ಮಂಗಳೂರು : ಎತ್ತಿನಹೊಳೆ ಯೋಜನೆಯ ಸಾಧಕ-ಭಾದಕಗಳನ್ನು ಕೂಲಂಕಷವಾಗಿ ಸಂಶೋಧನೆಗೊಳಪಡಿಸಿ ಸತ್ಯನಿಷ್ಠ ವರದಿಯನ್ನು ನೀಡಿದ ಎನರ್ಜಿ & ವೆಟ್ ಲ್ಯಾಂಡ್ ರಿಸರ್ಚ್ ಗ್ರೂಪ್-ಸೆಂಟರ್ ಫಾರ್ ಎಕೋಲಾಜಿಕಲ್ ಸೈನ್ಸಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು, ಇದರ ಖ್ಯಾತ ವಿಜ್ಞಾನಿಗಳು ಮತ್ತು ಸಂಶೋಧಕರಾದ ಡಾ. ಟಿ.ವಿ ರಾಮಚಂದ್ರ ಮತ್ತು ತಂಡದ ಪರಿಸರ ಸಂರಕ್ಷಣೆಯ ಸೂತ್ರಗಳು ಮತ್ತು ಯೋಜಿತ ಎತ್ತಿನಹೊಳೆ ಕಾಮಗಾರಿಯ ಅವೈಜ್ಞಾನಿಕತೆಯ ಬಗ್ಗೆ ಸರ್ಕಾರಕ್ಕೆ ಪತ್ರದ ಮೂಲಕ ಸೂಚಿಸಿದ್ದರು.
ಅದನ್ನು ಚಳವಳಿಯನ್ನಾಗಿ ರೂಪಿಸಬೇಕೆನ್ನುವ ನಿಟ್ಟಿನಲ್ಲಿ ಮಂಗಳೂರಿನ ‘ಸಿಟಿಜನ್ಸ್ ಕೌನ್ಸಿಲ್’ ರಾಮಚಂದ್ರ ವರನ್ನು ಮಂಗಳೂರಿಗೆ ಕರೆಸಿ ಅವರ ಉಪನ್ಯಾಸವನ್ನೂ ಏರ್ಪಡಿಸಿತ್ತು. ಅಲ್ಲದೆ ರಾಮಚಂದ್ರ ಅವರ ತಂಡ ಎತ್ತಿನಹೊಳೆ ಯೋಜನೆ ಪಾರಿಸರಿಕ ದೃಷ್ಟಿಯಿಂದ ಸಂಪೂರ್ಣ ಅವೈಜ್ಞಾನಿಕ ಮತ್ತು ಕಾನೂನುಬಾಹಿರವಾಗಿದೆ ಎಂದು ಎಚ್ಚರಿಸಿತ್ತು. ಜಲಮೂಲಗಳ ಸಾಮರ್ಥ್ಯ ಕಡಿಮೆ ಇರುವುದು, ಪಶ್ಚಿಮ ಘಟ್ಟಕ್ಕೆ ಇರುವ ಆತಂಕ, ಆನೆ ಕಾರಿಡಾರ್ ಮತ್ತು ಇತರ ಜೀವ ವೈವಿಧ್ಯ ನಾಶಕ್ಕೆ ಹೇತುವಾಗಿರುವ ಕಾರಣಗಳನ್ನು ಉಲ್ಲೇಖಿಸಿದ ತಂಡದ ವರದಿ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿತ್ತು. ರಾಮಚಂದ್ರ ಅವರ ಪತ್ರಕ್ಕೆ ಸರ್ಕಾರ ಪ್ರತಿಕ್ರಿಯಿಸಿಲ್ಲ ಎಂದು ಸಿಟಿಜನ್ಸ್ ಕೌನ್ಸಿಲ್ ಆರೋಪಿಸಿದೆ.
ತಂಡದ ವರದಿಯನ್ನು ಜನ ಮತ್ತು ದೇಶದ ವೈಜ್ಞಾನಿಕ ಪಂಡಿತರು ಒಪ್ಪಿ ಎತ್ತಿನಹೊಳೆ ಪರಿಸರಕ್ಕೆ ಮಾರಕ ಎಂದೇ ಅಭಿಪ್ರಾಯಪಟ್ಟಿದ್ದರು. ಆದರೆ ರಾಜ್ಯ ಸರಕಾರ ವರದಿಯನ್ನು ಗಮನಿಸುವ ವಿವೇಚನೆಯನ್ನು ತೋರದೆ ತಂಡದ ವರದಿ ಮತ್ತು ಟಿ.ವಿ ರಾಮಚಂದ್ರರ ಮೇಲೆ ಇಲ್ಲ ಸಲ್ಲದ ಆರೋಪ, ಅಪಪ್ರಚಾರಗಳನ್ನು ಮಾಡಲು ತೊಡಗಿದೆ. ರಾಮಚಂದ್ರ ಅವರ ಪತ್ರಕ್ಕೆ ಸರಕಾರ ಇದುವರೆಗೂ ಪ್ರತ್ಯುತ್ತರ ಬರೆಯುವ ಸೌಜನ್ಯವನ್ನು ತೋರಿಲ್ಲ. ಖ್ಯಾತ ವಿಜ್ಞಾನಿಗಳ ಪತ್ರಕ್ಕೆ ಸ್ಪಂದಿಸದ ಸರ್ಕಾರದ ಈ ಮನೋಭಾವವನ್ನು ಜನ ವಿರೋಧಿ ಮತ್ತು ಹುಂಬತನದ ಪರಮಾವಧಿಯಲ್ಲದೆ ಇನ್ನೇನೂ ಅಲ್ಲ ಎಂದು ಸಿಟಿಜನ್ಸ್ ಕೌನ್ಸಿಲ್ ಭಾವಿಸುತ್ತದೆ.
ಪ್ರಾಮಾಣಿಕವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ ರಾಮಚಂದ್ರ ಅವರ ಮೇಲೆ ಆರೋಪಗಳನ್ನು ಮಾಡಿದ ಸರ್ಕಾರದ ಕ್ರಮ ಸರ್ವಾಧಿಕಾರದ ನಡೆ ಮತ್ತು ಪ್ರಾಮಾಣಿಕ ಸಂಶೋಧನೆಗೆ ಮಾಡಿದ ಅವಮಾನ. ಪತ್ರಿಕಾ ಜಾಹೀರಾತುಗಳ ಮೂಲಕ ಅವರ ಮೇಲೆ ಮಾಡಿರುವ ಆರೋಪಗಳು ಚಾರಿತ್ರ್ಯ ವಧೆ ಮತ್ತು ಸತ್ಯನಿಷ್ಠ ವರದಿಗೆ ಮಾಡಿದ ಅವಮಾನ ಮತ್ತು ಜನರನ್ನು ದಿಕ್ಕುತಪ್ಪಿಸುವ ಕ್ರಮ. ಇದು ಖಂಡನೀಯ ಎಂದು ದೂರಿದೆ.
ಪರಿಸರ ವಿರೋಧಿ ಮತ್ತು ಜನವಿರೋಧಿಯಾದ ಯೋಜನೆಯನ್ನು ಅಕ್ರಮವಾಗಿ ಜಾರಿಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ರಾಮಚಂದ್ರ ಅವರು ಮಾನ್ಯ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಅವರ ವಿರುದ್ಧ ಸಕರ್?ರ ಆರೋಪಗಳನ್ನು ಮಾಡಿ ತನ್ನ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ. ಪತ್ರಕ್ಕೆ ನೇರವಾಗಿ ಉತ್ತರಿಸುವ ಬದಲು ಜಾಹೀರಾತುಗಳ ಮೂಲಕ ಸಕರ್?ರಿ ಹಣವನ್ನು ಪೋಲು ಮಾಡಿದ್ದಾರೆ.
ಇದು ನಾಗರಿಕರನ್ನು ವಂಚಿಸುವ ಉದ್ದೇಶವಾಗಿದೆ. ಯೋಜನೆಯ ಬಗ್ಗೆ ನಾಗರಿಕರು sಸರಕಾರದಿಂದ ಸ್ಪಷ್ಟ ಉತ್ತರಗಳನ್ನು ನಿರೀಕ್ಷಿಸುತ್ತಿದ್ದಾರೆಯೇ ಹೊರತು ಪ್ರಾಮಾಣಿಕ ವರದಿಯ ಬಗ್ಗೆ ನಿಂದನೆ, ಆರೋಪಗಳನ್ನಲ್ಲ. ಪ್ರಸ್ತುತ ಸರಕಾರದ ವರ್ತನೆ ಕೇವಲ ವಿಜ್ಞಾನಿಗಳಿಗೆ ಮಾಡಿದ ಅಪಮಾನ ಮಾತ್ರವಲ್ಲ. ಇದು ಸಮಸ್ತ ಕರಾವಳಿಯ ನಾಗರಿಕರಿಗೆ ಮಾಡಿದ ಅಪಮಾನವಾಗಿದೆ ಎಂದು ಸಿಟಿಜನ್ಸ್ ಕೌನ್ಸಿಲ್ ಸಂಚಾಲಕ ನರೇಶ್ ಶಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.