
17 ನೇ ಶತಮಾನದಲ್ಲಿ, ಮೊಘಲ್ ಆಳ್ವಿಕೆಯಲ್ಲಿ, ಬಲವಂತದ ಮತಾಂತರ ಮತ್ತು ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿತ್ತು, ಹೀಗಾಗಿ ಹಿಂದೂಗಳ ಮೇಲೆ ಅಪಾರ ಒತ್ತಡವಿತ್ತು. ಇಡೀ ಭಾರತವನ್ನು ಮತಾಂತರಿಸುವ ತಂತ್ರದ ಭಾಗವಾಗಿ, ಮೊಘಲರು ಕಾಶ್ಮೀರಿ ಪಂಡಿತರಿಗೆ “ಇಸ್ಲಾಂ ಅಥವಾ ಸಾವು” ಎಂಬ ಅಂತಿಮ ಎಚ್ಚರಿಕೆಯನ್ನು ನೀಡಿದ್ದರು. ಈ ಬಿಕ್ಕಟ್ಟಿನ ಸಮಯದಲ್ಲಿ ಕಾಶ್ಮೀರಿ ಪಂಡಿತರು ಮತ್ತು ಸನಾತನ ಧರ್ಮಕ್ಕೆ ಗುರಾಣಿಯಾಗಿ ನಿಂತು ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರು ಸಿಖ್ ಗುರುಗಳಾದ ಗುರು ತೇಜ್ ಬಹದ್ದೂರ್, ತಲೆಬಾಗುವ ಬದಲು ಅವರು ಮೊಘಲರಿಗೆ ಸವಾಲಾಗಿ ನಿಂತರು. ಈ ಸ್ಮರಣೀಯ ತ್ಯಾಗದಿಂದಾಗಿ, ಅವರನ್ನು “ಹಿಂದ್ ದಿ ಚಾದರ್” (ಭಾರತದ ಗುರಾಣಿ) ಎಂದು ಇಂದಿಗೂ ಗೌರವಿಸಲಾಗುತ್ತದೆ.
“ನಿಮ್ಮ ತಲೆಯನ್ನು ಕೊಟ್ಟುಬಿಡಿ, ಆದರೆ ನಿಮ್ಮ ನಂಬಿಕೆಯಲ್ಲ” (ಸರ್ ದೀಜೈ, ಧರಂ ನ ದೀಜೈ) ಎಂಬ ತತ್ವವನ್ನು ಪಸರಿಸಿದ್ದ ಅವರ ವಿಶಿಷ್ಟ ಮತ್ತು ಅಪ್ರತಿಮ ಹುತಾತ್ಮತೆಯನ್ನು ನಾವು ತಿಳಿದುಕೊಳ್ಳಲೇ ಬೇಕು.
“ಹಿಂದ್ ದಿ ಚಾದರ್” – ಅಂದರೆ ಭಾರತದ ರಕ್ಷಕ, ಹಿಂದೂಸ್ತಾನದ ಗುರಾಣಿ
17 ನೇ ಶತಮಾನದಲ್ಲಿ, ಮೊಘಲ್ ಚಕ್ರವರ್ತಿ ಔರಂಗಜೇಬ್ (1658 ರಲ್ಲಿ ಅಧಿಕಾರ ವಹಿಸಿಕೊಂಡವ) ಬಲವಂತದ ಮತಾಂತರ, ಹಿಂದೂ ಧರ್ಮದ ಮೇಲೆ ದಾಳಿ, ದೌರ್ಜನ್ಯದ ಯುಗವನ್ನು ಆರಂಭಿಸಿದ. 1669 ರಲ್ಲಿ, ಅವನ ಆದೇಶದ ಮೇರೆಗೆ, ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಕೇಶವ್ ರಾಯ್ ದೇವಸ್ಥಾನದಂತಹ ಪ್ರಸಿದ್ಧ ದೇವಾಲಯಗಳನ್ನು ಕೆಡವಲಾಯಿತು. ಹಿಂದೂ ಧರ್ಮದ ಪ್ರಮುಖ ಕೇಂದ್ರವಾಗಿದ್ದ ಕಾಶ್ಮೀರದ ಜನರನ್ನು ಮತಾಂತರಿಸುವ ಮೂಲಕ ಭಾರತದ ಉಳಿದ ಭಾಗವೂ ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತದೆ ಎಂದು ಔರಂಗಜೇಬ್ ನಂಬಿದ್ದ.
ಇದನ್ನು ಸಾಧಿಸಲು, ಅವನು 1671 ರಲ್ಲಿ ಕಾಶ್ಮೀರದ ರಾಜ್ಯಪಾಲರಾಗಿ ಇಫ್ತಿಕರ್ ಖಾನ್ ಅನ್ನು ನೇಮಿಸಿದ, ಈತ 1675 ರ ಹೊತ್ತಿಗೆ ಕಾಶ್ಮೀರಿ ಪಂಡಿತರ ವಿರುದ್ಧ ದೌರ್ಜನ್ಯಗಳನ್ನು ಉತ್ತುಂಗಕ್ಕೇರಿಸಿದ. ಪಂಡಿತರನ್ನು ಭಯಾನಕ ಚಿತ್ರಹಿಂಸೆಗೆ ಒಳಪಡಿಸಲಾಯಿತು, “ಇಸ್ಲಾಂ ಅಥವಾ ಸಾವು” ನಡುವೆ ಆಯ್ಕೆ ಮಾಡಲು ಒತ್ತಾಯಿಸಲಾಯಿತು, ಜಿಜ್ಯಾ ತೆರಿಗೆಯನ್ನು ಪಾವತಿಸಲು ಒತ್ತಾಯಿಸಲಾಯಿತು ಮತ್ತು ದೇವರ ವಿಗ್ರಹಗಳ ಅಪವಿತ್ರತೆಯನ್ನು ಖಾಯಂಗೊಳಿಸಲಾಯಿತು.
1675 ರ ಬೇಸಿಗೆಯಲ್ಲಿ, ಗುರು ತೇಜ್ ಬಹದ್ದೂರ್ ಪೂರ್ವಾಂಚಲ್ ಪ್ರದೇಶದ ಮೂಲಕ ಪ್ರಯಾಣಿಸಿ ನಂತರ ಆನಂದಪುರಕ್ಕೆ ಮರಳಿದ್ದರು. 1675 ರ ಮೇ 25 ರ ಸುಮಾರಿಗೆ, ಪಂಡಿತ್ ಕಿರ್ಪಾ ರಾಮ್ ನೇತೃತ್ವದಲ್ಲಿ ಸುಮಾರು 500 ಕಾಶ್ಮೀರಿ ಪಂಡಿತರ ಗುಂಪು ಆನಂದಪುರ್ ಸಾಹಿಬ್‌ಗೆ ಆಗಮಿಸಿತು. ಗುರುಗಳೊಂದಿಗೆ ತಮ್ಮ ಕಷ್ಟವನ್ನು ಹಂಚಿಕೊಂಡ ಗುಂಪು, “ಗುರುಗಳೇ, ಔರಂಗಜೇಬನು ನಮ್ಮನ್ನು ಇಸ್ಲಾಂಗೆ ಮತಾಂತರಿಸಲು ಒತ್ತಾಯಿಸುತ್ತಿದ್ದಾನೆ. ನಮ್ಮ ಸಂಸ್ಕೃತಿ ಮತ್ತು ಧರ್ಮವು ಗಂಭೀರ ಅಪಾಯದಲ್ಲಿದೆ. ದಯವಿಟ್ಟು ನಮ್ಮನ್ನು ಉಳಿಸಿ” ಎಂದು ಕೇಳಿಕೊಂಡರು. ಕಾಶ್ಮೀರದಲ್ಲಿ ಧರ್ಮವನ್ನು ಉಳಿಸಲು ಯಾರೂ ಉಳಿದಿಲ್ಲ ಎಂದು ಬೇಡಿಕೊಂಡರು. ನೀವು ನಮ್ಮನ್ನು ರಕ್ಷಿಸದಿದ್ದರೆ, ಸನಾತನ ಧರ್ಮವು ಕೊನೆಗೊಳ್ಳುತ್ತದೆ ಎಂದು ಕಾಶ್ಮೀರಿ ಪಂಡಿತರು ಅಂಗಲಾಚಿದರು. ಗುರು ತೇಜ್ ಬಹದ್ದೂರ್ ಜಿ ಶಾಂತವಾಗಿ ಕುಳಿತಿದ್ದರು. ಕೆಲವು ಕ್ಷಣಗಳ ನಂತರ, ಅವರು ಕಾಶ್ಮೀರಿ ಪಂಡಿತರನ್ನು ನೋಡಿ ಗಂಭೀರವಾದ ಧ್ವನಿಯಲ್ಲಿ ಹೇಳಿದರು, ಈ ಭೂಮಿಗೆ ಒಂದು ಮಹಾನ್ ಆತ್ಮದ ತ್ಯಾಗ ನಡೆದಾಗ ಮಾತ್ರ ಈ ದಬ್ಬಾಳಿಕೆ ನಿಲ್ಲುತ್ತದೆ.
ಈ ಸಂಭಾಷಣೆಯನ್ನು, ಗುರುಗಳ ಚಿಕ್ಕ ಮಗ ಬಾಲಕ ಗೋಬಿಂದ್ ರಾಯ್ ಜಿ ಕೇಳುತ್ತಿದ್ದ.
ಪಂಡಿತರ ಮಾತುಗಳನ್ನು ಕೇಳಿದ ಗುರುಗಳು ಆಳವಾದ ಆಲೋಚನೆಯಲ್ಲಿ ಮುಳುಗಿದರು. ನಂತರ ಅವರು ಕಾಶ್ಮೀರಿ ಪಂಡಿತ್ ಕಿರ್ಪಾ ರಾಮ್‌ಗೆ, “ಗುರು ತೇಜ್ ಬಹದ್ದೂರ್ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರೆ, ಕಾಶ್ಮೀರದ ಎಲ್ಲಾ ಹಿಂದೂಗಳು ಸಹ ತಮ್ಮ ಧರ್ಮವನ್ನು ಬದಲಾಯಿಸುತ್ತಾರೆ. ಆದರೆ ಗುರು ತೇಜ್ ಬಹದ್ದೂರ್ ತಮ್ಮ ನಂಬಿಕೆಗೆ ದೃಢವಾಗಿ ನಿಂತರೆ, ಯಾವುದೇ ಹಿಂದೂ ಮತಾಂತರಗೊಳ್ಳುವುದಿಲ್ಲ ಎಂದು ಔರಂಗಜೇಬನಿಗೆ ಹೇಳಿ” ಎಂದರು. ಯಾವುದೇ ವ್ಯಕ್ತಿಯನ್ನು ಅವರ ಇಚ್ಛೆಗೆ ವಿರುದ್ಧವಾಗಿ ಧರ್ಮವನ್ನು ಬದಲಾಯಿಸಲು ಒತ್ತಾಯಿಸುವುದನ್ನು ಅವರು ಖಂಡಾತುಂಡವಾಗಿ ವಿರೋಧಿಸಿದರು.
ಜುಲೈ 11, 1675 ರಂದು ಗುರುಗಳು ಆನಂದಪುರ ಸಾಹಿಬ್‌ನಿಂದ ದೆಹಲಿಗೆ ಸಾರ್ವಜನಿಕವಾಗಿ ಹೋಗಲು ನಿರ್ಧರಿಸಿದರು. ಗುರುಗಳೊಂದಿಗೆ ಅವರ ಸಹಚರರಾದ ಭಾಯಿ ಮತಿ ದಾಸ್, ಭಾಯಿ ಸತಿ ದಾಸ್, ಭಾಯಿ ದಯಾಲ, ಭಾಯಿ ಉದಿ, ಭಾಯಿ ಗುರ್ದಿತ್ತ ಮತ್ತು ಇತರ ಕೆಲವು ಸಿಖ್ಖರು ಇದ್ದರು.
ಸಿಖ್ಖರ ಗುರುಗಳು ದೆಹಲಿಯತ್ತ ತೆರಳುತ್ತಿದ್ದಾರೆ ಎಂಬ ಮಾಹಿತಿ ಮೊಘಲ್ ಆಡಳಿತಕ್ಕೆ ಅದಾಗಲೇ ಬಂದಿತ್ತು. ಜುಲೈ 12, 1675 ರಂದು, ಮೊಘಲರು ನೂರ್ ಮೊಹಮ್ಮದ್ ಖಾನ್ ಮಿರ್ಜಾ ಮೂಲಕ ಮಲಿಕ್‌ಪುರ್ ರಂಗ್ರಾನ್ ಬಳಿ ಗುರುಗಳನ್ನು ಬಂಧಿಸಿದರು. ಇದರ ನಂತರ, ಗುರುಗಳನ್ನು ದಿವಾನ್ ಮತಿ ದಾಸ್ ಮತ್ತು ಸತಿ ದಾಸ್ (ಹೀರಾ ಮಲ್ ಛಿಬ್ಬರ್ ಅವರ ಪುತ್ರರು) ಮತ್ತು ದಯಾಳ್ ದಾಸ್ (ಮೋತಿ ದಾಸ್ ಅವರ ಮಗ) ಜೊತೆಗೆ ಸಿರ್ಹಿಂದ್‌ಗೆ ಕಳುಹಿಸಲಾಯಿತು. ಅವರು ನಾಲ್ಕು ತಿಂಗಳುಗಳ ಕಾಲ ಬಸ್ಸಿ ಪಠಾನನ್ ಜೈಲಿನಲ್ಲಿ ಇದ್ದರು. ಗುರು ಮತ್ತು ಅವರ ಸಹಚರರು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಮೊಘಲರು ಅವರಿಗೆ ತೀವ್ರ ಚಿತ್ರಹಿಂಸೆ ನೀಡಿದರು. ಅಂತಿಮವಾಗಿ, ನವೆಂಬರ್ ತಿಂಗಳಲ್ಲಿ ಅವರನ್ನು ದೆಹಲಿಗೆ ಕರೆತಂದು ಕಬ್ಬಿಣದ ಪಂಜರದೊಳಗೆ ಬಂಧಿಸಲಾಯಿತು.
ದೆಹಲಿ ತಲುಪಿದ ನಂತರ, ಗುರು ಮತ್ತು ಸಹಚರರನ್ನು ಕೊತ್ವಾಲಿ ಚಾಂದನಿ ಚೌಕ್‌ನಲ್ಲಿ ಬಂಧಿಸಲಾಗಿತ್ತು. ಆ ಸ್ಥಳವೇ ಇಂದು ಗುರುದ್ವಾರ ಸಿಸ್ ಗಂಜ್ ಸಾಹಿಬ್ ಎದುರು ಇದೆ. ಹಲವು ದಿನಗಳವರೆಗೆ ಅವರನ್ನು ತೀವ್ರ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಒಳಪಡಿಸಲಾಯಿತು.
ನಂತರ, ನವೆಂಬರ್ 11, 1675 ರಂದು, ಗುರು ತೇಜ್ ಬಹದ್ದೂರ್ ಮತ್ತು ಅವರ ಸಹಚರರನ್ನು ಔರಂಗಜೇಬನ ಮುಂದೆ ಹಾಜರುಪಡಿಸಿದಾಗ, ಗುರುಗಳನ್ನು ಆತ ಕೇಳಿದ – ಜನಿವಾರ ಧರಿಸಿ ಹಣೆಯ ಮೇಲೆ ತಿಲಕ ಹಚ್ಚಿಕೊಳ್ಳುವವರಿಗಾಗಿ ನೀವು ನಿಮ್ಮ ಪ್ರಾಣವನ್ನು ಏಕೆ ತ್ಯಾಗ ಮಾಡುತ್ತಿದ್ದೀರಿ? ಗುರುಗಳು ಉತ್ತರಿಸಿದರು – ಮಾನವೀಯತೆಯು ದುರ್ಬಲಗೊಂಡಾಗ, ಅವರು ನನ್ನನ್ನು ತಮ್ಮ ಗುರುವಾಗಿ ಆಶ್ರಯಿಸಿದರು. ಅವರು ನನ್ನ ಆಶ್ರಯವನ್ನು ಪಡೆಯಲು ಬಂದರು. ನಾನು ಯಾವಾಗಲೂ ಮಾನವೀಯತೆಯ ಪರವಾಗಿ ನಿಲ್ಲುತ್ತೇನೆ. ಔರಂಗಜೇಬನು ಕೋಪಗೊಂಡು ಗುರುಗಳ ಮುಂದೆ ಮೂರು ಷರತ್ತುಗಳನ್ನು ಇಟ್ಟ:
ಮೊದಲು, ಇಸ್ಲಾಂ ಅನ್ನು ಸ್ವೀಕರಿಸಿ. ಎರಡನೆಯದಾಗಿ, ನೀವು ದೇವರ ಸಂದೇಶವಾಹಕರಾಗಿದ್ದರೆ, ಪವಾಡವನ್ನು ತೋರಿಸಿ. ಮೂರನೆಯದಾಗಿ, ನೀವು ಎರಡನ್ನೂ ನಿರಾಕರಿಸಿದರೆ, ಸಾವಿಗೆ ಸಿದ್ಧರಾಗಿರಿ.
“ಖಡ್ಗದ ಭಯದಿಂದ ಧರ್ಮವನ್ನು ಬದಲಾಯಿಸಲು ಸಾಧ್ಯವಿಲ್ಲ. ನಾನು ಪವಾಡ ಮಾಡಲು ಇಲ್ಲಿ ನಿಂತಿಲ್ಲ, ಆದರೆ ಸತ್ಯ ಮತ್ತು ಮಾನವೀಯತೆಯನ್ನು ರಕ್ಷಿಸಲು ನಿಂತಿದ್ದೇನೆ” ಎಂದು ಗುರು ತೇಜ್ ಬಹದ್ದೂರ್ ಜಿ ಉತ್ತರಿಸಿದರು.
ಕೋಪಗೊಂಡ ಮೊಘಲ್ ಅಧಿಕಾರಿಗಳು ಗುರುಗಳ ನೈತಿಕತೆಯನ್ನು ಮುರಿಯುವ ಪ್ರಯತ್ನದಲ್ಲಿ ಅವರ ಸಹಚರರನ್ನು ಹಿಂಸಿಸಿದರು. ಮೊದಲು, ಭಾಯಿ ಮತಿ ದಾಸ್ ಜಿಯನ್ನು ಎರಡು ಕಂಬಗಳ ನಡುವೆ ಕಟ್ಟಿ ಜೀವಂತವಾಗಿ ಗರಗಸದಿಂದ ಕತ್ತರಿಸಲಾಯಿತು. ಮುಂದೆ, ಭಾಯಿ ದಯಾಲ ಜಿಯನ್ನು ಕುದಿಯುವ ನೀರಿನ ಪಾತ್ರೆಯಲ್ಲಿ ಎಸೆಯುವ ಮೂಲಕ ಸಾಯಿಸಲಾಯಿತು. ನಂತರ, ಭಾಯಿ ಸತಿ ದಾಸ್ ಜಿಯನ್ನು ಹತ್ತಿಯಲ್ಲಿ ಸುತ್ತಿ ಜೀವಂತವಾಗಿ ಸುಟ್ಟುಹಾಕಲಾಯಿತು. ಆದರೂ, ಗುರು ಸಾಹಿಬ್ ಸಂಪೂರ್ಣವಾಗಿ ಅಚಲವಾಗಿ ಕುಳಿತರು.
ಕೊನೆಗೆ, ನವೆಂಬರ್ 24, 1675 ರ ಬೆಳಿಗ್ಗೆ, ಕಬ್ಬಿಣದ ಪಂಜರದಲ್ಲಿ ಬಂಧಿಸಲ್ಪಟ್ಟ ಗುರುಗಳನ್ನು ಚಾಂದನಿ ಚೌಕ್‌ನ ಮಧ್ಯಭಾಗಕ್ಕೆ ಕರೆತರಲಾಯಿತು, ಅಲ್ಲಿ ಭಾರಿ ಜನಸಮೂಹ ಸೇರಿತ್ತು. ಇಂದು ಈ ಸ್ಥಳದಲ್ಲಿ ಗುರುದ್ವಾರ ಸಿಸ್ ಗಂಜ್ ಸಾಹಿಬ್ ಇದೆ, ಆ ಸಮಯದಲ್ಲಿ ಅಲ್ಲಿ ಒಂದು ದೊಡ್ಡ ಆಲದ ಮರವಿತ್ತು. ಗುರುಗಳನ್ನು ಕಬ್ಬಿಣದ ಪಂಜರದಿಂದ ಹೊರಗೆ ಕರೆದೊಯ್ಯಲಾಯಿತು. ಖಾಜಿ ಅಬ್ದುಲ್ ವಹಾಬ್ ಕೊನೆಯ ಬಾರಿಗೆ “ಇಸ್ಲಾಂ ಅನ್ನು ಸ್ವೀಕರಿಸಿ, ಅಥವಾ ಪವಾಡವನ್ನು ತೋರಿಸಿ” ಎಂದು ಹೇಳಿದ.
ಗುರುಗಳು ಶಾಂತ ಧ್ವನಿಯಲ್ಲಿ, “ನನ್ನ ಸಿಖ್ಖರು ಮಾಡಿದ್ದನ್ನೇ ನಾನು ಮಾಡುತ್ತೇನೆ. ಅವರು ತಮ್ಮ ನಂಬಿಕೆಯ ಮೇಲೆ ದೃಢವಾಗಿ ನಿಂತಿದ್ದರೆ, ನಾನು ಹೇಗೆ ಹಿಂದೆ ಸರಿಯಲಿ?” ಎಂದು ಉತ್ತರಿಸಿದರು. ಇದರ ನಂತರ, ಮೊಘಲರು ಗುರು ಸಾಹಿಬ್ ಅವರನ್ನು ಗಲ್ಲಿಗೇರಿಸಲು ನಿರ್ಧರಿಸಿದರು. ಆದಾಗ್ಯೂ, ಗುರುಗಳು ಮೊದಲು ಸ್ನಾನ ಮಾಡಲು ಅನುಮತಿ ಕೇಳಿದರು. ಅವರಿಗೆ ಹತ್ತಿರದ ಬಾವಿಯಿಂದ ನೀರು ಒದಗಿಸಲಾಯಿತು. ಸ್ನಾನದ ನಂತರ, ಅವರು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ, ಆಲದ ಮರದ ಕೆಳಗೆ ಕುಳಿತು, ಜಪ್ಜಿ ಸಾಹಿಬ್ ಅನ್ನು ಪಠಿಸಲು ಪ್ರಾರಂಭಿಸಿದರು. ನಂತರ, ಮರಣದಂಡನೆ ನೀಡುವಾತ ಜಲಾಲುದ್ದೀನ್ ಮುಂದೆ ಹೆಜ್ಜೆ ಹಾಕಿರು. ಒಂದು ಕ್ಷಣದ ಮೌನದ ನಂತರ, ಅವನು ಕತ್ತಿಯಿಂದ ಗುರು ತೇಜ್ ಬಹದ್ದೂರ್ ಜಿ ಅವರ ತಲೆಯನ್ನು ದೇಹದಿಂದ ಬೇರ್ಪಡಿಸಿದ. ಚಾಂದನಿ ಚೌಕ್‌ನ ನೆಲ ರಕ್ತದಿಂದ ಕೆಂಪಾಯಿತು. ಆ ಕ್ಷಣದಲ್ಲಿ, ಭೀಕರ ಬಿರುಗಾಳಿ ಮತ್ತು ಭಾರೀ ಮಳೆ ಸುರಿಯಿತು. ಈ ಹುತಾತ್ಮತೆಯ ಬಗ್ಗೆ ಪ್ರಕೃತಿಯೇ ಮೌನ ದುಃಖವನ್ನು ವ್ಯಕ್ತಪಡಿಸುತ್ತಿದೆ ಎಂಬಂತೆ ಭಾಸವಾಯಿತು.
ಮೊಘಲ್ ಸೈನಿಕರು ಗುರುಗಳ ಮೃತದೇಹವನ್ನು ಅಲ್ಲಿಯೇ ಬಿಟ್ಟು ಹೋದರು, ಯಾರೂ ಅವುಗಳನ್ನು ಮರಳಿ ಪಡೆಯಲು ಧೈರ್ಯ ಮಾಡಲಿಲ್ಲ. ಆದಾಗ್ಯೂ, ಭಾಯಿ ಜೈತಾ ಆ ಜನಸಂದಣಿಯಲ್ಲಿಯೇ ಇದ್ದರು. ಕತ್ತಲೆ ಮತ್ತು ಬಿರುಗಾಳಿಯ ಲಾಭವನ್ನು ಪಡೆದುಕೊಂಡು, ಅವರು ಗುರುಗಳ ಪವಿತ್ರ ತಲೆಯನ್ನು ತಮ್ಮ ಬಟ್ಟೆಯೊಳಗೆ ಮರೆಮಾಡಿದರು. ಮತ್ತೊಂದೆಡೆ, ಭಾಯಿ ಲಖಿ ಶಾ ವಂಜಾರ ಮತ್ತು ಅವರ ಮಗ ಭಾಯಿ ನಾಗಹಿಯಾ, ಗುರುಗಳ ದೇಹವನ್ನು ಎತ್ತಿನ ಬಂಡಿಯಲ್ಲಿ ಮರೆಮಾಡಿ ಸ್ಥಳದಿಂದ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು.
ದೆಹಲಿಯ ಎಲ್ಲೆಡೆ ಮೊಘಲ್ ಕಾವಲುಗಾರರು ಬೀಡುಬಿಟ್ಟಿದ್ದರು. ಆದ್ದರಿಂದ, ಭಾಯಿ ಲಖಿ ಶಾ ವಂಜಾರ ಗುರುಗಳ ದೇಹವನ್ನು ತಮ್ಮ ಸ್ವಂತ ಮನೆಗೆ ತೆಗೆದುಕೊಂಡು ಹೋದರು. ಯಾವುದೇ ಅನುಮಾನ ಬರದಂತೆ, ಅವರು ತಮ್ಮ ಸ್ವಂತ ಮನೆಗೆ ಬೆಂಕಿ ಹಚ್ಚಿದರು. ಗುರುಗಳ ಅಂತಿಮ ವಿಧಿಗಳನ್ನು ಆ ಸುಡುವ ಮನೆಯೊಳಗೆ ನಡೆಸಲಾಯಿತು. ನಂತರ, ಗುರುದ್ವಾರ ರಕಬ್ ಗಂಜ್ ಸಾಹಿಬ್ ಅನ್ನು ಅದೇ ಸ್ಥಳದಲ್ಲಿ ಸ್ಥಾಪಿಸಲಾಯಿತು.
ಈ ಮಧ್ಯೆ, ಭಾಯಿ ಜೈತಾ ಗುರುಗಳ ತಲೆಯನ್ನು ಹೊತ್ತ ಅರಣ್ಯ ಮಾರ್ಗಗಳ ಮೂಲಕ ಆನಂದಪುರ್ ಸಾಹಿಬ್ ತಲುಪಿದರು. ದಾರಿಯಲ್ಲಿ, ಅವರು ತರೋರಿಯಲ್ಲಿ (ಇಂದಿನ ಕರ್ನಾಲ್, ಹರಿಯಾಣ) ಒಂದು ರಾತ್ರಿ ವಿಶ್ರಾಂತಿ ಪಡೆದರು. ನಂತರ ಆ ಸ್ಥಳದಲ್ಲಿ ಗುರುದ್ವಾರ ಸಿಸ್ ಗಂಜ್ ಸಾಹಿಬ್ ಅನ್ನು ಸ್ಥಾಪಿಸಲಾಯಿತು.
ಗುರು ತೇಜ್ ಬಹದ್ದೂರ್ ಅವರ ಕತ್ತರಿಸಿದ ತಲೆ ಗೋಬಿಂದ್ ರಾಯ್ ಅವರನ್ನು ತಲುಪಿದಾಗ, ಅವರು ‘ಜೈತ, ಗುರುವಿನ ಮಗ’ ಎಂದು ಉದ್ಗರಿಸಿದರು. ಅಲ್ಲಿ, ಗುರು ತೇಜ್ ಬಹದ್ದೂರ್ ಅವರ ಕಿರಿಯ ಮಗ ಗುರು ಗೋಬಿಂದ್ ರಾಯ್, ಪವಿತ್ರ ತಲೆಗೆ ಅಂತಿಮ ವಿಧಿಗಳನ್ನು ನೆರವೇರಿಸಿದರು.
1699 ರಲ್ಲಿ, ಗುರು ಗೋಬಿಂದ್ ಸಿಂಗ್ ಆನಂದಪುರ್ ಸಾಹಿಬ್‌ನಲ್ಲಿ ಖಾಲ್ಸಾ ಪಂಥವನ್ನು ಸ್ಥಾಪಿಸಿದರು, ಇದು ಅವರ ತಂದೆಯ ಹುತಾತ್ಮತೆಯನ್ನು ಶಾಶ್ವತವಾಗಿ ಅಮರಗೊಳಿಸಿತು. ಗುರು ತೇಜ್ ಬಹದ್ದೂರ್ ಜಿ ತಮ್ಮ ಸ್ವಂತ ನಂಬಿಕೆಗಾಗಿ ಮಾತ್ರವಲ್ಲದೆ, ದೇಶದ ಎಲ್ಲಾ ಜನರ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು; ಇಂದು, ಇತಿಹಾಸವು ಅವರನ್ನು “ಹಿಂದ್ ದಿ ಚಾದರ್” ಎಂದು ನೆನಪಿಸಿಕೊಳ್ಳುತ್ತದೆ – ಅಂದರೆ ಭಾರತದ ಗುರಾಣಿ, ಭಾರತದ ರಕ್ಷಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



