ಕೆನಡಾದ ಇತಿಹಾಸದ ಅತ್ಯಂತ ಕಪ್ಪು ಅಧ್ಯಾಯಗಳಲ್ಲಿ ಒಂದು – ರೆಸಿಡೆನ್ಷಿಯಲ್ ಸ್ಕೂಲ್ಗಳು. 1883ರಿಂದ 1996ರವರೆಗೆ ಕೆನಡಾ ಸರ್ಕಾರವು ಕ್ರಿಶ್ಚಿಯನ್ ಚರ್ಚ್ಗಳೊಂದಿಗೆ ಸೇರಿ ಕನಿಷ್ಠ 150,000 First Nations, Inuit ಮತ್ತು Métis (ಸ್ಥಳೀಯ ಜನಾಂಗಗಳು/ ಮೂಲ ನಿವಾಸಿಗಳು) ಮಕ್ಕಳನ್ನು ಅವರ ಕುಟುಂಬಗಳಿಂದ ಬಲವಂತವಾಗಿ ಬೇರ್ಪಡಿಸಿತು ಮತ್ತು ರೆಸಿಡೆನ್ಷಿಯಲ್ ಸ್ಕೂಲ್ಗಳಿಗೆ ಹಾಕಿತು. ಈ ಸ್ಕೂಲ್ಗಳ ಉದ್ದೇಶ ಸ್ಪಷ್ಟವಾಗಿತ್ತು, ಇಂಡಿಜಿನಸ್ ಮಕ್ಕಳನ್ನು ಯುರೋ-ಕೆನಡಿಯನ್ ಸಮಾಜಕ್ಕೆ “ಅಸಿಮಿಲೇಟ್” ಮಾಡುವುದು – ಅಂದರೆ ಅವರ ಭಾಷೆ, ಸಂಸ್ಕೃತಿ, ಆಚಾರಗಳನ್ನು ನಾಶಮಾಡಿ ಯುರೋಪಿಯನ್ ಧರ್ಮ, ಭಾಷೆ ಮತ್ತು ಮೌಲ್ಯಗಳನ್ನು ಅವರಿಗೆ ಕಲಿಸುವುದು.
ಈ ಸ್ಕೂಲ್ಗಳಲ್ಲಿ ಮೂಲ ನಿವಾಸಿ ಮಕ್ಕಳ ಸ್ಥಳೀಯ ಭಾಷೆಗಳು ನಿಷೇಧವಾದವು, ಸಾಂಪ್ರದಾಯಿಕ ಆಚರಣೆಗಳು ನಿಷೇಧವಾದವು. ಬದಲಿಗೆ ಕ್ಯಾಥೊಲಿಕ್ ಧರ್ಮಕ್ಕೆ ಬಲವಂತದ ಮತಾಂತರ, ಹಸಿವು, ಟ್ಯೂಬರ್ಕ್ಯುಲೋಸಿಸ್ (ಸಾಮಾನ್ಯ ಜನಸಂಖ್ಯೆಗಿಂತ 5 ಪಟ್ಟು ಹೆಚ್ಚು ಸಾವುಗಳು), ದೈಹಿಕ ಹಲ್ಲೆ ಮತ್ತು ವ್ಯಾಪಕ ಲೈಂಗಿಕ ದೌರ್ಜನ್ಯಗಳು ನಡೆದವು. ಕೆನಡಾದ Truth and Reconciliation Commission (2008–2015) ಇದನ್ನು “ಸಾಂಸ್ಕೃತಿಕ ನರಮೇಧ” (cultural genocide) ಎಂದು ವರ್ಗೀಕರಿಸಿತು.
2021ರಲ್ಲಿ ಕ್ಯಾಂಪ್ಲೂಪ್ಸ್ ಸ್ಥಳದಲ್ಲಿ unmarked graves ಗಳ ಶೋಧನೆ ನಡೆಸಿದಾಗ ಸಾವಿರಾರು ಬದುಕುಳಿದವರ ಸಾಕ್ಷ್ಯಗಳು ದೊರೆತವು. ಇದರ ಒತ್ತಡದಿಂದ ಪೋಪ್ ಫ್ರಾನ್ಸಿಸ್ 2022 ಜುಲೈನಲ್ಲಿ ಕೆನಡಾಕ್ಕೆ “penitential pilgrimage” ಹೆಸರಲ್ಲಿ ಭೇಟಿ ನೀಡಿದರು. Maskwacîs, Albertaದಲ್ಲಿ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು. “ಚರ್ಚ್ನ ಸಹಭಾಗಿತ್ವದಿಂದ ಸಂಸ್ಕೃತಿಗಳ ನಾಶ, ಕುಟುಂಬಗಳ ಬೇರ್ಪಡಿಕೆ ಮತ್ತು ಪೀಳಿಗೆಗಳ ಅಂಚಿನಲ್ಲಿರುವಿಕೆಗೆ ನಾನು ಆಳವಾಗಿ ವಿಷಾದಿಸುತ್ತೇನೆ. ನಾನು ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದರು.
ಒಂದು ಮಗುವಿನ ಕಥೆ: ಅವನಿಸ್ಕೌ
1900ರ ಆರಂಭದಲ್ಲಿ, ಇಂದಿನ ಸಾಸ್ಕಚೆವಾನ್ನ ಉತ್ತರ ಪ್ರೇರೀಸ್ನಲ್ಲಿ ಒಬ್ಬ 7 ವರ್ಷದ ಕ್ರೀ ಜನಾಂಗದ ಹುಡುಗಿ ಅವನಿಸ್ಕೌ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು. ಒಂದು ದಿನ ಮೌಂಟೆಡ್ ಪೊಲೀಸರು ಬಂದು ಹೊಸ ಕಾನೂನಿಡಿ ಅವಳನ್ನು ಕರೆದುಕೊಂಡು ಹೋದರು, ಇಂಡಿಜಿನಸ್ ಮಕ್ಕಳಿಗೆ ಸರ್ಕಾರಿ ಚರ್ಚ್ ಮಾಲಿಕತ್ವದ ಸ್ಕೂಲ್ಗಳಲ್ಲಿ ಓದುವುದು ಕಡ್ಡಾಯ ಎಂದು ಪೊಲೀಸರು ಪ್ರತಿಪಾದಿಸಿದರು. ಅವಳ ತಂದೆ ನೋಡುತ್ತಲೇ ನಿಂತುಬಿಟ್ಟರು – ಅಸಹಾಯಕರಾಗಿ, ಕೋಪದಿಂದ. ಅಧಿಕಾರಿಗಳು ಅವಳನ್ನು ಎಳೆದೊಯ್ದು ವ್ಯಾಗನ್ನಲ್ಲಿ ಹಾಕಿ ದೂರದ ದಕ್ಷಿಣಕ್ಕೆ ಕರೆದೊಯ್ದರು.
ಸ್ಕೂಲ್ನ ಗೇಟ್ ಬಳಿ ಅವಳಿಂದ ಎಲ್ಲವನ್ನೂ ಕಸಿದುಕೊಳ್ಳಲಾಯಿತು. ಉದ್ದನೆಯ ಜಡೆಗಳನ್ನು ಕತ್ತರಿಸಿದರು. ಅವಳ ಕೂದಲನ್ನು ಕೊಳಕು ಎಂದು ಕರೆದರು. ಆಕೆ ತೊಟ್ಟಿದ್ದ ಬಟ್ಟೆಗಳನ್ನು ಸುಟ್ಟು ಸ್ಟಿಫ್ ಯೂನಿಫಾರ್ಮ್ ಕೊಟ್ಟರು. ಇನ್ನು ಮುಂದೆ ಅವಳ ಹೆಸರು Mary Agnes ಎಂದರು. ಕ್ರೀ ಭಾಷೆ ಮಾತನಾಡದಂತೆ ನಿಷೇಧಿಸಿದರು.
ಡಾರ್ಮಿಟರಿಯಲ್ಲಿ ಲೋಹದ ಹಾಸಿಗೆಗಳ ಸಾಲು. ಮೊದಲ ವಾರದಲ್ಲೇ ಕ್ರೀ ಭಾಷೆ ಮಾತನಾಡಿದರೆ ಶಿಕ್ಷೆ. ಅವನಿಸ್ಕೌ ಭಯಭೀತಳಾಗಿ ಕ್ರೀಯಲ್ಲಿ ಒಂದು ಮಾತು ಗುನುಗಿದಳು – ನನ್ ಬಂದು ಅವಳ ನಾಲಿಗೆಗೆ ಸೂಜಿ ಚುಚ್ಚಿದಳು. ಹಳಸಿದ ಊಟ, ನಿರಂತರ ಹಸಿವು ಇದು ಆ ಪುಟಾಣಿಯ ಜೀವನವಾಯಿತು.
ಆಕೆಯ ದಿನಚರಿ ಕಠಿಣವಾಗಿತ್ತು. ನಿತ್ಯ ಪ್ರಾರ್ಥನೆಗಳು, ಲ್ಯಾಟಿನ್ ಭಾಷೆಯಲ್ಲಿ ಚರ್ಚ್ ಡಾಕ್ಟ್ರಿನ್. ಆಕೆಯ ಮೂಲ ಹಾಡುಗಳು, ಆಚರಣೆಗಳು “ದುಷ್ಟ” ಎಂದು ನಿಷೇಧಿಸಲಾಯಿತು. ಹೊರಗೆ ಕೆಲಸ ನೀಡಲಾಯಿತು. ಲಾಂಡ್ರಿಯಲ್ಲಿ ಭಾರಿ ಗಾತ್ರದ ಹಾಸಿಗೆಗಳನ್ನು ಎಳೆಯುವುದು, ಚಳಿಯಲ್ಲೂ ಕೃಷಿ ಕೆಲಸ.
ಬೆಡ್ ಅಲ್ಲಿ ಮೂತ್ರ ಮಾಡಿದರೆ ಹೊಡೆತ, ರಾತ್ರಿ ಅತ್ತರೆ ಸ್ಟ್ರ್ಯಾಪ್ ಅಥವಾ ಕತ್ತಲ ಕೋಣೆಯಲ್ಲಿ ಲಾಕ್. ಟ್ಯೂಬರ್ಕ್ಯುಲೋಸಿಸ್, ನ್ಯೂಮೋನಿಯಾ ಹರಡಿದರೆ ಆರೈಕೆ ಇಲ್ಲ. ಪ್ರೀಸ್ಟ್ಗಳು, ನನ್ಗಳು ಏಕಾಂತದಲ್ಲಿ ಮಕ್ಕಳನ್ನು ದುರುಪಯೋಗಗೊಳಿಸಿದರು. ಗರ್ಭಿಣಿಯಾದರೆ ರಹಸ್ಯವಾಗಿ ಹೆತ್ತು ಮಕ್ಕಳನ್ನು ದತ್ತು ಕೊಟ್ಟರು ಅಥವಾ ಸಾವುಗಳನ್ನು ಮರೆಮಾಚಿದರು. unmarked gravesಗಳಲ್ಲಿ ಸಾವಿರಾರು ಮಕ್ಕಳ ದೇಹಗಳು ಹೂತು ಹೋಗಿದ್ದವು – TRCಯ ಪ್ರಕಾರ 4,000+ ದೃಢೀಕೃತ ಸಾವುಗಳು ಸಂಭವಿಸಿವೆ, ಆದರೆ ನಿಜ ಸಂಖ್ಯೆ 6,000–25,000 ಎಂದು ಅಂದಾಜಿಸಲಾಗಿದೆ.
ಅವನಿಸ್ಕೌ ಎರಡು ಚಳಿಗಾಲ ತಡೆದುಕೊಂಡಳು. ಚಳಿ, ಹಸಿವು, ಅತಿಕೆಲಸ, ರೋಗಗಳು ಅವಳ ದೇಹವನ್ನು ಸವೆಸಿದವು. ನ್ಯೂಮೋನಿಯಾ ಬಂದಾಗ ಚಿಕಿತ್ಸೆ ಇರಲಿಲ್ಲ. ಒಂದು ದಿನ ಸ್ಕೂಲ್ನಲ್ಲೇ ಸತ್ತು ಹೋದಳು.
ಅವಳ ದೇಹವನ್ನು ಸ್ಕೂಲ್ ಆವರಣದಲ್ಲಿ ಗುಂಡಿ ತೋಡಿ ಹೂತರು. ತಂದೆ-ತಾಯಿಗೆ ಸಣ್ಣ ನೋಟ್ ಮೂಲಕ ಸುದ್ದಿ ತಲುಪಿಸಿದರು. ಆಕೆಯ ಹೆಸರು ರಿಜಿಸ್ಟರ್ಗಳಲ್ಲಿ ಮರೆಯಾಯಿತು. ಕುಟುಂಬಕ್ಕೆ ಹೂಳಿದ ಗುಂಡಿಗೆ ಭೇಟಿ ನೀಡುವ ಅವಕಾಶವೇ ಇಲ್ಲ.
ಇಂದು ನೆನಪು ಮತ್ತು ಪ್ರಶ್ನೆ
ಅವನಿಸ್ಕೌಳಂತಹ ಸಾವಿರಾರು ಮಕ್ಕಳ ಕಥೆ ಇಂದಿಗೂ ಭಯಾನಕ ಘಟನೆಯಾಗಿ ನಮ್ಮ ಮುಂದೆ ಇದೆ. ಸ್ಕೂಲ್ಗಳಿಗೆ ಬಲವಂತವಾಗಿ ಕರೆದೊಯ್ಯಲ್ಪಟ್ಟು ಮರಳಿ ಬಾರದ ಮಕ್ಕಳು. ಬದುಕುಳಿದವರು ದೈಹಿಕ-ಲೈಂಗಿಕ ದೌರ್ಜನ್ಯ, ಅನುಭವಿಸಿದ ಹಸಿವು, ಏಕಾಂತತೆಯ ಬಗ್ಗೆ ಮಾತನಾಡಿದ್ದಾರೆ – ಇದು ಪೀಳಿಗೆಗಳ ಮೇಲೆ ಪರಿಣಾಮ ಬೀರಿದೆ.
unmarked gravesಗಳ ಶೋಧನೆಗಳು (ಸಾವಿರಾರು) ಬದುಕುಳಿದವರ ಸಾಕ್ಷ್ಯಗಳನ್ನು ದೃಢೀಕರಿಸಿವೆ. ಸರ್ಕಾರ ಮತ್ತು ಚರ್ಚ್ಗಳು ಕ್ಷಮೆಯಾಚಿಸಿವೆ, ರೆಕಾರ್ಡ್ಗಳನ್ನು ಬಿಡುಗಡೆ ಮಾಡುತ್ತಿವೆ, ಸಪೋರ್ಟ್ ನೀಡುತ್ತಿವೆ.
ಆದರೆ ಅವನಿಸ್ಕೌಳಂತಹ ಮಕ್ಕಳ ಕಳೆದುಹೋದ ಬಾಲ್ಯವನ್ನು, ಪ್ರಾಣವನ್ನು ಯಾವ ಕ್ಷಮೆಯೂ ಮರಳಿ ತರುವುದಿಲ್ಲ. ಅವಳಂತವರ ಸ್ಮರಣೆಗಾಗಿ ಇಂದು ಭೂಮಿಯ ಮೇಲೆ ಆಚರಣೆಗಳನ್ನು ಮಾಡುತ್ತಾರೆ, ಹೆಸರುಗಳನ್ನು ಉಚ್ಚರಿಸುತ್ತಾರೆ, ಡ್ರಮ್ ಬಾರಿಸುತ್ತಾರೆ.
ಪೋಪ್ ಹೇಳಿದ “ಸ್ವಾರಿ” ಮಹತ್ವದ ಹೆಜ್ಜೆ – ಆದರೆ ಅದು ಸಾಕೇ? ನ್ಯಾಯ, ಪುನಃಸ್ಥಾಪನೆ, ಸತ್ಯದ ಬೆಳಕು – ಇವುಗಳೇ ನಿಜವಾದ ಪರಿಹಾರದ ಮಾರ್ಗ. ಅವನಿಸ್ಕೌಳ ಮೌನ ಅಳು ಇಂದಿಗೂ ಕೆನಡಾದ ಆತ್ಮದಲ್ಲಿ ಪ್ರತಿಧ್ವನಿಸುತ್ತದೆ. ನಾವು ಮಾಡಿದ ತಪ್ಪಾದರೂ ಏನು? ಎಂದು ಕೇಳುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


