ಬೆಂಗಳೂರು: ಕೇಂದ್ರ ಸರಕಾರ ಬಜೆಟ್ಗೆ ಎಲ್ಲ ಕಡೆಯಿಂದಲೂ ಒಳ್ಳೆಯ ಪ್ರಶಂಸೆಯ ಮಾತುಗಳೇ ಬಂದಿವೆ. ದೇಶದ ಜನತೆ ವಿವಿಧ ರೀತಿಯಲ್ಲಿ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ಸರಕಾರ ಕೇಂದ್ರಕ್ಕೆ ವಿರೋಧ ಪಕ್ಷವಾಗಿರುವುದರಿಂದ ವಿರೋಧಗಳನ್ನು ಮಾಡಲೇಬೇಕಾಗಿದೆ, ಮಾಡುತ್ತಾರೆ ಅಷ್ಟೆ. ಆದರೆ ಅವರ ಟೀಕೆಗಳಲ್ಲಿ ಹುರುಳಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಇಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರ ಬಜೆಟ್ ಕುರಿತು ರಾಜ್ಯದ ಕಾಂಗ್ರೆಸ್ ನಾಯಕರ ಟೀಕೆಗಳು, ರಾಜ್ಯದ ಕಾನೂನು ಸುವ್ಯವಸ್ಥೆ ವಿಚಾರ, ಘನತೆವೆತ್ತ ರಾಷ್ಟ್ರಪತಿಗಳ ವಿರುದ್ಧ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಮಾಡಿದ ಕೀಳು ಅಭಿರುಚಿಯ ಟೀಕೆ, ಕಾಂಗ್ರೆಸ್ ನಡೆಸುತ್ತಿರುವ ಭ್ರಷ್ಟಾಚಾರಗಳು, ಕುಂಭಮೇಳ ಕುರಿತು ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರ ಅವಮಾನಕಾರಿ ಹೇಳಿಕೆಗಳು ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ತೀವ್ರ ವಾಗ್ದಾಳಿ ನಡೆಸಿದರು.
ಕೇಂದ್ರದ ಬಜೆಟ್ ಬಗ್ಗೆ ದೇಶದ ಎಲ್ಲ ಕಡೆಗಳಿಂದ ಪ್ರಶಂಸೆ ಬಂದಿದೆ. ವಿರೋಧ ಪಕ್ಷಗಳಿಂದ ಟೀಕೆಗಳು ಕೂಡ ಬಂದಿವೆ. ವಿರೋಧ ಪಕ್ಷವಾಗಿ ಪ್ರಶಂಸೆ ಮಾಡೋದು ಅವರಿಗೆ ಕಷ್ಟ. ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಸಹಜವಾಗಿ ಟೀಕೆ ಮಾಡಿದೆ. ಬಿಜೆಪಿ ವಿರುದ್ಧ ಮತ್ತು ಬಿಜೆಪಿ ಸರಕಾರದ ವಿರುದ್ಧ ಯಾವಾಗಲೂ ಆಂದೋಲನದ ರೀತಿಯಲ್ಲಿ ಟೀಕೆ ಮಾಡುವುದು ಅವರ ಸಹಜ ನಡವಳಿಕೆ. ಪ್ರಧಾನ ಮಂತ್ರಿ ಅನ್ನುವ ಗೌರವವೂ ಇಲ್ಲದೆ, ರಾಷ್ಟ್ರಪತಿಗಳ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದು ಅವರ ನಡವಳಿಕೆ.
ಇಡೀ ದೇಶದಲ್ಲಿ ಬಜೆಟ್ಗೆ ಅತ್ಯುತ್ತಮ ಪ್ರಶಂಸೆಗಳು ಬರ್ತಾ ಇವೆ. ಮುಖ್ಯಮಂತ್ರಿಗಳಿಂದ ಹಿಡಿದು ಅನೇಕ ಸಚಿವರೂ ಕೂಡ ಕರ್ನಾಟಕಕ್ಕೆ ಲಾಭ ಇಲ್ಲ, ಏನೂ ಸಿಕ್ಕಿಲ್ಲ ಅಂತ ಹೇಳ್ತಾ ಇದ್ದಾರೆ. ಬಜೆಟ್ನಲ್ಲಿ ಕಾಂಗ್ರೆಸ್ನವರಿಗೆ ಏನೂ ಸಿಗದೇ ಇರಬಹುದು. ಆದರೆ ದೇಶದ ಜನತೆಗೆ ಈ ಬಜೆಟ್ನಲ್ಲಿ ಸಾಕಷ್ಟು ಕೊಡುಗೆಗಳು ಸಿಕ್ಕಿವೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಜನತೆ ಈ ಬಜೆಟ್ ಅನ್ನು ಸಂಪೂರ್ಣವಾಗಿ- ಸ್ವತಂತ್ರ ಭಾರತದ ಇಷ್ಟು ವರ್ಷಗಳ ಬಜೆಟ್ಗಳಲ್ಲಿ ಅತ್ಯುತ್ತಮ, ಮುಂದಾಲೋಚನೆ ಇರುವಂತಹ ಬಜೆಟ್ ಎಂದು ಶ್ಲಾಘಿಸಿದ್ದಾರೆ. ಅಭಿವೃದ್ಧಿಪರವಾದ ಬಜೆಟ್ ಎಂದು ಮುಕ್ತ ಕಂಠದಿಂದ ಹೊಗಳಿದ್ದಾರೆ.
ಕರ್ನಾಟಕಕ್ಕೆ ಕಳೆದ ವರ್ಷ 44,485.49 ಕೋಟಿ ರೂ.ಗಳ ನೆರವು ಕೇಂದ್ರದಿಂದ ಕೊಡಬೇಕಾಗಿತ್ತು. ಅದನ್ನೂ ಮೀರಿ, 46,937.72 ಕೋಟಿ ಸಿಕ್ಕಿದೆ. ಆದರೂ ನಮಗೇನೂ ಕೊಟ್ಟಿಲ್ಲ ನಮಗೇನೂ ಕೊಟ್ಟಿಲ್ಲ ಎಂದು ಸುಳ್ಳು ಹೇಳ್ತಾ ಇದ್ದಾರೆ. 2,400 ಚಿಲ್ಲರೆ ಕೋಟಿ ಹೆಚ್ಚುವರಿ ಸಿಕ್ಕಿದೆ. ಆದರೂ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಜಿಎಸ್ಟಿ ಹಣ ಇದು. ಎಲ್ಲಾದರೂ ನಮಗೆ ಎರಡೂವರೆ ಸಾವಿರ ಕೋಟಿ ಹೆಚ್ಚಿಗೆ ಕೊಟ್ಟಿದ್ದಾರೆ ಅಂತ ಕಾಂಗ್ರೆಸ್ನವರು ಹೇಳಿದ್ದಾರಾ? ಈಗಲೂ ಅವರು ಹೇಳುತ್ತಿರುವುದು ಏನೂ ಕೊಟ್ಟಿಲ್ಲ ಅಂತ. ಈ ವರ್ಷದ ಬಜೆಟ್ನಲ್ಲಿ ಕಳೆದ ವರ್ಷಕ್ಕಿಂತ 10 ಪರ್ಸೆಂಟ್ ಹೆಚ್ಚಿಗೆ ಕೊಡುತ್ತಿದ್ದಾರೆ. ಆ ಮೂಲಕ 51,876.54 ಕೋಟಿ ರೂಗಳ ಅನುದಾನ ಕರ್ನಾಟಕಕ್ಕೆ ಬರುತ್ತದೆ. ಹಾಗಿದ್ದ ಮೇಲೆ ಏನೂ ಪ್ರಯೋಜನ ಇಲ್ಲ ಅಂತ ಹೇಗೆ ಹೇಳ್ತಾರೆ?
ರೈಲ್ವೇ ಯೋಜನೆಗಳಿಗೆ 7564 ಕೋಟಿ ಕೊಟ್ಟಿದ್ದಾರೆ. ಇದು ನಮಗೆ ಕೊಡುವ ಜಿಎಸ್ಟಿ ಹಣದಲ್ಲಿ ಅಲ್ಲ, ಇದು ಪ್ರತ್ಯೇಕ. ಪರಿಶಿಷ್ಟ ಜಾತಿ ವರ್ಗಗಳಿಗೆ ಕರ್ನಾಟಕದ ಬಜೆಟ್ ನಲ್ಲಿ ಸಿದ್ದರಾಮಯ್ಯ ಯಾವ ರೀತಿ ಹೇಳ್ತಾರೆ? 39,000 ಕೋಟಿ ಹಣವನ್ನು ಎಸ್ಸಿ/ಎಸ್ಟಿ ಅಭಿವೃದ್ಧಿಗೆ ಇಟ್ಟಿದ್ದೇವೆ ಅಂತ ಹೇಳ್ತಾರೆ. ಅದರಲ್ಲಿ ಒಂದು ಕೈಯ್ಯಲ್ಲಿ ಕೊಟ್ಟೆ, ಇನ್ನೊಂದು ಕೈಯಲ್ಲಿ ತಗೊಂಡೆ ಅನ್ನುವ ರೀತಿಯಲ್ಲಿ ಗ್ಯಾರಂಟಿಗಳಿಗೆ ವರ್ಗಾವಣೆ ಮಾಡ್ತಾರೆ.
ಒಂದು ವರ್ಷ 11 ಸಾವಿರ ಕೋಟಿ, ಇನ್ನೊಂದು ವರ್ಷದಲ್ಲಿ 14,000 ಕೋಟಿ- ಒಟ್ಟಿಗೆ 25,000 ಕೋಟಿ ದಲಿತರ ಹಣ ನುಂಗಿದ್ದಾಯ್ತು. ಕೇಳಿದ್ರೆ ಉತ್ತರ ಕೊಡಲ್ಲ. ಆದರೆ, ಇಲ್ಲಿ ಈ ಹಣವನ್ನು ಬೇರೆ ಬೇರೆ ಇಲಾಖೆಗಳಿಗೆ ಮೀಸಲಿಡಬೇಕು. ವಂಚನೆ ಮಾಡಲಿಕ್ಕೆ ಒಂದು ಕಂತಿನ ಮೊತ್ತವನ್ನು ಮಾತ್ರ ಹೇಳ್ತಾರೆ. ಕೇಂದ್ರ ಸರಕಾರ ಇಡುವ ಹಣ ಅದು ಆಯಾ ಇಲಾಖೆಗಳಲ್ಲೇ ಇರ್ತದೆ. ಒಟ್ಟಾರೆ ಮೊತ್ತ ಇಷ್ಟು ಅಂತ ಹೇಳುವುದಿಲ್ಲ. ಆಯಾ ಇಲಾಖೆಗಳಲ್ಲಿ ಹಾಗೆಯೇ ಖರ್ಚಾಗ್ತದೆ.
ಕಾಂಗ್ರೆಸ್ ಹೇಳುವ ಹಾಗೆ- ಕೇಂದ್ರದ ಬಜೆಟ್ ಯಾವಾಗಲೂ ಒಂದು ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ಮಾಡುವಂಥದ್ದಲ್ಲ. ರಾಜ್ಯ ಸರಕಾರ ಕೂಡ ಜಿಲ್ಲೆ ಜಿಲ್ಲೆಗೆ ಇಷ್ಟು ಹಣ ಇಟ್ಟಿದ್ದೇವೆ ಅಂತ ಹೇಳುವುದಿಲ್ಲ. ಅದೇ ರೀತಿ ಇಡೀ ದೇಶದ ಬಜೆಟ್ ಮಂಡಿಸುವಾಗ ಈ ರಾಜ್ಯಕ್ಕೆ ಇಷ್ಟು ಆ ರಾಜ್ಯಕ್ಕೆ ಇಷ್ಟು ಅಂತ ಹೇಳುವುದಿಲ್ಲ. ಕರ್ನಾಟಕಕ್ಕೆ ಏನೂ ಕೊಟ್ಟೇ ಇಲ್ಲ ಎನ್ನುವುದು ಹಾಸ್ಯಾಸ್ಪದ.
ಚನ್ನಸಂದ್ರ ಮಾರ್ಗ ಯೋಜನೆ- 178 ಕೋಟಿ, ಕಡೂರು-ಚಿಕ್ಕಮಗಳೂರು- ಸಕಲೇಶಪುರ 28 ಕೋಟಿ ಸೇರಿದಂತೆ ಕರ್ನಾಟಕದ 22 ಯೋಜನೆಗಳಿಗೆ ಈ ಸಲ ಬಜೆಟ್ನಲ್ಲಿ ಹಣ ಕೊಟ್ಟಿದ್ದಾರೆ. ರೈಲ್ವೇ ಸಚಿವ ವಿ ಸೋಮಣ್ಣನವರು ಕಾಂಗ್ರೆಸ್ ಆರೋಪಗಳಿಗೆ ಉತ್ತರ ಕೊಟ್ಟಿದ್ದಾರೆ. ಮಧ್ಯಮ ವರ್ಗದವರು ಬಹಳ ಸಂತುಷ್ಟರಾಗಿದ್ದಾರೆ.
ಮಧ್ಯಮ ವರ್ಗಕ್ಕೆ ಮೊದಲು 2.5 ಲಕ್ಷ, 3 ಲಕ್ಷ, 4 ಲಕ್ಷದ ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಇತ್ತು. ಆ ಮೇಲೆ 7 ಲಕ್ಷಕ್ಕೆ ಏರಿಸಿದರು. ಈ ಬಾರಿ ಅದನ್ನು 12 ಲಕ್ಷಕ್ಕೆ ಏರಿಸಿದ್ದಾರೆ. ಕಾಂಗ್ರೆಸ್ ಸರಕಾರ ದೇಶವನ್ನು ಆಳುತ್ತಿದ್ದಾಗ, 3 ಲಕ್ಷಕ್ಕಿಂತ ಮೇಲೆ ತೆರಿಗೆ ವಿನಾಯಿತಿ ಇರಲಿಲ್ಲ. 2014ರ ಬಳಿಕ 2.5 ಲಕ್ಷ ಇದ್ದಿದ್ದು, 11 ವರ್ಷದಲ್ಲಿ 12 ಲಕ್ಷ ರೂ.ಗಳ ವರೆಗೆ ತೆರಿಗೆ ವಿನಾಯಿತಿ ಏರಿದೆ. 9.5 ಲಕ್ಷ ರೂ ಮೊತ್ತಕ್ಕೆ ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ ಹೆಚ್ಚಳವಾಗಿದೆ.
ನಮ್ಮ ಸರಕಾರ ಜನರ ಆಶೋತ್ತರಕ್ಕೆ ಸ್ಪಂದಿಸುವ ಕೆಲಸ ಮಾಡಿದೆ. ಮೊದಲು 7 ಲಕ್ಷ ಮೀರಿದರೆ 30 % ತೆರಿಗೆ ಕಟ್ಟಬೇಕಿತ್ತು. ಈಗ ಅದು ಯಾವ ಪ್ರಮಾಣದಲ್ಲಿ ಇಳಿಕೆಯಾಯ್ತು ನೋಡಿ. ಮೊದಲ 4 ಲಕ್ಷ ರೂಗ.ಗಳ ಆದಾಯಕ್ಕೆ ಯಾವ ತೆರಿಗೆಯೂ ಇಲ್ಲ. ಆ ನಂತರದ ಮೊತ್ತಕ್ಕೆ 5, 7, 10 ಪರ್ಸೆಂಟ್ ಎನ್ನವ ರೀತಿಯಲ್ಲಿ ರಿಬೇಟ್ ಕೊಡುತ್ತಿದ್ದಾರೆ. 24 ಲಕ್ಷ ವರೆಗೆ ಆದಾಯ ಇದ್ದರೆ ಸ್ಲಾಬ್ ಕೊಟ್ಟಿದ್ದಾರೆ. 24 ಲಕ್ಷದ ಮೇಲಿದ್ದರೆ ಮಾತ್ರ 30 ಪರ್ಸೆಂಟ್ ತೆರಿಗೆ ಕಟ್ಟಬೇಕಾಗುತ್ತದೆ. ಇದರಿಂದ ಎಷ್ಟು ಕೋಟಿ ಜನರಿಗೆ ಲಾಭವಾಗಿದೆ ನೋಡಿ. 40-50 ಸಾವಿರ ಆದಾಯ ಪಡೆಯುತ್ತಿದ್ದವರಿಗೆ ಮಾತ್ರ ಅನುಕೂಲವಿತ್ತು, ಇವತ್ತು ತಿಂಗಳಿಗೆ 1 ಲಕ್ಷ ಆದಾಯ ಇರುವವರು ಕೂಡ ತೆರಿಗೆ ಕಟ್ಟಬೇಕಿಲ್ಲ. ಅವರ ಕುಟುಂಬಗಳಿಗೆ ಈ ಹಣವನ್ನು ಬಳಸಿಕೊಳ್ಳಬಹುದು. ಮಕ್ಕಳ ಓದಿಗೆ, ಕುಟುಂಬ ನಿರ್ವಹಣೆಗೆ ಈ ಹಣ ಬಳಕೆಯಾಗುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲೇ ಸುಳ್ಳು ಹೇಳಿದರು. 39,000 ಕೋಟಿ ಹಣವನ್ನು ಎಸ್ಟಸಿ/ಎಸ್ಟಿ ಅಭಿವೃದ್ಧಿಗೆ ಮೀಸಲಿಟ್ಟಿದ್ದೇನೆ. ಕೇಂದ್ರ ಸರಕಾರ ಕೇವಲ 60 ಸಾವಿರ ಕೋಟಿ ಮೀಸಲಿಟ್ಟಿದೆ ಅಂದರು. ಆದರೆ ಅವತ್ತು ಕೂಡ 1 ಲಕ್ಷ 85 ಸಾವಿರ ಕೋಟಿ ಹಣವನ್ನು ದಲಿತರ ಶ್ರೇಯೋಭಿವೃದ್ಧಿಗೆ ಕೇಂದ್ರ ಸರಕಾರ ಮೀಸಲಿಟ್ಟಿತ್ತು. ಆದರೆ ಸಿದ್ದರಾಮಯ್ಯ ಸರಕಾರ ದಾರಿ ತಪ್ಪಿಸುವ ಕೆಲಸ ಮಾಡಿದೆ.
ಇವತ್ತು ಹೆಣ್ಣು ಮಕ್ಕಳಿಗೆ 2 ಕೋಟಿ ರೂ ವರೆಗೆ ಸಾಲ ಕೊಡುವ ಕೆಲಸವನ್ನು ಕೇಂದ್ರ ಸರಕಾರ ಮಾಡಿದೆ. ಅದಾದ ನಂತರ ಇವತ್ತಿನ ಬಜೆಟ್ ಗಾತ್ರ ಒಟ್ಟಾರೆ 50 ಲಕ್ಷ ಕೋಟಿ. ಅದರಲ್ಲಿ 20 % ನಷ್ಟು ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ. ನಮ್ಮ ರಾಜ್ಯದಲ್ಲಿ ನೋಡಿ, ಕನಿಷ್ಠ 5% ಕೂಡ ಬಂಡವಾಳ ವೆಚ್ಚಕ್ಕಾಗಿ ಹಣ ಕೊಟ್ಟಿಲ್ಲ. ಬಂಡವಾಳ ಹೂಡಿಕೆ ಇಲ್ಲವೆಂದ ಮೇಲೆ ಆದಾಯ ಬರೋದಿಲ್ಲ.
ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ರೈಲುಗಳ ಅಭಿವೃದ್ಧಿ, ವಿಮಾ ನಿಲ್ದಾಣಗಳ ನಿರ್ಮಾಣ, ಇವೆಲ್ಲವನ್ನೂ ಕೂಡ ಕೇಂದ್ರದ ಬಜೆಟ್ ನಲ್ಲಿ ಮಾಡಲಾಗುತ್ತದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಮಂಡಿಸಿದ ಬಜೆಟ್ನಲ್ಲಿ ಬಂಡವಾಳ ಹೂಡಿಕೆ ಏನೂ ಇಲ್ಲ. ಬರೀ ಸಾಲ, ಸಾಲ, ಸಾಲ. ಕರ್ನಾಟಕದಲ್ಲಿ ವಿವೇಚನೆಯಿಲ್ಲದ, ಇತಿಮಿತಿಯಲ್ಲ, ಲೆಕ್ಕಾಚಾರವಿಲ್ಲದ ಗ್ಯಾರಂಟಿಗಳಿಂದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಈ ಇತಿಮಿತಿಗಳನ್ನು ಮೊದಲೇ ಅರ್ಥ ಮಾಡಿಕೊಂಡಿದ್ರೆ, ಇದನ್ನು ನಿಭಾಯಿಸಬಹುದಾಗಿತ್ತು. ಆದರೆ ಈಗ ನಿಭಾಯಿಸಲಾಗದೆ ಒದ್ದಾಡುತ್ತಿದ್ದಾರೆ. ಮಾತೆತ್ತಿದರೆ ಕೇಂದ್ರ ಸರಕಾರವನ್ನು ತೋರಿಸುವುದು ಬಿಟ್ಟು ಏನೂ ಇಲ್ಲ.
ಮೈಕ್ರೋ ಫೈನಾನ್ಸ್ ಸಮಸ್ಯೆಗೆ ಕೇಂದ್ರ ಸರಕಾರದ ಆರ್ಥಿಕ ನೀತಿಯೇ ಕಾರಣ ಅಂತಾರೆ. ಕರ್ನಾಟಕದಲ್ಲಿ ಆರಂಭವಾದ ಸಮಸ್ಯೆಗೆ ಏನಾದರೂ ಲಾಜಿಕ್ ಇದೆಯೇ? ಯಾವ ಕಾರಣಕ್ಕೆ ಕರ್ನಾಟಕದಲ್ಲಿ ಈ ಸಮಸ್ಯೆ ಉದ್ಭವಿಸಿತು ಎನ್ನುವುದನ್ನು ತೋರಿಸಲಿ ನೋಡೋಣ. ಸಾಧ್ಯವಿಲ್ಲ.. ಇದನ್ನು ನೀವೇ ಸೃಷ್ಟಿಸಿದ್ದು. ನೀವು ನಿಮ್ಮ ಹಳ್ಳ ತೋಡಿಕೊಂಡಿದ್ದೀರಿ. ಅದನ್ನು ಕೇಂದ್ರ ಸರಕಾರದ ಮೇಲೆ ಹಾಕಿದ್ರೆ ಹಾಸ್ಯಾಸ್ಪದ.
17 ಬಾರಿ ಜೆಟ್ ಮಂಡಿಸಿದವರು ಈ ಸ್ಥಿತಿಗೆ ತಲುಪಿದ್ದಾರೆ. ಹಣಕಾಸು ಸಚಿವರೇ ಆಗಿ ದಾರಿ ತಪ್ಪಿಸುವ ಹೇಳಿಕೆ ನೀಡಿದರೆ ಬಾಕಿ ಉಳಿದವರು ಏನು ಮಾಡುತ್ತಾರೆ?
36 ಜೀವ ರಕ್ಷಕ ಔಷಧಿಗಳ ಮೇಲಿನ ಆಮದು ಸುಂಕ ರದ್ದು ಮಾಡಿದ್ದಾರೆ. ಅದರ ಮೇಲೆ ಟ್ಯಾಕ್ಸ್ ಇಲ್ಲ. ಇದರಿಂದ ಎಷ್ಟು ಬಡವರಿಗೆ ಅನುಕೂಲ ಆಗುತ್ತದೆ ಎಂದು ಯೋಚನೆ ಮಾಡಬೇಕು. ಪ್ರತಿ ಜಿಲ್ಲೆಯಲ್ಲೂ ಕ್ಯಾನ್ಸರ್ ಚಿಕಿತ್ಸಾ ಘಟಕಗಳನ್ನು ಕೇಂದ್ರದಿಂದ ಮಾಡುತ್ತಾರೆ. ಅಲ್ಲದೆ ಔಷಧಿಗಳ ಬೆಲೆಯನ್ನು ಸಂಪೂರ್ಣ ನಿಯಂತ್ರಣ ಮಾಡುತ್ತಾರೆ. ಆದರೆ ಕರ್ನಾಟಕ ಸರಕಾರ ಜನೌಷಧಿ ಕೇಂದ್ರಗಳನ್ನೇ ತೆರೆಯೋದಿಲ್ಲ ಅಂತ ಹೇಳ್ತದೆ. ಕೇಂದ್ರದಿಂದ ಇರುವ ಸೌಲಭ್ಯಗಳನ್ನು ಕೂಡ ಜನರಿಗೆ ಮುಟ್ಟಿಸಲಾಗದ ಸ್ಥಿತಿಯನ್ನು ಕರ್ನಾಟಕದ ಕಾಂಗ್ರೆಸ್ ಸರಕಾರ ಮಾಡಿದೆ. ಕೇಂದ್ರದ ಮೇಲೆ ಗೂಬೆ ಕೂರಿಸುವುದಷ್ಟೇ ಇವರ ಕೆಲಸ. ಯಾವುದೇ ಜನೌಷಧಿ ಕೇಂದ್ರಗಳನ್ನು ತೆರೆಯೋದಿಲ್ಲ ಎಂದು ಮುಖ್ಯಮಂತ್ರಿಗಳು, ಆರೋಗ್ಯ ಸಚಿವರೇ ಹೇಳಿದ್ರು.
ಕಚ್ಚಾ ವಸ್ತುಗಳ ಮೇಲೆ ಆಮದು ಸುಂಕ ಇಳಿಕೆ ಮಾಡಿದೆ. ಮೀನುಗಾರರಿಗೆ 60 ಸಾವಿರ ಕೋಟಿ ಅನುದಾನ ಇಡಲಾಗಿದೆ. 5 ವರ್ಷಗಳಲ್ಲಿ ಹತ್ತಿ ಕೃಷಿಗೆ ವಿಶೇಷ ಅನುದಾನ ಕೊಡಲಾಗಿದೆ. ವಿಕಸಿತ ಭಾರತದ ನಿಟ್ಟಿನಲ್ಲಿ ನಮ್ಮ ಬಜೆಟ್ ಮತ್ತು ನಮ್ಮ ನಡೆ ಇದೆ. ಸರ್ವವ್ಯಾಪಿ ಸರ್ವಸ್ಪರ್ಷಿ, ದೂರದೃಷ್ಟಿ ಇಟ್ಟುಕೊಂಡು ಕೊಟ್ಟ ಬಜೆಟ್ ಇದು. ಹಿರಿಯ ನಾಗರಿಕರಿಗೆ 50 ಸಾವಿರ ಟಿಡಿಎಸ್ ಕಡಿತ ಇತ್ತು. ಈಗ 1 ಲಕ್ಷದ ವರೆಗೆ ಸೌಲಭ್ಯ ನೀಡಲಾಗಿದೆ. ಬಾಡಿಗೆ ಆದಾಯದ ಮೇಲಿನ ತೆರಿಗೆ ವಿನಾಯತಿಯನ್ನು 6 ಲಕ್ಷಕ್ಕೆ ಏರಿಸಲಾಗಿದೆ. ದೇಶವನ್ನು ಉತ್ತಮ ವ್ಯವಸ್ಥೆಯನ್ನು ಕೊಂಡೊಯ್ಯುವ ಉತ್ತಮ ಬಜೆಟ್ ಇದಾಗಿದೆ. ಬೀದಿ ಬದಿಯ ವ್ಯಾಪಾರಿಗಳಿಗೂ ಕೂಡ ಇವತ್ತು ಸುಲಭದಲ್ಲಿ ಸಾಲ ಸಿಗುವಂತಾಗಿದೆ.
ಎಂಎಸ್ಎಂಇ ವಲಯಕ್ಕೆ ಉತ್ತೇಜನ. 2 ಕೋಟಿ ವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. 7.5 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವ ಯೋಜನೆಗಳು, ಶೇ 36ರಷ್ಟು ಜಿಡಿಪಿ ಇದರಿಂದ ಹೆಚ್ಚಾಗುತ್ತದೆ.
ಬಜೆಟ್ ಬಗ್ಗೆ ಕಾಂಗ್ರೆಸ್ ರಿಯಾಕ್ಷನ್ ಹೇಗಿತ್ತು ಅಂದರೆ- ಹಂದಿ ತಿಂದ ನಂತರ ಬೆಕ್ಕು ಹಜ್ ಯಾತ್ರೆಗೆ ಹೋಯಿತು ಅಂದ್ರು. ದೇದ ಜನರಿಗೆ ಇದನ್ನು ಬಿಡಿಸಿ ಹೇಳಬೇಕು. ಹಜ್ ಯಾತ್ರೆ ಯಾರದ್ದು. ಯಾರು ಹೋಗ್ತಾರೆ? ಹಜ್ ಯಾತ್ರೆ ಹೋದವರು ಹಂದಿ ತಿಂದ್ರಾ? ಬೆಕ್ಕು ಯಾರು ಇಲ್ಲಿ? ಹಂದಿ ತಿಂದ ಬೆಕ್ಕು ಹಜ್ ಯಾತ್ರೆಗೆ ಹೋದ ಹಾಗಿದೆ ಅಂದರೆ ದೇಶದ ಜನರಿಗೆ ಅರ್ಥವಾಗುವುದಿಲ್ಲ. ದಯವಿಟ್ಟು ವಿವರಣೆ ಕೊಡಬೇಕು. ಹಜ್ ಯಾತ್ರೆ ಮಾಡುವವರಾರು> ಹಂದಿ ಯಾರು? ತಿಂದವರು ಯಾರು? ವಿವರಣೆ ನೀಡಿ ಖರ್ಗೆಯವರೇ. ಇಲ್ಲದಿದ್ದರೆ- ಮುಸ್ಲಿಂ ಬಂಧುಗಳನ್ನು ಗೇಲಿ ಮಾಡಿದ್ದೀರಾ? ಅವರನ್ನು ನಿಂದಿಸಿದ್ದೀರಾ? ಬೆಕ್ಕು ಅಂದರೆ ಯಾರು? ಇದಕ್ಕೆ ಎಐಸಿಸಿ ಅಧ್ಯಕ್ಷರು ವಿವರಣೆ ನಿಡಬೇಕು ಎಂದು ಅಗ್ರಹಿಸುತ್ತೇನೆ.
ಗಂಗೆಯಲ್ಲಿ ಮುಳಗಿದರೆ ಬಡತನ ನಿರ್ಮೂಲನೆ ಆಗೋದಿಲ್ಲ ಅಂತ ಹೇಳಿದ್ರು. ನನ್ನ ಪ್ರಶ್ನೆ- ಯಾರಾದರೂ ಎಲ್ಲಾದರೂ ಬ್ಯಾನರ್ ಹಾಕಿದ್ರಾ? ನೀವು ಗಂಗೆಯಲ್ಲಿ ಬಂದು ಮುಳುಗಿ, ನಿಮ್ಮ ಬಡತನ ನಿರ್ಮೂಲನೆ ಆಗುತ್ತೆ, ನಿಮ್ಮ ಪಾಪ ತೊಳೆದು ಹೋಗುತ್ತೆ ಅಂತ ಯಾರಾದ್ರೂ ಬ್ಯಾನರ್ ಹಾಕಿದ್ರಾ?ಇದು ಹಿಂದೂ ಧರ್ಮದ ಅಸ್ಮಿತೆ. ಹಿಂದುತ್ವವನ್ನು ನೀವು ಯಾಕೆ ಈ ರೀತಿ ಹಂಗಿಸ್ತೀರಿ ಅನ್ನುವ ಮಾತು ಕೇಳ್ತೇನೆ. ಕರ್ನಾಟಕದ ರಾಜಕಾರಣ ಮಾಡುವಾಗ ಅವರಲ್ಲಿ ಇದ್ದ ಪ್ರಬುದ್ಧತೆ, ಆ ಘನತೆ ಈಗ ಇಲ್ಲ. ಜನರೊಟ್ಟಿಗೆ ಇದ್ದ ಸಂಬಂಧ ಎಲ್ಲವನ್ನೂ ಕಳಕೊಂಡಿದ್ದಾರೆ. ಅವರ ಬಾಯಿಂದ ಬರುವ ಮಾತಿನಲ್ಲಿ ವಿಷಕಾರಿ ಅಂಶಗಳು ಕಾಣುತ್ತಿವೆ. ಯಾರೋ ಅಪ್ರಬುದ್ಧರು ಇಂತಹ ಮಾತುಗಳನ್ನಾಡಿದರೆ ಅದಕ್ಕೆ ಬೆಲೆ ಕೊಡದೆ ತಳ್ಳಿಹಾಕಬಹುದು. ಆದರೆ ತಾವು ಇಂತಹ ಮಾತುಗಳನ್ನಾಡಿದರೆ ಜನ ನಿಮ್ಮ ಬಗ್ಗೆ ಇಟ್ಟಿರುವ ಗೌರವವನ್ನು ತಾವೇ ಕಳಕೊಳ್ಳುತ್ತೀರಿ.
ಪ್ರಿಯಾಂಕ್ ಖರ್ಗೆಯವರ ಬಗ್ಗೆ ತೀಕ್ಷ್ಣವಾಗಿಯೇ ಮಾತಾಡಬೇಕಾಗುತ್ತದೆ. ಅವರು ಪ್ರಬುದ್ಧರೋ, ಅಪ್ರಬುದ್ಧರೋ ಅಂತ ನನಗೆ ಗೊತ್ತಿಲ್ಲ. ಹಿಂದೂ ಧರ್ಮದಲ್ಲಿ ಸಮಾನತೆ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಅಂತ ಹೇಳಿಕೆ ನಿಡಿದ್ರು. ನಾನು ಅವರನ್ನು ಪ್ರಶ್ನಿಸುತ್ತೇನೆ- ತಾವು ಯಾವ ಧರ್ಮದವರು ಅಂತ ರಾಜ್ಯದ ಜನತೆಗೆ ತಿಳಿಸಬೇಕು. ನಿಮ್ಮದು ಯಾವ ಧರ್ಮ, ಹಿಂದೂ ಧರ್ಮದವರಾ? ಬೇರೆಯಾ? ಹಿಂದು ಧರ್ಮದವರೇ ಆಗಿದ್ದರೆ ಧರ್ಮಪಾಲನೆ ಮಾಡುವುದು ಬಿಡೋದು ನಿಮಗೆ ಬಿಟ್ಟಿದ್ದು. ನೀವು ಸ್ವತಂತ್ರರಿದ್ದೀರಿ.
ಆದರೆ ಇನ್ನೊಬ್ಬ ಹಿಂದೂವನ್ನು ನೀವು ಹೀಯಾಳಿಸುವುದು ಎಷ್ಟು ಸರಿ. ಆ ಅಧಿಕಾರವನ್ನು ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ನಿಮಗೆ ಕೊಟ್ಟಿಲ್ಲ. ನ್ಯೂನತೆಗಳನ್ನು ಸರಿಪಡಿಸಬೇಕಾದರೆ ಆಗ್ರಹ ಮಾಡಿ, ಹೋರಾಟ ಮಾಡಿ. ಆದರೆ ನಿಂದಿಸುವ ಅಧಿಕಾರ ನಿಮಗಿಲ್ಲ. ನೀವು ಹಿಂದು ಧರ್ಮ ಬಿಟ್ಟಿದ್ದರೆ, ನೀವು ಅದರಲ್ಲಿ ಇಲ್ಲ ಅಂತಾದರೆ, ನೀವು ಆಯ್ಕೆ ಮಾಡಿದ ಚಿತ್ತಾಪುರ ಮೀಸಲು ಕ್ಷೇತ್ರದಲ್ಲಿ ನಿಮ್ಮನ್ನು ಆಯ್ಕೆ ಮಾಡಿದ ಮತದಾರರಲ್ಲಿ ಹಿಂದೂಗಳಿಲ್ಲವೇ? ಅವರನ್ನು ನೀವು ಅವಮಾನಿಸುತ್ತಿದ್ದೀರಾ? ಮೀಸಲು ಕ್ಷೇತ್ರದಿಂದ ಹೇಗೆ ಸ್ಪರ್ಧೆ ಮಾಡಿದ್ದೀರಿ? ನಿಮ್ಮಲ್ಲಿರುವ ಸರ್ಟಿಫಿಕೇಟ್ ಯಾವುದು. ಮೀಸಲಿಗೆ ಒಳಪಡುವಂಥದ್ದು ಹೌದೋ ಅಲ್ಲವೋ ತಿಳಿಸಿ.
ಹಲವು ವಿಷಯಗಳು ನಿಮ್ಮ ಬಗ್ಗೆ ನನಗೆ ಗೊತ್ತಿದೆ. ಆದರೆ ನನ್ನ ಬಾಯಲ್ಲಿ ಆ ವಿಚಾರಗಳನ್ನು ಕೇಳೋದು ಬೇಡ. ನೀವು ಮನೆ ತುಂಬಿಕೊಂಡಿರುವುದು ಯಾರನ್ನು? ಅವರು ಹಿಂದೂ ಧರ್ಮೀಯರಲ್ವಾ? ನೂರಕ್ಕೆ ನೂರು ಹಿಂದೂ ಧರ್ಮವನ್ನು ಪಾಲಿಸುವವರನ್ನು ಮದುವೆ ಮಾಡಿಕೊಂಡಿದ್ದೀರಿ. ನೀವು ಅವರನ್ನು ಅವಮಾನಿಸುತ್ತಿದ್ದೀರಾ? ಅಥವಾ ಧರ್ಮವನ್ನು ನಿಂದಿಸುತ್ತಿದ್ದಿರಾ? ನಿಮಗೆ ಬೇಸರವಾಗಿದ್ದರೆ ಸರಿ. ಬೇರೆಯವರು ಹಿಂದೂ ಧರ್ಮವನ್ನು ಪಾಲನೆ ಮಾಡಿಕೊಂಡು ಬರುತ್ತಿದ್ದಾರಲ್ಲ. ಅವರನ್ನು ನಿಂದಿಸುತ್ತಿದ್ದೀರಾ? ಒಂದು ವೇಳೆ ನೀವು ಹಿಂದೂ ಧರ್ಮದಿಂದ ಹೊರಗೆ ಹೋಗಿದ್ದರೆ ನಿಮ್ಮದು ಯಾವ ಧರ್ಮ? ಅದು ಪರಿಶಿಷ್ಟ ಜಾತಿ ವರ್ಗಗಳಿಗೆ ಸೇರುತ್ತಾ? ಹಾಗಿದ್ದ ಮೇಲೆ ಪರಿಶಿಷ್ಟ ಜಾತಿಯ ಮೀಸಲಿರುವ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೀರಿ? ಹಾಗಿದ್ದ ಮೇಲೆ ಒಂದು ಕ್ಷಣವೂ ಕೂಡ ಆ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದು ಬರಲು ಸಾಧ್ಯವಿಲ್ಲ. ತಕ್ಷಣವೇ ನಿಮ್ಮ ಸ್ಥಾನವನ್ನು ತೆರವು ಮಾಡುವುದು ಸೂಕ್ತ ಎಂದು ನಾರಾಯಣಸ್ವಾಮಿ ತರಾಟೆಗೆ ತೆಗೆದುಕೊಂಡರು.
ಪದೇ ಪದೇ ಬಾಯಿ, ನಾಲಿಗೆಯನ್ನು ಹರಿಬಿಡುವದು ಸರಿಯಲ್ಲ. ನೀವು ಹುಟ್ಟಿದ್ದು ಹಿಂದೂವಾಗಿ. ನಾನು ಹಿಂದುವಾಗಿ ಹುಟ್ಟಿದ್ದೇನೆ ಅಂತ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ರು. ಹುಟ್ಟು ನನ್ನ ಕೈಯ್ಯಲ್ಲಿಲ್ಲ. ಸಾಯುವಾಗ ನನ್ನ ತೀರ್ಮಾನ ತಗೊಳ್ಳಬಹುದು. ಹಿಂದೂ ಧರ್ಮದ ನ್ಯೂನತೆಗಳನ್ನು ಸರಿಪಡಿಸಲು ಹೋರಾಟ ಮಾಡಿದ್ರು. ಆ ಕಾಲದಲ್ಲಿ ಅದು ಆಗಲಿಲ್ಲ. ಹಾಗಾಗಿ ಕೊನೆಗೆ ಹಿಂದೂ ಧರ್ಮವನ್ನು ತೊರೆದರು. ಆದರೆ ಈಗಿನ ಕಾಲದಲ್ಲಿ ಆ ನ್ಯೂನತೆಗಳು ಹಿಂದೂ ಧರ್ಮದಲ್ಲಿಲ್ಲ. ಹಿಂದೂ ಧರ್ಮದ ಮತ್ತೊಂದು ಭಾಗವಾದ ಬೌದ್ಧ ಧರ್ಮವನ್ನು ಸೇರಿದರು. ಇದನ್ನು ಜನ ಒಪ್ಪುತ್ತಾರೆ. ಅವರು ಯಾರನ್ನೂ ನಿಂದಿಸಲಿಲ್ಲ. ಈ ನಿಂದಿಸುವುದು ನಿಮಗೊಂದು ಚಟ. ಇದನ್ನು ಮುಂದುವರಿಸಿದರೆ ಜನ ನಿಮಗೆ ನಿಜಕ್ಕೂ ತಕ್ಕ ಪಾಠ ಕಲಿಸ್ತಾರೆ. ಚಿತಾಪುರದ ಜನ ಯಾಕೆ ಸಹಿಸಿಕೊಂಡಿದ್ದಾರೋ ಗೊತ್ತಿಲ್ಲ. ಅವರು ನಿಮಗೆ ತಿರುಗಿ ಬೀಳುವ ಮೊದಲು ಅವರನ್ನು, ಹಿಂದೂ ಧರ್ಮವನ್ನು ಕ್ಷಮೆ ಕೇಳಬೇಕು.
ಅಧಿಕಾರಕ್ಕಾಗಿ ಕಚ್ಚಾಡುತ್ತ ರಾಜ್ಯವನ್ನು ಅಭಿವೃದ್ಧಿ ಶೂನ್ಯವಾಗಿಸಿದ್ದೀರಿ. ಆಸ್ಪತ್ರೆಗಳಲ್ಲಿ ಸಿಬ್ಬಂದಿಯೂ ಇಲ್ಲ. ವೈದ್ಯರೂ ಇಲ್ಲ. ವ್ಯವಸ್ಥೆಯೂ ಇಲ್ಲ.
ಎಲ್ಲೋ ಒಂದು ಕಡೆ ರೇಪ್ ಆಗಿದೆ ಎಂದರೆ ಬಿಜೆಪಿ ಕಾಲದಲ್ಲಿ ಆಗಿಲ್ವಾ ಅಂತ ಉದ್ಧಟತನದ ಮಾತಾಡುತ್ತಾರೆ ಸಿದ್ದರಾಮಯ್ಯ. ಬಿಜೆಪಿ ಕಾಲದಲ್ಲಿ ಆಗಿದೆ ಅಂದರೆ ನಿಮ್ಮ ಕಾಲದಲ್ಲೂ ಆಗಬೇಕು ಅಂತ ಏನಾದರೂ ಇದೆಯಾ? ನಿಮಗೆ ರಾಜ್ಯದ ಮೇಲೆ ಹತೋಟಿ ಇಲ್ಲ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ಅದರಿಂದ ಈ ರೀತಿಯಾಗಿ ಮಾತನಾಡುತ್ತಿದ್ದೀರಿ. ನಿನ್ನೆ ತಾನೇ ಮಂಡ್ಯದಲ್ಲಿ ಗ್ಯಾಂಗ್ ರೇಪ್ ಆಗಿದೆ. ಇದಕ್ಕೆ ನಿಮ್ಮ ಉತ್ತರವೇನು ಮುಖ್ಯಮಂತ್ರಿಗಳೇ? ಈಗಲೂ ಬಿಜೆಪಿ ಕಾಲದಲ್ಲಿ ಆಗಿದೆ ಅಂತೀರಾ? ನಿಮ್ಮ ಭಂಡತನದ ಉತ್ತರ ಏನು? ದಾವಣಗೆರೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 33,621 ಬಾಲ್ಯ ವಿವಾಹಗಳು ಆಗಿವೆ. ಕೇವಲ ಬೆಂಗಳೂರಿನಲ್ಲಿ 4,324 ಪ್ರಕರಣಗಳು ದಾಖಲಾಗಿವೆ. ಏನು ಮಾಡ್ತಿದೆ ಈ ಸರಕಾರ? ಪ್ರಶ್ನೆ ಮಾಡಲೇಬೇಕಲ್ಲ.
ಬಿಜೆಪಿನವರು ಬಟ್ಟೆ ಹರಿದುಕೊಂಡರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಅಂತಾರೆ. ಇದು ಅವರ ಉತ್ತರ. ಹಾಗಾದರೆ ಯಾರು ಕೇಳಿದರೆ ನೀವು ಕೆಲಸ ಮಾಡ್ತೀರಿ? ಈ ಥರ ಭಂಡತನಕ್ಕೆ ಇಳಿದರೆ ಪ್ರಜಾಪ್ರಭುತ್ವ ವ್ಯವಸ್ಥೆಗೇನು ಬೆಲೆಯಿದೆ? ಸಂವಿಧಾನಕ್ಕೆ ಏನು ಬೆಲೆ ಕೊಡ್ತಾ ಇದ್ದೀರಿ ನೀವು?
ಮೈಕ್ರೋ ಫೈನಾನ್ಸ್ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸ್ತೇವೆ ಅಂದ್ರಿ? ಯಾಕೆ ಸಾಧ್ಯವಾಗಿಲ್ಲ? ಇವರೆಲ್ಲ ನಿಮ್ಮ ಪಾಕೆಟ್ ಅಲ್ಲೇ ಇದ್ದಾರೆ ಅಂತಾಯ್ತಲ್ಲ ಈಗ? ನೀವು ಅವರನ್ನು ರಕ್ಷಣೆ ಮಾಡ್ತಾ ಇದ್ದೀರಿ. ಇಷ್ಟಾದ ಮೇಲೂ ಕಿರುಕುಳ ತಪ್ಪಿಲ್ಲ. ನಿನ್ನೆ ಕೂಡ ಒಬ್ಬ ಯುವಕ ಪ್ರಾಣತ್ಯಾಗ ಮಾಡಿದ್ದಾನೆ.
ಗ್ಯಾರಂಟಿ ವಿಚಾರದಲ್ಲಿ- ಅಭಿವೃದ್ಧಿ ಆಗುತ್ತಿಲ್ಲ ರಾಜ್ಯದಲ್ಲಿ ಅಂತ ನಿಮ್ಮ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಬಾಲಕೃಷ್ಣ, ರಾಜು ಕಾಗೆ ಹೇಳಿದ್ರು. ನಾನು ಆತ್ಮಹತ್ಯೆ ಮಾಡಿಕೊಳ್ತೇನೆ ಅಂತ ಹೇಳಿದ್ರು. ಶಾಸಕರಾದವರು ಅಂತಹ ಕೆಲಸ ಮಾಡಬಾರದು, ಹೋರಾಟ ಮಾಡಬೇಕು.
ಎಲ್ಲವನ್ನೂ ಪುಕ್ಕಟೆ ಕೊಡೋಕಾಗಲ್ಲ ಅಂತ ಸಿದ್ದರಾಮಯ್ಯ ಹೇಳಿದ್ರು. ಇದು ಗ್ಯಾರಂಟಿಗಳನ್ನು ತುಂಬಾ ದಿವಸ ಕೊಡಲು ಆಗಲ್ಲ ಅನ್ನುವುದರ ಸೂಚನೆಯೇ? ಡಿಸಿಎಂ ಕೂಡ ಹೇಳಿದ್ರು. ಬಿ.ಆರ್ ಪಾಟೀಲ್ ಮುಖ್ಯಮಂತ್ರಿಗಳ ಸಲಹೆಗಾರನ ಹುದ್ದೆಗೆ ರಾಜೀನಾಮೆ ನೀಡಿಬಿಟ್ರು. ವಾಪಸ್ ತಗೊಳ್ಳಲ್ಲ, ಇಂತಹ ವ್ಯವಸ್ಥೆಯಿಂದ ದೂರ ಇರ್ತೇನೆ ಅಂತ ಘೋಷಿಸಿಬಿಟ್ರು. ನಿಮ್ಮ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದು ಗೊತ್ತಾಗುತ್ತಿದೆ. ಜನವಿರೋಧಿ ಸರಕಾರ ಇದು. ಇಡೀ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ನಾಶ ಮಾಡಿದ ಸರಕಾರ ಇದು. ಈ ಸರಕಾರ ಅಧಿಕಾರದಲ್ಲಿ ಮುಂದುವರಿಯಲು ಯೋಗ್ಯ ಅಲ್ಲ.
ನಮ್ಮಲ್ಲಿ ಅಧಿಕಾರಕ್ಕಾಗಿ ಹೊಡೆದಾಟ ಇಲ್ಲ. ಅಧ್ಯಕ್ಷ ಸ್ಥಾನ ಅಧಿಕಾರದ ಸ್ಥಾನ ಅಲ್ಲ. ಅದು ಸಂಘಟನೆಯ ಸ್ಥಾನ. ಕಾಂಗ್ರೆಸ್ ನಲ್ಲಿ 60-70 ಜನ ಮಂತ್ರಿಯಾಗಲು ಕಾಯುತ್ತಿರುವವರು ಇದ್ದಾರೆ. ನೀವೇನಾದ್ರೂ ಮಂತ್ರಿ ಮಂಡಲ ವಿಸ್ತರಣೆಗೆ ಕೈಹಾಕಿದರೆ ಸರಕಾರ ಉಳಿಯಲ್ಲ. ಇರುವವರಲ್ಲಿ ಹಣ ಕಬಳಿಸಲು ಪೈಪೋಟಿ. ನಮ್ಮಲ್ಲಿ ಕೆಲವು ಭಿನ್ನಾಭಿಪ್ರಾಯಗಳಿಂದ ಹೀಗಿದೆ. ನಾಳೆ ಹೈಕಮಾಂಡ್ನವರು ಒಂದು ತೀರ್ಮಾನ ಕೊಟ್ಟರೆ ಮತ್ತೆ ಭಿನ್ನಾಭಿಪ್ರಾಯ ಏನೂ ಉಳಿಯೋದಿಲ್ಲ.
ನಮ್ಮ ಪಕ್ಷ ಈಗ ಮಜಬೂತ್ ಆಗಿಯೇ ಇದೆ. ಚೆನ್ನಾಗಿ ನಡೀತಾ ಇದೆ. ಆದ್ರೂ ಏನು ವ್ಯತ್ಯಾಸ ಆದರೆ ಹೈಕಮಾಂಡ್ ಮೂಲಕ ಆಗುತ್ತದೆ. ಜೆ.ಪಿ ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ರಾಧಾ ಮೋಹನ್ದಾಸ್ ಅವರು ಬಂದಿದ್ರು. ಅವರ ಗಮನಕ್ಕೆ ತಂದಿದ್ದೇವೆ. ಕೆಂದರದ ಹೈಕಮಾಂಡ್ನವರು ದಿಲ್ಲಿ ಚುನಾವಣೆ, ಬಜೆಟ್ ವಿಚಾರದಲ್ಲಿ ಮಗ್ನರಾಗಿರುವುದರಿಂದ ರಾಜ್ಯ ಬಿಜೆಪಿ ಕಡೆಗೆ ಅಷ್ಟು ಗಮನ ಹರಿಸಲು ಸಾಧ್ಯವಾಗಿಲ್ಲ ಅಷ್ಟೆ. ಸದ್ಯದಲ್ಲೇ ಉತ್ತರ ಬರುತ್ತದೆ.
ರಾಜಕಾರಣದಲ್ಲಿ ಹರಿಶ್ಚಂದ್ರನನ್ನು ಹುಡುಕಲ್ಲ ನಾನು. ಆಪಾದನೆಗಳು ಬರುತ್ತವೆ. ಅದನ್ನು ಕೂಡ ಸಹಿಸಬೇಕು. ಕುಟುಂಬದಲ್ಲಿ ಇರೋದಿಲ್ವೇ? ಹಾಗೆ ಪಕ್ಷದಲ್ಲೂ ಬರ್ತದೆ. ನಮ್ಮದು ಲೀಡರ್ಸ್ ಪಾಟಿ ಅಲ್ಲ, ನಮ್ಮದು ಕೇಡರ್ಸ್ ಪಾರ್ಟಿ. ಕೇಡರ್ಗಳೇ ಲೀಡರ್ಗಳನ್ನು ತಯಾರು ಮಾಡುವವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.