ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 68 ವರ್ಷಗಳೇ ಆಗಿವೆ. ಅಭಿವೃದ್ಧಿಯ ಪಥದಲ್ಲಿ ನಾವು ಬಹಳಷ್ಟು ಮುಂದುವರೆದಿದ್ದೇವೆ. ಶಿಕ್ಷಣ, ತಂತ್ರಜ್ಞಾನ, ವಿಜ್ಞಾನ ಹೀಗೆ ಎಲ್ಲಾ ರಂಗದಲ್ಲೂ ಇಂದು ವಿಶ್ವ ನಮ್ಮನ್ನು ಗುರುತಿಸುತ್ತಿದೆ.
ಜವಹಾರ್ ಲಾಲ್ ನೆಹರೂರವರಿಂದ ಹಿಡಿದು ಮೋದಿಯ ತನಕ ಬೇರೆ ಬೇರೆ ನಾಯಕರು ನಮ್ಮನ್ನು ಆಳಿದ್ದಾರೆ. ದೇಶದ ಪ್ರಗತಿಗೆ ತಮ್ಮದೇ ಆದ ಕಾಣಿಕೆಗಳನ್ನು ಇವರೆಲ್ಲರೂ ನೀಡಿದ್ದಾರೆ. ಎಲ್ಲಾ ಪ್ರಧಾನಿಗಳ ಆಡಳಿತದ ವೇಳೆಯಲ್ಲೂ ದೇಶದಲ್ಲಿ ಅಪರಾಧ ಕೃತ್ಯಗಳು, ದಂಗೆಗಳು, ಸಂಘರ್ಷಗಳು, ಧರ್ಮ ವೈಷಮ್ಯಗಳು ನಡೆದಿವೆ. ಕೊಲೆ, ಸುಲಿಗೆ, ಅತ್ಯಾಚಾರಗಳು ನಡೆದಿವೆ. ಪ್ರಜಾಪ್ರಭುತ್ವಕ್ಕೆ ಧಕ್ಕೆಯುಂಟಾಗುವ ಕೃತ್ಯಗಳೂ ನಡೆದಿವೆ.
ದುರಾದೃಷ್ಟವೆಂದರೆ ದೇಶ ಸಾಕಷ್ಟು ಮುಂದುವರೆದರೂ ನಮ್ಮಲ್ಲಿನ ಅಪರಾಧ, ಸಂಘರ್ಷಗಳು ಕಡಿಮೆಯಾಗಿಲ್ಲ. ಧರ್ಮ, ರಾಜಕೀಯದ ಕೊಲೆಗಳು, ತಾರತಮ್ಯಗಳು, ದಂಗೆಗಳು ನಿಂತಿಲ್ಲ.
2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಗೇರಿದ ಬಳಿಕವೂ ದೇಶದಲ್ಲಿ ಇವೆಲ್ಲಾ ಮುಂದುವರೆದಿದೆ ಎಂಬುದು ನಿಜ. ಆದರೆ ಹಿಂದೆ ಇಂತಹ ಕೃತ್ಯಗಳಿಗೆ ಪ್ರಧಾನಿಗಳನ್ನು ಹೊಣೆ ಮಾಡುವ ಪದ್ಧತಿ ಇರಲಿಲ್ಲ. ಆದರೆ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ನಡೆಯುವ ಎಲ್ಲಾ ಕೆಟ್ಟ ಘಟನೆಗಳಿಗೂ ಅವರನ್ನೇ ಹೊಣೆ ಮಾಡಲಾಗುತ್ತಿದೆ.
ಸಮಾಜವಾದಿ ಆಡಳಿತವಿರುವ ಉತ್ತರಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೋರ್ವನನ್ನು ಗುಂಪೊಂದು ಕೊಲೆ ಮಾಡಿದ್ದಕ್ಕೆ, ಕರ್ನಾಟಕದಲ್ಲಿ ಸಾಹಿತಿ ಹತ್ಯೆಯಾಗಿದ್ದಕ್ಕೆ, ದೆಹಲಿ, ಕೋಲ್ಕತ್ತಾದಲ್ಲಿ ಚರ್ಚ್ ಮೇಲೆ ಕಿಡಿಗೇಡಿಗಳು ಕಲ್ಲು ಬಿಸಾಡಿದ್ದಕ್ಕೆ, ಕೆಲ ಸಂಘಟನೆಯ ನಾಯಕರುಗಳು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಹೀಗೆ ಎಲ್ಲದಕ್ಕೂ ಪ್ರಧಾನಿಯನ್ನೇ ಜವಾಬ್ದಾರರನ್ನಾಗಿಸುವ ಪ್ರಯತ್ನಗಳು ಬುದ್ಧಿಜೀವಿಗಳಿಂದ ನಡೆಯುತ್ತಿದೆ.
ಈ ಹಿಂದೆ ಯಾವ ಪ್ರಧಾನಿಗಳೂ ಎದುರಿಸದ ಆರೋಪಗಳನ್ನು ಇಂದು ಮೋದಿ ಎದುರಿಸುತ್ತಿದ್ದಾರೆ. ರಾಜ್ಯಗಳ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆಗಾರಿಕೆ ಆಯಾ ರಾಜ್ಯಗಳದ್ದು ಎಂದು ತಿಳಿದಿದ್ದರೂ ಪ್ರಧಾನಿಯನ್ನು ನೇರವಾಗಿ ಟಾರ್ಗೆಟ್ ಮಾಡಲಾಗುತ್ತಿದೆ.
ಇನ್ನು ಸಾಹಿತಿಗಳು ತಾ ಮುಂದು ತಾ ಮುಂದು ಎಂದು ತಮ್ಮ ಸಾಹಿತ್ಯ ಪುರಸ್ಕಾರಗಳನ್ನು ಹಿಂದಿರುಗಿಸಲು ಮುಂದಾಗಿದ್ದಾರೆ. ದೇಶದಲ್ಲಿ ಅಸ್ಥಿರತೆ ಉಂಟಾಗಿದೆ, ಪ್ರಜಾಫ್ರಭುತ್ವಕ್ಕೆ ಧಕ್ಕೆಯಾಗಿದೆ ಎಂಬ ವಾದವನ್ನು ಇವರು ಮುಂದಿಡುತ್ತಿದ್ದಾರೆ.
ಈ ಹಿಂದೆಯೂ ದೇಶದಲ್ಲಿ ಹಲವಾರು ಅಸ್ಥಿರತೆ ಉಂಟು ಮಾಡುವ ಘಟನೆಗಳು ನಡೆದಿವೆ. ತುರ್ತು ಪರಿಸ್ಥಿತಿ, ಸಿಖ್ ಹತ್ಯೆ, ಮುಜಾಫರ್ನಗರ ಕೋಮುಗಲಭೆ ಸೇರಿದಂತೆ ಘೋರ ಅತ್ಯಾಚಾರ, ಕೊಲೆಗಳು ನಡೆದಿವೆ. ಆ ವೇಳೆ ದೇಶ ಅಸ್ಥಿರವಾಗಿತ್ತು ಎಂಬ ಅರಿವು ಇವರಿಗೆ ಇರಲಿಲ್ಲವೇ? ಆವಾಗ ಇವರೆಲ್ಲಾ ಯಾಕೆ ಅಂದಿನ ಪ್ರಧಾನಿಗಳನ್ನು ಹೊಣೆ ಮಾಡಲಿಲ್ಲ. ಆಗ ಏಕೆ ತಮ್ಮ ಪ್ರಶಸ್ತಿಗಳನ್ನು ಇವರು ಹಿಂದಿರುಗಿಸಲಿಲ್ಲ ಎಂಬ ಪ್ರಶ್ನೆ ಪ್ರತಿಯೊಬ್ಬನನ್ನೂ ಕಾಡುತ್ತಿದೆ.
ತಮ್ಮ ಸಿದ್ಧಾಂತಕ್ಕೆ ವಿರುದ್ಧವಾದ ಸಿದ್ಧಾಂತವನ್ನು ಹೊಂದಿರುವ ಪಕ್ಷವೊಂದು ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂಬ ಕಾರಣಕ್ಕಾಗಿಯೇ? ಜನಸಾಮಾನ್ಯ ದೇಶಭಕ್ತನೊಬ್ಬ ಪ್ರಧಾನಿಯಾದ ಎಂಬ ಕಾರಣಕ್ಕಾಗಿಯೇ? ಅಥವಾ ತಮ್ಮ ಓಲೈಕೆಗೆ ಈ ಸರ್ಕಾರ ಮುಂದಾಗುತ್ತಿಲ್ಲ ಎಂಬ ಕೋಪದಿಂದಾಗಿಯೇ?
ಈ ದೇಶದ ಜನರು ಹಲವಾರು ಸರ್ಕಾರಗಳನ್ನು ರಚಿಸಿದ್ದಾರೆ, ಹಲವಾರು ಸರ್ಕಾರಗಳನ್ನು ಬೀಳಿಸಿದ್ದಾರೆ. ಒಂದು ಸರ್ಕಾರಕ್ಕೆ ಈ ದೇಶವನ್ನಾಳಲು ಕೇವಲ 5 ವರ್ಷ ಮಾತ್ರ ಅವಕಾಶವಿದೆ. ಮತ್ತೊಂದು ಬಾರಿಗೆ ಅಧಿಕಾರ ಹಿಡಿಯಬೇಕಾದರೆ ಮತ್ತೆ ಅದು ಜನರ ಮುಂದೆ ಹೋಗಲೇ ಬೇಕು. 5 ವರ್ಷದ ಆಡಳಿತವನ್ನು ಅಳೆದು ತೂಗಿ ಮತ್ತೊಂದು ಬಾರಿಗೆ ಜನ ಮತ ನೀಡುತ್ತಾರೆ. ಮೋದಿ ಸರ್ಕಾರವೂ ಅಷ್ಟೇ. ಮೂರು ವರ್ಷದ ಬಳಿಕ ಅದೂ ಜನರ ಮುಂದೆ ಹೋಗಲೇ ಬೇಕು. ಮೋದಿ ಉತ್ತಮ ಕಾರ್ಯ ಮಾಡಿದ್ದರೆ ಜನ ಮತ್ತೆ ಅವರನ್ನೇ ಆರಿಸುತ್ತಾರೆ, ಇಲ್ಲವಾದರೆ ಮನೆಗೆ ಕಳುಹಿಸುತ್ತಾರೆ. ಆದರೆ ಕೆಲವರು ಕೇವಲ ಒಂದೂವರೆ ವರ್ಷದಲ್ಲೇ ಅವರನ್ನು ದಮನಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವುದು, ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎಂಬಂತೆ ವರ್ತಿಸುವುದು ನಿಜಕ್ಕೂ ಖೇದಕರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.