
ಆರೆಸ್ಸೆಸ್ ಅರ್ಥಾತ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ನಮಗೆಲ್ಲಾ ಒಂಚೂರಾದರೂ ತಿಳಿದೇ ಇರ್ತದೆ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಎಂಬ ಧ್ಯೇಯವನ್ನಿಟ್ಟುಕೊಂಡು, ಈ ರಾಷ್ಟ್ರದ ಪರಮವೈಭವದ ಗುರಿಯನ್ನು ಇಟ್ಟುಕೊಂಡು 1925ರ ವಿಜಯದಶಮಿಯ ದಿನ ನಾಗಪುರದ ಮೋಹಿತವಾಡದಲ್ಲಿ ಪ್ರಾರಂಭವಾದ ಹಿಂದೂ ಸಾಂಸ್ಕೃತಿಕ ಸಂಘಟನೆಯೇ ಆರೆಸ್ಸೆಸ್.
ಇವತ್ತು ಆರೆಸ್ಸೆಸ್ ನೂರರ ಹೊಸ್ತಿಲಿಗೆ ಬಂದು ನಿಂತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಅದರಲ್ಲೂ ಸ್ವಾತಂತ್ರ್ಯ ಹೋರಾಟದ ಪರ್ವಕಾಲಘಟ್ಟದಲ್ಲಿ ಸ್ಥಾಪನೆಯಾದ ಸಂಘವನ್ನು ಡಾಕ್ಟರ್ ಹೆಡಗೇವಾರ್ ಅವರು ದಿಢೀರ್ ಎಂದು ಸ್ಥಾಪನೆ ಮಾಡಿದ್ರಾ.? ಸಂಘ ಎಂತಹ ಸನ್ನಿವೇಶದಲ್ಲಿ ಪ್ರಾರಂಭವಾಯಿತು? ಅಂದಿನ ಪರಿಸ್ಥಿತಿ ಹೇಗಿತ್ತು? ಎಂತೆಂತಹ ಸಂದರ್ಭಗಳ ಕಾರಣದಿಂದ ಸಂಘವನ್ನು ಹೀಗೆಯೇ ಪ್ರಾರಂಭ ಮಾಡಬೇಕು ಎಂದು ಹೆಡಗೇವಾರ್ ಅವರಿಗೆ ಅನ್ನಿಸಿತು? ಸಂಘದ ಆರಂಭಕ್ಕೂ ಮುನ್ನ ಹೆಡಗೇವಾರ್ ಅವರು ಯಾವ ಯಾವ ಸಂಘಟನೆಯಲ್ಲಿ ಇದ್ದರು? ಯಾವ ಯಾವ ಪ್ರಯೋಗಗಳನ್ನು ಮಾಡಿದ್ದರು. ಈ ಕುರಿತು ಒಂದು ಸಣ್ಣ ವಿಶ್ಲೇಷಣೆ ನಿಮ್ಮ ಮುಂದೆ..
1889ರಲ್ಲಿ ಯುಗಾದಿಯ ದಿನದಂದು ಜನಿಸಿದ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ಹುಟ್ಟಿನಿಂದ ದೇಶಭಕ್ತರು. ವಿಕ್ಟೋರಿಯಾ ರಾಣಿಯ 60ನೇ ವರ್ಷದ ಪಟ್ಟಾಭಿಷೇಕದ ಸಂದರ್ಭದಲ್ಲಿ ಬ್ರಿಟಿಷ್ ಆಡಳಿತವಿದ್ದ ಶಾಲೆಗಳಲ್ಲಿ ಸಿಹಿತಿಂಡಿ ವಿತರಣೆ ನಡೆಯುತ್ತಿದ್ದ ಸಮಯವದು. ಬಾಲಕ ಹೆಡಗೇವಾರ್ಗೆ ಸಿಹಿಯನ್ನು ಕೊಟ್ಟಾಗ ಅದನ್ನು ಸ್ವೀಕರಿಸದೆ “ಗುಲಾಮಿ ದೇಶವೆಂದು ಬಗೆದು ನಮ್ಮ ದೇಶಕ್ಕೆ ರಾಜ್ಯಭಾರ ಮಾಡಲು ಬಂದಿರುವ ವಿದೇಶಿಯರು ಕೊಟ್ಟ ಸಿಹಿ ನನಗೆ ತ್ಯಾಜ್ಯಕ್ಕೆ ಸಮ” ಎಂದು ಆ ಸಿಹಿಯನ್ನು ಬಿಸಾಡಿದ್ದ. ಆ ವಯಸ್ಸಿನಲ್ಲಿಯೇ ಹೆಡಗೇವಾರ್ ಅವರಿಗೆ ರಾಷ್ಟ್ರಭಕ್ತಿಯ ಭಾವ ಬಂದಿತ್ತು. ಯೌವನದ ಸಮಯದಲ್ಲಿ ಕ್ರಾಂತಿಕಾರಿ ಸಂಘಟನೆಗಳಲ್ಲಿ ಕೆಲಸ ಮಾಡಿದರು. ನಾಗಪುರ ಮತ್ತು ವಾರ್ಧಾದಲ್ಲಿ ತಾವೇ 20-30 ಯುವಕರನ್ನು ತರಬೇತುಗೊಳಿಸಿ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಚಟುವಟಿಕೆಗಳಿಗೆ ಕಳುಹಿಸಿಕೊಟ್ಟರು. ತಿಲಕರ ಜೊತೆಗೂ ಕೆಲಸ ಮಾಡಿದರು. ಆಗಿನ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಜೊತೆಗೂ ಕೆಲಸ ಮಾಡಿದರು. ಗಾಂಧೀಜಿಯವರ ಜೊತೆಗೂ ಕೆಲಸ ಮಾಡಿದ್ದರು. ನಾಗಪುರದ ಕಾಂಗ್ರೆಸ್ ಅಧಿವೇಶನದ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗೆ ಎಲ್ಲಾ ಸಂಘಟನೆಗಳ ಜೊತೆ ಕೆಲಸ ಮಾಡಿಕೊಂಡು ಅವರ ಮನೋಭಾವವನ್ನು ಅರಿತುಕೊಂಡರು.
ಬ್ರಿಟಿಷರ ವಿರುದ್ಧ ಗಾಂಧೀಜಿಯವರು ಪ್ರಾರಂಭಿಸಿದ್ದ ಅಸಹಕಾರ ಚಳವಳಿ ನಡೆಸುವುದಕ್ಕಾಗಿ ನಿಮ್ಮ ಒಂದು ವರ್ಷ ಸಮಯವನ್ನು ದೇಶಕ್ಕಾಗಿ ಕೊಡಿ ಎಂದು ಗಾಂಧೀಜಿ ದೇಶವಾಸಿಗಳಿಗೆ ಕರೆ ಕೊಟ್ಟರು. ದೇಶಕ್ಕಾಗಿ ಒಂದು ವರ್ಷ ಕೊಡಿ ಎಂಬುವುದು ಸರಿಯೇ ಎಂದು ಡಾಕ್ಟರ್ಜೀಯವರಿಗೆ ಅನ್ನಿಸಿತು. ಒಂದು ವರ್ಷ ಜೈಲಿಗೆ ಹೋದರೆ ಸ್ವಾತಂತ್ರ್ಯ ಬರುತ್ತದೆ ಎಂಬ ಸಣ್ಣ ಉದ್ದೇಶವಾಗಲಿ ಅಥವಾ ದೇಶಭಕ್ತಿಯು ಇನ್ನಾರದೋ ವಿರುದ್ಧದ ಪ್ರತಿಕ್ರಿಯಾತ್ಮಕ ಆಗಬಾರದು. ಅದು ಜೀವನದ ಉದ್ದಕ್ಕೂ ನಿರಂತರವಾಗಿ ಇರಬೇಕು ಎಂಬ ನಿಲುವು ಡಾಕ್ಟರ್ಜೀ ಅವರದಾಗಿತ್ತು. ದೇಶಕ್ಕಾಗಿ ಹುತಾತ್ಮರಾಗುವುದೇ ಆದರ್ಶ ಅಲ್ಲ. ದೇಶಕ್ಕಾಗಿ ಬದುಕುವುದು ಅದಕ್ಕಿಂತ ಮುಖ್ಯ. ದೇಶಕ್ಕಾಗಿ ಬದುಕುವವರ ಆಧಾರದಲ್ಲಿ ದೇಶದ ಬೆಳವಣಿಗೆ ನಿಂತಿದೆ. 1000 ವರ್ಷಗಳ ಗುಲಾಮತನ ಅನುಭವಿಸಿದ್ದು ಭಾರತ. ಮತ್ತೆ ಎಂದಿಗೂ ಗುಲಾಮಿತನಕ್ಕೆ ಒಳಗಾಗಬಾರದು. ಈ ಚಿಂತನೆಯ ಮೂಲಕ ಹಿಂದೂ ಸಮಾಜಕ್ಕೆ ಕಾಡುತ್ತಿದ್ದ ರೋಗದ ಮೂಲ ಕಾರಣವನ್ನು ಹುಡುಕಿ ಹೊರಟರು.
ಟರ್ಕಿಯಲ್ಲಿ ಇಸ್ಲಾಮಿಕ್ ಖಲೀಫನನ್ನು ಪದಚ್ಯುತಗೊಳಿಸಿದ ಕಾರಣಕ್ಕಾಗಿ ಭಾರತದಲ್ಲಿ ಖಿಲಾಫತ್ ಚಳವಳಿಯು ಪ್ರಾರಂಭವಾಯಿತು. ಮಹಮ್ಮದ್ ಆಲಿ ಮತ್ತು ಶೌಕತ್ ಆಲಿ ನೇತೃತ್ವದ ಈ ಚಳವಳಿಗೆ ಗಾಂಧೀಜಿಯವರು ಹಿಂದೂ ಮುಸ್ಲಿಂ ಭಾಯೀ ಭಾಯೀ ಎಂದು ಇದ್ದಕ್ಕಿದ್ದಂತೆ ಬೆಂಬಲ ನೀಡಿದರು. ಈ ಪ್ರತ್ಯೇಕತೆಯು ಹೆಡಗೇವಾರರಿಗೆ ಅಪಾಯಕಾರಿಯಾಗಿ ಕಂಡಿತು. ಮುಸ್ಲಿಂ ತುಷ್ಟೀಕರಣದ ಈ ಕೊಡುಕೊಳ್ಳುವ ವ್ಯವಹಾರ ಡಾಕ್ಟರ್ಜೀ ನಿರೀಕ್ಷೆಯಂತೆ ಅಸಹಕಾರ ಚಳವಳಿ ಬಿದ್ದುಹೋಯಿತು.
ಇನ್ನು ಗಾಂಧೀಜಿಯವರು ಬೆಂಬಲಿಸಿದ್ದ ಖಿಲಾಫತ್ ಚಳುವಳಿಯಿಂದ ಕೇರಳದ ಮಲಪ್ಪುರಂನಲ್ಲಿ ಮೋಪ್ಲಾ ದಂಗೆ ನಡೆದು ಹಿಂದೂಗಳ ಮಾರಣಹೋಮವೇ ನಡೆದುಹೋಯಿತು. ಬಲಾತ್ಕಾರದ ಮತಾಂತರ, ಸ್ತ್ರೀಯರ ಅಪಹರಣ, ಮಾನಹಾನಿ, ಹಿಂದೂಗಳ ಆಸ್ತಿ ಪಾಸ್ತಿ ಹಾನಿಯಾಯಿತು. ಈ ಎಲ್ಲಾ ಘಟನೆಗಳಿಂದ ಪರಮಾನಂದರು, ಅಂಬೇಡ್ಕರ್, ಸರೋಜಿನಿ ನಾಯ್ಡು, ಚಿತ್ತರಂಜನ್ದಾಸ್ ಅಂತಹ ನಾಯಕರು ಚಿಂತೆಗೊಳಗಾದರೆ, ಮಹಾತ್ಮ ಗಾಂಧೀಜಿ ಮಾತ್ರ ಮುಸಲ್ಮಾನರ ಪರವಾಗಿಯೇ ಇದ್ದರು. ಇದೂ ಕೂಡ ಅಪಾಯಕಾರಿ ಮನಸ್ಥಿತಿ ಎಂದು ಡಾಕ್ಟರ್ಜೀಯವರಿಗೆ ಅರಿವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಇಡೀ ದೇಶವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಬ್ರಿಟಿಷರು ಕೆಲವು ಉಪಕ್ರಮಗಳನ್ನು ಕೈಗೊಂಡರು.
– ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದವರು ಅಗ್ರೆಸ್ಸಿವ್ ಎಂಬ ಕಾರಣಕ್ಕೆ ಸೈನ್ಯ ಸೇರುವುದಕ್ಕೆ ತಡೆ
– ಗುಲಾಮಿ ಮಾನಸಿಕತೆ ನಿರ್ಮಾಣ ಮಾಡಲು ಆಂಗ್ಲ ಶಿಕ್ಷಣ ಪದ್ಧತಿಯ ಜಾರಿ
– ದೇಶದ ಹೆಸರನ್ನು India ಎಂದು ಬದಲಾಯಿಸಿ ಈ ದೇಶದ ಬಗೆಗಿನ ಅಭಿಮಾನವನ್ನು ಕಡಿಮೆಗೊಳಿಸುವ ಪ್ರಯತ್ನ
– ಕ್ರೈಸ್ತ ಪಾದ್ರಿಗಳ ಮೂಲಕ ಮತಾಂತರಕ್ಕೆ ಪ್ರೇರಣೆ
– ತಮ್ಮ ವಿರುದ್ದದ ಹೋರಾಟವನ್ನು ದುರ್ಬಲಗೊಳಿಸುವ ಕಾಂಗ್ರೆಸ್ ಎಂಬ ಸಂಘಟನೆಯ ಸ್ಥಾಪನೆ.
ಹೀಗೆ ಬ್ರಿಟಿಷರು ಮಿಲಿಟರಿ, ಶಿಕ್ಷಣ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮ ಪ್ರಭುತ್ವ ಸಾಧಿಸುವ ಪ್ರಯತ್ನ ನಡೆಸಿದರು.
ಡಾಕ್ಟರ್ ಹೆಡಗೇವಾರರು ಯಾವುದೋ ಕ್ಷಣಿಕ ಆವೇಶಕ್ಕೆ ಒಳಗಾಗಿ ಸಂಘವನ್ನು ಸ್ಥಾಪನೆ ಮಾಡಿದ್ದಲ್ಲ. ಭಾರತದ ಆರೇಳು ಶತಮಾನಗಳ ಇತಿಹಾಸದ ಆಳವಾದ ಅಧ್ಯಯನ ಮಾಡಿದ್ದರು. ಕಾಂಗ್ರೆಸ್ಸಿನ ಪದಾಧಿಕಾರಿಯಾಗಿ, ಕ್ರಾಂತಿಕಾರಿಗಳ ಒಡನಾಡಿಯಾಗಿ ಅವರ ಆಂತರ್ಯ, ಅಂತಃ ಶಕ್ತಿಗಳನ್ನು ಅಧ್ಯಯನ ಮಾಡಿದರು. ದೇಶ ಮೊಗಲರ, ಆಂಗ್ಲರ ಆಕ್ರಮಣಕ್ಕೆ, ದಾಸ್ಯಕ್ಕೆ ಒಳಗಾಗಲು ಕಾರಣಗಳನ್ನು ಹುಡುಕಿದರು.
ಬ್ರಿಟಿಷರ ವಿರುದ್ಧದ ಹೋರಾಟವೇ ರಾಷ್ಟ್ರಭಕ್ತಿ ಎಂದಾಗಿದೆ. ಇದರಿಂದ ಭಾವನಾತ್ಮಕವಾಗಿ ರಾಷ್ಟ್ರ ಭಕ್ತಿಯ, ರಾಷ್ಟ್ರೀಯತೆಯ ಭಾವನೆ ನಿರ್ಮಾಣವಾಗಲು ಸಾಧ್ಯವಿಲ್ಲ. ಪ್ರತೀ ವ್ಯಕ್ತಿಯಲ್ಲೂ ಹೃದಯ ಪರಿವರ್ತನೆಯ ಮೂಲಕ ವಿಶುದ್ಧ ರಾಷ್ಟ್ರೀಯತೆಯನ್ನು ಅರಿವು ಮೂಡಿಸಿದಾಗ ಜಗತ್ತಿನ ಯಾವುದೇ ಶಕ್ತಿಯನ್ನು ಎದುರಿಸಬಹುದು. ಅದಕ್ಕೋಸ್ಕರ ಯುವಕರನ್ನು ಗುರುತಿಸಿ, ಅವರಲ್ಲಿ ಪರಿವರ್ತನೆ ತಂದು, ಸ್ವಾತಂತ್ರ್ಯ ತರುವ ಜತೆಗೆ, ಸಮರ್ಥ ದೇಶದ ನಿರ್ಮಾಣಕ್ಕಾಗಿ ಹೊಸದಾಗಿ ಸಂಘಟನೆಯನ್ನು ಆರಂಭಿಸುವ ನಿರ್ಧಾರಕ್ಕೆ ಬಂದರು. ಆಳವಾದ ಅಧ್ಯಯನ, ಅಂದಿನ ಸಾಮಾಜಿಕ ಮಾನಸಿಕತೆಯ ಅಧ್ಯಯನ ಮಾಡಿ ಉತ್ತಮ ಭವಿಷ್ಯದ ಭಾರತದ ನಿರ್ಮಾಣಕ್ಕಾಗಿ ಹೆಡಗೇವಾರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಪ್ರಾರಂಭ ಮಾಡಿದರು.
ಹಿಂದೂಗಳ ಹೃದಯ ಪರಿವರ್ತನೆ ಮಾಡಿ ಸಂಸ್ಕಾರ ನೀಡುವ ಅವಶ್ಯಕತೆಯನ್ನು ಮನಗಂಡು ಸಾಮಾಜಿಕ ಮಾನಸಿಕತೆಯನ್ನು ಬದಲಾಯಿಸಲು, ದೌರ್ಬಲ್ಯಗಳನ್ನು ದೂರ ಮಾಡಲು, ಪರಿಹಾರದ ರೂಪವಾಗಿ ಸಾಮಾಜಿಕ ಪರಿವರ್ತನೆಗಾಗಿ 1925ರಲ್ಲಿ ಪ್ರಾರಂಭವಾದ ಸಂಘವು ಇವತ್ತು ನೂರು ವಸಂತಗಳನ್ನು ದಾಟಿದೆ. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ಪರಿಕಲ್ಪನೆಯಿಂದಲೇ ಇಂದೂ ಕೂಡ ಸಮಾಜದ ನಡುವೆ ಅವಿರತವಾಗಿ ಕೆಲಸ ಮಾಡುತ್ತಿದೆ. ಡಾಕ್ಟರ್ಜೀ ಅಂದು ಬಿತ್ತಿದ ಒಂದು ಬೀಜ ಇಂದು ಹೆಮ್ಮರವಾಗಿ ಬೆಳೆದು, ಟೊಂಗೆ ಟೊಂಗೆಗಳೂ ಕೂಡ ಕಂಗೊಳಿಸುತ್ತಾ ಸಮಾಜಕ್ಕೆ ನೆರಳಾಗಿ ನಿಂತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


