ಭಿವಂಡಿ: ಮರಾಠಾ ಯೋಧ ಛತ್ರಪತಿ ಶಿವಾಜಿ ಮಹಾರಾಜರಿಗೆ ಅನನ್ಯ ರೀತಿಯಲ್ಲಿ ಗೌರವ ಸಲ್ಲಿಸುವ ಸಲುವಾಗಿ ಥಾಣೆಯ ಭಿವಂಡಿಯಲ್ಲಿ ಭವ್ಯ ದೇವಾಲಯವೊಂದು ತಲೆ ಎತ್ತಿ ನಿಂತಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶಿವಾಜಿ ಜಯಂತಿಯ ಶುಭ ಸಂದರ್ಭದಲ್ಲಿ ಈ ದೇಗುಲವನ್ನು ಲೋಕಾರ್ಪಣೆ ಮಾಡಿದ್ದಾರೆ. ಹಿಂದೂ ಹೃದಯ ಸಾಮ್ರಾಟರೆಂದು ಜನಜನಿತಗೊಂಡಿರುವ ಶಿವಾಜಿ ಮಹಾರಾಜರಿಗೆಂದೇ ಸಮರ್ಪಿತವಾದ ಮಹಾರಾಷ್ಟ್ರದ ಮೊದಲ ದೇಗುಲ ಇದಾಗಿದೆ. ಈ ದೇವಾಲಯವು ಶಿವಾಜಿ ಮಹಾರಾಜರ ಶೌರ್ಯ, ಸಾಹಸ ಮತ್ತು ಶಾಶ್ವತ ಪರಂಪರೆಯ ಸಂಕೇತವಾಗಿ ಅತ್ಯಂತ ಭವ್ಯವಾಗಿ ಎದ್ದು ನಿಂತಿದ್ದು, ಇದು ಭಾರತದ ಇತಿಹಾಸಕ್ಕೆ ಶಿವಾಜಿಯ ಕೊಡುಗೆಗಳನ್ನು ಗೌರವಿಸಲು ಅವರ ಅನುಯಾಯಿಗಳಿಗೆ ಒಂದು ಪ್ರಮುಖ ಸ್ಥಳವನ್ನು ಹೊರಹೊಮ್ಮಿದೆ.
ದೇಗುಲದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವು ಅತ್ಯಂತ ಅನನ್ಯವಾಗಿರುವುದರಿಂದ ಶೀಘ್ರದಲ್ಲೇ ಅದು ಪ್ರಮುಖ ಯಾತ್ರಾ ಸ್ಥಳವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ. ಮರಾಠಾ ಕೋಟೆಗಳ ವಾಸ್ತುಶಿಲ್ಪದ ಭವ್ಯತೆಯಿಂದ ಪ್ರೇರಿತವಾಗಿ ವಿನ್ಯಾಸಗೊಂಡಿರುವ ಈ ದೇಗುಲ 2,500 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ, 5,000 ಚದರ ಅಡಿ ವಿಸ್ತೀರ್ಣದ ಕೋಟೆಯಂತಹ ಗಡಿ ಗೋಡೆಯೊಳನ್ನು ಹೊಂದಿದೆ, ಇದು ಭದ್ರ ಕೋಟೆಗಳು, ಕಣ್ಗಾವಲು ಮಾರ್ಗಗಳು ಮತ್ತು ಭವ್ಯವಾದ ಪ್ರವೇಶ ದ್ವಾರವನ್ನು ಹೊಂದಿದೆ.
ವಾಸ್ತುಶಿಲ್ಪಿ ವಿಜಯಕುಮಾರ್ ಪಾಟೀಲ್ ವಿನ್ಯಾಸಗೊಳಿಸಿದ ಈ ರಚನೆಯು ಶಿವಾಜಿ ಮಹಾರಾಜರ ಕೋಟೆಗಳ ಸೇನಾ ನಿಖರತೆ ಮತ್ತು ಶಕ್ತಿಯನ್ನು ಪ್ರತಿಧ್ವನಿಸುತ್ತದೆ. ದೇವಾಲಯದ ಗಮನಾರ್ಹ ವೈಶಿಷ್ಟ್ಯವೆಂದರೆ ಅದರ 42 ಅಡಿ ಎತ್ತರದ ಪ್ರವೇಶದ್ವಾರ, ಇದು ಮರಾಠಾ ಯುಗದ ಮಿಲಿಟರಿ ರಚನೆಗಳ ಗಾಂಭೀರ್ಯವನ್ನು ಪ್ರತಿಬಿಂಬಿಸುತ್ತದೆ, ಅಲ್ಲದೇ ಇಲ್ಲಿ ಅಷ್ಟೇ ಎತ್ತರದ ಸಭಾ ಮಂಟಪವನ್ನೂ ಮರಾಠ ಶೈಲಿಯಲ್ಲಿ ಅಭುತಪೂರ್ವವಾಗಿ ವಿನ್ಯಾಸಗೊಳಿಸಲಾಗಿದೆ. ದೇವಾಲಯದ ಹೃದಯಭಾಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 6.5 ಅಡಿ ಎತ್ತರದ ಪ್ರತಿಮೆ ಇದೆ, ಅಯೋಧ್ಯೆ ರಾಮ ಮಂದಿರದಲ್ಲಿ ವಿರಾಜಮಾನನಾಗಿರುವ ಬಾಲ ರಾಮನ ಪ್ರತಿಮೆಯನ್ನು ಕೆತ್ತಿರುವ ಪ್ರಸಿದ್ಧ ಕಲಾವಿದ ಅರುಣ್ ಯೋಗಿರಾಜ್ ಅವರೇ ಈ ಪ್ರತಿಮೆಯನ್ನೂ ಕೆತ್ತಿದ್ದಾರೆ.
ದೇವಾಲಯದ ಸುತ್ತಲೂ, 36 ಸಂಕೀರ್ಣವಾಗಿ ವಿನ್ಯಾಸಗೊಳಿಸಲಾದ ವಿಭಾಗಗಳು ಶಿವಾಜಿ ಮಹಾರಾಜರ ಜೀವನದ ಪ್ರಮುಖ ಕ್ಷಣಗಳನ್ನು ಚಿತ್ರಿಸುವ ದೊಡ್ಡ ಶಿಲ್ಪಗಳನ್ನು ಒಳಗೊಂಡಿವೆ, ಇದು ಮರಾಠ ಯೋಧನಿಂದ ದಾರ್ಶನಿಕ ನಾಯಕನವರೆಗಿನ ಶಿವಾಜಿಯ ಜೀವನ ಪಯಣವನ್ನು ವಿವರಿಸುತ್ತದೆ.
“ಶಿವಾಜಿ ಮಹಾರಾಜರಿಗೆ ದೇವಾಲಯ ಯಾಕೆ ನಿರ್ಮಿಸಲಾಗಿದೆ ಎಂದು ಯಾರದರು ಕೇಳಿದರೆ ಅದಕ್ಕೆ ಉತ್ತರ ಆತ ದೇವರು, ದೇಶ ಮತ್ತು ಧರ್ಮಕ್ಕಾಗಿ ನೀಡಿದ ಕೊಡುಗೆ ಎಂದು ನಾನು ಉತ್ತರಿಸುವೆ. ಶಿವಾಜಿ ಇಂದು ನಮ್ಮನ್ನು ಹಿಂದೂಗಳಾಗಿಯೇ ಇರುವಂತೆ ಮಾಡಿದರು” ಎಂದು ಉದ್ಘಾಟನೆಯ ಸಂದರ್ಭ ಸಿಎಂ ದೇವೇಂದ್ರ ಫಡ್ನವಿಸ್ ಅವರು ಆಡಿದ ಮಾತುಗಳು ದೇಗುಲದ ಪ್ರಾಮುಖ್ಯತೆ ಎಷ್ಟಿತ್ತು ಎಂಬುದನ್ನು ಸಾರಿ ಹೇಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.