ಬೆಳ್ತಂಗಡಿ : ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಗೆ ವೀರ ಮಾಚಿದೇವ ಸಹಕಾರಿ ಸಂಘ ದಾರಿದೀಪವಾಗಲಿ ಎಂದು ಕರಿಂಜೆ ವೀರಾಂಜನೇಯ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.ಅವರು ಉಜಿರೆಯ ವಿಶ್ವಾಸ್ ಸಿಟಿ ಸೆಂಟರ್ನಲ್ಲಿ ವೀರ ಮಾಚಿದೇವ ವಿವಿಧೋದ್ದೇಶ ಸಹಕಾರಿ ಸಂಘ ಪುತ್ತೂರು ಇದರ ಪ್ರಥಮ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಸಹಕಾರಿ ಸಂಸ್ಥೆ ಹಾಗೂ ಗ್ರಾಹಕರು ಎಂಬುದು ತಾಯಿ ಮಗುವಿನ ಸಂಬಂಧದಂತೆ. ನಂಬಿಕೆಯ ವ್ಯವಹಾರ ಮಾಡಿದಾಗ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಸಹಕಾರಿ ಸಂಸ್ಥೆಗಳ ಅವಶ್ಯಕತೆ ಇದೆ. ಅದು ಅನಿವಾರ್ಯತೆಯು ಹೌದು ಎಂದ ಶ್ರೀಗಳು ಮಡಿವಾಳ ಸಮುದಾಯಕ್ಕೆ ಅಭಿವೃದ್ಧಿಯ ಕಾಲಘಟ್ಟ ಒದಗಿದೆ. ಶೈಕ್ಷಣಿಕ, ರಾಜಕೀಯ, ಸಹಕಾರಿ ಕ್ಷೇತ್ರಗಳಲ್ಲಿ ಸಮುದಾಯದ ಜನರು ಪ್ರಗತಿಯನ್ನು ಕಾಣುತ್ತಿದ್ದಾರೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಂಘದ ಪ್ರಥಮ ಶಾಖೆಯನ್ನು ಉದ್ಘಾಟಿಸಿದ ಜನಾರ್ದನ ಸ್ವಾಮಿ ದೇವಳದ ಆಡಳಿತ ಮೋಕ್ತೇಸರ ಯು. ವಿಜಯ ರಾಘವ ಪಡ್ವೆಟ್ನಾಯ ಮಾತನಾಡಿ, ಕಾಲದ ಬದಲಾವಣೆ ಆದಂತೆ ನಮ್ಮ ಆಸಕ್ತಿ ಬದಲಾಗುತ್ತಿದೆ. ಸಹಕಾರಿ ಕ್ಷೇತ್ರ ಬಡವರ ಪಾಲಿಗೆ ವರದಾನದಾಗಿದೆ. ಬಡ ರೈತರು ಸಹಕಾರಿ ಸಂಘದಿಂದ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದಾರೆ. ವೀರ ಮಾಚಿದೇವ ಸಹಕಾರಿ ಸಂಘ ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಯೊಂದಿಗೆ ಇತರ ವರ್ಗದ ಜನರಿಗೂ ಸಹಕಾರಿಯಾಗಲಿ ಎಂದರು.
ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿ ಉಪಾಧ್ಯಕ್ಷ ಹೆಚ್. ವಿ. ನಾಗರಾಜ್ ಅವರು, ಸಹಕಾರಿ ಕ್ಷೇತ್ರದಲ್ಲಿ ಅಂಬೆಗಾಲಿಕ್ಕಿದ ಜನರು ಇಂದು ರಾಜಕೀಯದಲ್ಲಿ ದೊಡ್ಡ ದುರೀಣರಾಗಿ ಗುರುತಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಮೂಲಕ ತಮ್ಮ ರಾಜಕೀಯ ವೃತ್ತಿ ಜೀವನ ಆರಂಭವಾದಲ್ಲಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದ ಅವರು ಸಹಕಾರಿ ಸಂಸ್ಥೆಯಿಂದ ಸಾಲ ಪಡೆದ ಗ್ರಾಹಕ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದಾಗ ಮಾತ್ರ ಸಂಸ್ಥೆ ಉಳಿಯುತ್ತದೆ ಎಂದರು.
ಪಾಲು ಬಂಡವಾಳ ಪತ್ರ ವಿತರಿಸಿ ಮಾತನಾಡಿದ ಉಡುಪಿಯ ಗುರು ಮಾಚಿದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಆನಂದ ಮಡಿವಾಳ ಅವರು, ಸಹಕಾರಿ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆಗಳ ಕೆಂಗಣ್ಣು ಬೀಳುತ್ತಿದೆ. ಇದರಿಂದ ರಾಜ್ಯದ ಹೆಚ್ಚಿನ ಸಹಕಾರಿ ಸಂಸ್ಥೆಗಳ ಬಾಗಿಲು ಮುಚ್ಚುವ ಭೀತಿಯನ್ನು ಎದುರಿಸುತ್ತಿದೆ. ಸಣ್ಣ ಸಣ್ಣ ಸಹಕಾರಿ ಸಂಸ್ಥೆಗಳು ಲಾಭದಲ್ಲಿ ಮುನ್ನಡೆಯಲು ಸಾಧ್ಯವಿಲ್ಲ. ಇದರ ಬಗ್ಗೆ ರಾಜ್ಯ ಸಹಕಾರಿ ಮಹಾಮಂಡಳಿ ಮುತುವರ್ಜಿ ವಹಿಸಿಕೊಂಡು ಸಹಕಾರಿ ಸಂಸ್ಥೆಗಳನ್ನು ಉಳಿಸುವಲ್ಲಿ ಪ್ರಯತ್ನಿಸಬೇಕು. ಸಣ್ಣ ರೈತರು ಸಹಕಾರಿ ಸಂಸ್ಥೆಯನ್ನು ಆಶ್ರಯಿಸಿರುವುದರಿಂದ ಸರಕಾರ ಕೂಡಾ ಇದರ ಬಗ್ಗೆ ಗಮನ ಹರಿಸಬೇಕು ಎಂದರು.
ಇ ಬ್ಯಾಂಕಿಂಗ್ ಉದ್ಘಾಟನೆಯನ್ನು ಉಜಿರೆ ಗ್ರಾಪಂ ಅಧ್ಯಕ್ಷ ಶ್ರೀಧರ ಪೂಜಾರಿ ನೆರವೇರಿಸಿದರು. ಠೇವಣಿ ಪತ್ರವನ್ನು ದ.ಕ. ಜಿಲ್ಲೆ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ಯ ವಿತರಿಸಿದರು. ಉಜಿರೆ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್, ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಎನ್. ನಂಜಪ್ಪ, ಪ್ರ. ಕಾರ್ಯದರ್ಶಿ ರಂಗಸ್ವಾಮಿ, ದ.ಕ. ಜಿಲ್ಲಾಧ್ಯಕ್ಷ ಬಿ. ಎನ್. ಪ್ರಕಾಶ್, ವೀರ ಮಾಚಿದೇವ ಸಹಕಾರಿ ಸಂಘದ ಉಪಾಧ್ಯಕ್ಷ ಪಿ. ಎನ್. ಸುಭಾಶ್ಚಂದ್ರ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಪಿ.ಬಿ. ಉಮಾನಾಥ ಸ್ವಾಗತಿಸಿ, ಪ್ರಸ್ತಾವಿಸಿದರು. ದೀಕ್ಷಿತಾ ನಿರ್ವಹಿಸಿದರು.
ಉತ್ತರ ಕರ್ನಾಟಕದಲ್ಲಿ ಮಡಿವಾಳ ಸಮಾಜ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡಿತಾ ಇದೆ. ದೇಶದ 17 ರಾಜ್ಯಗಳಲ್ಲಿ ಸಮಾಜ ಪ. ಜಾತಿಗೆ ಸೇರ್ಪಡೆಯಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಆಗಿಲ್ಲ. ಸರಕಾರ ಘೋಷಣೆ ಮಾಡಲು ಮೀನಾಮೇಷ ಮಾಡುತ್ತಿದೆ. ನಮ್ಮ ಹಕ್ಕನ್ನು ಕೇಳಲು ಕಳೆದ ಜನವರಿಯಲ್ಲಿ ಸಮಾವೇಶವನ್ನು ಮಾಡಲಾಗಿತ್ತು. ಮುಂದಿನ ಜನವರಿ 5 ರೊಳಗೆ ಸೇರ್ಪಡೆಗೊಳಿಸದಿದ್ದಲ್ಲಿ ಪ್ರತಿಭಟನೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ.- ಎನ್. ನಂಜಪ್ಪ. ಮಡಿವಾಳ ಸಂಘದ ರಾಜ್ಯಾಧ್ಯಕ್ಷ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.