ಕಲಬುರ್ಗಿ: ರಾಜ್ಯದ ಕಾಂಗ್ರೆಸ್ ಸರಕಾರವು ಗಾಳಿ ಒಂದನ್ನು ಬಿಟ್ಟು ಬೇರೆಲ್ಲದಕ್ಕೂ ತೆರಿಗೆ ಹಾಕಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕಿಸಿದರು.
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಸಂಬಂಧಿಸಿ ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಲಬುರ್ಗಿಯ ಜಗತ್ ಸರ್ಕಲ್ ಬಳಿ ಇಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅವರು ಮಾತನಾಡಿದರು. ಹಾಲು, ಪೆಟ್ರೋಲ್, ಆಲ್ಕೋಹಾಲ್, ಕರೆಂಟ್, ಬಸ್ ಚಾರ್ಜ್- ಸೇರಿ ಎಲ್ಲ ದರಗಳನ್ನು ಹೆಚ್ಚಿಸಿದ್ದಾರೆ ಎಂದು ಆಕ್ಷೇಪಿಸಿದರು.
ಸಚಿನ್ ಆತ್ಮಹತ್ಯೆಗೆ ಕಾರಣನಾದ ರಾಜು ಕಪನೂರ್ ಒಬ್ಬ ಗೂಂಡಾ. ಅವನನ್ನು ಕಾಂಗ್ರೆಸ್ಸಿಗರು ಗೂಂಡಾ ಕಾಯಿದೆಯಿಂದ ತೆಗೆಸಿದ್ದಾರೆ. ಈಗ ನಮ್ಮವನಲ್ಲ; ನಮ್ಮವನಲ್ಲ ಎನ್ನುತ್ತಿದ್ದಾರೆ ಎಂದು ಟೀಕಿಸಿದರು. ಆರೋಪಿಗಳಲ್ಲಿ ಮೊದಲ 3 ಜನ ಕಾಂಗ್ರೆಸ್ಸಿಗರು ಎಂದು ಗಮನ ಸೆಳೆದರು. ಈ ಭ್ರಷ್ಟ, ಆತ್ಮಹತ್ಯೆಗಳಿಗೆ ಕಾರಣವಾಗುವ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು. ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ನ್ಯಾಯ ಕೊಡಿಸುವವರೆಗೆ ಬಿಜೆಪಿ ವಿರಮಿಸುವುದಿಲ್ಲ ಎಂದು ಅವರು ಪ್ರಕಟಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಪ್ರಿಯಾಂಕ್ ಖರ್ಗೆಯವರು ಸಚಿವರಾಗಲು ಮೆರಿಟ್ ಕೋಟಾ ಇತ್ತೇ ಅಥವಾ ಪೇಮೆಂಟ್ ಕೋಟಾ ಇತ್ತೇ ಎಂದು ಪ್ರಶ್ನಿಸಿದರು. ಇದು ಬಾಬಾಸಾಹೇಬ ಅಂಬೇಡ್ಕರರು ನಮಗೆ ಕೊಟ್ಟ ಸಾಂವಿಧಾನಿಕ ಹಕ್ಕಿನ ದುರುಪಯೋಗ ಎಂದು ಆಕ್ಷೇಪಿಸಿದರು. ಬೇರೆ ದಲಿತರನ್ನು ತುಳಿದು ಸಮಾಧಿ ಮಾಡಿದ್ದಾರೆ ಎಂದು ಟೀಕಿಸಿದರು.
ನಿಮ್ಮ ಆಸ್ತಿ ತೆಗೆದುಕೊಂಡು ಹೋಗಲು ನಾವು ಬಂದಿಲ್ಲ; ನಿಮ್ಮ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ. ಕಲ್ಯಾಣ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯವರು ಯಾಕೆ ಮೇಲಕ್ಕೆ ಬಂದಿಲ್ಲ ಎಂಬುದಕ್ಕೆ ಪ್ರಿಯಾಂಕ್ ಉತ್ತರಿಸಬೇಕು ಎಂದು ಸವಾಲು ಹಾಕಿದರು.
ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಅವರು ಮಾತನಾಡಿ, ರಜಾಕರನ್ನು ಸದೆಬಡಿದಿದ್ದೇವೆ; ನಿಜಾಮನನ್ನು ಪಾಕಿಸ್ತಾನಕ್ಕೆ ಓಡಿಸಿದ್ದೇವೆ. ನಿಮ್ಮನ್ನೂ ಜನರು ಮನೆಗೆ ಕಳಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ಎಚ್ಚರಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಮಾತನಾಡಿ, ರಾಜ್ಯದಲ್ಲಿ ಸುಪಾರಿ ರಾಜಕಾರಣ ನಡೆಯಲು ಸಾಧ್ಯವಿಲ್ಲ; ಇಲ್ಲಿ ಸಂವಿಧಾನಬದ್ಧ ರಾಜಕಾರಣ ಮಾತ್ರ ನಡೆಯಬೇಕು ಎಂದು ಆಗ್ರಹಿಸಿದರು. ಸುಪಾರಿ ರಾಜಕಾರಣ ಮಾಡುವವರಿಗೆ ಕಲಬುರ್ಗಿಯ ಜನತೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.
ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಮಾತನಾಡಿ, ಆತ್ಮೀಯರಾದ ಪ್ರಿಯಾಂಕ್ ಖರ್ಗೆಯವರು ನಮಗೆಲ್ಲ ಎಳನೀರು, ಬಿಸ್ಕೆಟ್ ಮೊದಲಾದವುಗಳನ್ನು ವ್ಯವಸ್ಥೆ ಮಾಡಿದ್ದಾರಂತೆ. ಪ್ರಿಯಾಂಕ್ ಖರ್ಗೆಯವರು ಜಗತ್ತಿನಲ್ಲಿ ನಾನೇ ಬುದ್ಧಿವಂತ. ನನ್ನನ್ನು ಬಿಟ್ಟರೆ ಬೇರೆ ಯಾರೂ ಬುದ್ಧಿವಂತರಲ್ಲ ಎಂದುಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆಯವರೇ ನಿಮಗೆ ಮಾನವೀಯತೆ, ಮನುಷ್ಯತ್ವ ಇದ್ದರೆ, ಧಮ್ಮಿದ್ದರೆ, ತಾಕತ್ತಿದ್ದರೆ ಸಚಿನ್ ಮನೆಗೆ ಹೋಗಿ ಬನ್ನಿ ಎಂದು ಒತ್ತಾಯಿಸಿದರು.
ಸಚಿನ್ ಸೋದರಿಯರು ಪೊಲೀಸ್ ಠಾಣೆಗೆ ಹೋದಾಗ ಯೂನಿಫಾರ್ಮನ್ನೂ ಪ್ರಿಯಾಂಕ್ ಖರ್ಗೆಯವರಿಗೆ ಒತ್ತೆಯಿಟ್ಟ ಪೊಲೀಸರು ಎಫ್ಐಆರ್ ಮಾಡಿಲ್ಲ ಎಂದು ಆಕ್ಷೇಪಿಸಿದರು. ನಾಚಿಕೆ ಆಗುವುದಿಲ್ಲವೇ ನಿಮಗೆ? ಥೂ ನಿಮ್ಮ ಜೀವನಕ್ಕೆ ಒಂದಿಷ್ಟು ಬೆಂಕಿ ಹಾಕ ಎಂದು ಟೀಕಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಎನ್. ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಮಾಜಿ ಸಂಸದ ಡಾ. ಉಮೇಶ್ ಜಾಧವ್, ಶಾಸಕ ಬಸವರಾಜ್ ಮತ್ತಿಮೂಡ್, ಡಾ. ಶೈಲೆಂದ್ರ ಬೆಲ್ದಾಳೆ, ಶರಣು ಸಲಗರ, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಕಲಬುರ್ಗಿ ನಗರ ಜಿಲ್ಲಾಧ್ಯಕ್ಷ ಚಂದ್ರಕಾಂತ ಪಾಟೀಲ್, ಕಲಬುರ್ಗಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಿ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.