
ಬೆಂಗಳೂರು: ಮಹಿಳೆಯರಿಗೆ ಶೇ 33 ಮೀಸಲಾತಿ ನೀಡಬೇಕೆಂಬ ತೀರ್ಮಾನವು ಸುವರ್ಣಾಕ್ಷರದಲ್ಲಿ ಬರೆದಿಡತಕ್ಕ ಮಹತ್ವದ ಕ್ಷಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.
ನವದೆಹಲಿಯಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿ ಮತ್ತು ಇತರ ಪ್ರಮುಖರ ಉಪಸ್ಥಿತಿಯಲ್ಲಿ ಇಂದು ನಡೆದ ನಾರಿ ಶಕ್ತಿ ವಂದನ ಸಮ್ಮೇಳನದ ನೇರಪ್ರಸಾರವನ್ನು ವೀಕ್ಷಿಸಿದ ಬಳಿಕ ಅವರು ಮಾತನಾಡಿದರು. ಈ ದೇಶದ ನಾರಿಶಕ್ತಿ ಬಗ್ಗೆ ಅಚಲವಾದ ವಿಶ್ವಾಸವನ್ನು ನರೇಂದ್ರ ಮೋದಿಜಿ ಅವರು ಇಟ್ಟುಕೊಂಡಿದ್ದಾರೆ ಎಂದು ನುಡಿದರು. ಮೋದಿಜಿ ಅವರ ಇಚ್ಛಾಶಕ್ತಿಯ ಪರಿಣಾಮವಾಗಿ ರಾಷ್ಟ್ರ ನಿರ್ಮಾಣದಲ್ಲಿ ನಾರಿ ಶಕ್ತಿಯ ಪಾತ್ರ ಮಹತ್ವವಾದುದು ಎಂಬುದನ್ನು ಈ ದೇಶ ಮಾತ್ರವಲ್ಲದೇ ಜಗತ್ತಿಗೇ ಪ್ರಧಾನಿಯವರು ಸಾರಿ ಸಾರಿ ಹೇಳಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಭಾರತವು 2047ನೇ ಇಸವಿಗೆ ಅಭಿವೃದ್ಧಿಶೀಲ ರಾಷ್ಟ್ರವಾಗಿ ಪರಿವರ್ತನೆ ಹೊಂದಲು ಈ ದೇಶದ ಮಹಿಳೆಯರ ಪಾತ್ರ ಬಹಳ ಮಹತ್ವವಾದುದು. ಹಾಗಾಗಿಯೇ ಈ ದೇಶದ ಮಹಿಳೆಯರ ಹಲವು ದಶಕಗಳ ಕನಸು ಇವತ್ತು ನನಸಾಗುತ್ತಿದೆ ಎಂದು ನುಡಿದರು. ಮಹಿಳಾ ಮೀಸಲಾತಿಯ ಅನುಷ್ಠಾನದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಪಾತ್ರ ಇರುವುದನ್ನು ಪ್ರಧಾನಿಯವರು ಹೇಳಿದ್ದಾಗಿ ವಿವರಿಸಿದರು.
ಮಹಿಳೆಯರಿಗೆ ಶೇ 33 ಮೀಸಲಾತಿ ನೀಡುವ ತೀರ್ಮಾನವು ಮಹತ್ವದ್ದು ಎಂದರು. ಎಲ್ಲರಿಗೂ ಶುಭಹಾರೈಸಿದರು. ಪ್ರಧಾನಿಯವರ ದೃಢಸಂಕಲ್ಪದ ತೀರ್ಮಾನವನ್ನು ಸಂತೋಷದಿಂದ ಸ್ವಾಗತಿಸಬೇಕು ಎಂದು ತಿಳಿಸಿದರು.
ಕಾಂಗ್ರೆಸ್ಸಿನಿಂದ ನಾರಿಶಕ್ತಿಗೆ ಅಪಮಾನ- ವಿಜಯೇಂದ್ರ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ಸಿನವರು ಮಹಿಳಾ ಮೀಸಲಾತಿ ಒಂದು ರಾಜಕೀಯ ಗಿಮಿಕ್ ಎಂದಿದ್ದಾರೆ. ಈ ಹೇಳಿಕೆಯ ಮೂಲಕ ದೇಶದ ನಾರಿಶಕ್ತಿಗೆ ಅಪಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಪಕ್ಷದವರು ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಉಪ ಚುನಾವಣೆ- ಎರಡೂ ಕಡೆ ಗೆಲ್ಲುವ ಸಂಪೂರ್ಣ ವಿಶ್ವಾಸ ನಮಗಿದೆ
ಉಪ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ವಿಧಾನಸೌಧ ಮತ್ತು ಆಡಳಿತವನ್ನು ಸಂಪೂರ್ಣ ಮರೆತು ಬಾಗಲಕೋಟೆಯಲ್ಲಿ 8-9 ದಿನಗಳ ಕಾಲ ಇದ್ದರು. ದಾವಣಗೆರೆ ಬಗ್ಗೆ ಮುಖ್ಯಮಂತ್ರಿಗಳು ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ ಎಂದು ತಿಳಿಸಿದರು.
ಆದರೆ, ಬಾಗಲಕೋಟೆಯಲ್ಲಿ 8-9 ದಿನಗಳ ಕಾಲ ತಮ್ಮ ಪಟಾಲಂ ಜೊತೆ ಸೂಟ್ಕೇಸ್ ಜೊತೆ ಅಲ್ಲೇ ಇದ್ದುದನ್ನು ನೋಡಿದ್ದೀರಿ. ಮುಖ್ಯಮಂತ್ರಿಗಳು ಸಂಪೂರ್ಣ ಹತಾಶರಾಗಿದ್ದರು. ಬಾಗಲಕೋಟೆ, ದಾವಣಗೆರೆ ದಕ್ಷಿಣವನ್ನು ಕಾಂಗ್ರೆಸ್ ಪಕ್ಷದಿಂದ ಕಿತ್ತುಕೊಳ್ಳುವಲ್ಲಿ ಯಶಸ್ವಿ ಆಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎರಡೂ ಕಡೆ ಗೆಲ್ಲುವ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ತಿಳಿಸಿದರು.
ದಾವಣಗೆರೆ ಸೋಲಿನ ಮುನ್ಸೂಚನೆ ಲಭಿಸಿದ್ದರಿಂದ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರ ರಾಜೀನಾಮೆ ಪಡೆಯುವಂತೆ ಸೂಚನೆ ನೀಡಿದೆ. ಸಚಿವಸಂಪುಟದ ವಿಸ್ತರಣೆಗೆ ಆಗ್ರಹಿಸಿ 38ಕ್ಕೂ ಹೆಚ್ಚು ಶಾಸಕರು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಡಿ.ಕೆ.ಶಿವಕುಮಾರ್ ಬೆಂಬಲಿಗರು ಸಹ ದೆಹಲಿ ಯಾತ್ರೆ ಪ್ರಾರಂಭ ಮಾಡಿದ್ದನ್ನು ಗಮನಿಸಿದರೆ, ಉಪ ಚುನಾವಣೆ ಫಲಿತಾಂಶದ ನಂತರ ಆಡಳಿತ ಪಕ್ಷವಾದ ಕಾಂಗ್ರೆಸ್ ಪಕ್ಷದಲ್ಲಿ ಅಲ್ಲೋಲಕಲ್ಲೋಲ ಆಗಲಿದೆ. ಅದರ ಸ್ಪಷ್ಟ ಮುನ್ಸೂಚನೆ ಕಾಣುತ್ತಿದೆ ಎಂದು ತಿಳಿಸಿದರು.
ಚುನಾವಣಾ ಫಲಿತಾಂಶದ ಬಳಿಕ ಇವರಿಗೆ ಜ್ಞಾನೋದಯ ಆಗಲಿದೆ ಎಂದು ಪ್ರಶ್ನೆಗೆ ಉತ್ತರಿಸಿದರು. ಅಭಿವೃದ್ಧಿಶೂನ್ಯತೆ, ಓಲೈಕೆ ರಾಜಕಾರಣಕ್ಕೆ ಜನರು ಉತ್ತರ ಕೊಡಲಿದ್ದಾರೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಮತ್ತು ಇತರ ಪ್ರಮುಖರು, ಮಹಿಳಾ ಮೋರ್ಚಾ ಪದಾಧಿಕಾರಿಗಳು ಹಾಜರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


