ಯಥಾ ರಾಜ, ತಥಾ ಪ್ರಜಾ ಎನ್ನುವ ಮಾತಿದೆ. ಸರ್ಕಾರದ ಯಾವ ಯೋಜನೆ ಇಲ್ಲಿಯ ತನಕ ಯಾವುದೇ ಭ್ರಷ್ಟಾಚಾರ ನಡೆಯದೆ ಸಮರ್ಪಕವಾಗಿ ಜನರಿಗೆ ತಲುಪುತ್ತದೆ ಎಂದು ಪ್ರಶ್ನೆಯನ್ನು ಯಾವುದೇ ತರಗತಿಯ ಯಾವುದೇ ವಿದ್ಯಾರ್ಥಿಗೆ ಕೇಳಿದರೆ ಉತ್ತರ ಯಾವುದೂ ಇಲ್ಲ ಎಂದು ಬರೆದರೂ ಆತನಿಗೆ ಪೂರ್ಣ ಅಂಕ ಕೊಡಲೇಬೇಕು. ಅದಕ್ಕೆ ಎರಡು ಉದಾಹರಣೆ ಕೊಡು ಎಂದರೆ ಒಂದು ಆಶ್ರಯ ಯೋಜನೆ ಮತ್ತು ಇನ್ನೊಂದು ವಾಜಪೇಯಿ ಆರೋಗ್ಯ ಶ್ರೀ ಎಂದು ಬರೆದರೆ ಮತ್ತೆರಡು ಅಂಕ ಗ್ಯಾರಂಟಿ. ಅದು ಹೇಗೆ ಉದಾಹರಣೆ ಇಲ್ಲಿದೆ.
ಬೆಳಿಗ್ಗೆ ವಾರ್ತಾ ವಾಹಿನಿಯೊಂದರಲ್ಲಿ ಒಂದು ಸುದ್ದಿ ಬರುತ್ತಿತ್ತು. ಬೆಂಗಳೂರಿನ ಹೊರವಲಯದ ಗ್ರಾಮವೊಂದರಲ್ಲಿ ಆಶ್ರಯ ಮನೆಗಳನ್ನು ಕಟ್ಟಿ ಅದನ್ನು ಬಡವರಿಗೆ ಹಂಚದೆ ಹಾಗೇ ಬಿಟ್ಟಿದ್ದಾರೆ. ನೂರಕ್ಕೂ ಅಧಿಕ ಮನೆಗಳು ಹಾಗೇ ಉಳಿದು ಬಿಟ್ಟಿವೆ. ಅನೇಕ ವರ್ಷಗಳಿಂದ ಹಾಗೇ ಇರುವುದರಿಂದ ಕಳ್ಳಕಾಕರು ಆ ಮನೆಗಳ ಕಿಟಕಿ, ಬಾಗಿಲುಗಳನ್ನು ಕದ್ದು ಹೋಗಿದ್ದಾರೆ. ಈಗ ಆ ಮನೆಗಳು ಕುಡುಕರ, ಜೂಜುಕೋರರ ಮತ್ತು ಅನೈತಿಕ ಚಟುವಟಿಕೆಯಲ್ಲಿ ತೊಡಗುವವರ ಅಡ್ಡಗಳಾಗಿವೆ ಎಂದು ಸುದ್ದಿ ಬರುತ್ತಿತ್ತು. ಅಲ್ಲಿನ ಸ್ಥಳೀಯ ಶಾಸಕರಾಗಿರುವ ವಿಶ್ವನಾಥ ಎನ್ನುವವರೊಂದಿಗೆ ನಿರೂಪಕರು ಮಾತನಾಡುತ್ತಿದ್ದರು.ಆಗ ಶಾಸಕರು ಹೇಳಿದಿಷ್ಟು- ಈಗ ಊರಿನಲ್ಲಿ ೧೩೬ ಜನ ನಿವೇಶನ ರಹಿತ ಕಡು ಬಡವರು ಇದ್ದಾರೆ. ಮನೆಗಳು ಅಷ್ಟು ಸಂಖ್ಯೆಯಲ್ಲಿಲ ಇಲ್ಲ. ಅದಕ್ಕಾಗಿ ಗಲಾಟೆ ಆಗುವುದು ಬೇಡಾ ಎಂದು ಯಾರಿಗೂ ಕೊಟ್ಟಿಲ್ಲ. ಇದಾ ಉತ್ತರಾ? ಸರ್ಕಾರ ಕಟ್ಟುತ್ತಿರುವ ಪ್ರತಿಯೊಂದು ಆಶ್ರಯ ಮನೆಗಳ ಕಟ್ಟುವ ಹಿಂದೆ ನಮ್ಮ ನಿಮ್ಮ ತೆರಿಗೆಯ ಹಣ ಇದೆ. ಹೀಗೆ ಬೇಕಾ ಬಿಟ್ಟಿ ಮನೆಗಳನ್ನು ಕಟ್ಟಿ, ಗಲಾಟೆ ಆಗುತ್ತೆ ಎಂದು ಅನೇಕ ವರ್ಷಗಳ ತನಕ ಕೊಂಪೆಗಳಂತೆ ಬಿಟ್ಟರೆ ಪೋಲಾಗುವುದು ಯಾರ ಹಣ? ಮಂಗಳೂರು ವಿಧಾನ ಸಭಾ ಕ್ಷೇತ್ರ ಅಂದರೆ ಹಿಂದಿನ ಉಳ್ಳಾಲ ವಿಧಾನ ಸಭಾ ಕ್ಷೇತ್ರದಲ್ಲಿ ಒಂಭತ್ತು ಕೆರೆ ಎನ್ನುವ ಪ್ರದೇಶದಲ್ಲಿ ಆಗಿನ ಶಾಸಕರಾಗಿದ್ದ ಯು.ಟಿ.ಫರೀದ್ ಅವರು ಕಟ್ಟಿಸಿದ್ದ ನೂರಾರು ಮನೆಗಳು ಈಗಲೂ ಅನಾಥವಾಗಿ ಹಾಗೇ ಉಳಿದು ಬಿಟ್ಟು ಸರ್ಕಾರದ ಹಣ ಹೇಗೆ ಪೋಲಾಗುತ್ತದೆ ಎನ್ನುವುದಕ್ಕೆ ಉದಾಹರಣೆ ಆಗುತ್ತದೆ.
ರಾಜ್ಯದಲ್ಲಿ ೩೬ ಲಕ್ಷ ಕುಟುಂಬಗಳು ಮನೆ ನಿವೇಶನಕ್ಕಾಗಿ ಬೇರೆ ಬೇರೆ ಸಮಯದಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರಕ್ಕೆ, ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಯಥಾ ಪ್ರಕಾರ ಅಂತಹ ಅನೇಕ ಮನವಿಗಳು ಈಗಿನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಇದ್ದವು. ಕಳೆದ ೨ ವರ್ಷಗಳಲ್ಲಿ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಂಡಿಲ್ಲ. ಈಗಾಗಲೇ ಸರ್ಕಾರವು ರಾಜ್ಯಾದ್ಯಂತ ಅಕ್ರಮವಾಗಿ ಸರಕಾರದ ವಶ ಬಿಟ್ಟುಹೋದ ಭೂಮಿಯನ್ನು ಹೊರತುಪಡಿಸಿ, ಉಳಿದೆಲ್ಲ ಭೂಮಿಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಪ್ರಾಂತ ಕೃಷಿಕೂಲಿಗಾರರ ಸಂಘಗಳು ಮುಖ್ಯಮಂತ್ರಿಯವರನ್ನು ಭೇಟಿಯಾದಾಗ, ಅದಕ್ಕೆ ತಕ್ಕಂತೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಸರಕಾರ ಅಕ್ರಮ ಸ್ವಾಧೀನಗೈದ ಶ್ರೀಮಂತರಿಂದ ಒಂದಿಷ್ಟೂ ಭೂಮಿಯನ್ನು ವಶಪಡಿಸಿಕೊಂಡಿಲ್ಲ. ಬದಲು ಕೃಷಿ ಮಾಡಿದ ಬಡವರಿಗೆ ನೋಟೀಸ್ ಕೊಡುತ್ತಿದೆ.
ರಾಜ್ಯ ಸರ್ಕಾರವೂ ಭೂಗಳ್ಳರ ಕೃಪೆಯಲ್ಲಿ ಇರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ಇಂತಹ ತನಿಖೆಯನ್ನು ಮಾಡಲು ಹೊರಡುವ ದಕ್ಷ ಅಧಿಕಾರಿಗಳಿಗೆ ಎಷ್ಟರ ಮಟ್ಟಿಗೆ ಒತ್ತಡ ಇರುತ್ತದೆ ಎನ್ನುವುದು ಸದ್ಯದ ಮಟ್ಟಿಗೆ ಕರ್ನಾಟಕದ ನಾಗರಿಕನಿಗೆ ಗೊತ್ತಿಲ್ಲ ಎಂದಲ್ಲ. ಶ್ರೀಮಂತರಿಂದ ಹೆಚ್ಚುವರಿ ಭೂಮಿ ಸ್ವಾಧೀನ ಪಡಿಸಲು ಬಜೆಟ್ಟಿನಲ್ಲಿ ಹಣ ಕಾದಿರಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು. ಆದರೆ ಬಜೆಟ್ಟಿನಲ್ಲಿ ಇದಕ್ಕಾಗಿ ಹಣ ಕಾದಿರಿಸಿಲ್ಲ. ಹಾಗಿದ್ದಲ್ಲಿ ಅವರು ಭೂರಹಿತರಿಗೆ ಭೂಮಿ ನೀಡುವುದಾದರೂ ಹೇಗೆ ಎಂಬುದು ಕೂಡ ಪ್ರಮುಖ ಪ್ರಶ್ನೆ. ಭೂಮಾಫಿಯಾದ ಭೂಗಳ್ಳರ ವಶವಿರುವ ಭೂಮಿ ಸ್ವಾಧೀನ ಪಡಿಸಲು ಇವರು ಸಿದ್ಧವಿಲ್ಲ. ಯಾಕೆಂದರೆ ಅವರ ಬೆಂಬಲದಿಂದಲೇ ಅವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ. ಅಂಗನವಾಡಿ ನೌಕರರಿಗೆ ಮಾತು ಕೊಟ್ಟು ವೇತನ ಹೆಚ್ಚಳ ಮಾಡದೇ, ಹಣವಿಲ್ಲವೆಂದು ಕೈಚೆಲ್ಲಿ ಕುಳಿತಿದ್ದಾರೆ. ಆದರೆ ಶಾಸನಸಭೆಯಲ್ಲಿ ಶಾಸಕ, ಮಂತ್ರಿಗಳ ವೇತನ ಹೆಚ್ಚಳ ದುಪ್ಪಟ್ಟು ಮಾಡಲು ಇವರಿಗೆ ಹಣದ ಕೊರತೆಯಿಲ್ಲ.
ಜಿ.ವಿ. ಶ್ರೀರಾಮರೆಡ್ಡಿ ಶಾಸಕರಾಗಿದ್ದಾಗ ಬೆಂಗಳೂರಿನ ಭೂಗಳ್ಳತನದ ಬಗ್ಗೆ ತಾನು ಪ್ರಶ್ನೆಯೆತ್ತಿರುವುದರಿಂದ ಎ.ಪಿ. ರಾಮಸ್ವಾಮಿ ವರದಿ ಸಿದ್ದವಾಯಿತು. ೩೪,೦೦೦ ಎಕ್ರೆ ಭೂಗಳ್ಳರ ವಶ ಇದೆ ಎಂದು ಗೊತ್ತಾಗಿ ೬ ವರ್ಷಗಳಾದರೂ ಅಕ್ರಮ ಭೂಮಿಯನ್ನು ವಶಪಡಿಸಿಕೊಳ್ಳುವಲ್ಲಿ ಸರ್ಕಾರ ಇನ್ನೂ ಹಿಂದೆಮುಂದೆ ನೋಡುತ್ತಿದೆ. ಭೂಮಿ ಸ್ವಾಧೀನಪಡಿಸಿ ಬಡವರಿಗೆ ನೀಡಲು ಸರಕಾರಕ್ಕೆ ಬದ್ಧತೆ ಇಲ್ಲ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಹಾಗಂತ ಒಂದೇ ಕುಟುಂಬದ ಮೂರ್ನಾಕು ಬೇರೆ ಬೇರೆ ಸದಸ್ಯರು ಮನೆ ನಿವೇಶನಕ್ಕೆ ಅರ್ಜಿ ಹಾಕಿದರೆ ಆಗ ಕೂಡ ಸಮಸ್ಯೆ ಆಗುತ್ತದೆ. ಆದ್ದರಿಂದ ಸರ್ಕಾರ ಕೊಡುವ ಮನೆಗಳು ತನಗೆ ಬೇಕು ಎಂದು ಅಣ್ಣ ತಮ್ಮಂದಿರು ಕಚ್ಚಾಟ ಮಾಡಿ ಕೊನೆಗೆ ಯಾರಿಗೂ ಸಿಗದ ಹಾಗೇ ಮಾಡುವ ಬದಲು ಒಂದು ಒಳ್ಳೆಯ ಬಾಂಧವ್ಯದಿಂದ ಹಂಚಿಕೊಳ್ಳುವುದು ಒಳ್ಳೆಯದು. ಇನ್ನು ಕೆಲವೊಮ್ಮೆ ಸರ್ಕಾರದ ಯೋಜನೆಗಳನ್ನು ನಾಗರಿಕರು ಹೇಗೆ ದುರುಪಯೋಗ ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೆ ವಾಜಪೇಯಿ ಆರೋಗ್ಯ ಶ್ರೀ ಎನ್ನುವ ಬಡವರ ಆರೋಗ್ಯ ಸಂಜೀವಿನಿ ಯೋಜನೆಯೇ ಸಾಕ್ಷಿ. ಹೃದಯ ಶಸ್ತ್ರ ಚಿಕಿತ್ಸೆಗೆ ಒಳಪಡುವ ಬಿಪಿಎಲ್ ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುವ ಈ ಯೋಜನೆಯನ್ನು ಯಾವ ಸರ್ಕಾರಿ ವೈದ್ಯನು ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಲು ಸಲಹೆ ಕೊಡುವುದಿಲ್ಲ. ನಮ್ಮಲ್ಲಿ ಮಾಡಿದರೆ ತೊಂದರೆ ಆಗಬಹುದು ಎನ್ನುವ ಕಾರಣಕ್ಕೆ ಅದನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಲು ಶಿಫಾರಸ್ಸು ಮಾಡುತ್ತಾರೆ. ಆ ಬಳಿಕ ಆಯಾ ಆಸ್ಪತ್ರೆಗಳಿಂದ ಆ ವೈದ್ಯರುಗಳಿಗೆ ಕಮೀಷನ್ ಹೋಗುತ್ತೆ ಎನ್ನುವ ಸುದ್ದಿ ಇದೆ. ಈ ಬಗ್ಗೆ ಆರೋಗ್ಯ ಸಚಿವರು ಒಂದು ಸ್ಟಿಂಗ್ ಆಪರೇಶನ್ ನಡೆಸಿದರೆ ಅನೇಕ ವೈದ್ಯರ ಹಣೆಬರಹ ಬಯಲಿಗೆ ಬರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.