ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಮಾನವೀಯತೆಯ ಲವಲೇಶವಾದರೂ ಇದ್ದರೆ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟ ಎರಡೂ ಕುಟುಂಬಕ್ಕೆ ಕನಿಷ್ಠ 1 ಕೋಟಿಯನ್ನಾದರೂ ಕೊಡುತ್ತಿದ್ದರು ಎಂದು ಬೆಂಗಳೂರು ದಕ್ಷಿಣ ಸಂಸದ ಹಾಗೂ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ಮೊತ್ತವನ್ನು ಬ್ಯಾಂಕಿನಲ್ಲಿ ನಿರಖು ಠೇವಣಿ (ಎಫ್ಡಿ) ಇಟ್ಟರೆ ಅದರ ಬಡ್ಡಿಯಿಂದ ಅವರ ಕುಟುಂಬ, ಶಿಕ್ಷಣ ನಡೆಯುತ್ತಿತ್ತು. ಪಕ್ಕದ ರಾಜ್ಯದಲ್ಲಿ ಆನೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟವರಿಗೆ ಈ ರಾಜ್ಯದ ಮುಖ್ಯಮಂತ್ರಿಗಳು 15 ಲಕ್ಷ ಕೊಟ್ಟಿದ್ದರು. ಆದರೆ, ನಮ್ಮ ರಾಜ್ಯದಲ್ಲಿ ಭೀಭತ್ಸವಾಗಿ, ಭೀಕರವಾಗಿ ಭಯೋತ್ಪಾದಕರ ದಾಳಿಯಲ್ಲಿ ಮೃತರಾದ ಇಬ್ಬರು ಕುಟುಂಬದವರಿಗೆ ಅದಕ್ಕಿಂತ ಜಾಸ್ತಿ ಅಲ್ಲ; ಅಷ್ಟಾದರೂ ಕೊಡುವ ಯೋಗ್ಯತೆ ಈ ಸರಕಾರಕ್ಕೆ ಇಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಸ್ಲಿಂ ಓಟಿಗೆ ತಮ್ಮನ್ನು ತಾವು ಮಾರಿಕೊಂಡ ಕಾಂಗ್ರೆಸ್ ಪಕ್ಷದಿಂದ ನಾವು ಇದಕ್ಕಿಂತ ಜಾಸ್ತಿ ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ; ಈ ಕುಟುಂಬಗಳಿಗೆ ಶಕ್ತಿ ಕೊಡುವ ಜವಾಬ್ದಾರಿ ಹಿಂದೂ ಸಮಾಜಕ್ಕೆ ಇದೆ. ಭಯೋತ್ಪಾದಕರ ಕೃತ್ಯ ಖಂಡಿಸಿ ಮೊನ್ನೆ ಬೆಂಗಳೂರು ದಕ್ಷಿಣದಲ್ಲಿ ನಾವು ಪಂಜಿನ ಮೆರವಣಿಗೆ ಮಾಡಿದ್ದೇವೆ. ರಾಜ್ಯ ಸರಕಾರ ಕೊಟ್ಟ ಪರಿಹಾರಕ್ಕಿಂತ ಒಂದು ರೂ. ಹೆಚ್ಚು ಪರಿಹಾರವನ್ನು ಸಂಗ್ರಹಿಸಿ ಕೊಡಬೇಕೆಂದು ಆ ಸಭೆಯ ಕೊನೆಯಲ್ಲಿ ಮನವಿ ಮಾಡಿದ್ದೆ. ಜನರು ಈಗಾಗಲೇ ಸುಮಾರು 20 ಲಕ್ಷ ರೂ. ನೀಡಿದ್ದಾರೆ. ನಾಳೆ ಬಿಜೆಪಿ ವತಿಯಿಂದ ಭರತ್ ಭೂಷಣ್ ಅವರ ಮನೆಗೆ 10 ಲಕ್ಷದ ಒಂದು ರೂ. ಮತ್ತು ಮಂಜುನಾಥ್ ಅವರ ಮನೆಗೆ ಒಂದೆರಡು ದಿನದಲ್ಲಿ 10 ಲಕ್ಷದ ಒಂದು ರೂ. ಯನ್ನು ಕೊಡಲಿದ್ದೇವೆ ಎಂದು ಪ್ರಕಟಿಸಿದರು.
ಆರ್.ವಿ. ವಿಶ್ವವಿದ್ಯಾಲಯವು ನನ್ನ ಮನವಿಗೆ ಸ್ಪಂದಿಸಿ ಪಲ್ಲವಿ ಮಂಜುನಾಥ್ ಅವರಿಗೆ ಪತ್ರ ಬರೆದಿದೆÉ. ಅವರ ಮಗ ಅಭಿಜಯನಿಗೆ ಬಿ,ಕಾಂ, ಸ್ನಾತಕೋತ್ತರ ಪದವಿ ಪಡೆಯಲು ಈ ಶಿಕ್ಷಣ ಸಂಸ್ಥೆಯು ಅವನ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಭರಿಸಲಿದೆ ಎಂದು ತಿಳಿಸಿದ್ದಾರೆ. ಇದನ್ನು ಅವನ ತಾಯಿಗೆ ತಲುಪಿಸುತ್ತೇನೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.
ಭರತ್ ಭೂಷಣ್ ಅವರ 3 ವರ್ಷದ ಮಗುವಿಗೆ ಕನಕಪುರ ರಸ್ತೆಯ ಟ್ರಾನ್ಸೆಂಡ್ ಎಂಬ ಶಿಕ್ಷಣ ಸಂಸ್ಥೆಯು ಒಂದನೇ ತರಗತಿಯಿಂದ 12ನೇ ತರಗತಿವರೆಗೆ ಸಿಬಿಎಸ್ಇ ಶಿಕ್ಷಣದಡಿ ವಿದ್ಯಾಭ್ಯಾಶ ಕೊಡುವ ಜವಾಬ್ದಾರಿಯನ್ನು ಹೊರಲು ಮುಂದಾಗಿದೆ. ಈ ಕುರಿತು ಸುಜಾತಾ ಭರತ್ ಭೂಷಣ್ ಅವರಿಗೆ ಪತ್ರ ಬರೆದಿದೆ. ಮುಂದಿನ 11 ವರ್ಷಗಳವರೆಗೆ ಈ ಎರಡೂ ಕುಟುಂಬಗಳ ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಸಂಪೂರ್ಣವಾಗಿ ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಯವರು ನೋಡಿಕೊಳ್ಳುತ್ತಾರೆ. ಅವರೂ ಈ ಕುರಿತು ಪತ್ರ ಬರೆದಿದ್ದಾರೆ ಎಂದು ವಿವರಿಸಿದರು. ಈ ಮೂರೂ ಸಂಸ್ಥೆಗಳಿಗೆ ಅಭಿನಂದನೆ- ಕೃತಜ್ಞತೆ ಸಲ್ಲಿಸಿದರು.
ರಾಜ್ಯದಲ್ಲಿರುವ ದೇವಸ್ಥಾನಗಳು, ಹಿಂದೂ ಮಠಮಾನ್ಯಗಳು, ಹಿಂದೂ ದಾನಿಗಳು, ಉದ್ಯಮಿಗಳು ನಮ್ಮ ಜವಾಬ್ದಾರಿಯನ್ನು ತೋರಿಸಬೇಕಿದೆ. ಇದನ್ನು ನಾವೆಲ್ಲರೂ ಮಾಡಬೇಕೆಂದು ಹೇಳಿದರು.
ಈ ಭಯೋತ್ಪಾದಕರು ಕೇವಲ ಭಾರತ ಸರಕಾರವನ್ನಷ್ಟೇ ಅಲ್ಲ; ಸಂಪೂರ್ಣ ಹಿಂದೂ ಸಮಾಜವನ್ನು ಗುರಿಯನ್ನಾಗಿ ಮಾಡಿವೆ. ಇವತ್ತು ರಾಜ್ಯ ಸರಕಾರವು ಈ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿಗಳಿಗೆ ಇಂಥ ಸಲಹೆ ಕೊಟ್ಟವರು ಯಾರು? ಮುಖ್ಯಮಂತ್ರಿಗಳು ಮಾನವೀಯತೆಯ, ವಾಸ್ತವಿಕತೆಯ ಎಲ್ಲ ಸಂಪರ್ಕಗಳನ್ನು ಕಳಕೊಂಡಿದ್ದಾರಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ; ಮಂಜುನಾಥ್ ಅವರ ಮನೆಯಲ್ಲಿ ಪಿಯುಸಿಯಲ್ಲಿ ಶೇ 97 ಅಂಕ ಪಡೆದ ಒಬ್ಬ ಹುಡುಗ ಇದ್ದಾನೆ. ಕನಿಷ್ಠವೆಂದರೂ 8-10 ವರ್ಷಗಳ ಶಿಕ್ಷಣ ಅವನಿಗೆ ಬಾಕಿ ಇದೆ ಎಂದು ತಿಳಿಸಿದರು. ಬೆಂಗಳೂರಿನ ಭರತ್ ಭೂಷಣ್ ಅವರ ಮನೆಯಲ್ಲಿ 3 ವರ್ಷದ ಮಗು ಇದೆ. ಅವರ ತಾಯಿಯೇ 25 ವರ್ಷ ಆ ಮಗುವಿನ ಶಿಕ್ಷಣದ ಜವಾಬ್ದಾರಿ ಹೊರಬೇಕಿದೆ ಎಂದು ಗಮನ ಸೆಳೆದರು.
ಕೆಲದಿನಗಳ ಹಿಂದೆ ಪೆಹಲ್ಗಾಮ್ನಲ್ಲಿ ಇಸ್ಲಾಮಿ ಭಯೋತ್ಪಾದಕರು ಹಿಂದೂ ಪುರುಷರನ್ನು ಗುರುತಿಸಿ, ಅವರ ಪತ್ನಿ, ಮಕ್ಕಳೆದುರೇ ಹತ್ಯೆ ಮಾಡಿದ್ದಾರೆ. ಈ ಭಯೋತ್ಪಾದಕರು ಯಾರೋ ಪ್ರವಾಸಿಗರನ್ನು ಕೊಂದಿಲ್ಲ; ಕೇವಲ ಪ್ರವಾಸಿಗಳನ್ನು ಕೊಂದಿದ್ದಲ್ಲ; ಅವರು ಹಿಂದೂ ಪುರುಷರನ್ನು ತಮ್ಮ ಗುರಿಯನ್ನಾಗಿ ಮಾಡಿ ಕೊಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸತ್ಯವನ್ನು ಅವರ ಕುಟುಂಬದವರು ಬಿಚ್ಚಿಟ್ಟರೂ ಕೂಡ ಈ ಸತ್ಯವನ್ನು ಒಪ್ಪಿಕೊಳ್ಳದ ಒಂದು ವರ್ಗವು ಈ ರಾಜ್ಯ- ದೇಶದಲ್ಲಿ ಇವತ್ತೂ ಕೂಡ ಇದೆ ಎಂದು ಟೀಕಿಸಿದರು. ಭಯೋತ್ಪಾದಕರು ಹಿಂದೂಗಳನ್ನು ಧರ್ಮದ ಆಧಾರದಲ್ಲಿ ಕೊಂದಿದ್ದು ಸರಿಯಲ್ಲ ಎಂದು ಅಸಾದುದ್ದೀನ್ ಒವೈಸಿ ಒಪ್ಪಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ಸಿನವರು ಒಪ್ಪಲು ತಯಾರಿಲ್ಲ ಎಂದು ಆಕ್ಷೇಪಿಸಿದರು. ಎಂಥ ದರಿದ್ರ, ದೈನೇಸಿ ಸ್ಥಿತಿಗೆ ಕಾಂಗ್ರೆಸ್ ಪಕ್ಷ ಇಳಿದಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ ಎಂದು ನುಡಿದರು.
ರಾಜ್ಯ ವಕ್ತಾರರಾದ ಅಶೋಕ್ ಗೌಡ, ಮೋಹನ್ ವಿಶ್ವ, ಸುರಭಿ ಹೊದಿಗೆರೆ ಅವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.