ಉಡುಪಿ: ಅವ್ಯಾಹತವಾಗಿ ವಿದ್ಯುತ್ ಕಡಿತಗೊಳ್ಳುತ್ತಿರುವುದನ್ನು ಖಂಡಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಸದಸ್ಯರು ಅ. 27ರಂದು ಉಡುಪಿಯಲ್ಲಿ ಮೆರವಣಿಗೆ ನಡೆಸಿ, ಮೆಸ್ಕಾಂ ಕಚೇರಿ ಎದುರು ಕ್ಯಾಂಡಲ್ ಹೊತ್ತಿಸಿ, ಪುಷ್ಪಗುತ್ಛ ಇರಿಸಿ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಮಾರುತಿ ವೀಥಿಕಾದಿಂದ ಇಬ್ಬರು ಯಕ್ಷಗಾನ ವೇಷಧಾರಿಗಳ ಸಹಿತ ನಡೆದ ಮೆರವಣಿಗೆಯಲ್ಲಿ ಉಡುಪಿ ನಾಗರಿಕ ಸಮಿತಿ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಬಲ್ಬ್ ಮಾಲೆ ಧರಿಸಿ, ತಮಟೆ ಬಾರಿಸುತ್ತಾ ಮೆಸ್ಕಾಂ ಕಚೇರಿಗೆ ಆಗಮಿಸಿದರು. ಸಮರ್ಪಕ ವಿದ್ಯುತ್ ಒದಗಿಸಲಾಗದ ಮೆಸ್ಕಾಂ ಇಲಾಖೆ ಇದ್ದೂ ಸತ್ತಂತೆ ಎಂದು ತಿಳಿಸಿ ಶ್ರದ್ಧಾಂಜಲಿ ಕೋರಿದರು.
ಕಾಲಕಾಲಕ್ಕೆ ಸಮರ್ಪಕವಾಗಿ ವಿದ್ಯುತ್ ಬಿಲ್ ಪಾವತಿ ಮಾಡುವ ಉಡುಪಿ ಜನರಿಗೆ ವಿಪರೀತ ವಿದ್ಯುತ್ ಕಡಿತ ಬೇಸರ ತಂದಿದೆ. ನಿತ್ಯ ಚಟುವಟಿಕೆಗಳಿಗೆ ತೊಂದರೆ ಉಂಟಾಗಿದೆ. ವಿದ್ಯಾರ್ಥಿಗಳು ಕಗ್ಗತ್ತಲಲ್ಲಿ ವಿದ್ಯಾಭ್ಯಾಸ ಮಾಡಬೇಕಾಗಿದೆ. ಉಷ್ಣ ವಿದ್ಯುತ್ ಸ್ಥಾವರ ಉಡುಪಿ ಜಿಲ್ಲೆಯಲ್ಲಿದ್ದರೂ ನಮಗೆ ಕತ್ತಲೆ ತಪ್ಪಿದ್ದಲ್ಲ ಎಂದು ಅವರು ಹೇಳಿದರು.
ಈ ಪ್ರತಿಭಟನೆಗೆ ಮೆಸ್ಕಾಂ ಸ್ಪಂದಿಸದಿದ್ದಲ್ಲಿ ಉಡುಪಿ ಜಿಲ್ಲಾ ಜನರ ಪರವಾಗಿ ಉಗ್ರ ಹೋರಾಟ ನಡೆಸುವುದಾಗಿ ಅವರು ಇಲಾಖೆಗೆ ಎಚ್ಚರಿಕೆ ನೀಡಿದರು. ಬಳಿಕ ಮೆರವಣಿಗೆ ಉಡುಪಿ ಕ್ಲಾಕ್ ಟವರ್ ವರೆಗೆ ಸಾಗಿ ಸಮಾಪನಗೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.