ಬೆಳ್ತಂಗಡಿ : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯವರು ಮೈಕ್ರೋ ಫೈನಾನ್ಸ್ ಯೋಜನೆಯಲ್ಲಿ ದುಬಾರಿ ಬಡ್ಡಿ ವಿಧಿಸಿ ಬಡವರನ್ನು ಶೋಷಿಸುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಇತರ ಹಕ್ಕೊತ್ತಾಯಗಳನ್ನು ಮುಂದಿಟ್ಟು ಜಂಟಿ ಕ್ರಿಯಾ ಸಮಿತಿ ಗುರುವಾಯನಕೆರೆ ನೇತೃತ್ವದಲ್ಲಿ ನ. 30 ರಂದು ಬೆಳ್ತಂಗಡಿಯಲ್ಲಿ ಬೃಹತ್ ಹಕ್ಕೊತ್ತಾಯ ಸಭೆ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕ ಕೆ. ಸೋಮನಾಥ್ ನಾಯಕ್ ತಿಳಿಸಿದ್ದಾರೆ.
ಅವರು ಮಂಗಳವಾರ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಾರ್ಯನಿರ್ವಹಿಸಲು ಸರಕಾರ ಕೆಲವೊಂದು ಮಾರ್ಗಸೂಚಿಗಳನ್ನು ನೀಡಿದೆ. ಆದರೆ ಅದೆಲ್ಲವನ್ನೂ ಮೀರಿ ಗ್ರಾಮಾಭಿವೃದ್ದಿ ಯೋಜನೆಯವರು ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ತಕ್ಷಣ ಇದನ್ನು ಕಡಿತ ಮಾಡಬೇಕು. ಶೇ. 14 ಕ್ಕಿಂತ ಅಧಿಕ ವಸೂಲಿ ಮಾಡಿರುವ ಬಡ್ಡಿ ಹಣವನ್ನು ಜನರಿಗೆ ಹಿಂತಿರುಗಿಸಬೇಕು.
ಮಂಗಳವಾರ ರಾಜ್ಯದ ನಾನಾ ಭಾಗಗಳಿಂದ ಬಂದ ಸ್ವಯಂಸೇವಾ ಪ್ರತಿನಿಧಿಗಳು ಭಾಗವಹಿಸಿದ ಸಭೆಯಲ್ಲಿ ಚರ್ಚಿಸಲಾದ ಇನ್ನಿತ್ತರ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸುಳ್ಳು ಆರೋಪ ಮಾಡುತ್ತಿರುವುದಾಗಿ ಕೆಲವರು ಹೇಳುತ್ತಿದ್ದಾರೆ. ಆದರೆ ನಾವು ಹೇಳುವ ಪ್ರತಿಯೊಂದು ವಿಚಾರಕ್ಕೂ ದಾಖಲೆಗಳಿವೆ. ಯಾರೇ ಬಂದರೂ ಬಹಿರಂಗ ಚರ್ಚೆಗೆ ಸಿದ್ದ ಎಂದರು. ತಾಲೂಕು ಮಟ್ಟದ ಸಮಾವೇಶದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸ್ವಯಂಸೇವಾ ಸಂಸ್ಥೆಗಳ ವೇದಿಕೆಯ ಸಂಚಾಲಕ ಶಿವರಾಜೇ ಗೌಡ ಮಾತನಾಡಿ, ಮಂಗಳವಾರ ಗುರುವಾಯನಕೆರೆಯಲ್ಲಿ ನಡೆದ ಸ್ವಯಂ ಸೇವಾ ಸಂಘಗಳ ಸಮಾಲೋಚನಾ ಸಭೆಯಲ್ಲಿ ರಾಜ್ಯದ 15 ಜಿಲ್ಲೆಗಳಿಂದ 28 ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯಲ್ಲಿ ನವೆಂಬರ್ 30 ರ ಸಮಾವೇಶವನ್ನು ಯಶಸ್ವಿಗೊಳಿಸಲು ನಿರ್ಧರಿಸಲಾಯಿತು. ಸ್ವಯಂಸೇವಾ ಸಂಸ್ಥೆಗಳು ಸೇವೆಯ ಹೆಸರಿನಲ್ಲಿ ಬಡ್ಡಿ ವಸೂಲಿ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಬೆಳ್ತಂಗಡಿಯ ಹೋರಾಟದ ಬಳಿಕ ರಾಜ್ಯ ಮಟ್ಟದಲ್ಲಿ ಹೋರಾಟ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕುಮಾರ್ ಎಸ್ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.