
ತಮಿಳು ಮಾಸವಾದ ಚಿತ್ತಿರೈ ಆರಂಭವಾದ ತಕ್ಷಣ, ಅಳಗರ್ ಬೆಟ್ಟಗಳ ಗಾಳಿಯು ಬಿಸಿಲಿಗೆ ಸುಡುವ ಮಣ್ಣಿನ ಪರಿಮಳ ಮತ್ತು ಮಲ್ಲಿಗೆಯ ಘಮದಿಂದ ತುಂಬಿರುತ್ತದೆ. ಆದರೆ ಶತಮಾನಗಳ ಹಿಂದೆ, ಈ ಸಮಯವು ಕೇವಲ ಆಚರಣೆಯ ಸಮಯವಾಗಿರಲಿಲ್ಲ. ಬದಲಾಗಿ ಅಲ್ಲೊಂದು ಧಾರ್ಮಿಕ ಉದ್ವಿಗ್ನತೆಯೂ ಇತ್ತು. ಮಧುರೈ ನಗರವು ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟಿತ್ತು. ಒಂದು ಬದಿಯಲ್ಲಿ ಮೀನಾಕ್ಷಿ ಅಮ್ಮನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ಶಿವ ಭಕ್ತರಿದ್ದರೆ, ಇನ್ನೊಂದು ಬದಿಯಲ್ಲಿ ಅಳಗರ್ ಕೋವಿಲ್ಗೆ ಸಂಬಂಧಿಸಿದ ನಂಬಿಕೆಯ ವೈಷ್ಣವರಿದ್ದರು.
ಒಂದೇ ನೆಲದಲ್ಲಿ ಎರಡು ವಿಭಿನ್ನ ಸಂಪ್ರದಾಯಗಳು. ಎಂದಿಗೂ ಪರಸ್ಪರ ಭೇಟಿಯಾಗದ ಒಂದೇ ಕಣಿವೆಯ ಎರಡು ನದಿಗಳಂತಾಗಿದ್ದವು. ನಂತರ, 17 ನೇ ಶತಮಾನದಲ್ಲಿ, ಒಬ್ಬ ಆಡಳಿತಗಾರ ಈ ಕಥೆಯ ಹಾದಿಯನ್ನು ಬದಲಾಯಿಸಿದ. ಅವನೇ – ತಿರುಮಲೈ ನಾಯಕ.
ಅವನು ಒಂದು ವಿಶಿಷ್ಟ ನಿರ್ಧಾರವನ್ನು ತೆಗೆದುಕೊಂಡು, ಶೈವರು ಮತ್ತು ವೈಷ್ಣವರು ಇಬ್ಬರೂ ಒಟ್ಟಾಗಿ ಹಬ್ಬವೊಂದನ್ನು ಆಚರಿಸುವಂತೆ ಮಾಡಿದ. ಹೀಗೆ ಮಧುರೈನ ಭವ್ಯವಾದ ಚಿತ್ತಿರೈ ಉತ್ಸವವು ಹುಟ್ಟಿಕೊಂಡಿತು. ಪ್ರತಿ ವರ್ಷ ಏಪ್ರಿಲ್ನಲ್ಲಿ ಬರುವ, ತಮಿಳು ಹೊಸ ವರ್ಷ ಪುತ್ತಾಂಡ್ವಿನೊಂದಿಗೆ ಈ ಕಥೆ ಪ್ರಾರಂಭವಾಗುತ್ತದೆ.
“ಸುಂದರ ಕಳ್ಳ” ಅಂದರೆ, ಭಕ್ತರ ಹೃದಯಗಳನ್ನು ಕದ್ದ ಸುಂದರ ದೇವರು ಎಂಬರ್ಥದಿಂದ ಕರೆಯಲ್ಪಡುವ ಭಗವಾನ್ ಕಳ್ಳಳಗರ್ ವಿಶೇಷ ಪ್ರಯಾಣವೊಂದಕ್ಕೆ ಸಿದ್ಧನಾಗುತ್ತಾನೆ. ಅವನ ಗುರಿ ಮಧುರೈ ತಲುಪುವುದು – ಅಲ್ಲಿ ಅವನ ಸಹೋದರಿ ಮೀನಾಕ್ಷಿ ಮತ್ತು ಸುಂದರೇಶ್ವರ್ ದೇವರ ವಿವಾಹ ನಡೆಯಲಿರುತ್ತದೆ.
ಇದುವೇ, ವೈಷ್ಣವ ದೇವತೆಯೊಬ್ಬನು ಶಿವನ ಭಾವನಾಗುವ ಮತ್ತು ಎರಡು ಧಾರ್ಮಿಕ ಸಂಪ್ರದಾಯಗಳು ಒಂದು ಕುಟುಂಬದ ಹಾಗೆ ಒಂದಾಗುವ ಕಥೆ. ಸಹೋದರಿಯ ಮದುವೆಗೆಂದು ಕಳ್ಳಳಗರ್ ಹೊರಟಾಗ, ವೈಗೈ ನದಿಯ ದಡದಲ್ಲಿ ಒಂದು ಅಸಾಧಾರಣ ಘಟನೆ ನಡೆಯುತ್ತದೆ. ಕಪ್ಪೆಯಂತೆ ಬದುಕಲು ಶಾಪಗ್ರಸ್ತನಾದ ಮಂಡೂಕ ಋಷಿ, ಅಲ್ಲಿ ಮೋಕ್ಷಕ್ಕಾಗಿ ಪ್ರಾರ್ಥಿಸುತ್ತಿರುತ್ತಾನೆ.
ಅವನ ತಪಸ್ಸಿನಿಂದ ಪ್ರೇರಿತನಾದ, ಕಳ್ಳಳಗರ್ ಅಲ್ಲಿ ಸ್ವಲ್ಪ ಹೊತ್ತು ನಿಲ್ಲುತ್ತಾನೆ ಮತ್ತು ಅವನಿಗೆ ಮೋಕ್ಷವನ್ನು ಕರುಣಿಸುತ್ತಾನೆ. ಈ ಕಾರಣದಿಂದ, ಅವನ ಪ್ರಯಾಣದಲ್ಲಿ “ವಿಳಂಬ”ವಾಗುತ್ತದೆ.
ಭಗವಂತ ಮಧುರೈ ತಲುಪುವ ಹೊತ್ತಿಗೆ…ಮೀನಾಕ್ಷಿ ತಿರುಕಲ್ಯಾಣ ಅಂದರೆ, ಮೀನಾಕ್ಷಿ ದೇವಿಯ ದೈವಿಕ ವಿವಾಹ – ಅದಾಗಲೇ ಶಾಸ್ತ್ರೋಕ್ತವಾಗಿ ಮುಗಿದಿರುತ್ತದೆ. ಆಗ, ಮನನೊಂದ ಕಳ್ಳಳಗರ್ ನಗರವನ್ನು ಪ್ರವೇಶಿಸಲು ನಿರಾಕರಿಸುತ್ತಾನೆ. ಅಳಗರ್ ವೈಘೈ ಎಳುಂದೊರುಳಲ್ ಎಂಬ ಉತ್ಸವದ ಅತ್ಯಂತ ರೋಮಾಂಚಕ ಕ್ಷಣ ನಿಖರವಾಗಿ ಇಲ್ಲಿಯೇ ಬರುತ್ತದೆ.
ಅವನ ಅಸಮಾಧಾನವನ್ನು ಶಮನಗೊಳಿಸಲು, ದೇವಿ ಮೀನಾಕ್ಷಿ ಮತ್ತು ಸುಂದರೇಶ್ವರ ದೇವರು ಸ್ವತಃ ನದಿಯ ದಡಕ್ಕೆ ಬರುತ್ತಾರೆ. ಅವರು ಅವನನ್ನು, ತಮ್ಮದೇ ಕುಟುಂಬದ ದೂರವಾದ ಸದಸ್ಯನ ಮನವೊಲಿಸುವಂತೆ ಒಲಿಸಿಕೊಳ್ಳುತ್ತಾರೆ. ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ… ಮತ್ತು ಆ ಕ್ಷಣದಲ್ಲಿಯೇ, ಶೈವ ಮತ್ತು ವೈಷ್ಣವ ಸಂಪ್ರದಾಯಗಳ ನಡುವಿನ ಅಂತರವು ಮಾಯವಾಗುತ್ತದೆ.
ಮಧುರೈಯಲ್ಲಿ ಪ್ರತಿ ವರ್ಷವೂ ಈ ದಿವ್ಯ ವಿವಾಹದ ದೃಶ್ಯಗಳನ್ನು ಮರುಸೃಷ್ಟಿಸಲಾಗುತ್ತದೆ. ಇಂದು, ದಕ್ಷಿಣದ ಕುಂಭಮೇಳದಂತಿರುವ ಈ ಹಬ್ಬಕ್ಕೆ, ಒಂದೇ ದಿನದಲ್ಲಿ ಒಂದು ಮಿಲಿಯನ್ಗಿಂತಲೂ ಹೆಚ್ಚು ಭಕ್ತರು ಆಗಮಿಸುತ್ತಾರೆ.
ಒಂದು ಕಾಲದಲ್ಲಿ ಶೈವರು ಮತ್ತು ವೈಷ್ಣವರು ಬೇರೆ ಬೇರೆಯಾಗಿ ನಿಂತಿದ್ದ, ಅದೇ ಮಧುರೈನಲ್ಲಿ ನಡೆಯುವ ಈ ಹಬ್ಬವು ಒಂದು ಉತ್ತಮ ಸಂದೇಶವನ್ನು ಸಾರುತ್ತಿದೆ, ಅದೇನೆಂದರೆ: ‘ದೇವತೆಗಳು ಒಂದು ಕುಟುಂಬವಾಗಲು ಸಾಧ್ಯವಾದರೆ, ಮನುಷ್ಯರಿಗೆ ಯಾಕೆ ಸಾಧ್ಯವಿಲ್ಲ?’ -ಎಂದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


