News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬ್ರಿಟಿಷ್ ಸೈನ್ಯವನ್ನೇ ನಡುಗಿಸಿದ್ದ ಆದಿವಾಸಿ ಯೋಧರು: ಬಸ್ತರ್‌ ವೀರನ ಸಾಹಸಗಾಥೆ

 

1910ರಲ್ಲಿ ಬಸ್ತರ್‌ನ ದಟ್ಟ ಅರಣ್ಯಗಳಲ್ಲಿ ಒಂದು ಅಪರೂಪದ ವೀರತ್ವದ ಕ್ಷಣ ನಡೆಯಿತು. ಬಿಲ್ಲು, ಬಾಣ ಕೊಡಲಿಗಳನ್ನು ಹಿಡಿದ ಆದಿವಾಸಿ ಯೋಧರು ಬ್ರಿಟಿಷ್ ಸೈನ್ಯವನ್ನು ಸುತ್ತುವರಿದು ಭಯಪಡಿಸಿದರು. ಬ್ರಿಟಿಷ್ ಕ್ಯಾಪ್ಟನ್ ಗೇಯರ್ ಸಹಿತ ಅಂಗ್ಲ ಸೈನಿಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಕಾಡಿನೊಳಗೆ ಓಡಿ ಹೋದರು. ಇದು ಯಾವುದೇ ಜಾನಪದ ಕಥೆಯಲ್ಲ, ಬಸ್ತರ್‌ನ ನಿಜವಾದ ಚರಿತ್ರೆ.

ಬಸ್ತರ್‌ನಲ್ಲಿ ಬೆಳಕಿಗೆ ಬಂದ ವೀರ

ಬಸ್ತರ್ ರಿಯಾಸತ್‌ನ ಲೇಡಾನಾರ್ ಗ್ರಾಮದಲ್ಲಿ ಜನಿಸಿದ ಧುರುವಾ ಜನಾಂಗದ ಯುವ ವೀರ ಗುಂಡಾಧುರ್. ಬ್ರಿಟಿಷ್ ಸರ್ಕಾರವು ಬಸ್ತರ್‌ನ ಅರಣ್ಯಗಳನ್ನು ಕಬಳಿಸುವ ಯೋಜನೆ ಹಾಕಿದಾಗ ಇಡೀ ಜನಾಂಗದ ಜೀವನಕ್ಕೆ ಬೆದರಿಕೆ ಎದುರಾಯಿತು. ಬ್ರಿಟಿಷರು ಎರಡು ಮೂರನೇ ಒಂದು ಭಾಗ ಅರಣ್ಯವನ್ನು ‘ರಿಸರ್ವ್ ಫಾರೆಸ್ಟ್’ ಎಂದು ಘೋಷಿಸಿದರು. ಇದರಿಂದ ಧುರುವಾ, ಮುರಿಯಾ, ಮಾಡಿಯಾ, ಗೊಂಡ್ ಜನಾಂಗಗಳ ಪಾರಂಪರಿಕ ಹಕ್ಕುಗಳಾದ ಕೃಷಿ, ಬೇಟೆ, ಮಹುವ ಮತ್ತು ತೆಂಡು ಎಲೆ ಸಂಗ್ರಹ ಎಲ್ಲವನ್ನೂ ಕಸಿದುಕೊಳ್ಳಲಾಯಿತು. ಬೇಗಾರ್, ತೆರಿಗೆ ಮತ್ತು ಶೋಷಣೆಯಿಂದ ಜನರಲ್ಲಿ ಆಕ್ರೋಶ ಸೃಷ್ಟಿಯಾಗುತ್ತಿತ್ತು. ಆಗ ಬಸ್ತರ್ ರಾಜರು ಕೇವಲ ಹೆಸರಿಗೆ ರಾಜರಾಗಿದ್ದರು. ನಿಜವಾದ ಅಧಿಕಾರ ಬ್ರಿಟಿಷ್ ಅಧಿಕಾರಿಗಳ ಕೈಯಲ್ಲಿತ್ತು. ಈ ಅಸಮಾಧಾನದಿಂದಲೇ ಗುಂಡಾಧುರ್‌ನಂತಹ ನಾಯಕರು ಉದಯವಾದರು. ಗುಂಡಾಧುರ್ ಸಂಪೂರ್ಣ ಬಸ್ತರ್‌ನಾದ್ಯಂತ ಭೂಮಕಾಲ್ ಸಭೆಗಳನ್ನು ಕರೆದು ಜನರನ್ನು ಒಗ್ಗೂಡಿಸಿದ.

ಭೂಮಕಾಲ್ ದಂಗೆ ಆರಂಭ

1910 ರ ಫೆಬ್ರವರಿ 2 ರಂದು ಪುಸ್ಪಾಲ್ ಮಾರುಕಟ್ಟೆಯನ್ನು ದಂಗೆಕಾರರು ಲೂಟಿ ಮಾಡಿದ್ದರಿಂದ ದಂಗೆಯ ಬೆಂಕಿ ಭುಗಿಲೆದ್ದಿತು. ಆಹಾರ ಧಾನ್ಯಗಳನ್ನು ಬಡವರಿಗೆ ಹಂಚಿದರು, ಪೊಲೀಸ್ ಚೌಕಿಗಳನ್ನು ಸುಟ್ಟರು ಮತ್ತು ಹೊರಗಿನ ಅಧಿಕಾರಿಗಳ ಮೇಲೆ ದಾಳಿ ನಡೆಸಿದರು. ದಂಗೆ ತ್ವರಿತವಾಗಿ ದೂರದ ಪ್ರದೇಶಗಳಿಗೂ ಹರಡಿತು. ಬ್ರಿಟಿಷ್ ಸರ್ಕಾರ ಗಂಭೀರವಾಯಿತು. ರಾಜರ ವಿನಂತಿಯ ಮೇರೆಗೆ ಕ್ಯಾಪ್ಟನ್ ಗೇಯರ್ ನೇತೃತ್ವದಲ್ಲಿ ಮದ್ರಾಸ್, ಪಂಜಾಬ್ ಮತ್ತು ಇತರ ಬಟಾಲಿಯನ್‌ಗಳನ್ನು ಕರೆಸಿಕೊಂಡರು.

ಉಲ್ನಾರ್‌ನ ನಿರ್ಣಾಯಕ ಯುದ್ಧ

ಮಾರ್ಚ್ 1910ರ ಕೊನೆಯ ದಿನಗಳಲ್ಲಿ ದಂಗೆ ತೀವ್ರ ಸ್ಥಿತಿಗೆ ತಲುಪಿತು. ಕ್ಯಾಪ್ಟನ್ ಗೇಯರ್ ಆದಿವಾಸಿ ದಂಗೆಕಾರರನ್ನು ನಿರ್ಮೂಲನೆ ಮಾಡುವ ತಯಾರಿಯಲ್ಲಿದ್ದ. ಆದರೆ ಗುಂಡಾಧುರ್ ತನ್ನ ವಿಶ್ವಾಸಪಾತ್ರ ಸಹಚರರಾದ ಡೇಬರಿಧುರ್, ಸೋನು ಮಾಝಿ ಮತ್ತು ಇತರರೊಂದಿಗೆ ಗುಪ್ತ ಯೋಜನೆ ರೂಪಿಸಿದರು. ಉಲ್ನಾರ್ (ಅಲ್ನಾರ್ ಭಾಠಾ) ಪ್ರದೇಶದಲ್ಲಿ ಬ್ರಿಟಿಷ್ ಸೈನ್ಯ ಕ್ಯಾಂಪ್ ಹೂಡಿತ್ತು. ರಾತ್ರಿಯ ಕತ್ತಲಲ್ಲಿ ಸಾವಿರಾರು ಆದಿವಾಸಿ ಯೋಧರು ನಿಶ್ಶಬ್ದವಾಗಿ ಸುತ್ತುವರೆದರು. ಅವರ ಬಳಿ ಆಧುನಿಕ ಶಸ್ತ್ರಾಸ್ತ್ರಗಳಿರಲಿಲ್ಲ. ಆದರೆ ಕಾಡು, ಬೆಟ್ಟಗಳ ಭೂಗೋಳದ ಪರಿಚಯ ಮತ್ತು ಅಪಾರ ಧೈರ್ಯವಿತ್ತು . ಸರಿಯಾದ ಸಮಯಕ್ಕೆ ನಾಲ್ಕು ದಿಕ್ಕುಗಳಿಂದ ದಾಳಿ ಪ್ರಾರಂಭವಾಯಿತು. ಬ್ರಿಟಿಷ್ ಸೈನಿಕರಲ್ಲಿ ಅಲ್ಲೋಲಕಲ್ಲೋ ಉಂಟಾಯಿತು. ಅನೇಕರು ಗಾಯಗೊಂಡರು, ಕೆಲವರು ಸ್ಥಳದಲ್ಲೇ ಮೃತಪಟ್ಟರು. ಅನಿರೀಕ್ಷಿತ ದಾಳಿ ಮತ್ತು ಜಂಗಲ್‌ನಿಂದ ಬರುತ್ತಿದ್ದ ಗರ್ಜನೆಯಿಂದಾಗಿ ಬ್ರಿಟಿಷ್ ಸೈನ್ಯದ ಮನೋಬಲ ಕುಸಿಯಿತು. ಕ್ಯಾಪ್ಟನ್ ಗೇಯರ್ ಸಹಿತ ಸೈನ್ಯವು ಸುಮಾರು ಒಂದು ಗಂಟೆಯ ಕಾಲ ಸಂಘರ್ಷ ನಡೆಸಿ ಕೊನೆಗೆ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಯಿತು.

ಆ ಯುದ್ಧದ ಪರಿಣಾಮ

ಉಲ್ನಾರ್ ಯುದ್ಧವು ಭೂಮಕಾಲ್ ಬಂಡಾಯದ ಅತ್ಯಂತ ದೊಡ್ಡ ಜಯಗಳಲ್ಲಿ ಒಂದು. ಸೀಮಿತ ಸಂಪನ್ಮೂಲಗಳೊಂದಿಗೂ ಆದಿವಾಸಿ ಯೋಧರು ಬ್ರಿಟಿಷ್ ಸಾಮ್ರಾಜ್ಯಕ್ಕೆ ತೀವ್ರ ಸವಾಲು ಒಡ್ಡಬಲ್ಲರು ಎಂದು ಸಾಬೀತುಪಡಿಸಿತು. ಈ ಒತ್ತಡದಿಂದ ಬ್ರಿಟಿಷ್ ಸರ್ಕಾರವು ರಿಸರ್ವ್ ಫಾರೆಸ್ಟ್ ಪ್ರದೇಶವನ್ನು ಕಡಿಮೆ ಮಾಡಲು ಒಪ್ಪಿಕೊಂಡಿತು — ಇದು ಆದಿವಾಸಿಗಳ ಭಾಗಶಃ ವಿಜಯವಾಗಿತ್ತು. ಇಂದಿಗೂ ಬಸ್ತರ್‌ನಲ್ಲಿ ವೀರ ಗುಂಡಾಧುರ್ ಅಮರರಾಗಿದ್ದಾರೆ. ಭೂಮಕಾಲ್ ಚೌಕ್, ಭೂಮಕಾಲ್ ದಿನ (ಫೆಬ್ರವರಿ 10) ಮತ್ತು ವಿವಿಧ ಸ್ಮಾರಕಗಳು ಅವರ ಸ್ಮರಣೆಯನ್ನು ಜೀವಂತವಾಗಿರಿಸಿವೆ.

ವೀರ ಗುಂಡಾಧುರ್‌ರ ಗಾಥೆ ಕೇವಲ ಒಂದು ಬಂಡಾಯದ ಕಥೆಯಲ್ಲ. ಇದು ತನ್ನ ಜಮೀನು, ಕಾಡು ಮತ್ತು ಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವ ಆದಿವಾಸಿ ಜನಾಂಗದ ಹೋರಾಟದ ಕಥೆ. ಇಚ್ಛಾಶಕ್ತಿ, ಏಕತೆ ಮತ್ತು ಮಣ್ಣಿನ ಮೇಲಿನ ಪ್ರೀತಿಯಿಂದಲೇ ನಿಜವಾದ ಹೋರಾಟ ನಡೆಯುತ್ತದೆ ಎಂಬುದನ್ನು ಈ ಇತಿಹಾಸ ನಮಗೆ ತಿಳಿಸುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top