ಪಾಲ್ತಾಡಿ : ಬೆಳ್ಳಾರೆ ದೂರವಾಣಿ ಕೇಂದ್ರ ವ್ಯಾಪ್ತಿಯ ಸ್ಥಿರ ಹಾಗೂ ಮೊಬೈಲ್ ದೂರವಾಣಿ ಗ್ರಾಹಕರು ಇಲಾಖೆಯ ಅಸಮರ್ಪಕ ಸೇವೆಯಿಂದ ತೊಂದರೆಗೊಳಗಾಗಿದ್ದಾರೆ.
ಈ ಸಮಸ್ಯೆಯ ಕುರಿತು ಗ್ರಾಹಕರು ಇಲಾಖೆಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಸೇವೆಯಲ್ಲಿ ಯಾವುದೇ ಬೆಳವಣಿಗೆ ಕಂಡು ಬರದ ಹಿನ್ನೆಲೆಯಲ್ಲಿ ಜೂ.27ರಂದು ಬೆಳ್ಳಾರೆ ಟೌನ್ ರೋಟರಿ ಕ್ಲಬ್ನ ನೇತೃತ್ವದಲ್ಲಿ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಸಾರ್ವಜನಿಕ ಮುಕಾಮುಖಿ ಕಾರ್ಯಕ್ರಮ ನಡೆಸಲಾಗಿತ್ತು. ಸಭೆಯಲ್ಲಿ ಪಾಲ್ಗೊಂಡ ದೂರವಾಣಿ ಇಲಾಖೆಯ ಅಧಿಕಾರಿಗಳು ಶೀಘ್ರ ಸಮಸ್ಯೆಯನ್ನು ಪರಿಹರಿಸಿ ಗ್ರಾಹಕರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು.
ಆದರೆ ಸೇವೆಯಲ್ಲಿ ಯಾವುದೇ ಉತ್ತಮ ಬೆಳವಣಿಗೆ ಕಂಡು ಬಂದಿಲ್ಲ ಹಾಗೂ ಕಳೆದ 10 ದಿನಗಳಿಂದ ಇಂಟರ್ನೆಟ್, ಸ್ಥಿರ, ಮೊಬೈಲ್ ದೂರವಾಣಿಗಳ ಸೇವೆಯಲ್ಲಿ ತೀರಾ ಅಡಚಣೆಯಾಗುತ್ತಿರುವುದನ್ನು ಮನಗಂಡು ಬೆಳ್ಳಾರೆ ವಾಣಿಜ್ಯ ,ವರ್ತಕ ಹಾಗೂ ಕೈಗಾರಿಕಾ ಸಂಘ ಹಾಗೂ ಬೆಳ್ಳಾರೆ ಟೌನ್ ರೋಟರಿ ಕ್ಲಬ್ನ ವತಿಯಿಂದ ಪುನಃ ಬೆಳ್ಳಾರೆ ದೂರವಾಣಿ ಕೇಂದ್ರಕ್ಕೆ ತೆರಳಿ ಬೆಳ್ಳಾರೆ ಉಪವಿಭಾಗದ ಎಂಜಿನಿಯರ್ಗೆ ಮನವಿ ನೀಡಿ 10 ದಿನದೊಳಗೆ ಸಮಸ್ಯೆ ಪರಿಹರಿಸುವ ಕುರಿತು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಸಾರ್ವಜನಿಕರ,ಸಂಘ ಸಂಸ್ಥೆಗಳ ನೆರವಿನಿಂದ ಉಗ್ರ ಪ್ರತಿಭಟನೆ ನಡೆಸಲಾಗುವದೆಂದು ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಬೆಳ್ಳಾರೆ ಟೌನ್ ರೋಟರಿ ಕ್ಲಬ್ನ ಅಧ್ಯಕ್ಷ ರವೀಂದ್ರ ಗೌಡ ಮರಕ್ಕಡ , ಬೆಳ್ಳಾರೆ ವಾಣಿಜ್ಯ, ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ , ಬಿ.ಸುಬ್ರಹ್ಮಣ್ಯ ಜೋಶಿ , ವಿನಯ ಕುಮಾರ್ ಕೆ , ಮಮ್ಮಾಲಿ ಹಾಜಿ ,ಮಹಮ್ಮದ್ , ಸೋಮಶೇಖರ್ ಆಚಾರ್ಯ , ಮುಸ್ತಾಫ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.