ನವದೆಹಲಿ: ಅಂತಾರಾಷ್ಟ್ರೀಯ ವಿಶೇಷಚೇತನ ವ್ಯಕ್ತಿಗಳ ದಿನಾಚರಣೆ ಅಂಗವಾಗಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿಯಲ್ಲಿ ಇಂದು ವಿಶೇಷಚೇತನರ ಸಬಲೀಕರಣಕ್ಕಾಗಿ ಶ್ರಮಿಸಿದವರಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಎಲ್ಲಾ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಈ ಪ್ರಶಸ್ತಿಗಳು ದೂರಗಾಮಿ ಸಾಮಾಜಿಕ ಮಹತ್ವವನ್ನು ಹೊಂದಿವೆ. ಇದರಿಂದ ಉತ್ತೇಜಿತರಾಗಿ ಇತರೆ ವ್ಯಕ್ತಿಗಳು ಮತ್ತು ಸಂಸ್ಥೆಗಳು ವಿಶೇಷಚೇತನ ವ್ಯಕ್ತಿಗಳ ಸಬಲೀಕರಣದ ನಿಟ್ಟಿನಲ್ಲಿ ಮುಂದಾಗುತ್ತಾರೆ ಎಂದರು.
ಈ ವರ್ಷದ ಅಂತಾರಾಷ್ಟ್ರೀಯ ವಿಶೇಷಚೇತನರ ದಿನದ ಘೋಷವಾಕ್ಯ ‘ಎಲ್ಲರನ್ನೂ ಒಳಗೊಂಡ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಶೇಷಚೇತನ ವ್ಯಕ್ತಿಗಳಲ್ಲಿನ ನಾಯಕತ್ವ ಉತ್ತೇಜಿಸುವುದು’ ಎಂಬುದಾಗಿದೆ ಎಂದು ಉಲ್ಲೇಖಿಸಿದ ರಾಷ್ಟ್ರಪತಿ ಅವರು, ದಿವ್ಯಾಂಗರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು, ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು, ಉದ್ಯೋಗವನ್ನು ಒದಗಿಸುವುದು, ಅವರ ಉತ್ಪನ್ನಗಳನ್ನು ಖರೀದಿಸುವುದು ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವುದರಿಂದ ಅವರ ನಾಯಕತ್ವದ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದರು.
ಇಡೀ ಮನುಕುಲವು ದಿವ್ಯಾಂಗ ಜನರಿಗೆ ನೆಮ್ಮದಿ ಮತ್ತು ಸಮಾನ ಭಾವನೆ ಮೂಡಿಸಬೇಕು ಎಂದು ರಾಷ್ಟ್ರಪತಿ ಹೇಳಿದರು. ಅವರಿಗೆ ಎಲ್ಲ ರೀತಿಯಲ್ಲೂ ಅಡೆ ತಡೆರಹಿತ ವಾತಾವರಣ ಕಲ್ಪಿಸುವುದು ಸಮಾಜದ ಆದ್ಯತೆಯಾಗಬೇಕು. ನಿಜವಾದ ಅರ್ಥದಲ್ಲಿ, ದಿವ್ಯಾಂಗರಿಗೆ ಸಮಾನವಾದ ಸೌಲಭ್ಯಗಳು ಮತ್ತು ಅವಕಾಶಗಳು ಸಿಗುವ ಸಮಾಜವನ್ನು ಮಾತ್ರ ಸೂಕ್ಷ್ಮ ಸಮಾಜ ಎಂದು ಕರೆಯಬಹುದೆಂದರು.
ವಿಶೇಷಚೇತನರಾಗಿರುವುದು ಯಾವುದೇ ರೀತಿಯ ನೂನ್ಯತೆಯಲ್ಲ ಎಂದು ರಾಷ್ಟ್ರಪತಿ ಹೇಳಿದರು. ಇದು ವಿಶೇಷ ಸ್ಥಿತಿಯಾಗಿದೆ. ದಿವ್ಯಾಂಗರಿಗೆ ತಾದಾತ್ಮ್ಯನುಭೂತಿ ಬೇಕು, ಸಹಾನುಭೂತಿ ಅಲ್ಲ, ಅವರಿಗೆ ಸೂಕ್ಷ್ಮತೆ ಬೇಕು, ದಯೆಯಲ್ಲ, ಅವರಿಗೆ ನೈಸರ್ಗಿಕ ವಾತ್ಸಲ್ಯ ಬೇಕು, ವಿಶೇಷ ಗಮನವಲ್ಲ. ಸಮಾಜದ ಇತರ ಸದಸ್ಯರೊಂದಿಗೆ ಅವರು ಸಮಾನತೆ, ಘನತೆ ಮತ್ತು ಗೌರವವನ್ನು ಪಡೆಯುತ್ತಿದ್ದಾರೆಂಬುದನ್ನು ಸಮಾಜ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇತರ ವ್ಯಕ್ತಿಗಳಂತೆ ದುಡಿಯುವ ಅವಕಾಶ ದಿವ್ಯಾಂಗರಲ್ಲಿ ಆತ್ಮಸ್ಥೈರ್ಯ ಹಾಗೂ ಸಾರ್ಥಕ ಜೀವನ ನಡೆಸುವ ಪ್ರಜ್ಞೆಯನ್ನು ಮೂಡಿಸುತ್ತದೆ ಎಂದು ರಾಷ್ಟ್ರಪತಿ ಹೇಳಿದರು. ಹಾಗಾಗಿ, ಉದ್ಯೋಗ, ಉದ್ಯಮ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಅವರ ಜೀವನವನ್ನು ಸುಧಾರಿಸಬಹುದು ಎಂದು ದ್ರೌಪದಿ ಮುರ್ಮು ಅವರು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.