
2002ರ ಏಪ್ರಿಲ್ನಲ್ಲಿ, ಪ್ರಸಿದ್ಧ ಅಮೆರಿಕನ್ ವೃತ್ತಪತ್ರಿಕೆ ದಿ ಬೋಸ್ಟನ್ ಗ್ಲೋಬ್ನ ಚಿಕ್ಕ ಆದರೆ ಧೈರ್ಯಶಾಲಿ ಪತ್ರಕರ್ತರ ತಂಡವೊಂದು ಮಹಾನ್ ಸತ್ಯವೊಂದನ್ನು ಬಹಿರಂಗಪಡಿಸಿತು. ಇದು ಕೇವಲ ಯುನೈಟೆಡ್ ಸ್ಟೇಟ್ಸ್ ಅನ್ನು ಮಾತ್ರವಲ್ಲ, ಇಡೀ ವಿಶ್ವವನ್ನೇ ನಡುಗಿಸಿತು. ಆ ತಂಡವನ್ನು ಸ್ಪಾಟ್ಲೈಟ್ ಟೀಮ್ ಎಂದು ಕರೆಯಲಾಗುತ್ತದೆ. ಈ ತಂಡ ಪತ್ರಿಕೆಯ ವಿಶೇಷ ತನಿಖಾ ಘಟಕವಾಗಿತ್ತು, ದೀರ್ಘಕಾಲದ ಸಂಶೋಧನೆ, ದಾಖಲೆಗಳ ವಿಶ್ಲೇಷಣೆ ಮತ್ತು ಸಂದರ್ಶನಗಳ ಮೂಲಕ ಸಾಮಾಜಿಕ ಸತ್ಯಗಳನ್ನು ಬಹಿರಂಗಪಡಿಸುವುದಕ್ಕೆ ಹೆಸರುವಾಸಿಯಾಗಿತ್ತು.
ಈ ಬಾರಿ ಅವರ ತನಿಖೆಯ ಕೇಂದ್ರಬಿಂದುವಾಗಿದ್ದು ಕ್ಯಾಥೊಲಿಕ್ ಚರ್ಚ್ನ ಕೆಲವು ಪಾದ್ರಿಗಳ ವಿರುದ್ಧ ಕೇಳಿ ಬಂದಿದ್ದ ಮಕ್ಕಳ ಲೈಂಗಿಕ ದೌರ್ಜನ್ಯದ ಆರೋಪಗಳು. ಇಂತಹ ಆರೋಪಗಳು ಹಲವು ವರ್ಷಗಳಿಂದ ವಿವಿಧ ರೂಪಗಳಲ್ಲಿ ಮುಂದೆ ಬಂದಿದ್ದರೂ, ಅವುಗಳನ್ನು ಸಾಮಾನ್ಯವಾಗಿ ಕಡೆಗಣಿಸಲಾಗುತ್ತಿತ್ತು ಅಥವಾ ಉದ್ದೇಶಪೂರ್ವಕವಾಗಿ ದಮನ ಮಾಡಲಾಗುತ್ತಿತ್ತು. ಸಾಮಾನ್ಯ ಜನರು ಚರ್ಚ್ನ್ನು ನೈತಿಕ ಮತ್ತು ಪವಿತ್ರ ಸಂಸ್ಥೆಯಾಗಿ ನೋಡುತ್ತಿದ್ದರು. ಆದ್ದರಿಂದ ಅನೇಕ ಆರೋಪಿಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಲಾಗುತ್ತಿರಲಿಲ್ಲ.
ಆದರೆ ಧೈರ್ಯ, ಎಚ್ಚರಿಕೆ ಮತ್ತು ಪುರಾವೆ ಆಧಾರಿತ ಪತ್ರಿಕೋದ್ಯಮದ ಮೂಲಕ ಸ್ಪಾಟ್ಲೈಟ್ ಟೀಮ್ ಈ ಘಟನೆ ನಿರ್ಲಕ್ಷ್ಯ ಮಾಡುವಂತಹ ಘಟನೆಗಳಲ್ಲ ಎಂದು ತೋರಿಸಿತು — ಇಂತಹ ಘಟನೆಗಳು ಆಳವಾದ ಸಾಂಸ್ಥಿಕ ಸಮಸ್ಯೆಯ ಭಾಗವಾಗಿತ್ತು. ಸ್ಪಾಟ್ಲೈಟ್ ಸರಣಿಯು ವ್ಯಾಪಕ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಬಹಿರಂಗಪಡಿಸಿತಲ್ಲದೆ, ಚರ್ಚ್ ಅಧಿಕಾರಿಗಳು ಆರೋಪಗಳನ್ನು ಮುಚ್ಚಿಹಾಕಿರುವುದನ್ನೂ ತೋರಿಸಿತು.
ಬೋಸ್ಟನ್ ಚರ್ಚ್ ಹಗರಣದ ಇತಿಹಾಸದಲ್ಲಿ ಕೆಲವು ಹೆಸರುಗಳು ವಿಶೇಷವಾಗಿ ನೆನಪಿಗೆ ಬರುತ್ತವೆ. ಅವುಗಳಲ್ಲಿ ಮರಿಯೆಟ್ಟಾ ಡಸ್ಸೌರ್ಡ್ (Maryetta Dussourd) — ಒಬ್ಬ ಸಾಮಾನ್ಯ ತಾಯಿ, ತನ್ನ ಕುಟುಂಬವನ್ನು ರಕ್ಷಿಸಲು ಶಕ್ತಿಶಾಲಿ ಸಂಸ್ಥೆಯ ವಿರುದ್ಧ ನಿಲ್ಲುವ ಧೈರ್ಯ ತೋರಿದಳು. ಅವಳ ಕಥೆ ಕೇವಲ ವೈಯಕ್ತಿಕ ನೋವಿನದಲ್ಲ; ಇದು ಸತ್ಯ, ನ್ಯಾಯ ಮತ್ತು ಸಾಮಾಜಿಕ ಜವಾಬ್ದಾರಿಯ ಹೋರಾಟದ ಕಥೆಯಾಗಿದೆ.
ಮರಿಯೆಟ್ಟಾ ಡಸ್ಸೌರ್ಡ್ ಹೋರಾಟ
1970ರ ದಶಕದ ಕೊನೆಯಲ್ಲಿ, ತನ್ನ ನಾಲ್ಕು ಗಂಡುಮಕ್ಕಳು ಮತ್ತು ಒಬ್ಬ ಅಳಿಯನ ಮಗನನ್ನು ಕ್ಯಾಥೊಲಿಕ್ ಪಾದ್ರಿಯೊಬ್ಬರು ಲೈಂಗಿಕವಾಗಿ ದೌರ್ಜನ್ಯ ಮಾಡಿದ್ದಾರೆ ಎಂದು ತಿಳಿದಾಗ ಮರಿಯೆಟ್ಟಾ ಡಸ್ಸೌರ್ಡ್ ಅವರ ಜೀವನವೇ ತಲೆಕೆಳಗಾಯಿತು. ಈ ಆರೋಪದ ಕೇಂದ್ರದಲ್ಲಿ ಮಾಜಿ ಪಾದ್ರಿ ಜಾನ್ ಗಿಯೋಗನ್ (John Geoghan) ಇದ್ದರು. ಅವರು ಬೋಸ್ಟನ್ ಪ್ರದೇಶದ ಹಲವು ಪ್ರಾರ್ಥನಾ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೊದಲು ಡಸ್ಸೌರ್ಡ್ ಅರಿಗೆ ಇದನ್ನು ನಂಬಲು ಕಷ್ಟವಾಯಿತು — ಧಾರ್ಮಿಕ ನಾಯಕನೊಬ್ಬರು ಇಂತಹ ಅಪರಾಧ ಮಾಡಬಹುದೆಂದು ಅವರು ಊಹೆಯೂ ಮಾಡಿರಲಿಲ್ಲ. ಆದರೆ ಮಕ್ಕಳ ನಡವಳಿಕೆಯಲ್ಲಿನ ಬದಲಾವಣೆಗಳು, ಅವರ ಹೆಚ್ಚುತ್ತಿರುವ ಮಾನಸಿಕ ಭಯ ಮತ್ತು ಘಟನೆಗಳು ಕ್ರಮೇಣ ಬಹಿರಂಗವಾದಾಗ ಸತ್ಯ ಬೆಳಕಿಗೆ ಬಂದಿತು. ತಾಯಿಯಾಗಿ, ಮೌನವಾಗಿರುವುದು ದೌರ್ಜನ್ಯವನ್ನು ಮುಂದುವರಿಸಲು ಅವಕಾಶ ನೀಡುತ್ತದೆ ಎಂದು ಅವಳು ಅರಿತಳು.
ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಔಪಚಾರಿಕ ದೂರುಗಳನ್ನು ಸಲ್ಲಿಸಲು ಡಸ್ಸೌರ್ಡ್ ಪ್ರಯತ್ನಿಸಿದಳು. ತನ್ನ ಮಕ್ಕಳು ಗಂಭೀರ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು ಚರ್ಚ್ ಅಧಿಕಾರಿಗಳಿಗೆ ಪದೇ ಪದೇ ತಿಳಿಸಿದಳು. ಆದರೆ ಆರೋಪಗಳನ್ನು ಗಂಭೀರವಾಗಿ ಪರಿಗಣಿಸುವ ಬದಲು, ಮೌನವಾಗಿರುವಂತೆ ಸಲಹೆ ನೀಡಲಾಯಿತು. ಕೆಲವು ಚರ್ಚ್ ಪ್ರತಿನಿಧಿಗಳು, ವಿಷಯ ಸಾರ್ವಜನಿಕವಾದರೆ ಕುಟುಂಬಕ್ಕೆ ಸಾಮಾಜಿಕ ಅವಮಾನ ಎದುರಾಗಬಹುದು ಎಂದು ಹೇಳಿದರು. ಕೆಲವೊಮ್ಮೆ “ಚರ್ಚ್ ತನ್ನದೇ ಆದ ರೀತಿಯಲ್ಲಿ ಈ ವಿಷಯವನ್ನು ನಿಭಾಯಿಸಲಿದೆ” ಎಂದು ಆಕೆಗೆ ಹೇಳಲಾಯಿತು. ಇಂತಹ ಒತ್ತಡಗಳು ಅನೇಕ ಕುಟುಂಬಗಳನ್ನು ಮೌನಕ್ಕೆ ಒಳಪಡಿಸಿದವು. ಆದರೆ ಮರಿಯೆಟ್ಟಾ ಡಸ್ಸೌರ್ಡ್ ಒಪ್ಪಿಕೊಳ್ಳಲಿಲ್ಲ.
ಪಾದ್ರಿಯನ್ನು ಹೇಗೆ ರಕ್ಷಿಸಲಾಯಿತು
ತದನಂತರದ ತನಿಖೆಗಳು ಆಳವಾದ ದುಃಖಕರ ಚಿತ್ರವನ್ನು ಬಹಿರಂಗಪಡಿಸಿದವು. ಆರೋಪಗಳು ಮುಂದೆ ಬಂದ ನಂತರವೂ ಪಾದ್ರಿಯನ್ನು ತಕ್ಷಣ ಬರ್ಖಾಸ್ತು ಮಾಡಲಿಲ್ಲ. ಬದಲಿಗೆ ಒಂದು ಕೇಂದ್ರದಿಂದ ಮತ್ತೊಂದಕ್ಕೆ ವರ್ಗಾಯಿಸಲಾಯಿತು. ಇದರಿಂದ ಹೊಸ ಮಕ್ಕಳು ಅವರ ಸಂಪರ್ಕಕ್ಕೆ ಬಂದರು ಮತ್ತು ದೌರ್ಜನ್ಯದ ಅಪಾಯ ಹೆಚ್ಚಾಯಿತು. ಅನೇಕ ವಿಮರ್ಶಕರು ಈ ಅಭ್ಯಾಸವನ್ನು “ಸಮಸ್ಯೆಯನ್ನು ಮರೆಮಾಚುವ ಕೃತ್ಯ” ಎಂದು ವಿವರಿಸಿದರು. ದೂರುಗಳ ದಾಖಲೆಗಳನ್ನು ಮುಚ್ಚಿಡುವುದು, ವಿಷಯಗಳನ್ನು ಆಂತರಿಕವಾಗಿ ಪರಿಹರಿಸುವ ಪ್ರಯತ್ನಗಳು ಮತ್ತು ಕಾನೂನು ಕ್ರಮಗಳನ್ನು ತಪ್ಪಿಸುವುದು — ಇವೆಲ್ಲವೂ ದೌರ್ಜನ್ಯ ದೀರ್ಘಕಾಲ ಮುಂದುವರಿಯಲು ಕಾರಣವಾದವು. ಡಸ್ಸೌರ್ಡ್ ಇದು ತನ್ನ ಕುಟುಂಬದ ದುರಂತ ಮಾತ್ರವಲ್ಲ, ದೊಡ್ಡ ಸಾಂಸ್ಥಿಕ ವೈಫಲ್ಯ ಎಂದು ಅರಿತಳು.
ನ್ಯಾಯಾಲಯಕ್ಕೆ ಹೋಗುವ ಧೈರ್ಯದ ನಿರ್ಧಾರ
ಕೊನೆಗೆ ಅವಳು ಕಾನೂನು ಹೋರಾಟ ಆರಂಭಿಸಿ ಪಾದ್ರಿಯ ವಿರುದ್ಧ ಮೊಕದ್ದಮೆ ಹೂಡಿದಳು. ಈ ಹೆಜ್ಜೆ ಅತ್ಯಂತ ಕಷ್ಟಕರವಾಗಿತ್ತು. ಆ ಸಮಯದಲ್ಲಿ ಚರ್ಚ್ ಸಮಾಜದಲ್ಲಿ ಬಹಳ ಪ್ರಭಾವಶಾಲಿ ಸಂಸ್ಥೆಯಾಗಿತ್ತು ಮತ್ತು ಆರೋಪಗಳನ್ನು ಸಂಶಯದ ದೃಷ್ಟಿಯಿಂದ ನೋಡಲಾಗುತ್ತಿತ್ತು. ಆದಾಗ್ಯೂ, ಸತ್ಯ ಬಹಿರಂಗವಾಗದಿದ್ದರೆ ಹೆಚ್ಚಿನ ಕುಟುಂಬಗಳು ನೋವು ಅನುಭವಿಸುತ್ತವೆ ಎಂದು ಅವಳು ನಂಬಿದಳು. ಅವಳ ಮೊಕದ್ದಮೆಗಳು ನಂತರದ ದೊಡ್ಡ ತನಿಖೆಗೆ ಪ್ರಾಥಮಿಕ ಆಧಾರವಾದವು.
ಪತ್ರಕರ್ತರ ತನಿಖೆ ಮತ್ತು ಸತ್ಯದ ಬಹಿರಂಗ
ಈ ಅವಧಿಯಲ್ಲಿ ದಿ ಬೋಸ್ಟನ್ ಗ್ಲೋಬ್ನ ಸ್ಪಾಟ್ಲೈಟ್ ಟೀಮ್ ವಿಷಯದ ಆಳವಾದ ತನಿಖೆಯನ್ನು ಆರಂಭಿಸಿತು. ನ್ಯಾಯಾಲಯದ ದಾಖಲೆಗಳನ್ನು ಪರಿಶೀಲಿಸಿ, ದೌರ್ಜನ್ಯಕ್ಕೊಳಗಾದ ಕುಟುಂಬಗಳು ಮತ್ತು ವಕೀಲರನ್ನು ಸಂದರ್ಶನ ಮಾಡಿತು, ಇದೇ ರೀತಿಯ ಆರೋಪಗಳು ಹಲವು ವರ್ಷಗಳಿಂದ ಕೇಳಿ ಬಂದಿದ್ದವು ಎಂಬುದನ್ನು ಪತ್ರಕರ್ತರ ತಂಡ ಕಂಡುಹಿಡಿಯಿತು. ಡಸ್ಸೌರ್ಡ್ರಂತಹ ತಾಯಂದಿರ ಧೈರ್ಯಶಾಲಿ ಸಾಕ್ಷ್ಯಗಳು ತನಿಖೆಯನ್ನು ಬಲಪಡಿಸಿದವು. ಕ್ರಮೇಣ ಇವು ಲಘು ಪ್ರಕರಣಗಳಲ್ಲ ಎಂದು ಸ್ಪಷ್ಟವಾಯಿತು — ಇದು ವ್ಯಾಪಕ ವ್ಯವಸ್ಥಿತ ಸಮಸ್ಯೆಯಾಗಿತ್ತು.
ಟೀಕೆ ಮತ್ತು ಸಾರ್ವಜನಿಕ ಆಕ್ರೋಶ
ತನಿಖೆ ಪ್ರಕಟವಾದ ನಂತರ ಟೀಕೆಗಳು ವಿಶ್ವಾದ್ಯಂತ ಹರಡಿದವು. ಚರ್ಚ್ಗೆ ಆರೋಪಗಳ ಬಗ್ಗೆ ತಿಳಿದಿದ್ದರೂ ತ್ವರಿತ ಕ್ರಮ ಏಕೆ ತೆಗೆದುಕೊಳ್ಳಲಿಲ್ಲ? ಆರೋಪಿತ ಪಾದ್ರಿಗಳನ್ನು ಬರ್ಖಾಸ್ತು ಮಾಡದೆ ಏಕೆ ವರ್ಗಾಯಿಸಲಾಯಿತು? ಕುಟುಂಬಗಳನ್ನು ಮೌನವಾಗಿರಲು ಏಕೆ ಒತ್ತಾಯಿಸಲಾಯಿತು? ಇಂತಹ ಪ್ರಶ್ನೆಗಳು ಉದ್ಭವಿಸಿದವು. ಹಗರಣವು ಕ್ಯಾಥೊಲಿಕ್ ಚರ್ಚ್ನೊಳಗಿನ ಜವಾಬ್ದಾರಿಯ ಬಗ್ಗೆ ದೊಡ್ಡ ಚರ್ಚೆ ಹುಟ್ಟು ಹಾಕಿತು. ಸಾರ್ವಜನಿಕ ಒತ್ತಡ ಹೆಚ್ಚಾಯಿತು ಮತ್ತು ಕೊನೆಗೆ ಚರ್ಚ್ ಮಕ್ಕಳ ರಕ್ಷಣಾ ನೀತಿಗಳನ್ನು ಸುಧಾರಿಸಲು ಒತ್ತಾಯಿಸಿತು.
ಮರಿಯೆಟ್ಟಾ ಡಸ್ಸೌರ್ಡ್ರ ಕಥೆ ದೌರ್ಜನ್ಯವು ಬಾಧಿತರ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ ಇಡೀ ಕುಟುಂಬದ ಜೀವನವನ್ನು ಬದಲಾಯಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ. ತಾಯಿಯಾಗಿ ಅವಳು ಸಾಮಾಜಿಕ ಒತ್ತಡ ಮತ್ತು ಸಂಶಯವನ್ನು ಎದುರಿಸಬೇಕಾಯಿತು. ಜೊತೆಗೆ ಮಕ್ಕಳ ಆಳವಾದ ಮಾನಸಿಕ ಗಾಯಗಳನ್ನು ಗುಣಪಡಿಸಲು ಹೋರಾಡಬೇಕಾಯಿತು. ಅವಳ ಧೈರ್ಯವು ಇತರ ಅನೇಕ ಕುಟುಂಬಗಳನ್ನು ಮುಂದೆ ಬರಲು ಪ್ರೇರೇಪಿಸಿತು. ಮೌನದ ಸಂಸ್ಕೃತಿ ಒಡೆಯಲಾರಂಭಿಸಿತು ಮತ್ತು ಸತ್ಯ ಮಾತನಾಡುವ ಮಾರ್ಗ ತೆರೆಯಿತು.
ಮರಿಯೆಟ್ಟಾ ಡಸ್ಸೌರ್ಡ್ ಸಾಮಾನ್ಯ ವ್ಯಕ್ತಿಯೂ ಗಾಢ ಬದಲಾವಣೆಯನ್ನು ಆರಂಭಿಸಬಹುದು ಎಂದು ಸಾಬೀತುಪಡಿಸಿದರು. ಶಕ್ತಿಶಾಲಿ ಸಂಸ್ಥೆಗಳ ವಿರುದ್ಧ ನಿಲ್ಲುವುದು ಎಂದಿಗೂ ಸುಲಭವಲ್ಲ. ಆದರೆ ಅಂತಹ ಧೈರ್ಯವು ನ್ಯಾಯ ಪಡೆಯಲು ಅಗತ್ಯವಾಗಿದೆ. ಅವಳ ಹೋರಾಟ ಕೇವಲ ವೈಯಕ್ತಿಕ ನ್ಯಾಯದ್ದಲ್ಲ; ಇದು ವಿಶ್ವಕ್ಕೆ ಶಾಶ್ವತ ಪಾಠವನ್ನು ಕಲಿಸಿತು — ಯಾವುದೇ ಸಂಸ್ಥೆ ಕಾನೂನಿಗಿಂತ ಮೇಲಲ್ಲ ಮತ್ತು ಸತ್ಯವನ್ನು ಎಂದಿಗೂ ದಮನ ಮಾಡಲಾಗದು ಎಂಬುದನ್ನು ತೋರಿಸಿಕೊಟ್ಟಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


