
ಬೆಂಗಳೂರು: ಭ್ರಷ್ಟಾಚಾರ ನಿಯಂತ್ರಣ ಮತ್ತು ಪಾರದರ್ಶಕತೆ ತರಲು ಉದ್ಯೋಗ ಖಾತ್ರಿ ಯೋಜನೆಗೆ ಒಂದಿಷ್ಟು ಪರಿಷ್ಕರಣೆ ಮಾಡುವ ಕೆಲಸವನ್ನು ನರೇಂದ್ರ ಮೋದಿಯವರ ಸರಕಾರ ಮಾಡಿದೆ. ಇದರ ಕುರಿತು ಜನಸಾಮಾನ್ಯರಲ್ಲಿ ತಪ್ಪು ಗ್ರಹಿಕೆ ಬರುವಂತೆ ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಮಾಡುತ್ತಿರುವುದು ದುರದೃಷ್ಟಕರ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ರಾಜ್ಯ ಸರಕಾರವು ಬಜೆಟ್‍ನಡಿ ಕೇಂದ್ರಕ್ಕೆ ಪೂರಕವಾದ ನಿಮ್ಮ ಪಾಲಿನ ಅನುದಾನ ಕಾದಿರಿಸಿ ಯೋಜನೆಯನ್ನು ಯಶಸ್ವಿ ಮಾಡಿದರೆ ಜನಸಾಮಾನ್ಯರಿಗೆ ಅನುಕೂಲ ಆಗಲಿದೆ. ಕಾರ್ಮಿಕರಿಗೆ ಹೆಚ್ಚು ವೇತನ ಬೇಗನೆ ಸಿಗಲಿದೆ. ಅಪಪ್ರಚಾರ ಕೈಬಿಟ್ಟು ಕೇಂದ್ರ ಸರಕಾರದ ಜೊತೆ ಸಹಭಾಗಿತ್ವದಿಂದ ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ಉದ್ಯೋಗ ಖಾತ್ರಿ ಅಡಿಯಲ್ಲಿ ಪಶ್ಚಿಮ ಬಂಗಾಲ ಸೇರಿ 2-3 ರಾಜ್ಯಗಳಲ್ಲಿ 22,500 ಕೋಟಿ ರೂ. ಭ್ರಷ್ಟಾಚಾರ ನಡೆದಿತ್ತು. ರಸ್ತೆ ಮಾಡದೇ ರಸ್ತೆ ಮಾಡಿದ್ದಾಗಿ ತಿಳಿಸಲಾಗಿತ್ತು. ವಿವಿಧ ಕಾಮಗಾರಿ ವಿಚಾರದಲ್ಲೂ ಇದೇರೀತಿ ಮಾಡಿದ್ದರು ಎಂದು ವಿವರಿಸಿದರು. ನರೇಂದ್ರ ಮೋದಿಯವರ ಸರಕಾರದಲ್ಲಿ ಉದ್ಯೋಗ ಖಾತ್ರಿ ಕೂಲಿಯನ್ನು 370 ರೂ.ಗೆ ಏರಿಸಲಾಗಿದೆ. ಇನ್ನೂ ಹೆಚ್ಚಿಸಲು ಶಿಫಾರಸನ್ನು ನಮ್ಮ ಗ್ರಾಮೀಣಾಭಿವೃದ್ಧಿ ಸಮಿತಿ ಮಾಡಿದೆ. 15 ದಿನಗಳ ಬದಲಾಗಿ ಏಳೇ ದಿನದಲ್ಲಿ ಕೂಲಿ ನೀಡಬೇಕೆಂದು ಹೊಸ ಕಾಯ್ದೆಯಡಿ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು.
15ನೇ ಹಣಕಾಸು ಮೊತ್ತವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿಲ್ಲವೆಂದು ಅಪಪ್ರಚಾರ ಮಾಡುತ್ತಿದ್ದಾರೆ. 15ನೇ ಹಣಕಾಸಿನ ಒಟ್ಟು ಯೋಜನೆಯಡಿ ಪಂಚಾಯತ್‍ರಾಜ್ ಚುನಾವಣೆ ಮಾಡುವುದು ಕಡ್ಡಾಯ ಎಂದು ತಿಳಿಸಿದೆ. ಆದರೆ, ರಾಜ್ಯ ಸರಕಾರವು ಪಂಚಾಯತ್‍ರಾಜ್ ಚುನಾವಣೆ ಮಾಡದೇ ಆರು ವರ್ಷವಾಗಿದೆ. ಇದೇ ಕಾರಣಕ್ಕೆ ಹಣ ತಡೆಹಿಡಿಯಲಾಗಿದೆ ಎಂದು ಸ್ಪಷ್ಟಪಡಿಸಿದರು. ಸಕಾಲದಲ್ಲಿ ಚುನಾವಣೆ ನಡೆಸದೇ ಇರುವುದು 15ನೇ ಹಣಕಾಸು ಅನುದಾನ ಬಿಡುಗಡೆಗೆ ವಿಳಂಬಕ್ಕೆ ಕಾರಣವೇ ಹೊರತು ತಾರತಮ್ಯ ಆಗಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್ಸಿನವರದು ನಿರಾಧಾರ ಆರೋಪಗಳು ಎಂದು ಹೇಳಿದರು.
ನಾರಿ ಶಕ್ತಿ ಮೂಲಕ ಮಹಿಳಾ ಮೀಸಲಾತಿ ಜಾರಿಗೊಳುತ್ತಿದೆ. ಇದೊಂದು ಕ್ರಾಂತಿಕಾರಿ ಕಲ್ಪನೆ. ಮಹಿಳಾ ಮೀಸಲಾತಿ ಜಾರಿಗಾಗಿ ಮೋದಿಯವರ ಸರಕಾರ ವಿಶೇಷ ಸಂಸತ್ ಅಧಿವೇಶನ ಕರೆದಿದೆ. ಕಾಂಗ್ರೆಸ್ಸಿನವರು ಗೊಂದಲ ಮಾಡದೇ ಈ ನಿರ್ಧಾರವನ್ನು ಬೆಂಬಲಿಸಬೇಕಿದೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


