ಉಡುಪಿ : ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿರುವ, ಮಂಗಳಮುಖೀಯರ (ತೃತೀಯ ಲಿಂಗಿಗಳು) ಬದುಕಿನ ನೋವುಗಳನ್ನು ಬಿಚ್ಚಿಡುವ ‘ನಾನು ಅವನಲ್ಲ, ಅವಳು’ ಅ.29ರಂದು ಉಡುಪಿಯ ಅಲಂಕಾರ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿತು. ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆಯಿತು.
ಮಂಗಳಮುಖೀ ಸ್ಮೈಲ್ವಿದ್ಯಾ ಅವರ ಜೀವನವನ್ನು ಆಧರಿಸಿದ ಈ ಚಲನಚಿತ್ರದಲ್ಲಿ ಸಂಚಾರಿ ವಿಜಯ್ ಅವರು ನಾಯಕ ನಟನಾಗಿ ಅಭಿನಯಿಸಿದ್ದಾರೆ. ಬಿ.ಎಸ್.ಲಿಂಗದೇವರು ಅವರು ಚಿತ್ರದ ನಿರ್ದೇಶಕರು.
‘ನನ್ನ ಪ್ರಯತ್ನ ಮಾತ್ರ’: ಚಿತ್ರ ಪ್ರದರ್ಶನದ ಅನಂತರ ನಡೆದ ಸಂವಾದದಲ್ಲಿ ಮಾತನಾಡಿದ ಬಿ.ಎಸ್.ಲಿಂಗದೇವರು ಅವರು ‘ನಾನು ಸಾಕಷ್ಟು ಸಮಯ ಮಂಗಳಮುಖೀಯರೊಂದಿಗಿದ್ದು ಅವರ ಬದುಕನ್ನು ಅರಿತುಕೊಂಡೆ. ಒಂದು ಬಾರಿ ಬೆಂಗಳೂರಿನಲ್ಲಿ ಬಲವಂತವಾಗಿ ಲಿಂಗ ಪರಿವರ್ತನೆಯ ಘಟನೆ ಕಂಡು ಅದರ ಬೆನ್ನು ಬಿದ್ದಾಗ ವಿದ್ಯಾ ಅವರ ಬದುಕು ತಿಳಿಯಿತು. ಅನಂತರ ಮಂಗಳಮುಖೀಯರ ಕುರಿತಾಗಿ ಸಮಾಜ ಹೊಂದಿರುವ ಅಭಿಪ್ರಾಯವನ್ನು ಬದಲಿಸಬೇಕೆಂಬ ಬಯಕೆ ಹುಟ್ಟಿತು. ಹಾಗಾಗಿ ಚಿತ್ರ ನಿರ್ಮಾಣಕ್ಕೆ ಮುಂದಾದೆ. ನಾನು ಓರ್ವ ನಿರ್ದೇಶಕ ಅಷ್ಟೆ. ನಾನು ಸಮಾಜಸುಧಾರಕ ಅಲ್ಲ. ವಾಣಿಜ್ಯ ಸಿನೆಮಾಗಳ ನಡುವಿನ ಭರಾಟೆಯಲ್ಲಿ ಇಂತಹ ಸಿನೆಮಾಗಳ ಪ್ರದರ್ಶನಕ್ಕೆ ಥಿಯೇಟರ್ ಸಿಗುತ್ತಿಲ್ಲ. ಆದರೆ ಈ ರೀತಿ ಕೆಲವರನ್ನಾದರೂ ತಲುಪಿ ಉತ್ತಮ ಸಂದೇಶ ಸಮಾಜಕ್ಕೆ ತಲುಪಿದರೆ ನನಗೆ ತೃಪ್ತಿ’ ಎಂದರು.
ಉಡುಪಿಯ ಮಂಜುನಾಥ ಕಾಮತ್ ಅವರ ನೇತೃತ್ವದ ‘ಓದುಗರು’ ವಾಟ್ಸ್ಯಾಪ್ ಗ್ರೂಪ್ ಉಡುಪಿಯಲ್ಲಿ ಚಿತ್ರಪ್ರದರ್ಶನವನ್ನು ಆಯೋಜಿಸಿತ್ತು. ‘ಇಂತಹ ಪ್ರಯತ್ನ ರಾಜ್ಯದಲ್ಲೇ ಮೊದಲು. ಇದು ರಾಜ್ಯಕ್ಕೆ ಮಾದರಿ. ಜನರ ಪ್ರೋತ್ರಾಹ ಕಂಡು ಮನಸ್ಸು ತುಂಬಿ ಬಂದಿದೆ’ ಎಂದು ಲಿಂಗದೇವರು ಹೇಳಿದರು.
40ರಷ್ಟು ಮಂಗಳಮುಖೀಯರು ಕೂಡ ಚಿತ್ರ ವೀಕ್ಷಿಸಿದರು. ‘ಮಂಗಳಮುಖೀಯರನ್ನು ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕು. ಅವರಿಗೂ ಅವಕಾಶ, ಮೀಸಲಾತಿ ನೀಡಬೇಕು’ ಎಂಬ ಮಾತು ಸಾಮಾನ್ಯ ಪ್ರೇಕ್ಷಕ ವರ್ಗದಿಂದ ಬಂತು. ‘ಈ ಚಿತ್ರ ನಮ್ಮ ನಿಜ ಬದುಕು. ಅತ್ಯುತ್ತಮವಾಗಿ ಮೂಡಿಬಂದಿದೆ. ನಮ್ಮನ್ನು ನಿಕೃಷ್ಟವಾಗಿ ಕಾಣಬೇಡಿ’ ಎಂಬ ನುಡಿ ಮಂಗಳಮುಖೀಯರಿಂದ ಹೊರಹೊಮ್ಮಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.