
1947 ರ ವಿಭಜನೆಯ ಬಗ್ಗೆ ಯೋಚಿಸಿದಾಗ, ಪಂಜಾಬ್ ಮತ್ತು ಬಂಗಾಳ ಎಷ್ಟು ಕ್ರೂರವಾಗಿ ಬೇರ್ಪಟ್ಟವು ಎಂಬುದು ತಕ್ಷಣಕ್ಕೆ ನಮಗೆ ನೆನಪಿಗೆ ಬರುತ್ತದೆ. ನಿರಾಶ್ರಿತರು, ಗಲಭೆಗಳು, ಒಡೆದ ಕುಟುಂಬಗಳು ಮತ್ತು ಭಾರತ-ಪಾಕಿಸ್ಥಾನ ಜನರಿಂದ ತುಂಬಿದ ರೈಲುಗಳ ಎದ್ದುಕಾಣುವ ಚಿತ್ರಣಗಳು ನೆನಪಿಗೆ ಬರುತ್ತವೆ. ಅದನ್ನು ಹೊರತುಪಡಿಸಿಯೂ, ಇನ್ನೂ ಒಂದು ಪ್ರದೇಶ ಅಪಾಯದಲ್ಲಿತ್ತು ಮತ್ತು ಪಾಕಿಸ್ತಾನದ ಭಾಗವಾಗುವ ಅಂಚಿನಲ್ಲಿತ್ತು ಎಂಬುದನ್ನು ಕೆಲವರು ಮಾತ್ರ ನೆನಪಿಸಿಕೊಳ್ಳುತ್ತಾರೆ. ಅದುವೇ ಅಸ್ಸಾಂ. ಆದರೆ ಇದು ಎಂದಿಗೂ ಸಂಭವಿಸದಂತೆ ರಕ್ಷಿಸಿದ ವ್ಯಕ್ತಿ: ಗೋಪಿನಾಥ್ ಬೋರ್ಡೊಲೊಯ್.
ಅಸ್ಸಾಂ ಪಾಕಿಸ್ಥಾನಕ್ಕೆ ಸೇರದಂತೆ ನೋಡಿಕೊಳ್ಳಲು ಅವರು ಅವಕಾಶ ಮಾಡಿಕೊಡದಂತೆ ನೋಡಿಕೊಂಡರು ಮತ್ತು ಕಾಂಗ್ರೆಸ್, ಮುಸ್ಲಿಂ ಲೀಗ್ ಮತ್ತು ಬ್ರಿಟಿಷ್ ರಾಜ್ ವಿರುದ್ಧ ಧೈರ್ಯದಿಂದ ನಿಂತರು. ಇದು, “ಲೋಕಪ್ರಿಯ” ಅಥವಾ “ಅಸ್ಸಾಂನ ಸಿಂಹ” ಎಂದು ಸ್ಮರಿಸಲ್ಪಡುವ, ಅಸ್ಸಾಂ ಅನ್ನು ಭಾರತೀಯ ನಕ್ಷೆಯಲ್ಲಿ ಸೇರಿರುವುದನ್ನು ಖಚಿತಪಡಿಸಿದ ಮಹಾನ್ ವ್ಯಕ್ತಿ ಗೋಪಿನಾಥ್ ಬೋರ್ಡೊಲೊಯ್ ಅವರ ಯಶೋಗಾಥೆ.
1945 ರಲ್ಲಿ ಎರಡನೇ ಮಹಾಯುದ್ಧದ ನಂತರ, ಬ್ರಿಟನ್ ಇನ್ನು ಮುಂದೆ ಭಾರತವನ್ನು ಆಳಲು ಸಾಧ್ಯವಿಲ್ಲ ಎಂದು ಅರಿತುಕೊಂಡು ಬ್ರಿಟಿಷ್ ಕ್ಯಾಬಿನೆಟ್ ಮಿಷನ್ ಅನ್ನು ಕಳುಹಿಸಿದಾಗ ಈ ಬೆಳೆವಣಿಗೆ ಪ್ರಾರಂಭವಾಯಿತು. 1946 ರಲ್ಲಿ ಆಗಮಿಸಿದ ಮಿಷನ್, ಪ್ರಾಂತ್ಯಗಳನ್ನು ವಿಭಾಗಗಳಾಗಿ ಗುಂಪು ಮಾಡುವ ಪ್ರಸ್ತಾಪವನ್ನು ಮಾಡಿತು. ಅಸ್ಸಾಂ ಅನ್ನು ಬಂಗಾಳದ ಗುಂಪಿನಲ್ಲಿ ಇರಿಸಲಾಯಿತು, ಇದರಿಂದ ಮುಸ್ಲಿಂ ಬಹುಸಂಖ್ಯಾತ ಬಣದಲ್ಲಿ ಅಸ್ಸಾಂ ತನ್ನ ರಾಜಕೀಯ ಮತ್ತು ಸಾಂಸ್ಕೃತಿಕ ಗುರುತನ್ನು ಕಳೆದುಕೊಳ್ಳುವ ಭಯ ಹೆಚ್ಚಾಯಿತು. ಬಂಗಾಳಿ ಮುಸ್ಲಿಂ ರೈತರ ದೊಡ್ಡ ಪ್ರಮಾಣದ ವಲಸೆ ಅದಾಗಲೇ ಅಸ್ಸಾಂನ ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸಿದ್ದರಿಂದ ಈ ಕಳವಳಗಳು ಹೆಚ್ಚಾದವು. 1901 ರಲ್ಲಿ ಮುಸ್ಲಿಮರು ಜನಸಂಖ್ಯೆಯ ಸುಮಾರು 12–15% ರಷ್ಟಿದ್ದರು, 1941 ರ ಹೊತ್ತಿಗೆ 25.31% ಕ್ಕೆ ಏರಿದರು.
ಈ ಬದಲಾವಣೆಯನ್ನು ಗುರುತಿಸಿದ ಮುಸ್ಲಿಂ ಲೀಗ್, ಪೂರ್ವ ಪಾಕಿಸ್ತಾನದ ಭವಿಷ್ಯಕ್ಕೆ ಅಸ್ಸಾಂ ಅನ್ನು ಪ್ರಮುಖವೆಂದು ನೋಡಲಾರಂಭಿಸಿತು. ಸೈಯದ್ ಮುಹಮ್ಮದ್ ಸಾದುಲ್ಲಾ ಅವರ ಅಡಿಯಲ್ಲಿ, ಬುಡಕಟ್ಟು ಪ್ರದೇಶಗಳಲ್ಲಿಯೂ ಸಹ ವಲಸೆ ಬಂದ ಕೃಷಿಕರ ಕಾಲೋನಿಗಳನ್ನು ಉತ್ತೇಜಿಸಲು “ಹೆಚ್ಚು ಆಹಾರವನ್ನು ಬೆಳೆಸಿ” ಅಭಿಯಾನ ಆರಂಭಗೊಂಡಿತು ಮತ್ತು ಇದರಿಂದ ವಲಸೆ ಮತ್ತಷ್ಟು ವೇಗಗೊಂಡಿತು. ಈ ಅಭಿಯಾನವು ಆಹಾರದ ಬಗ್ಗೆ ಕಡಿಮೆ ಮತ್ತು ಅಸ್ಸಾಂನಲ್ಲಿ ಮುಸ್ಲಿಂ ಪ್ರಭಾವವನ್ನು ವಿಸ್ತರಿಸುವ ಬಗ್ಗೆ ಹೆಚ್ಚು ಗಮನಹರಿಸಿತ್ತು, ಅಂತಿಮವಾಗಿ ಪ್ರಾಂತ್ಯವನ್ನು ಪೂರ್ವ ಬಂಗಾಳದೊಂದಿಗೆ ಸಂಪರ್ಕಿಸುವ ಬೇಡಿಕೆಗಳನ್ನು ಬಲಪಡಿಸಲಾಯಿತು.
ಗೋಪಿನಾಥ್ ಬೋರ್ಡೊಲೊಯ್ ಅವರ ತೀವ್ರ ವಿರೋಧ ಮತ್ತು ಕಾಂಗ್ರೆಸ್ ಜೊತೆ ಸಂಘರ್ಷ
ಜವಾಹರಲಾಲ್ ನೆಹರು ನೇತೃತ್ವದ ಕಾಂಗ್ರೆಸ್, ಅಸ್ಸಾಂ ಅನ್ನು ಬಂಗಾಳದೊಂದಿಗೆ ಸೇರಿಸುವುದರ ಪರಿಣಾಮಗಳನ್ನು ಅರಿತುಕೊಳ್ಳಲಿಲ್ಲ ಮತ್ತು ಮುಸ್ಲಿಂ ಲೀಗ್ ಮತ್ತು ಬ್ರಿಟಿಷ್ ರಾಜ್ ಅನ್ನು ಸಮಾಧಾನಪಡಿಸುವಲ್ಲಿ ನಿರತವಾಗಿತ್ತು. ಹೀಗಾಗಿ, ಪಕ್ಷವು ಮಿಷನ್‌ನ ಚೌಕಟ್ಟನ್ನು ಒಪ್ಪಿಕೊಂಡಿತು. ಮತ್ತೊಂದೆಡೆ, ಮುಸ್ಲಿಂ ಲೀಗ್‌ಗೆ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ರಚನೆ ಮಾಡುವ ಇಚ್ಛೆಯಿತ್ತು, ಮತ್ತು ಹೀಗಾಗಿ ಅವರು ಸಹ ಇದನ್ನು ಒಪ್ಪಿಕೊಂಡರು.
ಆದರೆ ಸರ್ ಸೈಯದ್ ಮುಹಮ್ಮದ್ ಸಾದುಲ್ಲಾ ಅವರ ಪತನದ ನಂತರ ಅಸ್ಸಾಂನ ಪ್ರಧಾನ ಮಂತ್ರಿಯಾದ ಗೋಪಿನಾಥ್ ಬೋರ್ಡೊಲೊಯ್ ಅವರಿಗೆ ಇದು ಸ್ವೀಕಾರಾರ್ಹವಾಗಿರಲಿಲ್ಲ. ಏಪ್ರಿಲ್ 1, 1946 ರಂದು, ಬೋರ್ಡೊಲೊಯ್ ಮಿಷನ್ ಅನ್ನು ಭೇಟಿಯಾದರು ಮತ್ತು ಅಸ್ಸಾಂ ಅನ್ನು ಗ್ರೂಪ್ ಸಿ ಗೆ ಸೇರಿಸುವುದನ್ನು ಬಲವಾಗಿ ವಿರೋಧಿಸಿದರು. ಅಸ್ಸಾಂ ಅನ್ನು ಬಂಗಾಳದ ಅಡಿಯಲ್ಲಿ ರಾಜಕೀಯವಾಗಿ ಮುಳುಗಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು, ಅಸ್ಸಾಂ ಈಗಾಗಲೇ ಭಾಷಾ ಮತ್ತು ಸಾಂಸ್ಕೃತಿಕ ಮಾರ್ಗಗಳಲ್ಲಿ ರೂಪುಗೊಂಡ ಪ್ರಾಂತ್ಯವಾಗಿದೆ ಮತ್ತು ಸ್ವಾಯತ್ತ ಘಟಕವಾಗಿ ಮುಂದುವರಿಯಲು ಅರ್ಹವಾಗಿದೆ ಎಂದು ವಾದಿಸಿದರು. ಆದಾಗ್ಯೂ, ಮಿಷನ್ ಗುಂಪುಗಳನ್ನು ಬದಲಾಯಿಸಲು ನಿರಾಕರಿಸಿತು.
ಇದು ಬೋರ್ಡೊಲೊಯ್‌ಗೆ ಪ್ರಮುಖ ಸವಾಲಾಯಿತು. ಆದ್ದರಿಂದ, ಅವರು ಕಾಂಗ್ರೆಸ್ ಬೆಂಬಲವನ್ನು ಪಡೆಯಲು ಪ್ರಯತ್ನಿಸಿದರು. ಮೇ 19, 1946 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ (ಸಿಡಬ್ಲ್ಯೂಸಿ) ಸಲ್ಲಿಸಿದ ಜ್ಞಾಪಕ ಪತ್ರದಲ್ಲಿ, ಅವರು ಬ್ರಿಟಿಷರ ಗುಂಪು ಮಾಡುವ ಪ್ರಸ್ತಾಪವನ್ನು “ಕೆಟ್ಟ ಪ್ರಸ್ತಾಪ” ಎಂದು ಬಣ್ಣಿಸಿದರು, ಕಾಂಗ್ರೆಸ್ ಅದನ್ನು ಬೆಂಬಲಿಸುವುದನ್ನು ಮುಂದುವರಿಸಿದರೆ, ಇದು ಅಸ್ಸಾಂಗೆ ದ್ರೋಹವಾಗುತ್ತದೆ ಎಂದು ಹೇಳಿದರು. ಆದಾಗ್ಯೂ, ಇದಕ್ಕೆ ಮಣಿಯದೆ, ನೆಹರು ಅಸ್ಸಾಂನ “ಹಠಮಾರಿ” ನಿಲುವನ್ನು ಟೀಕಿಸಿದರು ಮತ್ತು ಇದು ರಾಷ್ಟ್ರೀಯ ಮಾತುಕತೆಗಳನ್ನು ಸಂಕೀರ್ಣಗೊಳಿಸುತ್ತದೆ ಎಂದು ಭಯಪಟ್ಟರು. ಗುಂಪುಗಾರಿಕೆ ವಿಷಯದ ಬಗ್ಗೆ ಅಸ್ಸಾಂ ಅಸೆಂಬ್ಲಿಯ ತಿಳುವಳಿಕೆಯನ್ನು ನೆಹರು ಪ್ರಶ್ನಿಸಿದರು, ಆದರೆ ಬೋರ್ಡೊಲೊಯ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು, ಅಸ್ಸಾಂಗೆ ಯಾವುದೇ ಗೊಂದಲವಿಲ್ಲ ಮತ್ತು ಬದಲಿಗೆ, ನೆಹರು ಅವರ ಭಾಷಣಗಳು ಜನರನ್ನು ಗೊಂದಲಗೊಳಿಸುತ್ತಿವೆ ಎಂದು ಹೇಳಿದರು.
ನೆಹರೂ ಅವರ ನಿರಾಕರಣೆಯ ಬಳಿಕ, ಬೋರ್ಡೊಲೊಯ್ ಅವರು ಮೋಹನ್ ದಾಸ್ ಕರಮ್ ಚಂದ್ ಗಾಂಧಿಯವರ ಬೆಂಬಲವನ್ನು ಹುಡುಕಿದರು. ಅವರು ಗಾಂಧಿಯನ್ನು ಭೇಟಿ ಮಾಡಲು ಅಸ್ಸಾಂನ ಇಬ್ಬರು ನಾಯಕರನ್ನು ಕಳುಹಿಸಿದರು – ಬಿಜಯ್ ಚಂದ್ರ ಭಾಗವತಿ ಮತ್ತು ಮಹೇಂದ್ರ ಮೋಹನ್ ಚೌಧರಿ. ಈ ಅಸ್ಸಾಮಿ ನಾಯಕರೊಂದಿಗೆ ಮಾತನಾಡಿದ ನಂತರ, ಗಾಂಧಿಯವರು ಅಸ್ಸಾಂನ ವಾದಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು, ಗುಂಪುಗಾರಿಕೆ ಯೋಜನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಮತ್ತು ಅಗತ್ಯವಿದ್ದರೆ, ಸಂವಿಧಾನ ಸಭೆಯಿಂದ ಹಿಂದೆ ಸರಿಯಬೇಕು ಎಂದು ಹೇಳಿದರು. “ನೀವು ಸರಿಯಾಗಿ ವರ್ತಿಸದಿದ್ದರೆ ಮತ್ತು ಅಸ್ಸಾಂ ತನ್ನ ಆತ್ಮವನ್ನು ಕಳೆದುಕೊಳ್ಳಬಾರದು” ಎಂದು ಅವರು ಹೇಳಿದರು. ಗಾಂಧಿಯವರ ಹಸ್ತಕ್ಷೇಪದಿಂದಾಗಿ, ಕಾಂಗ್ರೆಸ್ ನಾಯಕತ್ವಕ್ಕೆ ಅಸ್ಸಾಂನ ಕಳವಳಗಳನ್ನು ನಿರ್ಲಕ್ಷಿಸಲು ಸಾಧ್ಯವಾಗಲಿಲ್ಲ.
ಅದರೊಂದಿಗೆ ಅಸ್ಸಾಂನಾದ್ಯಂತ ಬೋರ್ಡೊಲೊಯ್ ಅವರ ಪ್ರತಿರೋಧ ಚಳುವಳಿ ಪ್ರಾರಂಭವಾಯಿತು. ಜೂನ್ 15, 1946 ರಂದು, ಅಸ್ಸಾಂನಾದ್ಯಂತ “ಗುಂಪುಗಾರಿಕೆ ವಿರೋಧಿ ದಿನ”ವನ್ನು ಆಚರಿಸಲಾಯಿತು. ಬ್ರಹ್ಮಪುತ್ರ ಕಣಿವೆಯಾದ್ಯಂತ ಮತ್ತು ದೂರದ ಒಳನಾಡಿನ ಪ್ರದೇಶಗಳಲ್ಲಿಯೂ ಸಭೆಗಳು, ರ್ಯಾಲಿಗಳು ಮತ್ತು ಮೆರವಣಿಗೆಗಳನ್ನು ಆಯೋಜಿಸಲಾಯಿತು. ಜುಲೈ 16, 1946 ರಂದು ಅಸ್ಸಾಂ ಶಾಸಕಾಂಗವು ಬೋರ್ಡೊಲೊಯ್ ಮಂಡಿಸಿದ ಐತಿಹಾಸಿಕ ನಿರ್ಣಯವನ್ನು ಅಂಗೀಕರಿಸಿತು, ಕ್ಯಾಬಿನೆಟ್ ಮಿಷನ್‌ನ ಯೋಜನೆಯನ್ನು ತಿರಸ್ಕರಿಸಿತು ಮತ್ತು ಸಂವಿಧಾನ ಸಭೆಯಲ್ಲಿ ಅಸ್ಸಾಂನ ಪ್ರತಿನಿಧಿಗಳು ಅಸ್ಸಾಂನ ಸಂವಿಧಾನ ಅಥವಾ ಯಾವುದೇ ಜಂಟಿ ಗ್ರೂಪ್ ಸಿ ಸಂವಿಧಾನವನ್ನು ರೂಪಿಸಲು ಬಂಗಾಳದೊಂದಿಗೆ ಕುಳಿತುಕೊಳ್ಳಬಾರದು ಎಂದು ಸೂಚಿಸಿತು.
ಆ ಸಮಯದಲ್ಲಿ, ಜಿನ್ನಾ ಅಸ್ಸಾಂನ ನಿರ್ಣಯವನ್ನು ಬಲವಾಗಿ ವಿರೋಧಿಸಿದರು ಮತ್ತು ಅಸ್ಸಾಂ ಪಾಕಿಸ್ತಾನದೊಳಗೆ ಸೇರಬೇಕು ಎಂದು ಒತ್ತಾಯಿಸುತ್ತಲೇ ಇದ್ದರು. ಆದರೆ ಬೋರ್ಡೊಲೊಯ್ ಪಟ್ಟುಬಿಡದೆ, “ಜಿನ್ನಾ ಚಂದ್ರನನ್ನು ಭೂಮಿಗೆ ತರುವ ಕನಸು ಕಾಣಬಹುದು, ಆದರೆ ಅಸ್ಸಾಂ ಅನ್ನು ಭಾರತದಿಂದ ಬೇರ್ಪಡಿಸಿ ಪಾಕಿಸ್ತಾನದೊಂದಿಗೆ ವಿಲೀನಗೊಳಿಸುವುದು ಕೇವಲ ಕನಸಾಗಿ ಉಳಿಯುತ್ತದೆ” ಎಂದು ಹೇಳಿದರು. ಇದರೊಂದಿಗೆ, ಕ್ಯಾಬಿನೆಟ್ ಮಿಷನ್ ಕುಸಿಯಿತು ಮತ್ತು 1947 ರಲ್ಲಿ ವಿಭಜನೆಯಾಗದೆ, ಅಸ್ಸಾಂ ಭಾರತದೊಳಗೆ ಉಳಿಯಿತು. ಗೋಪಿನಾಥ್ ಬೋರ್ಡೊಲೊಯ್ ಕ್ಯಾಬಿನೆಟ್ ಮಿಷನ್‌ನ ಗುಂಪು ಯೋಜನೆಯನ್ನು ವಿರೋಧಿಸದಿದ್ದರೆ, ಭಾರತದ ರಾಜಕೀಯ ಭೌಗೋಳಿಕತೆಯು ತೀವ್ರವಾಗಿ ವಿಭಿನ್ನವಾಗಿರುತ್ತಿತ್ತು. ಇಡೀ ಈಶಾನ್ಯವು ಭಾರತದಿಂದ ಸಂಪರ್ಕ ಕಡಿದುಕೊಳ್ಳುತ್ತಿತ್ತು, ಇದು ದೇಶದ ಕಾರ್ಯತಂತ್ರ, ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಭವಿಷ್ಯವನ್ನು ಮೂಲಭೂತವಾಗಿ ಬದಲಾಯಿಸಬಹುದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



