
ಅದು ಡಿಸೆಂಬರ್ 23, 1912. ದೆಹಲಿಯ ಚಾಂದಿನಿ ಚೌಕ್ನಲ್ಲಿ ಒಂದು ದೊಡ್ಡ ಮೆರವಣಿಗೆ ನಡೆಯುತ್ತಿತ್ತು, ಇದ್ದಕ್ಕಿದ್ದಂತೆ ನಡೆದ ಒಂದು ಪ್ರಬಲ ಸ್ಫೋಟ ಬ್ರಿಟಿಷ್ ಸಾಮ್ರಾಜ್ಯವನ್ನು ಬೆಚ್ಚಿಬೀಳಿಸಿತು. ವೈಸ್ರಾಯ್ ಲಾರ್ಡ್ ಹಾರ್ಡಿಂಜ್ ಮೇಲೆ ಬಾಂಬ್ ಎಸೆಯಲಾಗಿತ್ತು. ಈ ಯೋಜನೆಯ ಹಿಂದಿನ ಸೂತ್ರಧಾರಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ರಾಸ್ ಬಿಹಾರಿ ಬೋಸ್. ಇದೆಲ್ಲ ಹೇಗೆ ಪ್ರಾರಂಭವಾಯಿತು, ಒಬ್ಬ ಕ್ರಾಂತಿಕಾರಿ ಬ್ರಿಟಿಷ್ ಶಕ್ತಿಯನ್ನು ಹೇಗೆ ಅಲುಗಾಡಿಸಿದ?.
ಕ್ರಾಂತಿಕಾರಿಯ ಆಕ್ರೋಶದಿಂದ ಹುಟ್ಟಿಕೊಂಡಿತೊಂದು ಯೋಜನೆ
1886ರಲ್ಲಿ ಬಂಗಾಳದಲ್ಲಿ ಜನಿಸಿದ ರಾಸ್ ಬಿಹಾರಿ ಬೋಸ್ ಅವರು ಬ್ರಿಟಿಷ್ ಆಳ್ವಿಕೆಯ ಅನ್ಯಾಯದ ನೀತಿಗಳ ವಿರುದ್ಧ ತೊಡೆತಟ್ಟಲು ಬಹಳ ಚಿಕ್ಕಿ ವಯಸ್ಸಿನಲ್ಲೇ ಎದ್ದು ನಿಂತಿದ್ದರು. 1911ರಲ್ಲಿ ಭಾರತದ ರಾಜಧಾನಿಯನ್ನು ಕೋಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸುವ ಬ್ರಿಟಿಷ್ ಸರ್ಕಾರದ ಯೋಜನೆ ಅವರನ್ನು ತೀವ್ರವಾಗಿ ಕೆರಳಿಸಿತ್ತು. ದೇಶವಾಸಿಗಳು ಬಡತನದಲ್ಲಿ ವಾಸಿಸುತ್ತಿರುವ ಸಂದರ್ಭದಲ್ಲಿ ಐಷಾರಾಮಿ ದೆಹಲಿ ದರ್ಬಾರ್ಗಾಗಿ ಸರ್ಕಾರಿ ಹಣವನ್ನು ದುಂದು ವೆಚ್ಚ ಮಾಡಲಾಗುತ್ತಿದೆ ಎಂಬುದು ಅವರ ಬೇಸರಕ್ಕೆ ಕಾರಣವಾಗಿದ್ದು. ಅನುಶೀಲನ್ ಸಮಿತಿಯಂತಹ ರಹಸ್ಯ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದ ರಾಸ್ ಬಿಹಾರಿ ಈ ದುಂದುಗಾರಿಕೆಯನ್ನು ಬ್ರಿಟಿಷ್ ಲೂಟಿಯ ಸಂಕೇತವೆಂದು ಗ್ರಹಿಸಿದರು. ಅವರು ವೈಸ್ರಾಯ್ ಲಾರ್ಡ್ ಹಾರ್ಡಿಂಜ್ ಅವರನ್ನು ಗುರಿಯಾಗಿಸಿಕೊಂಡು ಬ್ರಿಟಿಷರಿಗೆ ಪಾಠ ಕಲಿಸಲು ಮುಂದಾದರು. ಬಂಗಾಳ ಮತ್ತು ಪಂಜಾಬ್ನ ಕ್ರಾಂತಿಕಾರಿಗಳ ಸಹಯೋಗದೊಂದಿಗೆ ಮಹಾನ್ ಯೋಜನೆಯೊಂದನ್ನು ರೂಪಿಸಿದರು. ನಂತರ ಅವರ ನೇತೃತ್ವದಲ್ಲಿ ಬಾಂಬ್ಗಳನ್ನು ತಯಾರಿಕೆಯೂ ಆರಂಭಗೊಂಡಿತು.
ರಹಸ್ಯ ಸಿದ್ಧತೆಗಳು ಮತ್ತು ದಾಳಿ
ಯೋಜನೆ ಗೌಪ್ಯವಾಗಿ ರೂಪುಗೊಳ್ಳುತ್ತಿದ್ದು, ಇದರ ಅನುಷ್ಠಾನಕ್ಕಾಗು ರಾಸ್ ಬಿಹಾರಿ ತನ್ನ ಯುವ ಸಹಚರ ಬಸಂತ ಕುಮಾರ್ ಬಿಸ್ವಾಸ್ಗೆ ಪ್ರಮುಖ ಪಾತ್ರವನ್ನು ವಹಿಸಿದರು. ಧೈರ್ಯಶಾಲಿ ಕ್ರಾಂತಿಕಾರಿಯಾಗಿದ್ದ ಬಸಂತ ಮಹಿಳೆಯ ವೇಷ ಧರಿಸಿ ಒಳನುಸುಳುವಲ್ಲಿ ನಿಪುಣತೆ ಪಡೆದಿದ್ದ. ಡಿಸೆಂಬರ್ 23, 1912ರಂದು, ರಾಜಧಾನಿಯ ಸ್ಥಳಾಂತರವನ್ನು ಗುರುತಿಸುವ ಆಚರಣೆಯ ಭಾಗವಾಗಿ ದೆಹಲಿಯಲ್ಲಿ ಲಾರ್ಡ್ ಹಾರ್ಡಿಂಜ್ ಅವರ ಮೆರವಣಿಗೆ ನಡೆಯಬೇಕಿತ್ತು. ಆ ವೇಳೆ ರಾಸ್ ಬಿಹಾರಿ ಮತ್ತು ಅವರ ಸಹಚರರು ಚಾಂದನಿ ಚೌಕ್ನಲ್ಲಿ ದಾಳಿ ನಡೆಸಲು ನಿರ್ಧರಿಸಿದರು, ಅಲ್ಲಿ ಜನಸಂದಣಿ ಹೆಚ್ಚು ಇರುತ್ತದೆ ಎಂಬುದು ಅವರಿಗೆ ತಿಳಿದಿತ್ತು. ಚಾಣಾಕ್ಷರಾಗಿದ್ದ ರಾಸ್ ಬಿಹಾರಿ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು ಮನೆಯ ಸಾಮಗ್ರಿಗಳಿಂದಲೇ ಬಾಂಬ್ ತಯಾರಿಸಿದ್ದರು. ಮಹಿಳೆಯರ ಗುಂಪಿನ ನಡುವೆ ಅಡಗಿಕೊಂಡು ಸೂಕ್ತ ಸಮಯದಲ್ಲಿ ಬಾಂಬ್ ಸ್ಫೋಟಿಸಲು ಬಸಂತನಿಗೆ ಸೂಚಿಸಲಾಯಿತು. ಇಡೀ ಯೋಜನೆ ರಹಸ್ಯವಾಗಿತ್ತು ಮತ್ತು ಬ್ರಿಟಿಷ್ ಗುಪ್ತಚರ ಸಂಸ್ಥೆಗಳ ಕಣ್ಣಿಗೂ ಬೀಳದಷ್ಟು ನಾಜೂಕಾಗಿ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು.
ಮೆರವಣಿಗೆಯ ಆ ದಿನ
ಮೆರವಣಿಗೆಯ ದಿನದಂದು, ಚಾಂದನಿ ಚೌಕ್ ಉತ್ಸಾಹದಿಂದ ತುಂಬಿತ್ತು. ಲಾರ್ಡ್ ಹಾರ್ಡಿಂಜ್ ಮತ್ತು ಅವರ ಪತ್ನಿ ಲೇಡಿ ಹಾರ್ಡಿಂಜ್ ಅಲಂಕೃತ ಆನೆಯ ಮೇಲೆ ಮೆರವಣಿಗೆಯಲ್ಲಿ ಸವಾರಿ ಮಾಡುತ್ತಿದ್ದರು, ಅವರ ಜೊತೆ ಮಾವುತ ಮತ್ತು ಅಂಗರಕ್ಷಕರು ಇದ್ದರು. ಮೆರವಣಿಗೆಯಲ್ಲಿ ಕುದುರೆಗಳು, ಸೈನಿಕರು ಮತ್ತು ಡ್ರಮ್ಮರ್ಗಳು ಬ್ರಿಟಿಷ್ ಶಕ್ತಿಯನ್ನು ಪ್ರದರ್ಶಿಸುತ್ತಿದ್ದರು. ಮಹಿಳೆಯ ವೇಷ ಧರಿಸಿದ ಬಸಂತ ಕುಮಾರ್ ಬಿಸ್ವಾಸ್, ಕಟ್ಟಡದಲ್ಲಿ ನಿಂತು ಮೆರವಣಿಗೆ ನೋಡುತ್ತಿದ್ದ ಮಹಿಳೆಯರ ನಡುವೆ ಅಡಗಿಕೊಂಡ. ಆನೆ ಸಮೀಪಿಸುತ್ತಿದ್ದಂತೆ ಬಾಂಬ್ ಎಸೆದುಬಿಟ್ಟ. ರಾಸ್ ಬಿಹಾರಿ ದೂರದಿಂದಲೇ ದೃಶ್ಯವನ್ನು ನಿಯಂತ್ರಿಸುತ್ತಿದ್ದರು ಮತ್ತು ಯೋಜನೆ ಸುಗಮವಾಗಿ ನಡೆಯುವಂತೆ ನೋಡಿಕೊಂಡರು.
ಬಾಂಬ್ ಎಸೆಯಲ್ಪಟ್ಟಾಗ ನಡೆದ ಭಾರಿ ಸ್ಫೋಟವು ಚಾಂದನಿ ಚೌಕ್ ಅನ್ನು ನಡುಗಿಸಿತು. ಹೊಗೆ ಆವರಿಸಿತು ಮತ್ತು ಅವ್ಯವಸ್ಥೆ ಉಂಟಾಯಿತು. ಲಾರ್ಡ್ ಹಾರ್ಡಿಂಜ್ ಪ್ರಜ್ಞೆ ತಪ್ಪಿ ಆನೆಯ ಮೇಲಿಂದ ಕೆಳಗೆ ಬಿದ್ದುಬಿಟ್ಟ. ಅವನ ಬೆನ್ನಿಗೆ, ಕಾಲುಗಳಿಗೆ ಮತ್ತು ತಲೆಗೆ ಗಾಐಗಳಾದವು. ಆದರೆ ಅವನು ಸಾವಿನಿಂದ ಪಾರಾಗಿದ್ದ. ಮಾವುತ ಕೊಲ್ಲಲ್ಪಟ್ಟ, ಆದರೆ ಆನೆಯ ಬೆನ್ನಿನ ಮೇಲೆ ಇರಿಸಲಾಗಿದ್ದ ಆಸನ ತುಂಡುಗಳಾಗಿ ಛಿದ್ರವಾಯಿತು. ಮೆರವಣಿಗೆ ಚದುರಿಹೋಯಿತು ಮತ್ತು ಜನರು ಕಿರುಚುತ್ತಾ ಓಡಿಹೋದರು. ಬಸಂತ ಮತ್ತು ಅವನ ಸಹಚರರು ಜನಸಂದಣಿಯನ್ನು ಬಳಸಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಇದು ರಾಸ್ ಬಿಹಾರಿಯ ಯೋಜನೆಯ ಅತ್ಯಂತ ರೋಮಾಂಚಕಾರಿ ಭಾಗವಾಗಿತ್ತು, ಏಕೆಂದರೆ ಇದು ಬ್ರಿಟಿಷ್ ಸರ್ಕಾರವನ್ನು ನಡುಗಿಸಿತು ಮತ್ತು ಕ್ರಾಂತಿಕಾರಿಗಳ ಹೋರಾಟವನ್ನು ಪುನರುಜ್ಜೀವನಗೊಳಿಸಿತು. ಈ ಸ್ಫೋಟವು ಭೌತಿಕವಾಗಿ ಮಾತ್ರವಲ್ಲದೆ ಬ್ರಿಟಿಷ್ ರಾಜ್ನ ಅಡಿಪಾಯವನ್ನೂ ಅಲುಗಾಡಿಸಿತು. ಈ ಸಂದರ್ಭದಲ್ಲಿ, ಬಸಂತ ಕುಮಾರ್ ಬಿಸ್ವಾಸ್ ಸೇರಿದಂತೆ 13 ಜನರನ್ನು ಬಂಧಿಸಿ ಮರಣದಂಡನೆ ವಿಧಿಸಲಾಯಿತು.
ಈ ಘಟನೆಯ ನಂತರ, ರಾಸ್ ಬಿಹಾರಿ ಪೊಲೀಸರಿಂದ ತಪ್ಪಿಸಿಕೊಂಡು ಜಪಾನ್ಗೆ ಓಡಿಹೋದರು, ಅಲ್ಲಿ ಅವರು 1942ರಲ್ಲಿ ಭಾರತದ ಹೊರಗೆ ವಾಸಿಸುವ ಭಾರತೀಯರನ್ನು ಸ್ವಾತಂತ್ರ್ಯಕ್ಕಾಗಿ ಒಗ್ಗೂಡಿಸುವ ಗುರಿಯೊಂದಿಗೆ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಅನ್ನು ಸ್ಥಾಪಿಸಿದರು.
ಮೇ 25, 1886ರಂದು ಬಂಗಾಳದ ಬರ್ಧಮಾನ್ನಲ್ಲಿ ಜನಿಸಿದ ರಾಸ್ ಬಿಹಾರಿ ಬೋಸ್ ಜನವರಿ 21, 1945ರಂದು 59 ನೇ ವಯಸ್ಸಿನಲ್ಲಿ ಟೋಕಿಯೊದಲ್ಲಿ ಕೊನೆಯುಸಿರೆಳೆದರು.
ರಾಸ್ ಬಿಹಾರಿ ಬೋಸ್ ಅವರ ಕಥೆ ಸ್ವಾತಂತ್ರ್ಯ ಹೋರಾಟದಲ್ಲಿ ವೈಯಕ್ತಿಕ ತ್ಯಾಗ ಎಷ್ಟು ಮುಖ್ಯವಾಗಿತ್ತು ಎಂಬುದನ್ನು ನೆನಪಿಸುತ್ತದೆ. ಧೈರ್ಯ ಮತ್ತು ಬುದ್ಧಿವಂತಿಕೆಗೆ ಉದಾಹರಣೆಯಾಗಿದ್ದ ಅವರ ಪ್ರಯತ್ನವು ಬ್ರಿಟಿಷ್ ಆಳ್ವಿಕೆಯನ್ನು ನಲುಗಿಸಿತ್ತು ಮತ್ತು ಸ್ವಾತಂತ್ರ್ಯ ಹೋರಾಟವನ್ನು ಪುನರುಜ್ಜೀವನಗೊಳಿಸಿತ್ತು. ಹೋರಾಟ ಎಂದಿಗೂ ವ್ಯರ್ಥವಲ್ಲ ಎಂಬುದನ್ನು ಅವರ ಕೊಡುಗೆ ನಮಗೆ ತೋರಿಸಿಕೊಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


