News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನಾಗೇಂದ್ರ ರಾಜೀನಾಮೆ ಕೊಡದಿದ್ದರೆ ಸದನ ನಡೆಸಲು ಬಿಡೆವು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ನಾಗೇಂದ್ರ ಅವರ ಮೇಲೆ ಕೋರ್ಟಿನಲ್ಲಿ ಈಗಲೂ ದಾವೆ ಇದೆ. ಅವರು ದೆಹಲಿಗೂ ಹೋಗುವಂತಿಲ್ಲ. ಇಂಥ ಕಳಂಕಿತರು ಮಂತ್ರಿಮಂಡಲದಲ್ಲಿ ಇರಲು ಸಾಧ್ಯವಿಲ್ಲ. ಅವರು ರಾಜೀನಾಮೆ ಕೊಡುವವರೆಗೆ ನಾವು ವಿರಮಿಸುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಎಚ್ಚರಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನದಲ್ಲಿ” ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ನಮ್ಮ ಹೋರಾಟವನ್ನು ರಾಜ್ಯಾದ್ಯಂತ ಹೋರಾಟ ಮಾಡಲಿದ್ದೇವೆ. 13ರಿಂದ ಸದನ ಪ್ರಾರಂಭವಾಗಲಿದೆ. ಅವರ ರಾಜೀನಾಮೆ ಇಲ್ಲದೇ ನಾವು ಸದನ ನಡೆಸಲು ಬಿಡುವುದಿಲ್ಲ ಎಂದು ಹೇಳಿದರು. ಅವರು ಇವತ್ತೇ ರಾಜೀನಾಮೆ ಪಡೆಯಲಿ. ಇಲ್ಲವಾದರೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ಮೊನ್ನೆಯಷ್ಟೇ ರಾಜ್ಯ ಸರಕಾರದ ಸಂಪುಟ ವಿಸ್ತರಣೆ ಆಗಿದೆ. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದ 2 ತಿಂಗಳ ಬಳಿಕ ವಿಸ್ತರಣೆ ಆಗಿದೆ ಎಂದರು. ಕಾಂಗ್ರೆಸ್ ಪಕ್ಷವು ಮಂತ್ರಿಮಂಡಲದ ಸದಸ್ಯತ್ವವನ್ನು ಹರಾಜಿಗೆ ಇಟ್ಟಿತ್ತು ಎಂದು ಮತ್ತೊಮ್ಮೆ ಆರೋಪಿಸಿದರು. ಹರಾಜಿನಲ್ಲಿ ಸಚಿವಸ್ಥಾನವನ್ನು ಶಕ್ತ್ಯಾನುಸಾರ ಪಡೆದಿದ್ದಾರೆ ಎಂದ ಅವರು, ಇದಕ್ಕೆ ಪುರಾವೆ ಎಂಬಂತೆ ವಿಡಿಯೋಗಳು ಓಡಾಡುತ್ತಿವೆ ಎಂದು ವಿವರಿಸಿದರು. ಭ್ರಷ್ಟಾಚಾರ ಆರೋಪದಲ್ಲಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಣ ದುರುಪಯೋಗ ಪಡಿಸಿಕೊಂಡ ನಾಗೇಂದ್ರ ಅವರು ಬಿಜೆಪಿ ಮುಖಂಡರು, ಶಾಸಕರ ಬಹುದೊಡ್ಡ ಹೋರಾಟದ ಫಲವಾಗಿ ರಾಜೀನಾಮೆ ನೀಡಿದ್ದರು. ಜೈಲಿಗೆ ಹೋಗಿದ್ದರು. ಇವತ್ತಿಗೂ ಜಾಮೀನಿನಲ್ಲಿ ಇದ್ದಾರೆ. ಜಾಮೀನಿನಲ್ಲಿ ಇದ್ದರೂ, ಭ್ರಷ್ಟಾಚಾರದಲ್ಲಿದ್ದರೂ ಕಾಂಗ್ರೆಸ್ ಅವರಿಗೆ ಉಡುಗೊರೆಯಾಗಿ ಮಂತ್ರಿಸ್ಥಾನವನ್ನು ನೀಡಿದೆ ಎಂದು ಆಕ್ಷೇಪಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನು ಪ್ರದರ್ಶಿಸಿದರು.

ನಾಗೇಂದ್ರ ಅವರು ಮತ್ತೆ ಎಲ್ಲರ ಹೆಸರು ಹೇಳುವುದಾಗಿ ತಿಳಿಸಿದ್ದು, ಅವರಿಗೆ ಹೆದರಿ ಸಚಿವ ಸ್ಥಾನ ನೀಡಿರಬೇಕು ಎಂದು ತಿಳಿಸಿದರು. ಹೆಚ್ಚು ಹಣ ಕೊಟ್ಟದ್ದಕ್ಕಾಗಿ ಕೊಡಲಾಗಿದೆ ಎಂದು ಮತ್ತೊಬ್ಬರು ಹೇಳುತ್ತಾರೆ. ಒಟ್ಟಾರೆಯಾಗಿ ಸಚಿವ ಸ್ಥಾನಗಳನ್ನು ಹರಾಜಿಗೆ ಇಟ್ಟಿದ್ದು ಸಾಬೀತಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ತಿಮ್ಮಾಪುರ ಮತ್ತು ಮಾಜಿ ಶಾಸಕ ನಂಜಯ್ಯನಮಠ ಕಾರಿನಲ್ಲಿ ಮಾತನಾಡಿದ ವಿಡಿಯೋ ಇದಾಗಿದೆ. ಇವರ ಬಳಿ ಹಣ ಇಲ್ಲ; ಪ್ರಾಮಾಣಿಕರಿದ್ದಾರೆ ಎಂದು ವೇಣುಗೋಪಾಲರಿಗೆ ತಿಳಿಸಿದಾಗ, ಹಣ ಮಾಡದೇ ಪ್ರಾಮಾಣಿಕರಾಗಿ ಇರಿ ಎಂದು ನಿಮಗೆ ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದ ಕುರಿತು ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕರೇ ಭ್ರಷ್ಟಾಚಾರಿಗಳನ್ನು ಉತ್ಪತ್ತಿ ಮಾಡುವವರು ಎಂಬುದು ಇದರಿಂದ ಸಾಬೀತಾಗಿದೆ ಎಂದು ದೂರಿದರು. ಇವರು ದೇಶ ಉದ್ಧಾರ ಮಾಡಲು ಬಂದವರಲ್ಲ; ಇವರು ದೇಶ ಲೂಟಿ ಮಾಡುವವರು ಎಂದು ಆರೋಪಿಸಿದರು.

ಎಂಥ ಸಚಿವರನ್ನು ಆಯ್ಕೆ ಮಾಡಿದ್ದಾರೆ ಎಂದ ಅವರು, ಇವರಿಗೆ ಕನ್ನಡವೂ ಬರುವುದಿಲ್ಲವೇ ಎಂದು ಕೇಳಿದರು. ಹಲವರಿಗೆ ಕನ್ನಡದಲ್ಲಿ ಸ್ವಚ್ಛವಾಗಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗಿಲ್ಲ; ಇಂಥವರನ್ನೆಲ್ಲ ಇವರು ಸಚಿವರನ್ನಾಗಿ ಮಾಡಿದ್ದಾರೆ. ನಿಮಗೆ ಭಾಷೆ ಬರದೇ ಇದ್ದರೆ ಪರವಾಗಿಲ್ಲ; ಸರಿಯಾಗಿ ಲೂಟಿ ಮಾಡಲು ಬಂದರೆ ಸಾಕೆಂಬ ಉದ್ದೇಶವೇ ಎಂದು ಕೇಳಿದರು. ಭ್ರಷ್ಟರನ್ನು ಬಿಜೆಪಿ ಸಹಿಸುವುದಿಲ್ಲ ಎಂದು ತಿಳಿಸಿದರು.

ಸಲೀಂ ಅಹ್ಮದ್ ಅವರು ಸಭಾಪತಿಗಳನ್ನು ಭೇಟಿ ಮಾಡಿ ರಾಜೀನಾಮೆ ಕೇಳಿದ್ದಾರೆ. ರಾಜೀನಾಮೆ ಕೇಳಲು ಅವರು ಯಾರು ಎಂದು ಪ್ರಶ್ನಿಸಿದರು. ಅಸೆಂಬ್ಲಿ ಅವಧಿ 5 ವರ್ಷ. ವಿಧಾನಪರಿಷತ್ ಯಾವತ್ತೂ ವಿಸರ್ಜನೆ ಆಗುವುದಿಲ್ಲ. ಅವರಾಗಿ ಸಭಾಪತಿ ರಾಜೀನಾಮೆ ಕೊಟ್ಟರೆ ಆ ಸ್ಥಾನ ಖಾಲಿ ಆಗುತ್ತದೆ ಎಂದು ವಿವರಿಸಿದರು. ಸಭಾಪತಿಗಳು ಪಕ್ಷದ ಆಸ್ತಿಯೇ? ಕಾಂಗ್ರೆಸ್ಸಿಗೆ ನೀತಿ, ತತ್ವ ಇಲ್ಲವೇ? ಲೆಟರ್‍ಹೆಡ್‍ನಲ್ಲಿ ಹೆಸರು ಕಳಿಸಿದ್ದು ಸರಿಯೇ ಎಂದು ಕೇಳಿದರು.

ಸಭಾಪತಿಗಳು ಯಾವ ಒತ್ತಡಕ್ಕೂ ಮಣಿಯಬೇಕಾಗಿಲ್ಲ. ಹೊರಟ್ಟಿ ಅವರ ಬಗ್ಗೆ 2 ದಿನಗಳ ಕಾಲ ಗುಣಗಾನ ಮಾಡಿ ಒಂದು ವರ್ಷವೂ ಆಗಿಲ್ಲ. ಅವರ ಮೇಲೆ ಒತ್ತಡ ಹಾಕುವುದು ಕಾನೂನುಬಾಹಿರ ಮತ್ತು ಸಂವಿಧಾನವಿರೋಧಿ ಎಂದು ಎಚ್ಚರಿಸಿದರು. ಅವಿಶ್ವಾಸ ಮಂಡಿಸಿದರೆ ಚರ್ಚೆಗೆ ಸಿದ್ಧರಿದ್ದೇವೆ ಎಂದು ಹೇಳಿದರು. ಇವರು ರಬ್ಬರ್ ಸ್ಟಾಂಪ್ ಸಿಎಂ ಎಂದುಕೊಂಡಿದ್ದಾರೆ. ವೇಣುಗೋಪಾಲ್‍ಗೆ ತಲೆಯಲ್ಲಿ ಬುದ್ಧಿ ಇದೆಯೇ ಎಂದು ಕೇಳಿದರು.

ಇಲ್ಲಿಂದ ಹೋದವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರನ್ನು ಭೇಟಿ ಮಾಡುತ್ತಾರೆ. ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡುವುದಿಲ್ಲ. ಅಧ್ಯಕ್ಷರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಟೀಕಿಸಿದರು. ವೇಣುಗೋಪಾಲ್ ಆದೇಶ ಕಳಿಸುತ್ತಾರೆ. ಅಲ್ಲಿ ಎಲ್ಲವೂ ವೇಣುಮಯ ಎಂದು ಆರೋಪಿಸಿದರು. ಕಾಂಗ್ರೆಸ್ಸಿಗೆ ಸಂವಿಧಾನದ ಅರಿವೇ ಇಲ್ಲ ಎಂದು ತಿಳಿಸಿದರು.

ಹಿಂದೆ ಇಂದಿರಾಗಾಂಧಿಯವರು ತುಘಲಕ್ ದರ್ಬಾರ್ ನಡೆಸಿದ್ದರು. ತುರ್ತು ಪರಿಸ್ಥಿತಿ ಹೇರಿದ್ದರು. ಇದು ಸಂವಿಧಾನದ ಮೇಲೆ ಕಾಂಗ್ರೆಸ್ಸಿನ ಅಟ್ಟಹಾಸ. ಇದಕ್ಕೆ ಬಿಜೆಪಿ ಸೊಪ್ಪು ಹಾಕುವುದಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಸಭಾಪತಿಯವರು ಒತ್ತಡಕ್ಕೆ ಮಣಿದು ರಾಜೀನಾಮೆ ಕೊಡಬಾರದು ಎಂದು ಸಲಹೆ ನೀಡಿದರು. ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ರಾಜ್ಯ ಕಾರ್ಯದರ್ಶಿ ಮಹಂತೇಶ್ ನಾಯಕ ಅವರು ಭಾಗವಹಿಸಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top