
1919ರಲ್ಲಿ, ಜಲಿಯನ್ವಾಲಾ ಬಾಗ್ನ ಭಯಾನಕ ಸುದ್ದಿ ಬ್ರಿಟಿಷ್ ಇಂಡಿಯಾದ ಕಚೇರಿಗಳನ್ನು ತಲುಪಿದಾಗ, ಅಲ್ಲಿನ ವ್ಯವಸ್ಥೆಯೊಳಗೊಬ್ಬ ಅಪ್ಪಟ ದೇಶಭಕ್ತನಿದ್ದ — ಅವರೇ ಚೆಟ್ಟೂರ್ ಶಂಕರನ್ ನಾಯರ್.
ಅವರು ಅತ್ಯಂತ ಗೌರವಾನ್ವಿತ ಮತ್ತು ಪ್ರತಿಷ್ಠಿತ ನ್ಯಾಯವಾದಿಯಾಗಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷರಾಗಿದ್ದರು, ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಮತ್ತು ವೈಸ್ರಾಯ್ನ ಕಾರ್ಯನಿರ್ವಾಹಕ ಸಮಿತಿಯ ಮಾಜಿ ಸದಸ್ಯರಾಗಿದ್ದರು. ಅವರು ಕಾನೂನು, ನ್ಯಾಯ, ಆಡಳಿತ ಮತ್ತು ಸುಧಾರಣೆಯಲ್ಲಿ ನಂಬಿಕೆ ಇಟ್ಟವರಾಗಿದ್ದರು. ಆದರೆ ಜಲಿಯನ್ವಾಲಾ ಬಾಗ್ನಲ್ಲಿ ನಡೆದ ಸಾಮೂಹಿಕ ಹತ್ಯೆಯ ವರದಿಗಳು ಮತ್ತು ಅದರ ಬಗ್ಗೆ ಬ್ರಿಟಿಷ್ ಸಾಮ್ರಾಜ್ಯದ ಸಮರ್ಥನೆಗಳನ್ನು ಕೇಳಿದಾಗ ಅವರ ಹೃದಯ ಛಿದ್ರಗೊಂಡಿತ್ತು, ಅವರು ಆಳವಾಗಿ ನೋವುಂಡರು. ಹತ್ಯೆಗಳ ಸಂಖ್ಯೆಯಿಂದ ಮಾತ್ರವಲ್ಲ, ಬ್ರಿಟಿಷ್ ಸಾಮ್ರಾಜ್ಯದ ಸಮರ್ಥನೆಗಳಿಂದಲೂ ಅವರು ತೀವ್ರವಾಗಿ ನೋವುಂಡರು
ಕಾರ್ಯನಿರ್ವಾಹಕ ಸಮಿತಿಯ ಸಭೆಯಲ್ಲಿ ಅವರು ಬ್ರಿಟಿಷ್ ಆಡಳಿತದ ಸಮರ್ಥನೆಯನ್ನು ತೀವ್ರವಾಗಿ ವಿರೋಧಿಸಿದರು. ಇದು ನೈತಿಕತೆ ಮತ್ತು ಕಾನೂನು ವ್ಯವಸ್ಥೆಯ ತತ್ವಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತದೆ ಎಂದು ಟೀಕಿಸಿದರು.
ಬ್ರಿಟಿಷರ ಕಾನೂನು ಮತ್ತು ಯೋಜಿತ ಭ್ರಷ್ಟಾಚಾರ ಮತ್ತು ದ್ವಿಮುಖ ನಡವಳಿಕೆಯನ್ನು ಕಣ್ಣಾರೆ ಕಂಡ ಅವರು, ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ವಿಚಾರಣೆಯ ನಂತರ ವೈಸ್ರಾಯ್ನ ಕಾರ್ಯನಿರ್ವಾಹಕ ಸಮಿತಿಯ ಹುದ್ದೆಗೆ ರಾಜೀನಾಮೆ ನೀಡಿದರು. ಆ ಸಮಯದಲ್ಲಿ ಭಾರತೀಯರಿಗೆ ದೊರೆತ ಅತ್ಯುನ್ನತ ಹುದ್ದೆಗಳಲ್ಲಿ ಅದು ಒಂದಾಗಿತ್ತು . ರಾಜೀನಾಮೆ ನೀಡುವ ಅವರ ಈ ನಿರ್ಧಾರ ಅತ್ಯಂತ ಕಷ್ಟಕರ ಮತ್ತು ಅಪರೂಪದ್ದಾಗಿತ್ತು, ಆದರೆ ಬ್ರಿಟಿಷ್ ಸಾಮ್ರಾಜ್ಯದ ದ್ವಿಮುಖ ನಡವಳಿಕೆಯಿಂದಾಗಿ ಅವರು ರಾಜೀನಾಮೆ ನೀಡಲೇಬೇಕು ಎಂಬ ದೃಢ ನಿರ್ಧಾರಕ್ಕೆ ಬಂದಿದ್ದರು.
ವರ್ಷಗಳು ಕಳೆದರೂ ಅವರ ವಿರೋಧ ನಿಲ್ಲಲಿಲ್ಲ. 1922ರಲ್ಲಿ ಅವರು “ಗಾಂಧಿ ಆಂಡ್ ಅನಾರ್ಕಿ” ಎಂಬ ಪುಸ್ತಕವನ್ನು ಬರೆದರು. ಇದರಲ್ಲಿ ಗಾಂಧೀಜಿಯ ವಿಧಾನಗಳನ್ನು ತೀವ್ರವಾಗಿ ಟೀಕಿಸಿದರು. ಅಹಿಂಸಾ ಸಹಕಾರ ಚಳವಳಿಯು ಕಾನೂನು ಮತ್ತು ಸುವ್ಯವಸ್ಥೆಯ ಗೌರವವನ್ನು ದುರ್ಬಲಗೊಳಿಸುತ್ತದೆ ಎಂದು ವಾದಿಸಿದರು. ಸಿವಿಲ್ ನಿರಾಕರಣೆಯು ಗುಂಪು ಹಿಂಸೆಗೆ ಕಾರಣವಾಗುತ್ತದೆ ಮತ್ತು ಸಾಂಸ್ಥಿಕ ಸುರಕ್ಷತೆಯಿಲ್ಲದ ರಾಜಕೀಯ ಚಳವಳಿಯು ವ್ಯವಸ್ಥೆಯೊಳಗೆ ಅರಾಜಕತೆಯನ್ನು ಸೃಷ್ಟಿಸುತ್ತದೆ ಎಂದು ಎಚ್ಚರಿಸಿದರು.
ಅಲ್ಲದೆ, ಪಂಜಾಬ್ನ ಮಾಜಿ ಲೆಫ್ಟಿನೆಂಟ್ ಗವರ್ನರ್ ಮೈಕೆಲ್ ಓ’ಡ್ವೈಯರ್ ಅವರನ್ನು ಜಲಿಯನ್ವಾಲಾ ಬಾಗ್ನ ಅತ್ಯಾಚಾರಗಳಿಗೆ ನೇರ ಜವಾಬ್ದಾರರೆಂದು ಬಹಿಂರಗವಾಗಿ ಆರೋಪಿಸಿದರು. ಆತ ಪಂಜಾಬ್ನ ಜನರನ್ನು ಭಯಭೀತಗೊಳಿಸಿದ್ದಾನೆ, ನಿರಪರಾಧಿಗಳ ಹತ್ಯೆಯನ್ನು ಸಮರ್ಥಿಸಿದ್ದಾನೆ ಮತ್ತು ಮಾರ್ಷಲ್ ಲಾ ಸಮಯದಲ್ಲಿ ಅತ್ಯಾಚಾರಗಳನ್ನು ಮಾಡಿದ್ದಾನೆ ಎಂದು ನೇರವಾಗಿಯೇ ಟೀಕಿಸಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಓ’ಡ್ವೈಯರ್ ಅವರು ನಾಯರ್ ಅವರ ಮೇಲೆ ಮಾನನಷ್ಟದ ಮೊಕದ್ದಮೆ ಹೂಡಿದರು. ಸಾಮ್ರಾಜ್ಯವು ಓ’ಡ್ವೈಯರ್ ಅನ್ನು ರಕ್ಷಿಸಲು ಮುಂದಾಯಿತು ಈ ಮೂಲಕ ತನ್ನ ಖ್ಯಾತಿಯನ್ನೂ ರಕ್ಷಿಸಲು ಮುಂದಾಯಿತು. ಓ’ಡ್ವೈಯರ್ ಮಾನನಷ್ಟ ಆರೋಪ ಹೊರಿಸಿದರು. ಆದರೆ ನಾಯರ್ ಅವರು ನಾನು ಜಲಿಯನ್ ವಾಲಾಭಾಗ್ ನರಮೇಧದ ಸತ್ಯವನ್ನಷ್ಟೇ ಹೇಳಿದ್ದೇನೆ ಎಂದು ಧೈರ್ಯದಿಂದಲೇ ವಾದಿಸಿದರು.
ಈ ಅವಧಿಯಲ್ಲಿ ಪಂಜಾಬ್ ಆಡಳಿತ, ಮಾರ್ಷಲ್ ಲಾ ಮತ್ತು ಹತ್ಯಾಕಾಂಡದ ವಿಚಾರಗಳು ಸಾರ್ವಜನಿಕ ಕ್ಷೇತ್ರಕ್ಕೆ ಬಂದವು. ಆದರೆ ಜ್ಯೂರಿಯು ಓ’ಡ್ವೈಯರ್ ಪರವಾಗಿ ತೀರ್ಪು ನೀಡಿತು. ನಾಯರ್ ಅವರಿಗೆ ಎರಡು ಆಯ್ಕೆಗಳಿದ್ದವು: ಕ್ಷಮೆಯಾಚಿಸುವುದು ಅಥವಾ 500 ಪೌಂಡ್ಗಳ ದಂಡ ಭರಿಸುವುದು.
ಆದರೆ ನಾಯರ್ ಅವರು 500 ಪೌಂಡ್ಗಳನ್ನು ಭರಿಸುವುದನ್ನು ಆಯ್ಕೆ ಮಾಡಿದರು. ಕ್ಷಮೆಯಾಚಿಸಿದರೆ ದಂಡ ಕಡಿಮೆಯಾಗುತ್ತಿತ್ತು, ವಿಷಯ ಮುಗಿಯುತ್ತಿತ್ತು ಮತ್ತು ಬ್ರಿಟಿಷರ ಸೌಕರ್ಯ ಸಿಗುತ್ತಿತ್ತು. ಆದರೆ ಅದು ಪಂಜಾಬ್ನ ದಮನವನ್ನು ವಿರೋಧಿಸಿದ ನಾಯರ್ ಅವರ ನಿಲುವನ್ನು ಸಂಪೂರ್ಣವಾಗಿ ತಪ್ಪು ಎಂದು ಸಾಬೀತುಪಡಿಸುತ್ತಿತ್ತು. ಆದ್ದರಿಂದ ಅವರು ಕ್ಷಮೆಯಾಚಿಸುವ ಬದಲು ದಂಡ ತೆರುವ ಆಯ್ಕೆಯನ್ನು ಆರಿಸಿದರು.
ಕಾನೂನುಬದ್ಧವಾಗಿ ಅವರು ಸೋತರು, ಆದರೆ ಕ್ಷಮಾಪಣೆ ಕೇಳದೆ ನೈತಿಕ ಗೆರೆಯನ್ನು ಕಾಪಾಡಿಕೊಂಡರು. ಸತ್ಯವನ್ನು ನಿರಾಕರಿಸಿ ಕ್ಷಮೆಯಾಚಿಸಿ ಬ್ರಿಟಿಷ್ ಸಾಮ್ರಾಜ್ಯವನ್ನು ತೃಪ್ತಿಪಡಿಸಲು ಅವರು ತಯಾರಿರಲಿಲ್ಲ. ಕ್ಷಮೆಯಾಚಿಸಿದ್ದರೆ ಅವರ ಖ್ಯಾತಿ ಧಕ್ಕೆಗೊಳಗಾಗುತ್ತಿತ್ತು ಮತ್ತು ಇಂಪೀರಿಯಲ್ ಕೋರ್ಟ್ನಲ್ಲಿ ಭಾರತೀಯ ನ್ಯಾಯಮೂರ್ತಿಯಾಗಿ ಅವರ ನಿಲುವು ಪ್ರಶ್ನಾರ್ಹವಾಗುತ್ತಿತ್ತು.
ಇದರ ಹೊರತಾಗಿಯೂ, ನಾಯರ್ ಅವರ ಕಾರ್ಯ ಇನ್ನಷ್ಟು ಪ್ರಬಲವಾಗಿತ್ತು. ಆ ಸಮಯದಲ್ಲಿ ಪಂಜಾಬ್ ಪ್ರದೇಶದಲ್ಲಿ ಸಾಮ್ರಾಜ್ಯದ ನೈತಿಕ ವೈಫಲ್ಯವನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ ಮೊದಲ ಭಾರತೀಯ ನ್ಯಾಯಮೂರ್ತಿ ಅವರು. ಕೋಪದಲ್ಲಿ ಕೂಗಲಿಲ್ಲ. ಹಿಂಸೆಯನ್ನು ಉತ್ತೇಜಿಸಲಿಲ್ಲ. ಪ್ರತೀಕಾರ ಬಯಸಲಿಲ್ಲ. ಕಾನೂನನ್ನು ಬಳಸಿದರು. ವಾದಗಳನ್ನು ಬಳಸಿದರು. ಅಂತಃಕರಣವನ್ನು ಬಳಸಿದರು. ವ್ಯವಸ್ಥೆಯು ತಮ್ಮ ವಿರುದ್ಧ ತೀರ್ಪು ನೀಡಿದಾಗಲೂ, ದಂಡವನ್ನು ಸ್ವೀಕರಿಸಿದರು ಆದರೆ ಕ್ಷಮೆಯಾಚಿಸುವ ಅವಮಾನವನ್ನು ಸ್ವೀಕರಿಸಲಿಲ್ಲ.
ಇತಿಹಾಸವು ಸಾಮಾನ್ಯವಾಗಿ ದಂಗೆಗಳನ್ನು ಆಚರಿಸುತ್ತದೆ. ಆದರೆ ಶಂಕರನ್ ನಾಯರ್ ಅವರ ದಂಗೆ ಬೇರೆಯಾಗಿತ್ತು. ಅದು ಗೌರವಯುತವಾಗಿತ್ತು, ಮಿತವಾಗಿತ್ತು, ಸಂಪೂರ್ಣವಾಗಿ ಸಮರ್ಪಣೆಯಿಲ್ಲದ್ದು. ಪ್ರತಿರೋಧವು ಸಮಗ್ರತೆಯ ರೂಪವನ್ನು ತಾಳಬಹುದು ಎಂದು ಅವರು ತೋರಿಸಿದರು. ಸತ್ಯಕ್ಕೆ ಧ್ವನಿಯ ಗಾತ್ರ ಬೇಕಿಲ್ಲ. ಕೆಲವೊಮ್ಮೆ ಕ್ಷಮೆಯಿಲ್ಲದೆ 500 ಪೌಂಡ್ ಭರಿಸುವುದು ಯಾವುದೇ ಘೋಷಣೆಗಿಂತ ಹೆಚ್ಚು ಧ್ವನಿಯಾಗಿ ಮೊಳಗಬಹುದು.
ಭಾರತದ ಸ್ವಾತಂತ್ರ್ಯ ಹೋರಾಟದ ಕಥೆಯಲ್ಲಿ ಅವರ ಹೆಸರು ಒಂದು ಜ್ಞಾಪನೆಯಾಗಿ ನಿಲ್ಲುತ್ತದೆ: ಅಧಿಕಾರವು ತೀರ್ಪುಗಳನ್ನು ಗೆಲ್ಲಬಹುದು, ಆದರೆ ಅಂತಃಕರಣವು ಇತಿಹಾಸವನ್ನು ಗೆಲ್ಲಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


