ಬೆಳ್ತಂಗಡಿ : ಎತ್ತಿನಹೊಳೆ ಯೋಜನೆ ಅನುಷ್ಠಾನ ವಿರುದ್ಧ ಹೋರಾಡುತ್ತಿದ್ದ ಬೆಳ್ತಂಗಡಿ ತುಳುನಾಡ್ ಒಕ್ಕೂಟ ಯೋಜನೆ ನಿಲುಗಡೆಯ ಬಗ್ಗೆ ಯಾವುದೇ ಸ್ಪಷ್ಟತೆ ಬಾರದಿರುವುದನ್ನು ಪ್ರತಿಭಟಿಸಿ ಬೆಳ್ತಂಗಡಿಯಲ್ಲಿ ನವೆಂಬರ್ ಒಂದರಂದು ಪ್ರತ್ಯೇಕ ರಾಜ್ಯ ಬೇಡಿಕೆ ಹಾಗೂ ತುಳುನಾಡ ಧ್ವಜ ಏರಿಸಲು ಮುಂದಾಗಿದ್ದು ಇದಕ್ಕೆ ಪೂರ್ವ ಭಾವಿಯಾಗಿ ಸಭೆ ಸೇರುತ್ತಿದ್ದಂತೆ ಬೆಳ್ತಂಗಡಿ ಪೋಲಿಸರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ತುಳುನಾಡ್ ಒಕ್ಕೂಟದ ಕೇಂದ್ರ ಸಮಿತಿ ಕನ್ನಡ ರಾಜ್ಯೋತ್ಸವ ದಿನದಂದು ತುಳು ಧ್ವಜವನ್ನು ಹಾರಿಸಲು ನಿರ್ಧರಿಸಿತ್ತು. ತುಳುನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಗೆ ದಕ್ಕೆಯಾಗುತ್ತಿದೆ. ನೇತ್ರಾವತಿ ನದಿ ತಿರುವು, ಬೃಹತ್ ಕೈಗಾರಿಕೆಗಳು ತುಳುನಾಡಿನಲ್ಲಿ ಝಂಡಾ ಹೂಡುತ್ತಿದೆ. ಅಲ್ಲದೆ ಗ್ಯಾಸ್, ಪೆಟ್ರೋಲಿಯಂ ಪೈಪ್ ಮೂಲಕ ಕೃಷಿ ಭೂಮಿ ನಾಶವಾಗುತ್ತಿದೆ. ಈ ಬಗ್ಗೆ ಸರಕಾರಕ್ಕೆ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.ಇದೇ ರೀತಿ ಮುಂದುವರಿದರೆ ಪ್ರತ್ಯೇಕ ರಾಜ್ಯ ಪಡೆಯುವ ಮೂಲಕ ತುಳುನಾಡ ನೆಲ, ಜಲ, ಭಾಷೆ, ಸಂಸ್ಕೃತಿಯನ್ನು ಉಳಿಸುವ ದೃಷ್ಠಿಯಿಂದ ಉಗ್ರ ಹೋರಾಟ ಮಾಡಲಾಗುವುದು. ಅದಕ್ಕಾಗಿ ಸರಕಾರಕ್ಕೆ ಬಿಸಿ ತಟ್ಟಬೇಕಾದರೆ ರಾಜ್ಯೋತ್ಸವದ ದಿನದಂದೆ ಹೋರಾಟಕ್ಕೆ ಅಧಿಕೃತ ಚಾಲನೆ ನೀಡಬೇಕು ಎಂದು ತುಳುನಾಡ್ ಒಕ್ಕೂಟದ ಕೇಂದ್ರ ಸಮಿತಿಯ ಅಧ್ಯಕ್ಷ ಶೈಲೇಶ್ ಆರ್.ಜೆ ನೇತೃತ್ವದಲ್ಲಿ ನಿರ್ಧರಿಸಲಾಗಿತ್ತು. ಈ ಬಗ್ಗೆ ನ. 1ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದ ಬಳಿ ಬೃಹತ್ ಪ್ರತಿಭಟನಾ ಸಭೆ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಹೋರಾಟಗಾರರನ್ನು ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಬಿ. ಆರ್. ಲಿಂಗಪ್ಪ ನೇತೃತ್ವದ ತಂಡ ಹೋರಾಟಗಾರರನ್ನು ಬಂಧಿಸಿದೆ.
ಪ್ರತಿಭಟನಾಕಾರರರನ್ನು ಬಂಧಿಸಲು ಮುಂದಾದ ಪೊಲೀಸ್ ಇಲಾಖೆಯ ವಿರುದ್ಧ ಒಕ್ಕೂಟದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ತುಳುನಾಡು ಒಕ್ಕೂಟದ ನಗರ ಸಮಿತಿಯ ಅಧ್ಯಕ್ಷ ಜನಾದನ ಬಂಗೇರ ಮೂಡಾಯಿಗುತ್ತು ಮಾತನಾಡಿ, ನಮ್ಮ ಹಕ್ಕಿನ ತುಳುನಾಡ ನೆಲ, ಜಲ, ಭಾಷೆ, ಸಂಸ್ಕೃತಿಯನ್ನು ಉಳಿಸಲು ಪ್ರಜಾಪ್ರಭುತ್ವ ನೆಲೆಯಲ್ಲಿ ಹೋರಾಟ ಮಾಡುತ್ತಿದ್ದೇವೆ. ಇದು ಯಾವುದೇ ಸರಕಾರವಾಗಲಿ, ಜನಪ್ರತಿನಿಧಿಗಳ ವಿರುದ್ಧ ಹೋರಾಟವಲ್ಲ. ನಮ್ಮ ಹಕ್ಕನ್ನು ನಾವು ಪಡೆಯಲು ಅರ್ಹರಿಲ್ಲ ಎಂದಾದರೆ ನಮ್ಮ ಹಕ್ಕನ್ನು ಇನ್ನೊಬ್ಬರು ಪಡೆಯಲು ಅರ್ಹರಿದ್ದಾರೆಯೇ ಎಂದು ಪ್ರಶ್ನಿಸಿದರು.
ತುಳುನಾಡು ಒಕ್ಕೂಟ ಕೇಂದ್ರ ಸಮಿತಿಯ ಅಧ್ಯಕ್ಷ ಶೈಲೇಶ್ ಆರ್. ಜೆ. ಮಾತನಾಡಿ. ನಮ್ಮ ಕನಸು ತುಳು ಭಾಷೆ ಸಂಸ್ಕೃತಿ ಉಳಿಯಬೇಕು ತುಳುನಾಡಿನ ಉತ್ತಮ ಸಂಸ್ಕೃತಿಯನ್ನು ಅಳಿಸಲು ನಾವು ಬಿಡುವುದಿಲ್ಲ. ಹಕ್ಕಿನಿಂದ ಇದನ್ನು ಉಳಿಸಲು ಹೋರಾಟ ಮಾಡುತ್ತಿದ್ದೇವೆ. ಯಾವುದೇ ಬೆದರಿಕೆಗೆ ಬಗ್ಗುವವರು ತುಳುನಾಡಿಗರಲ್ಲ. ಬಂಧಿಸಿದರೆ ಬಂಧನಕ್ಕೂ ಸಿದ್ದ ತುಳುನಾಡಿಗಾಗಿ ಜೀವಕೊಡಲು ಸಿದ್ದ ಎಂದರು.
ಕಾರ್ಯಕರ್ತರ ಬಂಧನ : ತುಳುನಾಡು ಒಕ್ಕೂಟದ ವತಿಯಿಂದ ತುಳುಭಾಷೆ ಸಂಸ್ಕೃತಿ ಉಳಿಸಲು ಪ್ರತಿಭಟನೆ ನಡೆಯುತ್ತಿದ್ದಂತೆಯೇ ಕಾರ್ಯಕ್ರಮ ಪ್ರಾರಂಭವಾಗುವ ಹಂತದಲ್ಲೇ ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಯಾವ ಮನವಿಯನ್ನೂ ಆಲಿಸದೆ ಬಂಧಿಸಿದರು. ಒಕ್ಕೂಟದ ಪ್ರಮುಖ ಮುಖಂಡರುಗಳ ಮೇಲೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ, ತಹಶೀಲ್ದಾರ್ ಮುಂದೆ ಹಾಜರುಪಡಿಸಿದರು. ತಹಶೀಲ್ದಾರ್ ಭದ್ರತೆ ಹಾಗೂ ಎಚ್ಚರಿಕೆಯ ಮೇಲೆ ಪ್ರತಿಭಟನಾಕಾರರಿಗೆ ಜಾಮೀನು ನೀಡಿದರು.
ಪ್ರತಿಭಟನೆಯಲ್ಲಿ ಕೇಂದ್ರ ಒಕ್ಕೂಟ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಎಣಿಂಜೆ, ನಗರ ಸಮಿತಿ ಕಾರ್ಯದರ್ಶಿ ಗೊಪಾಲಕೃಷ್ಣ ಸಂಜಯನಗರ, ಕಾನೂನು ಸಲಹೆಗಾರ ಪ್ರಶಾಂತ್ ಎಂ, ಪದಾಧಿಕಾರಿಗಳಾದ ವಸಂತ ಸಾಲಿಯಾನ್ ಕೆಂಬರ್ಜೆ ಶಕ್ತಿನಗರ, ಹರೀಶ್ ಜಿ. ವಿ. ಸವಣಾಲ್, ಸಂತೋಷ್ ಕರ್ಕೆರ, ವಿನ್ಸೆಂಟ್ ಲೋಬೊ, ಮಹಮ್ಮದ್ ಖಲೀಫ್, ಸುರೇಂದ್ರ ಕೊಟ್ಯಾನ್, ವಸಂತ, ಚಂದ್ರರಾಜ್ ಮೇಲಂತಬೆಟ್ಟು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ಠಾಣೆಯಲ್ಲಿ ಮಾತಿನ ಚಕಮಕಿ : ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಗೆ ಹಾಗೂ ನಮ್ಮ ಹಕ್ಕನ್ನು ಪಡೆಯುವುದಕ್ಕಾಗಿ ಹೋರಾಟ ನಡೆಸಲು ಪೊಲೀಸ್ ಇಲಾಖೆಗೆ ಅನುಮತಿಗಾಗಿ ಮನವಿ ನೀಡಿದ್ದರೂ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಲಾಗಿತ್ತು. ಪೊಲೀಸರು ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವಾಗ ಕಾನೂನು ರೀತ್ಯಾ ಪರವಾನಿಗೆ ಕೇಳಿದರೂ ನೀಡದಿರುವುದು ಸರಿಯಲ್ಲ. ಸರಿಯಾದ ಮಾಹಿತಿಯನ್ನು ಪೊಲೀಸ್ ಇಲಾಖೆ ತಿಳಿಯಬೇಕು. ಒಂದೊಂದು ಸಂಘಟನೆಗೆ ಒಂದೊಂದು ನಿಯಮ ಜಾರಿ ಮಾಡುತ್ತಿರುವುದು ಸರಿಯಲ್ಲ ಎಂದು ಒಕ್ಕೂಟದ ಕಾರ್ಯಕರ್ತರು ತಿಳಿಸಿದಾಗ ಪೊಲೀಸರು ಹಾಗೂ ತುಳು ಒಕ್ಕೂಟದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ನೇತ್ರಾವತಿ ನದಿ ತಿರುವು ವಿರುದ್ದ ಜಿಲ್ಲಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು ನವೆಂಬರ್ ಒಂದರಂದು ಜಿಲ್ಲೆಯ ವಿವಿಧ ಕಡೆಗಳಲ್ಲಿ ತುಳುಧ್ವಜ ಹಾರಿಸುವ ಮೂಲಕ ಪ್ರತಿಭಟನೆ ನಡೆಸಲಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ತುಳುನಾಡ್ ಒಕ್ಕೂಟ ನಡೆಸುವ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದಲ್ಲದೆ ಮುನ್ನೆಚ್ಚರಿಕೆಯಾಗಿ ವಿಶೇಷ ಪೊಲೀಸ್ ಪಡೆಯನ್ನು ನಿಯೋಜಿಸಿತ್ತು. ಕಳೆದ ಅ. 7 ರಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆಯ ವಿರುದ್ದ ತಾಲೂಕು ಬಂದ್ಗೆ ಕರೆ ನೀಡಿದ್ದು ಬಂದ್ ಸಂಪೂರ್ಣ ಯಶಸ್ವಿಗೊಂಡಿತ್ತು. ಇದರ ಮುಂದುವರಿದ ಭಾಗ ತುಳುನಾಡ್ ಒಕ್ಕೂಟ ಯೋಜನೆಯ ಬಗ್ಗೆ ಸ್ಪಷ್ಟ ನಿಲುವು ಸರಕಾರ ತೆಗೆದುಕೊಳ್ಳದ ಬಗ್ಗೆ ತುಳುಧ್ವಜ ಏರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿತ್ತು. ನ. 1 ರಂದು ನಡೆಸಲು ನಿರ್ಧರಿಸಲಾಗಿದ್ದ ಪ್ರತಿಭಟನೆಗೆ ಅನುಮತಿ ನೀಡದೆ ನಮ್ಮ ಹಕ್ಕಿಗಾಗಿ ನಡೆಸಿದ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನ ನಡೆಯುತ್ತಿದೆ ಎಂದು ತುಳು ಒಕ್ಕೂಟದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.