News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೊಲಾಚೆಲ್ ಕದನ: ಕೇರಳದ ಕರಾವಳಿಯಲ್ಲಿ ನಡೆದ ಯುದ್ಧ ಇಡೀ ಯುರೋಪನ್ನೇ ಬೆಚ್ಚಿಬೀಳಿಸಿತು!

ಹಿಂದ್ ಮಹಾಸಾಗರದ ಉಬ್ಬರವಿಳಿತ ಲಹರಿಗಳ ಮೇಲೆ ಒಂದು ಅಪರೂಪದ ಕಥೆಯೊಂದು ಅಡಗಿದೆ. ಅದು ಇತಿಹಾಸದ ಪುಟಗಳಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚಲಾದ ಕಥೆ. ಇದು ಒಬ್ಬ ಹಿಂದೂ ಸಾಮ್ರಾಟನ ನಿಜವಾದ ವೀರಗಾಥೆ. 18ನೇ ಶತಮಾನದಲ್ಲಿ, ವಿದೇಶಿ ಸೈನ್ಯಗಳನ್ನು ಅಜೇಯರೆಂದು ಭಾವಿಸಲಾಗುತ್ತಿದ್ದ ಕಾಲದಲ್ಲಿ, ಯುರೋಪ್‌ನ ಅತ್ಯಂತ ಶಕ್ತಿಶಾಲಿ ಸಮುದ್ರ ಸೇನೆಯನ್ನು ಮಂಡಿಯೂರಿಸಿದ ಮಹಾನ್ ರಾಜನ ಕಥೆ ಇದು. ಇದು ಟ್ರವಂಕೋರ್‌ನ ಮಹಾರಾಜ ಮಾರ್ತಾಂಡ ವರ್ಮ ಅವರ ಕಥೆ.

16ನೇ ಶತಮಾನದಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪೆನಿ ವಿಶ್ವದ ಅತ್ಯಂತ ಶ್ರೀಮಂತ ಮತ್ತು ಶಕ್ತಿಶಾಲಿ ವ್ಯಾಪಾರ ಸಂಸ್ಥೆಯಾಗಿತ್ತು. ಅದಕ್ಕೆ ಸ್ವಂತ ಸಮುದ್ರಸೇನೆ ಇತ್ತು. ಅದು ಪೋರ್ಚುಗೀಸ್ ಮತ್ತು ಬ್ರಿಟೀಷ್ ನೌಕಾಪಡೆಗಳಿಗಿಂತಲೂ ಹೆಚ್ಚು ಬಲಶಾಲಿಯಾಗಿತ್ತು. ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಡಚ್ ನೌಕಾಪಡೆ ಮಸಾಲೆಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಹೊಂದಿತ್ತು. ಕೇರಳದ ಕಾಳುಮೆಣಸು ಅವರಿಗೆ ಬಂಗಾರಕ್ಕಿಂತಲೂ ದುಬಾರಿಯಾಗಿತ್ತು.1740ರ ದಶಕದಲ್ಲಿ ಡಚ್ಚರು ಸಮುದ್ರ ವ್ಯಾಪಾರದ ಬಲದಿಂದ ಏಷ್ಯಾದಲ್ಲಿ ತಮ್ಮ ವಿಶಾಲ ಅಧಿಕಾರವನ್ನು ಸ್ಥಾಪಿಸಿಕೊಂಡಿದ್ದರು. ಅದೇ ಸಮಯದಲ್ಲಿ ಟ್ರವಂಕೋರ್‌ ಒಂದು ಉದಯೋನ್ಮುಖ ರಾಜ್ಯವಾಗಿ ಬೆಳೆಯುತ್ತಿತ್ತು. ಮಹಾರಾಜ ಮಾರ್ತಾಂಡ ವರ್ಮ ತಮ್ಮ ರಾಜ್ಯವನ್ನು ಏಕೀಕರಣಗೊಳಿಸಿ ಬಲಪಡಿಸುವಲ್ಲಿ ನಿರತರಾಗಿದ್ದರು. ಅಟ್ಟಿಂಗಲ್, ಕ್ವಿಲೋನ್ ಮತ್ತು ಕಾಯಂಕುಳಂನಂತಹ ಸಂಸ್ಥಾನಗಳನ್ನು ತಮ್ಮ ಅಧೀನಕ್ಕೆ ತಂದುಕೊಂಡಿದ್ದರು.

ಟ್ರವಂಕೋರ್‌ನ ರಾಜನ ಬೆಳೆಯುತ್ತಿರುವ ಶಕ್ತಿಯನ್ನು ಕಂಡು ಡಚ್ ಗವರ್ನರ್ ಗುಸ್ತಾಫ್ ವಿಲ್ಲೆಮ್ ವಾನ್ ಇಮ್ಹೋಫ್ ಬಹಳ ಕೋಪಗೊಂಡಿದ್ದ. ಅವನು ಮಾರ್ತಾಂಡ ವರ್ಮ ಅವರಿಗೆ ಬೆದರಿಕೆ ಹಾಕಿದ. ಆದರೆ ಮಹಾರಾಜರ ಮೇಲೆ ಅದರ ಯಾವುದೇ ಪರಿಣಾಮ ಬೀಳಲಿಲ್ಲ. ಅವರು ಡಚ್ ಗವರ್ನರ್‌ಗೆ ಸ್ಪಷ್ಟವಾಗಿ ಹೇಳಿದರು: “ನಾನು ನಿಮ್ಮ ಯಾವುದೇ ಡಚ್ ಸೈನ್ಯವನ್ನು ಸೋಲಿಸಬಲ್ಲೆ. ಅಗತ್ಯ ಬಿದ್ದರೆ ಯುರೋಪ್ ಮೇಲೇ ದಂಡಯಾತ್ರೆ ಮಾಡುವುದನ್ನೂ ಯೋಚಿಸಬಲ್ಲೆ.” ಇವು ಕೇವಲ ಮಾತುಗಳಲ್ಲ, ಇತಿಹಾಸಕ್ಕೆ ನೀಡಿದ ಎಚ್ಚರಿಕೆಯಾಗಿತ್ತು.

ಕೊಲಾಚೆಲ್ ಯುದ್ಧ (1741)

ಡಚ್ ಗವರ್ನರ್ ಇಮ್ಹೋಫ್ ಪರಾಜಿತ ರಾಜರೊಂದಿಗೆ ಸೇರಿ ಒಂದು ರಾಜಕೀಯ ಷಡ್ಯಂತ್ರ ರಚಿಸಿದ. ಇದು ಮಾರ್ತಾಂಡ ವರ್ಮ ಅವರಿಗೆ ತಿಳಿದಿತ್ತು. ಅವರು ತಮ್ಮ ಸೈನ್ಯವನ್ನು ಕಳುಹಿಸಿ ಮಲಬಾರ್‌ನಲ್ಲಿದ್ದ ಎಲ್ಲಾ ಡಚ್ ಕೋಟೆಗಳನ್ನು ವಶಪಡಿಸಿಕೊಂಡರು. 26 ನವೆಂಬರ್ 1740ರಂದು ಡಚ್ ಈಸ್ಟ್ ಇಂಡಿಯಾ ಕಂಪೆನಿಯ ನೌಕಾಪಡೆ ಏಳು ದೊಡ್ಡ ಯುದ್ಧನೌಕೆಗಳೊಂದಿಗೆ ಕೊಲಾಚೆಲ್ ತೀರಕ್ಕೆ ಬಂದು ಸತತವಾಗಿ ಗುಂಡುಗಳ ಮಳೆ ಸುರಿಸಿತು. ನಗರದಲ್ಲಿ ಬೆಂಕಿ ಮತ್ತು ಹೊಗೆಯ ಭಯಾನಕ ದೃಶ್ಯ ಕಾಣಿಸಿತು. ಡಚ್ಚರು ಭಾವಿಸಿದ್ದರು — ಸಾಂಪ್ರದಾಯಿಕ ಆಯುಧಗಳೊಂದಿಗೆ ಬರುವ ಟ್ರವಂಕೋರ್ ಸೈನ್ಯ ಅವರ ಮುಂದೆ ಹೆಚ್ಚು ಹೊತ್ತು ನಿಲ್ಲಲಾರದು.‌ ಆದರೆ ಅದು ಅವನ ಅತಿದೊಡ್ಡ ತಪ್ಪು ತಿಳುವಳಿಕೆಯಾಗಿತ್ತು. ಯಾಕೆಂದರೆ ಅವರು ಒಬ್ಬ ಸಾಮಾನ್ಯ ರಾಜನನ್ನು ಅಲ್ಲ, ಒಬ್ಬ ವೀರ ಮತ್ತು ಕುಶಲ ಯೋಧ-ರಣನೀತಿಜ್ಞನನ್ನು ಎದುರಿಸಬೇಕಾಗಿತ್ತು. ಮಾರ್ತಾಂಡ ವರ್ಮ ಅವರು ಬುದ್ಧಿವಂತಿಕೆ, ಯುಕ್ತಿ ಬಳಸಿದರು. ಅವರು ಮರಗಳನ್ನು ಕಡಿದು ಬಂಡಿಗಳ ಮೇಲೆ ಜೋಡಿಸಿ, ಅವುಗಳನ್ನು ದೊಡ್ಡ ತುಪಾಕಿಗಳಂತೆ ಕಾಣುವಂತೆ ಮಾಡಿದರು. ಈ ದೃಶ್ಯ ಕಂಡು ಡಚ್ ಸೈನ್ಯ ಗೊಂದಲಕ್ಕೊಳಗಾಯಿತು ಮತ್ತು ಮುಂದುವರೆಯಲು ಧೈರ್ಯ ಮಾಡಲಿಲ್ಲ.ಇದೇ ಸಮಯದಲ್ಲಿ ಮಹಾರಾಜರು 10,000 ಸೈನಿಕರೊಂದಿಗೆ ಡಚ್ ನೌಕಾಪಡೆಯನ್ನು ನಾಲ್ಕು ದಿಕ್ಕಿನಿಂದ ಮುತ್ತಿದರು. ಸ್ಥಳೀಯ ಮುಕ್ಕುವರ್ ಮೀನುಗಾರ ಸಮುದಾಯದ ಸಹಕಾರವೂ ದೊರೆಯಿತು. ಡಚ್ ನೌಕೆಗಳು ಸಮುದ್ರದಲ್ಲಿ ಸಿಕ್ಕಿಹಾಕಿಕೊಂಡವು. ಅವರಿಗೆ ಶ್ರೀಲಂಕಾ ಅಥವಾ ಕೊಚ್ಚಿಯಿಂದ ಯಾವುದೇ ಸಹಾಯ ತಲುಪಲಿಲ್ಲ.ಕೊನೆಗೆ ನಿರ್ಣಾಯಕ ಕ್ಷಣ ಬಂದಿತು.  ಟ್ರವಂಕೋರ್ ಸೈನ್ಯವು ಡಚ್ಚರ ಶಸ್ತ್ರಾಗಾರದ ಮೇಲೆ ಭಯಂಕರ ದಾಳಿ ಮಾಡಿತು. ಬಾರುದು ಗೋಡೌನ್‌ನಲ್ಲಿ ಸ್ಫೋಟವಾಯಿತು. ಡಚ್ ಶಿಬಿರವು ಬೆಂಕಿಯುಂಡೆಗಳಿಂದ ಆವೃತವಾಯಿತು. 31 ಜುಲೈ 1741ರಂದು ಡಚ್ ಸೈನ್ಯವು ಶರಣಾಗತರಾಯಿತು. ಸಾವಿರಾರು ಡಚ್ ಸೈನಿಕರು ಹತರಾದರು, ಅನೇಕರು ಗಾಯಗೊಂಡರು. 24 ಸೈನ್ಯ ಅಧಿಕಾರಿಗಳ ಸಹಿತ ಅನೇಕರು ಬಂಧಿತರಾದರು. ಡಚ್ ಕಮಾಂಡರ್ ಯೂಸ್ಟೇಶಿಯಸ್ ಡಿ ಲೆನಾಯ್ ಸಹ ಬಂಧಿಯಾಗಿ ಮಹಾರಾಜ ಮಾರ್ತಾಂಡ ವರ್ಮ ಅವರ ಮುಂದೆ ನಿಂತನು.

ಈ ವಿಜಯದ ಮಹತ್ವ

ಕೊಲಾಚೆಲ್ ಯುದ್ಧ ಕೇವಲ ಒಂದು ಯುದ್ಧ ವಿಜಯವಲ್ಲ, ಭಾರತದಲ್ಲಿ ವಿದೇಶಿ ಸಾಮ್ರಾಜ್ಯಶಾಹಿಯ ಅಹಂಕಾರಕ್ಕೆ ಭಾರೀ ಏಟು. ಈ ಸೋಲಿನ ನಂತರ ಭಾರತದಲ್ಲಿ ಡಚ್ ಶಕ್ತಿ ಸಂಪೂರ್ಣವಾಗಿ ನಾಶವಾಯಿತು. ಮಹಾರಾಜ ಮಾರ್ತಾಂಡ ವರ್ಮ ಅವರು ವಿಜಯ ಸ್ಮಾರಕವಾಗಿ ಕೊಲಾಚೆಲ್‌ನಲ್ಲಿ ವಿಜಯ ಸ್ತಂಭವನ್ನು ನಿರ್ಮಿಸಿದರು. ಸಾಹಸ, ಬುದ್ಧಿವಂತಿಕೆ ಮತ್ತು ರಾಷ್ಟ್ರಭಕ್ತಿ ಒಟ್ಟಿಗೆ ನಿಂತಾಗ, ವಿಶ್ವದ ಅತ್ಯಂತ ಶಕ್ತಿಶಾಲಿ ದೇಶವನ್ನೂ ಸಹ ಸೋಲಿಸಬಹುದು ಎಂಬುದನ್ನು ಈ ಯುದ್ಧ ಸಾಬೀತುಪಡಿಸಿತು. ಮಹಾರಾಜ ಅನಿಝಂ ತಿರುನಲ್ ಮಾರ್ತಾಂಡ ವರ್ಮ ಅವರು 7 ಜುಲೈ 1758ರಂದು ನಿಧನರಾದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top