5,000 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ, ಸ್ವಸ್ತಿಕವು ಭಾರತೀಯ ನಾಗರಿಕತೆಯ ಒಂದು ದೈವಿಕ ಚಿಹ್ನೆಯಾಗಿದ್ದು, ಶುಭ, ಸಮೃದ್ಧಿ ಮತ್ತು ಶುಭಾರಂಭಗಳನ್ನು ಪ್ರತಿನಿಧಿಸುತ್ತಾ ಬಂದಿದೆ. ಇದು ಪ್ರಾಚೀನ ಕಾಲದಿಂದಲೂ ನಿರಂತರ ಬಳಕೆಯಲ್ಲಿರುವ ಪವಿತ್ರ ಸಂಕೇತ. ಸ್ವಸ್ತಿಕ ಚಿಹ್ನೆಯನ್ನು ಈಗಲೂ ದೇವಾಲಯದ ಗೋಡೆಗಳು, ಹೊಸ್ತಿಲುಗಳು, ಪವಿತ್ರ ಗ್ರಂಥಗಳು, ನಾಣ್ಯಗಳು, ವಾಸ್ತುಶಿಲ್ಪ ಮತ್ತು ಹಿಂದೂ ಸಂಪ್ರದಾಯಗಳಲ್ಲಿ ವಿವಿಧ ಪೂಜಾ ವಸ್ತುಗಳ ಮೇಲೆ ಕಾಣಬಹುದು. ಆದರೆ 20 ನೇ ಶತಮಾನದಲ್ಲಿ, ಈ ಪವಿತ್ರ ಚಿಹ್ನೆಯನ್ನು ನಾಜಿ ನಾಯಕ ಅಡಾಲ್ಫ್ ಹಿಟ್ಲರ್ ತನ್ನ ಸ್ವಾರ್ಥ ಉದ್ದೇಶಗಳಿಗಾಗಿ ವಿರೂಪಗೊಳಿಸಿದ.
1920 ರ ದಶಕದಲ್ಲಿ ಮ್ಯೂನಿಚ್ನ ಬಿಯರ್ ಹಾಲ್ಗಳಲ್ಲಿ ಕುಳಿತು, ಹಿಟ್ಲರ್ ತನ್ನ ಪಕ್ಷಕ್ಕೆ ವಿಶಿಷ್ಟವಾದ ‘ಬ್ರಾಂಡ್’ವೊಂದನ್ನು ಹುಡುಕುತ್ತಿದ್ದ. ತನ್ನ ವಿರೋಧಿಗಳಾದ ಕಮ್ಯುನಿಸ್ಟರು ಕೆಂಪು ಧ್ವಜಗಳೊಂದಿಗೆ ಮೆರವಣಿಗೆ ನಡೆಸುತ್ತಿರುವುದನ್ನು ನೋಡಿ ಹಿಟ್ಲರ್ ಆಗಾಗ ಅಸೂಯೆಪಡುತ್ತಿದ್ದ. ಹೀಗಾಗಿಯೇ ತನ್ನ ನಾಜಿ ಪಕ್ಷಕ್ಕೆ ಜನರ ಮನಸ್ಸಿನ ಮೇಲೆ ಪ್ರಭಾವ ಬೀರುವ ಚಿಹ್ನೆಯೊಂದರ ಅಗತ್ಯವಿದೆ ಎಂದು ಆತನಿಗೆ ಅನಿಸಿತ್ತು. ಹೀಗಾಗಿ ಅವನ ದೃಷ್ಟಿ 19 ನೇ ಶತಮಾನದ “ಆರ್ಯನ್ ಸಿದ್ಧಾಂತ”ದ ಕಡೆಗೆ ತಿರುಗಿತು, ಬಳಿಕ ಬೃಹತ್ ಸಾಂಸ್ಕೃತಿಕ ಕಳ್ಳತನವನ್ನು ಪ್ರಾರಂಭಿಸಿ ಸ್ವಸ್ತಿಕ ಚಿಹ್ನೆಯನ್ನೇ ಎಗರಿಸಿಬಿಟ್ಟ.
ಅಡಾಲ್ಫ್ ಹಿಟ್ಲರ್ ಮರಣ ದಿನವಾದ ಏಪ್ರಿಲ್ 30 ರಂದು ಈ ಲೇಖನದ ಮೂಲಕ ನಾವು ನಾಜಿಗಳ ನಾಯಕ ಹೇಗೆ ಪ್ರಾಚೀನ, ಪವಿತ್ರ ಚಿಹ್ನೆಯ ಅರ್ಥವನ್ನು ವಿಕೃತಗೊಳಿಸಿದ, ನಾಜಿಸಂಗಿಂತ ತುಂಬಾ ಹಳೆಯದಾದ ಚಿಹ್ನೆಯನ್ನು ಜನಾಂಗೀಯ ಪ್ರಚಾರಕ್ಕಾಗಿ ಹೇಗೆ ಬಳಸಿದ ಎಂಬುದನ್ನು ತಿಳಿದುಕೊಳ್ಳೋಣ.
ನಾಜಿಗಳ ಸ್ವಸ್ತಿಕದ ಕಳ್ಳತನ
ಭಾರತೀಯ ಉಪಖಂಡದಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿದ್ದ ಸ್ವಸ್ತಿಕವು ಭಾರತೀಯ ಮನೆಗಳಲ್ಲಿ ಅತ್ಯಂತ ಶುಭವೆಂದು ಪರಿಗಣಿಸಲ್ಪಟ್ಟಿದೆ. ಇದು ಸಂಸ್ಕೃತ ಪದವಾಗಿದ್ದು, “ಸು” ಅಂದರೆ “ಒಳ್ಳೆಯದು” ಮತ್ತು “ಅಸ್ತಿ” ಅಂದರೆ “ಅಸ್ತಿತ್ವ”. ಹಿಂದೂತ್ವದಲ್ಲಿ, ಸ್ವಸ್ತಿಕವು ಸಮೃದ್ಧಿ, ರಕ್ಷಣೆ ಮತ್ತು ಜೀವನದ ಚಕ್ರದ ಸ್ವಭಾವವನ್ನು ಪ್ರತಿನಿಧಿಸುತ್ತದೆ. ಸಾಂಪ್ರದಾಯಿಕವಾಗಿ ಕೆಂಪು ಅಥವಾ ಹಳದಿ ಬಣ್ಣದಲ್ಲಿ ಬರೆಯಲ್ಪಡುವ ಇದು, ವಿಶೇಷವಾಗಿ ದೀಪಾವಳಿ, ಮದುವೆಗಳು, ಗೃಹಪ್ರವೇಶ ಮತ್ತು ದೇವಸ್ಥಾನದ ಆಚರಣೆಗಳ ಸಮಯದಲ್ಲಿ ಬಳಸಲ್ಪಡುತ್ತದೆ. ಇದು ನಕಾರಾತ್ಮಕ ಶಕ್ತಿಗಳನ್ನು ದೂರವಿರಿಸಿ ಸಮೃದ್ಧಿಯನ್ನು ಆಹ್ವಾನಿಸುತ್ತದೆ. ಅಷ್ಟೈಶ್ವರ್ಯವನ್ನು ತರುತ್ತದೆ ಎಂದು ಭಕ್ತರು ನಂಬುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ, ಇದರ ಅರ್ಥವು ಯಾವುದೇ ಗೊಂದಲ ಅಥವಾ ವಿವಾದಕ್ಕೆ ಒಳಪಟ್ಟಿಲ್ಲ ಮತ್ತು ಇದನ್ನು ಅತ್ಯಂತ ಸಕಾರಾತ್ಮಕ ಮತ್ತು ಪವಿತ್ರ ಸಂಕೇತವೆಂದೇ ಗುರುತಿಸಲಾಗಿದೆ.
ಆದರೆ, ಭಾರತೀಯ ಉಪಖಂಡದಲ್ಲಿ ಸಮೃದ್ಧಿ ಮತ್ತು ಶುಭಕ್ಕಾಗಿ ಬಳಸಲ್ಪಡುವ, ಸ್ವಸ್ತಿಕದ ಮರುವ್ಯಾಖ್ಯಾನವನ್ನು 19ನೇ ಶತಮಾನದಲ್ಲಿ ಜರ್ಮನಿಯಲ್ಲಿ ಪ್ರಾರಂಭಿಸಲಾಯಿತು. ಯೂರೋಪಿಯನ್ ವಿದ್ವಾಂಸರು ಭಾರತೀಯ ಇತಿಹಾಸವನ್ನು ತಪ್ಪಾಗಿ ಓದಿದ್ದರ ಪರಿಣಾಮವಾಗಿಯೇ ಹಿಟ್ಲರ್ ಕೈಯಲ್ಲಿ ಸ್ವಸ್ತಿಕ ವಿರೂಪಗೊಂಡಿತು. ಜರ್ಮನ್ ವಿದ್ವಾಂಸರು “ಆರ್ಯನ್ ಆಕ್ರಮಣ ಸಿದ್ಧಾಂತ”ವನ್ನು ಪ್ರಚಾರ ಮಾಡಿದರು. ಆರ್ಯನ್ ಆಕ್ರಮಣ ಸಿದ್ಧಾಂತದ ಪ್ರಕಾರ, ಸುಮಾರು 1500 BCEಯಲ್ಲಿ, ಬೆಳ್ಳಗಿನ ಚರ್ಮದ “ಆರ್ಯನ್” ಗುಂಪು ಉತ್ತರ-ಪಶ್ಚಿಮದ ಮೂಲಕ ಭಾರತವನ್ನು ಆಕ್ರಮಿಸಿತು ಮತ್ತು ಇಂಡಸ್ ವ್ಯಾಲಿ ನಾಗರಿಕತೆಯನ್ನು ಗೆದ್ದು, ವೈದಿಕ ಸಂಸ್ಕೃತಿಯನ್ನು ಸ್ಥಾಪಿಸಿತು ಮತ್ತು ಸ್ವಸ್ತಿಕವನ್ನು ಪರಿಚಯಿಸಿತು.
ಹಿಟ್ಲರ್ ಈ ದೋಷಪೂರಿತ ಸಿದ್ಧಾಂತವನ್ನು ಗಟ್ಟಿ ಮಾಡಿಕೊಂಡ ಮತ್ತು ಸ್ವಸ್ತಿಕ ಚಿಹ್ನೆಯು ಭಾರತಕ್ಕೆ ಸೇರಿದ್ದಲ್ಲ, ಅದು ಉನ್ನತ ಬಿಳಿ ಜನಾಂಗದ “ರೇಸಿಯಲ್ ಸಿಗ್ನೇಚರ್” ಎಂದು ಹೇಳಿಕೊಂಡ. ಅವನು ಜರ್ಮನರನ್ನು “ಮಾಸ್ಟರ್ ರೇಸ್”ಗೆ ಸಂಯೋಜಿಸಲು ಸ್ವಸ್ತಿಕವನ್ನು ಬಳಸಿದ, ಭಾರತೀಯ ಉಪಖಂಡದ ಮೂಲ ಜನರನ್ನು “ಕೀಳು” ಮತ್ತು ಜನಾಂಗೀಯವಾಗಿ ಮಿಶ್ರಿತ ಎಂದು ದೂಷಿಸಿದ. ತಮ್ಮ ಪುಸ್ತಕ ಮೈನ್ ಕಾಂಪ್ಫ್ನಲ್ಲಿ, ಹಿಟ್ಲರ್ ಆರ್ಯನ್ ಪುರುಷರ ವಿಜಯದ ಹೋರಾಟದ ಉದ್ದೇಶವನ್ನು ಪ್ರತಿನಿಧಿಸಲು ಚಿಹ್ನೆಯನ್ನು ಮರುವಿನ್ಯಾಸ ಮಾಡುವ ತನ್ನ ಪ್ರಯೋಗಗಳನ್ನು ವಿವರಿಸಿದ್ದಾನೆ. ಅವನು ಸ್ವಸ್ತಿಕವನ್ನು ಮರುಬ್ರ್ಯಾಂಡಿಂಗ್ ಮಾಡಿದ. ಕ್ರಾಸ್ ಅನ್ನು 45 ಡಿಗ್ರಿಗಳಷ್ಟು ಓರೆಯಾಗಿ ಮಾಡಿ ಸ್ಪಿನ್ನಿಂಗ್ ಪ್ರೊಪೆಲ್ಲರ್ನಂತೆ ಕಾಣುವಂತೆ ಮಾಡಿದ, ತೋಳುಗಳನ್ನು ದಪ್ಪ, ಕಠಿಣ ಹುಕ್ಗಳಾಗಿ ಮಾಡಿದ ಮತ್ತು ಅದನ್ನು ಹಾಕೆನ್ಕ್ರೂಜ್ (ಹುಕ್ಡ್ ಕ್ರಾಸ್) ಎಂದು ಮರುನಾಮಕರಣ ಮಾಡಿದ, ಇದು ಹೆಚ್ಚು ಜರ್ಮನಿಕ್ ಮತ್ತು ಕಡಿಮೆ ಭಾರತೀಯವಾಗಿ ಕೇಳಿಸಿತು.
1920ರ ಬೇಸಿಗೆಯ ವೇಳೆಗೆ ಹೊಸ ಧ್ವಜ ಸಿದ್ಧವಾಯಿತು. ಹಿಟ್ಲರ್ ಕಪ್ಪು “ಹುಕ್ಡ್ ಕ್ರಾಸ್” ಅನ್ನು ಬಿಳಿ ವೃತ್ತದೊಳಗೆ ಉಜ್ವಲ ಕೆಂಪು ಹಿನ್ನೆಲೆಯ ಮೇಲೆ ಇರಿಸಿದ. ಕೆಂಪು ಬಣ್ಣವನ್ನು ತಮ್ಮ ಮಾರ್ಕ್ಸ್ವಾದಿ ಶತ್ರುಗಳನ್ನು “ಉದ್ರಿಕ್ತಗೊಳಿಸಲು” ಆಯ್ಕೆ ಮಾಡಿದ ಎನ್ನಲಾಗಿದೆ, ಬಿಳಿ ಬಣ್ಣವು ರಾಷ್ಟ್ರೀಯ ಶುದ್ಧತೆಯ ಸಂಕೇತವಾಗಿ ನಿಂತಿತು. ತನ್ನ ಸಭೆಗಳನ್ನು ರಕ್ಷಿಸಲು, ಹಿಟ್ಲರ್ ಯುವಕರ ತುಕಡಿಗಳನ್ನು ರಚಿಸಿದ. ಆತನ ಯೋಧರು ಕೆಂಪು ತೋಳುಪಟ್ಟಿಗಳ ಮೇಲೆ ಈ ಚಿಹ್ನೆಗಳನ್ನು ಧರಿಸಿದರು. ಧ್ವಜದ ದೃಶ್ಯವು “ಹಿಪ್ನೋಟಿಕ್” ಶಕ್ತಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು, ಬರುಬರುತ್ತಾ ಹಿಟ್ಲರ್ ತನ್ನ ಚಿಕ್ಕ ಗುಂಪನ್ನು ದೃಶ್ಯಮಾನ, ಆಕ್ರಮಣಕಾರಿ ರಾಜಕೀಯ ಸೈನ್ಯವಾಗಿ ಪರಿವರ್ತಿಸಿದ.
1935ರ ವೇಳೆಗೆ, “ಹಾಕೆನ್ಕ್ರೂಜ್” ಅನ್ನು ನ್ಯೂರೆಂಬರ್ಗ್ ರ್ಯಾಲಿಗಳ ಮೇಲೆ ಜರ್ಮನಿಯ ಅಧಿಕೃತ ರಾಷ್ಟ್ರೀಯ ಧ್ವಜವಾಗಿ ಹಾರಿಸಲಾಯಿತು. 12,000 ವರ್ಷಗಳಿಗಿಂತ ಹೆಚ್ಚು ಕಾಲ “ಶುಭ” ವನ್ನು ಸೂಚಿಸುತ್ತಿದ್ದ ಚಿಹ್ನೆಯು ಹಿಟ್ಲರನ ಆಡಳಿತದಲ್ಲಿ ದ್ವೇಷ ಮತ್ತು ಜನಾಂಗೀಯ ಸಂಹಾರದ ಮೇಲೆ ನಿರ್ಮಿತವಾದ ಆಡಳಿತದ ಅಧಿಕೃತ ಮುಖವಾಯಿತು.
ಆದರೆ, ಆಧುನಿಕ ವಿದ್ವಾಂಸರು ಹಿಟ್ಲರ್ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಭಾರತೀಯ ಉಪಖಂಡದಲ್ಲಿ ಸ್ವಸ್ತಿಕ ಅತ್ಯಂತ ಪ್ರಾಚೀನವಾಗಿದೆ. ಇದು ಕೇವಲ ಸಂಪ್ರದಾಯದ ವಿಷಯವಲ್ಲ, ನಂಬಿಕೆಯೂ ಆಗಿದೆ. 1920ರ ದಶಕದಲ್ಲಿ ಇಂಡಸ್ ವ್ಯಾಲಿ ನಾಗರಿಕತೆಗಳ ಬಗ್ಗೆ ನಡೆದ ಪುರಾತತ್ತ್ವ ಶೋಧಗಳು ಭಾರತದಲ್ಲಿ ಸ್ವಸ್ತಿಕದ ಬಳಕೆ ಸಹಸ್ರ ಶತಮಾನಗಳಿಗಿಂತಲೂ ಹಳೆಯದು ಎಂಬುದಕ್ಕೆ ಮೊದಲ ಸಾಕ್ಷ್ಯವನ್ನು ಒದಗಿಸಿವೆ. ನಮ್ಮ ವೈದಿಕ ಗ್ರಂಥಗಳಲ್ಲಿ, ಋಗ್ವೇದ ಮುಂತಾದವುಗಳಲ್ಲಿ “ಆರ್ಯ” ಪದವು ಉಲ್ಲೇಖಿಸಲ್ಪಟ್ಟಿದೆ. ಆದರೆ ಅದರ ಅರ್ಥ ಜನಾಂಗ ಅಥವಾ ಜನಾಂಗೀಯ ವರ್ಗವಲ್ಲ, ಬದಲಿಗೆ ನೈತಿಕ ಉನ್ನತಿಯನ್ನು ಸೂಚಿಸುವುದು. ಹಿಂದೂ ಮಹಾಕಾವ್ಯ ರಾಮಾಯಣದಲ್ಲಿಯೂ “ಆರ್ಯಪುತ್ರ” (ಶ್ರೇಷ್ಠ ಪುತ್ರ) ಎಂಬುದು ಭಗವಾನ್ ರಾಮನಿಗೆ ಬಳಸಲ್ಪಟ್ಟಿದೆ. ಅಲ್ಲಿ ಯಾವುದೇ ಸ್ಥಳಾಂತರ ಅಥವಾ ಆಕ್ರಮಣಗಳ ಉಲ್ಲೇಖಗಳಿಲ್ಲ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಹಿಟ್ಲರ್ನ ಸಾಂಸ್ಕೃತಿಕ ಕಳ್ಳತನದ ಪರಂಪರೆಯು ಶಾಶ್ವತ ವಿಭಜನೆಯನ್ನು ಸೃಷ್ಟಿಸಿತು. ಇಂದಿಗೂ, ಭಾರತದ ಒಂದು ಬಿಲಿಯನ್ಗಿಂತ ಹೆಚ್ಚು ಜನರಿಗೆ ಸ್ವಸ್ತಿಕವು ಮದುವೆಗಳು ಮತ್ತು ಹಬ್ಬಗಳಲ್ಲಿ ಬಳಸಲ್ಪಡುವ ಶಾಂತಿ ಮತ್ತು ಅದೃಷ್ಟದ ಪವಿತ್ರ ಚಿಹ್ನೆಯಾಗಿಯೇ ಉಳಿದಿದೆ. ಆದರೆ ಪಶ್ಚಿಮದಲ್ಲಿ, 45-ಡಿಗ್ರಿ ಓರೆಯಾದ ಮತ್ತು ಕಠಿಣ ಹುಕ್ಗಳೊಂದಿಗೆ ಇರುವ ಸ್ವಸ್ತಿಕದ ಮಾದರಿಯ ಚಿಹ್ನೆಯು ಹೋಲೋಕಾಸ್ಟ್ನ ಚಿಹ್ನೆಯಾಗಿ ಉಳಿದಿದೆ. ಹಿಟ್ಲರನ ಸಾಂಸ್ಕೃತಿಕ ಕಳ್ಳತನ ಮಾನವತೆಯ ಅತ್ಯಂತ ಹಳೆಯ ಐಕಾನ್ಗಳಲ್ಲಿ ಒಂದನ್ನು ವಿರೂಪಗೊಳಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


