ಬೆಳ್ತಂಗಡಿ : ಸರಕಾರಗಳು ಶೋಷಿತ ಜನರ ಅಭಿವೃದ್ಥಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದು ಅದು ಸರಿಯಾದ ರೀತಿಯಲ್ಲಿ ಉಪಯೋಗವಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೆ ಚಂದ್ರಕಲಾ ಹೇಳಿದರು.
ಅವರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ಬೆಳ್ತಂಗಡಿ, ನಗರ ಪಂಚಾಯತು ಬೆಳ್ತಂಗಡಿ ಹಾಗೂ ಸಮಾಜಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ದಿನಾಚರಣೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮಹಾ ಕಾವ್ಯದ ಮೂಲಕ ನಮಗೆಲ್ಲ ಪರಿಚಿತರಾಗಿರುವ ವಾಲ್ಮೀಕಿಯವರ ಸಾಧನೆ ನಮಗೆ ಸ್ಪೂರ್ತಿಯಾಗಲಿ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಉಜಿರೆ ಎಸ್.ಡಿ.ಎಂ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಉಮಾನಾಧ ಶೆಣೈ ಮಾತನಾಡಿ ಮಹರ್ಷಿ ವಾಲ್ಮೀಕಿ ಮಹಾನ್ ಕವಿಯಾಗಿದ್ದಾಗಲೇ ಮಹಾನ್ ಮಾನವತಾವಾದಿಯೂ ಆಗಿದ್ದರು. ತಮ್ಮ ಮಹಾ ಕಾವ್ಯದಲ್ಲಿ ಮನುಷ್ಯನ ವ್ಯಕ್ತಿತ್ವದ ವಿವಿಧ ರೀತಿಗಳನ್ನು ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಪಂಚಾಯತು ಅಧ್ಯಕೆ ಜಯಂತಿ ಪಾಲೇದು ವಹಿಸಿದ್ದರು. ವೇದಿಕೆಯಲ್ಲಿ ಬೆಳ್ತಂಗಡಿ ನಗರ ಪಂಚಾಯತು ಅಧ್ಯಕ್ಷೆ ನಳಿನಿ ವಿಶ್ವನಾಧ್, ತಾಲೂಕು ಪಂಚಾಯತು ಉಪಾಧ್ಯಕ್ಷ ವಿಷ್ಣು ಮರಾಠೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಚೇತನಾ ಚಂದ್ರಶೇಖರ್, ತಾಲೂಕು ಪಂಚಾಯತು ಕಾರ್ಯನಿರ್ವಹಣಾಧಿಕಾರಿ ಕೆ ಎನ್ ಮಹಂತೇಶ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ ಮೋಹನ್ ಸ್ವಾಗತಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.