
1980 ಮತ್ತು 1990ರ ದಶಕಗಳಲ್ಲಿ ಸ್ವತಂತ್ರ ಭಾರತವು ತನ್ನ ಇತಿಹಾಸದಲ್ಲೇ ಅತ್ಯಂತ ಭೀಕರ ಮತ್ತು ರಕ್ತಸಿಕ್ತ ಅಧ್ಯಾಯಗಳನ್ನು ಸಾಕ್ಷೀಕರಿಸಿದೆ. 1971ರ ಯುದ್ಧದ ಸೋಲು ಮತ್ತು ಬಾಂಗ್ಲಾದೇಶದ ಸೃಷ್ಟಿಯ ನಂತರ, ಪಾಕಿಸ್ತಾನವು ನೇರ ಯುದ್ಧದ ಬದಲು ಭಾರತವನ್ನು ಒಳಗಿನಿಂದಲೇ ಅಸ್ಥಿರಗೊಳಿಸುವ K2 (ಕಾಶ್ಮೀರ-ಖಲಿಸ್ತಾನ್) ಕುತಂತ್ರವನ್ನು ಅಳವಡಿಸಿಕೊಂಡಿದ್ದು, ಪಂಜಾಬ್ ಪ್ರತ್ಯೇಕತಾವಾದಿ ಹಿಂಸೆಯ ಉಗ್ರರೂಪಕ್ಕೆ ಸಾಕ್ಷಿಯಾಗಿದ್ದು, ಕಾಶ್ಮೀರವು ಕಾಶ್ಮೀರಿ ಪಂಡಿತರ ಕ್ರೂರ ಜನಾಂಗೀಯ ಶುದ್ಧೀಕರಣದ ದುರಂತವನ್ನು ಕಂಡಿದ್ದು ಎಲ್ಲವೂ ಇಂದಿಗೂ ದುಃಸ್ವಪ್ನವೇ ಆಗಿದೆ. ಒಂದೆಡೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯಿಂದ ಸಾವುನೋವುಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದ್ದರೂ, ಅಮೆರಿಕ ಭಾರತದ ಕಳವಳಗಳನ್ನು ಕೇವಲ “ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ” ಎಂದು ತಳ್ಳಿಹಾಕಿದ್ದು ಕೂಡ ಭಾರತಕ್ಕೆ ಹಿನ್ನಡೆಯನ್ನೇ ತಂದಿತ್ತು. ಆದರೆ 1999ರಲ್ಲಿ ಐಸಿಎಸ್-814 ವಿಮಾನ ಅಪಹರಣದ ಘಟನೆಯು ವಾಷಿಂಗ್ಟನ್ನ್ನು ಬೆಚ್ಚಿಬೀಳಿಸಿತ್ತು, ಹೀಗಾಗಿಯೇ 2000ರಲ್ಲಿ ಸೀಮಿತ ಭಯೋತ್ಪಾದನಾ ನಿಗ್ರಹ ಸಹಕಾರಕ್ಕೆ ಅದು ಮುಂದಾಯಿತು. ಆದರೂ, 9/11 ದಾಳಿಗಳವರೆಗೂ ಅಮೆರಿಕದ ಪ್ರತಿಕ್ರಿಯೆ ನೀರಸ ಮತ್ತು ಅಸ್ಪಷ್ಟವಾಗಿಯೇ ಉಳಿದಿತ್ತು. ವಿರೋಧಾಭಾಸವೆಂದರೆ, ನಂತರದ ವರ್ಷಗಳಲ್ಲಿ ಭಾರತದ ವಿರುದ್ಧ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ಸ್ಪಷ್ಟ ಪುರಾವೆಗಳ ಹೊರತಾಗಿಯೂ, ಅಮೆರಿಕವು ಪಾಕಿಸ್ತಾನಕ್ಕೆ ಹಣಕಾಸು ನೆರವನ್ನು ಮುಂದುವರೆಸಿತು. ಭಯೋತ್ಪಾದನಾ ಪ್ರಾಯೋಜಕರನ್ನು ಬೆಂಬಲಿಸುವಲ್ಲಿ ವಾಷಿಂಗ್ಟನ್ ಯಾಕೆ ಅಷ್ಟೊಂದು ಉತ್ಸಾಹ ತೋರುತ್ತಿದೆ? ಈ ಲೇಖನದಲ್ಲಿ ಆ ಪ್ರಶ್ನೆಗೆ ಉತ್ತರಿಸುವ ಪ್ರಯತ್ನವಿದೆ.
1980 ಮತ್ತು 1990ರ ದಶಕಗಳಲ್ಲಿ ಭಾರತವು ಭಯೋತ್ಪಾದನೆಯ ಬಲಿಪಶುವಾಗಿತ್ತು. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಸಾಮಾನ್ಯ ಭಾರತೀಯ ನಾಗರಿಕರನ್ನು ಕ್ರೂರವಾಗಿ ಬಲಿತೆಗೆದುಕೊಳ್ಳುತ್ತಿದ್ದರು. ಪಂಜಾಬ್ನ ಆಗಿನ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆಯಲ್ಲೂ ಪಾಕಿಸ್ತಾನಿ ಭಯೋತ್ಪಾದಕರ ಕೈವಾಡ ಬೆಳಕಿಗೆ ಬಂದಿತ್ತು. ಇದರ ಜೊತೆಗೆ, ಆಪರೇಷನ್ ಬ್ಲೂ ಸ್ಟಾರ್ ಮತ್ತು 1990ರ ದಶಕದಲ್ಲಿ ಕಾಶ್ಮೀರದಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯಿಂದಾಗಿ ನಡೆದ ರಕ್ತಪಾತದಂತಹ ಘಟನೆಗಳ ಸಮಯದಲ್ಲಿ, ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿದ್ದ ಅಮೆರಿಕ ಸಂಪೂರ್ಣ ಮೌನವಹಿಸಿತ್ತು. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವು ಭಯೋತ್ಪಾದನೆಯ ವಿರುದ್ಧ ಧ್ವನಿ ಎತ್ತಿದರೂ, ಯಾವುದೇ ಪ್ರತಿಧ್ವನಿ ಕೇಳಲಿಲ್ಲ. ಆ ಕಾಲದಲ್ಲಿ ಅಮೆರಿಕದ ದೃಷ್ಟಿಯಲ್ಲಿ ಭಾರತವು ಬಲಿಪಶು ರಾಷ್ಟ್ರವಲ್ಲ, ಕೇವಲ “ನೆರೆಹೊರೆಯವರೊಂದಿಗೆ ಕಲಹ ಹೊಂದಿರುವ” ದೇಶವಷ್ಟೇ. ಅಮೆರಿಕ ಧರಿಸಿದ್ದ “ಕಾರ್ಯತಂತ್ರದ ಮುಖವಾಡ” ಭಾರತಕ್ಕೆ ಶಾಪದಂತೆ ಕಾಡಿತು. ಆದರೆ ಡಿಸೆಂಬರ್ 24, 1999ರಂದು ಐಸಿಎಸ್-814 ವಿಮಾನ ಅಪಹರಣದ ಮೂಲಕ ಉಗ್ರರು ಭಾರತವನ್ನು ಮತ್ತೊಮ್ಮೆ ಗುರಿಯಾಗಿಸಿಕೊಂಡಾಗ, ಅಮೆರಿಕ ಎಚ್ಚೆತ್ತುಕೊಂಡಿತು. ಪರಿಣಾಮವಾಗಿ, ಫೆಬ್ರವರಿ 8, 2000ರಲ್ಲಿ ಭಾರತದೊಂದಿಗೆ ಜಂಟಿ ಭಯೋತ್ಪಾದನಾ ನಿಗ್ರಹ ಹೋರಾಟಕ್ಕೆ ಮೊದಲ ಹೆಜ್ಜೆಯಿಟ್ಟಿತು. ಆದರೂ, ಅಮೆರಿಕದ ಕ್ರಮಗಳು ದೃಢವಾಗಿರಲಿಲ್ಲ ಅಥವಾ ಪರಿಪೂರ್ಣವಾಗಿರಲಿಲ್ಲ. ಆದರೆ ಯಾಕೆ?
ಅಮೆರಿಕದ ಕಾರ್ಯತಂತ್ರದ ಮೌನದ ಬೇರುಗಳು ಶೀತಲ ಸಮರದಲ್ಲಿ ಹುದುಗಿವೆ. ಸೋವಿಯತ್ ಒಕ್ಕೂಟವು ಅಫ್ಘಾನಿಸ್ತಾನವನ್ನು ಆಕ್ರಮಿಸಿದ ನಂತರ ಅದನ್ನು ಸೋಲಿಸಲು ವಾಷಿಂಗ್ಟನ್ಗೆ ಪ್ರಾಕ್ಸಿ ಅಗತ್ಯವಿತ್ತು. ಆ ಪ್ರಾಕ್ಸಿ ಪಾಕಿಸ್ತಾನವಾಗಿತ್ತು. 1970ರ ದಶಕದ ಉತ್ತರಾರ್ಧ ಮತ್ತು 1980ರ ದಶಕದಲ್ಲಿ ಅಮೆರಿಕ ಆಪರೇಷನ್ ಸೈಕ್ಲೋನ್ ಆರಂಭಿಸಿತು. ಇದು ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ಅಡಿಯಲ್ಲಿ ಪ್ರಾರಂಭಗೊಂಡ ಮತ್ತು ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಝ್ಬಿಗ್ನಿವ್ ಬ್ರೆಜಿನ್ಸ್ಕಿ ರೂಪಿಸಿದ ರಹಸ್ಯ ಕಾರ್ಯಕ್ರಮ. ಪಾಕಿಸ್ತಾನದ ಮೂಲಕ ಅಮೆರಿಕವು ಸದ್ದಿಲ್ಲದೆ ಶತಕೋಟಿ ಡಾಲರ್ಗಳು, ಶಸ್ತ್ರಾಸ್ತ್ರಗಳು ಮತ್ತು ತರಬೇತಿಯನ್ನು ಅಫ್ಘಾನ್ ಮುಜಾಹಿದ್ದೀನ್ ಹೋರಾಟಗಾರರಿಗೆ ಒದಗಿಸಿತು. ಈ ಜನರನ್ನು ಶಸ್ತ್ರಸಜ್ಜಿತಗೊಳಿಸಿ, ಸಂಘಟಿತಗೊಳಿಸಿ, ಅಮೆರಿಕ ನೇರವಾಗಿ ಹೋರಾಡಲು ಬಯಸದ ಪ್ರಾಕ್ಸಿ ಯುದ್ಧದಲ್ಲಿ ತೊಡಗಿಸಿತು. ಅಲ್ಲದೇ ಅವರನ್ನು “ಸ್ವಾತಂತ್ರ್ಯ ಹೋರಾಟಗಾರರು” ಎಂದು ವೈಭವೀಕರಿಸಿತು.
1989ರಲ್ಲಿ ಸೋವಿಯತ್ ತನ್ನ ಪಡೆಗಳು ಹಿಂತೆಗೆದುಕೊಂಡಾಗ ವಾಷಿಂಗ್ಟನ್ ವಿಜಯ ಘೋಷಿಸಿ ಹೊರಟುಹೋಯಿತು, ಆದರೆ ಅಫ್ಘಾನಿಸ್ತಾನವು ಚೂರುಚೂರಾಗಿ ನಿಂತಿತು. ಅಮೆರಿಕಕ್ಕೆ ಯುದ್ಧ ಮುಗಿದಿತ್ತು, ಆದರೆ ಅದು ಪೋಷಿಸಿದ ಭಯೋತ್ಪಾದಕರಿಗೆ ಯುದ್ಧ ಮುಗಿಯಲಿಲ್ಲ. ಸೋವಿಯತ್ ವಿರೋಧಿ ಯುದ್ಧದಲ್ಲಿ ರಚಿಸಲಾದ ಜಿಹಾದಿ ಪರಿಸರ ವ್ಯವಸ್ಥೆಯು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ರಕ್ಷಣೆ ಮತ್ತು ಪೋಷಣೆಯಿಂದ ಬದುಕುಳಿಯಿತು. ನಂತರದಲ್ಲಿ ಅಫ್ಘಾನಿಸ್ತಾನದ ಬದಲು ಭಯೋತ್ಪಾದಕರನ್ನು ಹೊಸ ಗುರಿಯಾದ ಭಾರತದತ್ತ ಮರುನಿರ್ದೇಶಿಸಲಾಯಿತು. ಮುಜಾಹಿದ್ದೀನ್ ಯುಗದ ಮೂಲಸೌಕರ್ಯದಿಂದ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಹುಟ್ಟಿಕೊಂಡವು, ಅದೇ ಸಿದ್ಧಾಂತ, ತರಬೇತಿ ವಿಧಾನಗಳು ಮತ್ತು ಅಂತರರಾಷ್ಟ್ರೀಯ ಜಾಲಗಳೊಂದಿಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತದ ಮುಖ್ಯ ಭೂಭಾಗಕ್ಕೆ ಇವು ಹರಡಿದವು.
ಈ ಪರಿವರ್ತನೆಯ ಪ್ರಮುಖ ಮುಖಗಳಲ್ಲಿ ಮಸೂದ್ ಅಜರ್ ಒಬ್ಬರು. ಅಜರ್ ನಾಯಕತ್ವದಲ್ಲಿ ಜೈಶ್-ಎ-ಮೊಹಮ್ಮದ್ ಭಾರತೀಯ ನೆಲದಲ್ಲಿ ಮಾರಕ ದಾಳಿಗಳನ್ನು ಆಯೋಜಿಸಿತು – 2001ರಲ್ಲಿ ಭಾರತದ ಸಂಸತ್ತಿನ ಮೇಲೆ 14 ಜನರನ್ನು ಕೊಂದ ದಾಳಿ, 2016ರ ಪಠಾಣ್ಕೋಟ್ ವಾಯುಪಡೆ ನೆಲೆ ದಾಳಿ ಮತ್ತು 2019ರ ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿ, ಇದರಲ್ಲಿ 40 ಸಿಆರ್ಪಿಎಫ್ ಸಿಬ್ಬಂದಿ ಹುತಾತ್ಮರಾದರು. ಇದರ ಜೊತೆಗೆ, 26/11 ಮುಂಬೈ ದಾಳಿಯಲ್ಲಿ ಲಷ್ಕರ್-ಎ-ತೈಬಾ ತನ್ನ ಸಂಪೂರ್ಣ ವ್ಯಾಘ್ರತೆಯನ್ನು ಪ್ರದರ್ಶಿಸಿತು, 166 ನಾಗರಿಕರು ಮತ್ತು ವಿದೇಶಿ ಪ್ರಜೆಗಳನ್ನು ಬಲಿತೆಗೆದುಕೊಂಡಿತು. ಇವು ಕೇವಲ ಪ್ರತ್ಯೇಕ ಹಿಂಸಾಚಾರದ ಕೃತ್ಯಗಳಲ್ಲ; ಶೀತಲ ಸಮರದಲ್ಲಿ ಜನಿಸಿದ ಜಿಹಾದಿ ಯೋಜನೆಯ ನೇರ ಮುಂದುವರಿಕೆಯಾಗಿದ್ದವು.
ಸೋವಿಯತ್ ವಿರೋಧಿ ಯುದ್ಧದ ಕ್ರೂರ ಸ್ಥಿತಿಯಲ್ಲಿ ರೂಪುಗೊಂಡ ಪಾಕಿಸ್ತಾನ ಬೆಂಬಲಿತ ಜಿಹಾದಿಗಳು ಈಗ ತನ್ನ ನಗರಗಳು ಮತ್ತು ಸೈನಿಕರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಭಾರತವು 1990 ಮತ್ತು 2000ರ ದಶಕಗಳಲ್ಲಿ ಅಮೆರಿಕಕ್ಕೆ ಪದೇ ಪದೇ ಎಚ್ಚರಿಕೆ ನೀಡಿತು. ಆದರೂ, ಆ ಎಚ್ಚರಿಕೆಗಳನ್ನು ಯುಎಸ್ ಕೇವಲ ಪ್ರಾದೇಶಿಕ ವಿವಾದಗಳೆಂದು ತಳ್ಳಿಹಾಕಿತು.
ದಶಕಗಳ ಕಾಲ ಭಾರತವು ಈ ಯುದ್ಧವನ್ನು ಏಕಾಂಗಿಯಾಗಿ ಹೋರಾಡಿತು. ಉಳಿದ ಜಗತ್ತು ಭಾರತದ ಹೋರಾಟವನ್ನು ನಿರ್ಲಕ್ಷ್ಯ ಮಾಡಿತು, ಭಾರತೀಯ ಸೈನಿಕರು ಮತ್ತು ನಾಗರಿಕರು ಜಾಗತಿಕ ಉದಾಸೀನತೆಯ ಭಾರೀ ಬೆಲೆಯನ್ನು ತೆರಬೇಕಾಯಿತು. ಗಡಿಯುದ್ದಕ್ಕೂ ಪ್ರಾಯೋಜಿತ, ತರಬೇತಿ ಪಡೆದ ಭಯೋತ್ಪಾದಕರ ದಾಳಿಗಳಲ್ಲಿ ಸಾವಿರಾರು ಜನರು ಪ್ರಾಣತ್ಯಾಗ ಮಾಡಿದರು.ತನ್ನ ಸ್ವರಕ್ಷಣೆಗಾಗಿ ಭಾರತವು ಪರಮಾಣು ಪರೀಕ್ಷೆಗಳನ್ನು ನಡೆಸಿದಾಗ ಯುನೈಟೆಡ್ ಸ್ಟೇಟ್ಸ್ ಸಹಾನುಭೂತಿಯಿಂದ ಪ್ರತಿಕ್ರಿಯಿಸಲಿಲ್ಲ, ಬದಲಿಗೆ ನಿರ್ಬಂಧಗಳೊಂದಿಗೆ ದಂಡಿಸಿತು, ದೇಶವನ್ನು ಮತ್ತಷ್ಟು ಕಾರ್ಯತಂತ್ರದ ಮೂಲೆಗೆ ತಳ್ಳಿತು. ಇದು ಭಾರತದ ಆಧುನಿಕ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದು.
ಆದರೆ 9/11 ದಾಳಿಗಳವರೆಗೂ ಯುನೈಟೆಡ್ ಸ್ಟೇಟ್ಸ್ ಅಂತರರಾಷ್ಟ್ರೀಯ ಭಯೋತ್ಪಾದನೆಯನ್ನು ಪ್ರಮುಖ ಬೆದರಿಕೆಯೆಂದು ಗುರುತಿಸಲಿಲ್ಲ. ತನ್ನದೇ ಆಶ್ರಯದಲ್ಲಿ ಬೆಳೆದ ಮುಜಾಹಿದ್ದೀನ್ಗಳು ತಾಲಿಬಾನ್ ಮತ್ತು ಅಲ್-ಖೈದಾ ಆಗಿ ರೂಪಾಂತರಗೊಂಡು ಅಮೆರಿಕದ ಮೇಲೆಯೇ ಪ್ರತಿದಾಳಿ ಮಾಡುತ್ತವೆ ಎಂದು ಅದು ಊಹಿಸಿರಲಿಲ್ಲ. ಸೆಪ್ಟೆಂಬರ್ 11, 2001ರಂದು ವರ್ಲ್ಡ್ ಟ್ರೇಡ್ ಸೆಂಟರ್ ಕುಸಿತು ಸುಮಾರು 3000 ಜನರು ಬಲಿಯಾದಾಗ ಮಾತ್ರ, ಭಯೋತ್ಪಾದನೆಗೆ ಯಾವುದೇ ಪ್ರಾದೇಶಿಕ ಗಡಿಗಳಿಲ್ಲ ಎಂಬ ಸತ್ಯವನ್ನು ಅಮೆರಿಕ ಅರಿತುಕೊಂಡಿತು. ಕೇವಲ ಒಂದು ತಿಂಗಳ ನಂತರ, ಅಕ್ಟೋಬರ್ 1, 2001ರಂದು ಪಾಕಿಸ್ತಾನಿ ಭಯೋತ್ಪಾದಕರು ಕಾಶ್ಮೀರ ವಿಧಾನಸಭೆಯನ್ನು ಗುರಿಯಾಗಿಸಿ 38 ನಾಗರಿಕರನ್ನು ಕೊಂದರು. ಆ ರಕ್ತಪಾತದ ನಂತರ ಭಾರತ-ಅಮೆರಿಕ ಸಂಬಂಧಗಳು ನಾಟಕೀಯ ತಿರುವು ಪಡೆದುಕೊಂಡವು. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಧ್ಯಕ್ಷ ಜಾರ್ಜ್ ಬುಷ್ ಭಯೋತ್ಪಾದನೆಯನ್ನು ಎದುರಿಸಲು ಕೈಜೋಡಿಸಿದರು.
ಭಾರತದೊಂದಿಗೆ ಕೈಜೋಡಿಸಿದರೂ, ಒಂದು ವಿಚಿತ್ರ ವಿರೋಧಾಭಾಸ ಮುಂದುವರೆದಿತ್ತು. ಅಮೆರಿಕವು ಪಾಕಿಸ್ತಾನದೊಂದಿಗೆ ತನ್ನ ಕಾರ್ಯತಂತ್ರದ ಸಂಬಂಧವನ್ನು ತ್ಯಜಿಸಲಿಲ್ಲ. ಚೀನಾವನ್ನು ಎದುರಿಸಲು ಭಾರತ ಅತ್ಯಗತ್ಯವಾದರೂ, “ಭಯೋತ್ಪಾದನೆಯ ವಿರುದ್ಧದ ಜಾಗತಿಕ ಯುದ್ಧ”ಕ್ಕೆ ಪಾಕಿಸ್ತಾನದ ಬೆಂಬಲವು ಅಷ್ಟೇ ಮುಖ್ಯವೆಂದು ವಾಷಿಂಗ್ಟನ್ ನಂಬಿತು. ಪಾಕಿಸ್ತಾನವು ಭಯೋತ್ಪಾದಕ ಗುಂಪುಗಳನ್ನು ರಾಜ್ಯ ಸಾಧನಗಳಾಗಿ ಬಳಸುತ್ತಿದೆ ಎಂಬುದಕ್ಕೆ ಭಾರತ ನಿರಂತರವಾಗಿ ಪುರಾವೆಗಳನ್ನು ಒದಗಿಸುತ್ತಿದ್ದರೂ, ಅಮೆರಿಕವು ತನ್ನದೇ ಭದ್ರತಾ ಹಿತಾಸಕ್ತಿಗಳಿಂದಾಗಿ ಪಾಕಿಸ್ತಾನವನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲು ಹಿಂಜರಿಯಿತು.
ಅಮೆರಿಕ ಪಾಕಿಸ್ತಾನಕ್ಕೆ ಅಂಟಿಕೊಳ್ಳಲು ಕಾರಣ ಭಯೋತ್ಪಾದನೆ ಮಾತ್ರವಲ್ಲ ಬದಲಿಗೆ “ಪರಮಾಣು ಶಸ್ತ್ರಾಸ್ತ್ರಗಳು.” ಪಾಕಿಸ್ತಾನ ಅಸ್ಥಿರಗೊಂಡರೆ ಅದರ ಪರಮಾಣು ಶಸ್ತ್ರಗಾರವು ಭಯೋತ್ಪಾದಕರ ಕೈಸೇರುವ ಸಾಧ್ಯತೆಯು ವಾಷಿಂಗ್ಟನ್ನ್ನು ಭಯಭೀತಗೊಳಿಸಿತು, ಅದು ಜಾಗತಿಕ ದುರಂತಕ್ಕೆ ಕಾರಣವಾಗಬಹುದು. ಹೀಗಾಗಿ, ಅಮೆರಿಕ-ಪಾಕಿಸ್ತಾನ ಸಂಬಂಧವು ಸ್ನೇಹವಲ್ಲ ಮತ್ತು “ಕಣ್ಗಾವಲು” ಕಾರ್ಯಾಚರಣೆಯಾಗಿದೆ. 2011ರಲ್ಲಿ ಅಬೋಟಾಬಾದ್ನಲ್ಲಿ ಒಸಾಮಾ ಬಿನ್ ಲಾಡೆನ್ ಪತ್ತೆಯಾದ ನಂತರ ಅಥವಾ ಹಕ್ಕಾನಿ ನೆಟ್ವರ್ಕ್ಗೆ ಐಎಸ್ಐ ಸಂಪರ್ಕದ ಪುರಾವೆಯ ನಂತರವೂ, ವಾಷಿಂಗ್ಟನ್ಗೆ ಅಲ್ಲಿಂದ ಹೊರಬರಲು ಸಾಧ್ಯವಾಗಲಿಲ್ಲ.
ಶೀತಲ ಸಮರದಲ್ಲಿ ರಚಿಸಲಾದ ಜಿಹಾದಿ ಪರಿಸರ ವ್ಯವಸ್ಥೆಯು ಕಣ್ಮರೆಯಾಗಲಿಲ್ಲ. ಅದು ಸ್ಥಳಾಂತರಗೊಂಡಿತು. ಪಾಕಿಸ್ತಾನವು ಅದನ್ನು ಭಾರತದತ್ತ ಮರುಉದ್ದೇಶಿಸಿತು, ಅದು ಭಾರತದ ನೆಲದಲ್ಲಿ ಶಾಶ್ವತ ಮಾನವ ನೋವನ್ನುಂಟುಮಾಡಿತು. ಇಂದಿಗೂ ಭಾರತ ಅಮೆರಿಕಾದ ಪಾಪ ಕೃತ್ಯದ ಪರಿಣಾಮಗಳನ್ನು ಎದುರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


