಳು ಗೊಂದಲ ಸೃಷ್ಟಿಸಿದ್ದಲ್ಲದೆ ಆ ಜಾಗವು ಕೋರ್ಟಿನಲ್ಲಿದೆ ಎಂದು ಹೇಳಿ ಮತ್ತಷ್ಟು ಜಟಿಲಗೊಳಿಸಿದರು.
ಕಂದಾಯ ಇಲಾಖೆಯ ಸಮಸ್ಯೆಗಳನ್ನು ಆದಷ್ಟು ಶೀಘ್ರವಾಗಿ ಪರಿಹಾರಕಾಣಬೇಕು ಎಂದು ವಿಜಯಗೌಡ ಹೇಳಿದಾಗ, ಖಂಡಿತಾ ಮುಂದಿನ ಎರಡು ತಿಂಗಳೊಳಗೆ ಪರಿಹರಿಸುತ್ತೇನೆ ಎಂದು ಶಾಸಕರು ಹೇಳಿದಾಗ ಸಭೆ ನೆಗೆಗಡಲಲ್ಲಿ ತೇಲಿತು.ಕಂದಾಯ ಇಲಾಖೆಗಳ ಅಪಸವ್ಯದ ಬಗ್ಗೆ ಸದಾಗರಂ ಆಗುವ ಶಾಸಕರು ಇಂದಿನ ಸಭೆಯಲ್ಲಿ ಮಾತ್ರ ಅತಿಕ್ರಮಣಗಳ ಬಗ್ಗೆ ಚರ್ಚೆ ನಡೆದಾಗ ಮಾತ್ರ ಮೌನವಾಗಿ ಇರುವುದು ವಿಶೇಷ ಅರ್ಥವನ್ನು ಕಲ್ಪಿಸುವಂತೆ ಮಾಡಿತು.ಕೆಲ ವಿಎಗಳು,ಪಿಡಿಓಗಳು ಸಿನಿಮಾ ಶೈಲಿಯ ನಡೆನುಡಿಗಳಿಂದ ಸಭೆಯನ್ನು ಚಕಿತಗೊಳಿಸಿ
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮಕರಣಿಕರು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದರೆ ಸರಕಾರದ ಎಲ್ಲಾ ಯೋಜನೆಗಳು ಪ್ರಾಮಾಣಿಕವಾಗಿ ಜನರನ್ನು ತಲುಪಲು ಸಾಧ್ಯ ಪುತ್ತೂರು ಎಸಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.