ಬೆಂಗಳೂರು: ವಕ್ಫ್ ವಿಷಯ ಮುಂದಿಟ್ಟು ರೈತರನ್ನು ಬೀದಿಗೆ ತರಲು ರಾಜ್ಯ ಸರಕಾರ ಕುಮ್ಮಕ್ಕು ಕೊಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೀದರ್ನಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಮೂಲಕ ರೈತರ, ಮಠ, ಮಂದಿರಗಳ ಜಾಗ ಒತ್ತುವರಿಯ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡಿದೆ. ಬೀದರ್ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಇವತ್ತು ಪ್ರವಾಸ ನಡೆಯುತ್ತಿದೆ ಎಂದು ಅವರು ವಿವರಿಸಿದರು. ಡಾ.ಅಶ್ವತ್ಥನಾರಾಯಣ್, ರೇಣುಕಾಚಾರ್ಯ, ಬಿ.ಶ್ರೀರಾಮುಲು, ಖೂಬಾ, ಬೈರತಿ ಬಸವರಾಜ್ ಮೊದಲಾದ ನಾಯಕರು ತಮ್ಮ ಜೊತೆಗಿದ್ದಾರೆ ಎಂದು ತಿಳಿಸಿದರು.
ನಿನ್ನೆ ಯಡ್ರಾಮಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು, ಇಂಥ ಹೇಯಕೃತ್ಯಗಳು, ಕೊಲೆಗಳು ಈ ಭಾಗದಲ್ಲಿ ಹೆಚ್ಚಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಈ ಭಾಗದ ಜನರು ಉಸ್ತುವಾರಿ ಸಚಿವರ ಮೇಲೆ ಭರವಸೆ ಕಳಕೊಂಡಿದ್ದಾರೆ ಎಂದು ತಿಳಿಸಿದ ಅವರು, ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ, ಜಾತಿ- ಧರ್ಮವನ್ನು ಪರಿಗಣಿಸದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತೊಗರಿ ಬೆಳೆ ರೋಗಕ್ಕೆ ಸಿಲುಕಿದ್ದು, 2ರಿಂದ 3 ಲಕ್ಷ ಎಕರೆ ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ. ರಾಜ್ಯ ಸರಕಾರವು ಗ್ಯಾರಂಟಿಯಿಂದ ಜನರು ಸಂತೋಷವಾಗಿದ್ದಾರೆಂದು ರೈತರನ್ನು ಮರೆತಿದೆ ಎಂದು ಟೀಕಿಸಿದರು. ಕೃಷಿ ಸಚಿವರಿಗೆ ಸಮಯ ಸಿಕ್ಕಿದರೆ ಈ ಭಾಗಕ್ಕೆ ಬಂದು ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳಲಿ. ಎಕರೆಗೆ 25 ಸಾವಿರದಿಂದ 30 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿಗಳು- ಕೃಷಿ ಸಚಿವರು ಈ ಕಡೆ ಗಮನಿಸಬೇಕಿದೆ ಎಂದು ಆಗ್ರಹಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ವಕ್ಫ್ ವಿಷಯದಲ್ಲಿ ದೇಶದ ಯಾವುದೇ ರೈತರಿಗೆ ಅನ್ಯಾಯ ಆಗಬಾರದು; ವಕ್ಫ್ ಕಾಯಿದೆಗೆ ಸಮಗ್ರ ತಿದ್ದುಪಡಿ ಆಗಬೇಕೆಂಬ ಉದ್ದೇಶ ಹೊಂದಿದ್ದಾರೆ. ಅವರ ಆದೇಶದಂತೆ ಸಂಸತ್ತಿನ ಸಮಿತಿ ರಚಿಸಲಾಗಿದೆ. ಯತ್ನಾಳ್ ಸೇರಿ ಯಾರು ಬೇಕಾದರೂ ವಕ್ಫ್ ವಿಚಾರದಲ್ಲಿ ತೆರಳಿ ಅಹವಾಲು ಸಲ್ಲಿಸಬಹುದು ಎಂದು ಬಿ.ವೈ.ವಿಜಯೇಂದ್ರ ಅವರು ಪ್ರಶ್ನೆಗೆ ಉತ್ತರ ನೀಡಿದರು.
ಹಿಂದೆ ಸಂಸದ ಗೋವಿಂದ ಕಾರಜೋಳರ ನೇತೃತ್ವದ ಸಮಿತಿ ರಚಿಸಿದ್ದು, ಅಧ್ಯಯನ ನಡೆಸಿ ಜೆಪಿಸಿಗೆ ಅದು ಹುಬ್ಬಳ್ಳಿಯಲ್ಲಿ ವರದಿಯನ್ನೂ ಕೊಟ್ಟಿದೆ. ರೈತರು, ದೇವಸ್ಥಾನ, ಮಠ ಮಂದಿರಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಒತ್ತಾಯಿಸಿದ್ದೇವೆ ಎಂದರು.
ಇಡಿಯವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಹೇಳಿಕೆಯನ್ನು ಇವತ್ತು ಅಥವಾ ನಾಳೆ ಮುಖ್ಯಮಂತ್ರಿಗಳಿಂದ ಅಥವಾ ಡಿಕೆ.ಶಿವಕುಮಾರರಿಂದ ನೀವು ನಿರೀಕ್ಷಿಸಬಹುದು ಎಂದು ಅವರು ಮುಡಾ ಅಕ್ರಮ, ಇಡಿ ವರದಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ನೀಡಿದರು. ಮುಡಾ ಹಗರಣ ಕುರಿತು ಬಿಜೆಪಿ ಸದನದಲ್ಲಿ ಚರ್ಚಿಸಲು ಮುಂದಾಗಿತ್ತು. ದೇಸಾಯಿ ಕಮಿಟಿ ರಚಿಸಿದ್ದು, ಚರ್ಚೆಗೆ ಅವಕಾಶ ಕೊಡುವುದಿಲ್ಲ ಎಂದು ಕಾನೂನು ಸಚಿವ ಎಚ್ಕೆ ಪಾಟೀಲರು ಸದನದಲ್ಲಿ ಹೇಳಿ, ಚರ್ಚೆಗೆ ಅವಕಾಶ ಕೊಡಲಿಲ್ಲ ಎಂದು ಗಮನ ಸೆಳೆದರು.
ಮೈಸೂರು ಮುಡಾ ಹಗರಣವು ಕೇವಲ ಮುಖ್ಯಮಂತ್ರಿಗಳ ಕುಟುಂಬಕ್ಕೆ 14 ನಿವೇಶನ ನೀಡಿಕೆಗಷ್ಟೇ ಸೀಮಿತವಾಗಿಲ್ಲ ಎಂದು ಬಿಜೆಪಿ ಆರಂಭದಲ್ಲೇ ತಿಳಿಸಿದೆ. 14 ನಿವೇಶನ ವಾಪಸಾತಿಗೆ 62 ಕೋಟಿ ಪರಿಹಾರ ಕೊಡಬೇಕೆಂದೂ ಮುಖ್ಯಮಂತ್ರಿಯವರು ಹೇಳಿದ್ದರು. ಬಡವರಿಗೆ ಕೊಡಬೇಕಿದ್ದ ಸಾವಿರಾರು ಕೋಟಿ ಮೊತ್ತದ ನಿವೇಶನಗಳು ಬ್ರೋಕರ್ಗಳ, ರಿಯಲ್ ಎಸ್ಟೇಟ್ನವರ ಪಾಲಾಗಿದೆ ಎಂದು ನಾನು ಹೇಳಿದ್ದೆ ಎಂದು ಗಮನಕ್ಕೆ ತಂದರು.
ಮುಡಾದಲ್ಲಿ ಹಗರಣವೇ ಆಗಿಲ್ಲವೆಂದು ಮುಖ್ಯಮಂತ್ರಿಗಳು ಹೇಳಿದ್ದರು. ಬಿಜೆಪಿ- ಜೆಡಿಎಸ್ ಪಾದಯಾತ್ರೆಯ ಬಳಿಕ ಸಿಎಂ ಪತ್ನಿಗೆ ಅಚಾನಕ್ಕಾಗಿ ಜ್ಞಾನೋದಯವಾಗಿ ನಿವೇಶನ ವಾಪಸ್ ಕುರಿತ ಅರ್ಜಿ ಸಲ್ಲಿಕೆ ಮಾಡಿದ್ದರು. ಇ.ಡಿ. ನಿಷ್ಪಕ್ಷಪಾತ ತನಿಖೆ ಮಾಡಿದೆ. 700 ಕೋಟಿಗೂ ಹೆಚ್ಚು ಮೌಲ್ಯದ ನಿವೇಶನಗಳು ಇದರಡಿ ಇವೆ ಎಂದು ಮೊದಲ ಹಂತದಲ್ಲಿ ಇ.ಡಿ. ತಿಳಿಸಿದೆ. 14 ನಿವೇಶನ ನೀಡಿಕೆ ವಿಚಾರದಲ್ಲಿ ಅಕ್ರಮಗಳು, ಫೋರ್ಜರಿ ಆಗಿದೆ. ವೈಟ್ನರ್ ಹಚ್ಚಿ ಅರ್ಜಿ ತಿದ್ದಿದ ಕುರಿತು ತಿಳಿಸಿದ್ದಾರೆ ಎಂದರು.
ಕದ್ದ ಮಾಲನ್ನು ವಾಪಸ್ ಕೊಟ್ಟರೂ ಆರೋಪ ಮುಕ್ತರಾಗಲು ಸಾಧ್ಯವಿಲ್ಲ. ಇ.ಡಿ ತನಿಖೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸತ್ಯ ಇನ್ನಷ್ಟು ಹೊರಕ್ಕೆ ಬರಲಿದೆ ಎಂದು ವಿಜಯೇಂದ್ರ ಅವರು ನುಡಿದರು.
ಆರ್.ಅಶೋಕ್ ಅವರ ದೆಹಲಿ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ವಿರೋಧ ಪಕ್ಷದ ನಾಯಕರಿದ್ದಾರೆ. ಕೇಂದ್ರ ವರಿಷ್ಠರನ್ನು ಭೇಟಿ ಮಾಡಲು ಹೋಗಿರಬಹುದು ಎಂದು ತಿಳಿಸಿದರು.
ಇದೇ 7ರಂದು ರಾಜ್ಯ ಕೋರ್ ಕಮಿಟಿ ಸಭೆ ನಡೆಯಲಿದೆ. ಎಸ್.ಟಿ.ಸೋಮಶೇಖರ್ ವಿಚಾರವೂ ಸೇರಿ ಎಲ್ಲ ವಿಚಾರಗಳನ್ನು ಚರ್ಚಿಸಿ ನಿರ್ಧರಿಸುತ್ತೇವೆ. ಪಕ್ಷದಲ್ಲಿ ಯಾರೆಷ್ಟೇ ದೊಡ್ಡ ಮುಖಂಡರಿದ್ದರೂ ಪಕ್ಷವಿರೋಧಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂಬ ಅಪೇಕ್ಷೆ ಹಿರಿಯರದು. 7ರಂದು ಚರ್ಚಿಸಿ ದೆಹಲಿಗೆ ವರದಿ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಯತ್ನಾಳ್ ಅವರ ಕುರಿತ ಪ್ರಶ್ನೆಗೆ ಉತ್ತರಿಸಿ, ಹೈಕಮಾಂಡ್ ಗಮನಕ್ಕೆ ಎಲ್ಲವೂ ಬಂದಿದೆ. ನೋಟಿಸನ್ನು ಕೂಡ ಕೊಟ್ಟಿದ್ದಾರೆ. ಕೇಂದ್ರದ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿರಬೇಕಾಗುತ್ತದೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರನ್ನು ಕಂಡರೆ ಮುಖ್ಯಮಂತ್ರಿಗಳು, ಕಾಂಗ್ರೆಸ್ ಸರಕಾರಕ್ಕೆ ಭಯ ಇದೆ. ಅವರು ಮಾಜಿ ಮುಖ್ಯಮಂತ್ರಿ ಆದರೂ ಜನರ ಮನಸ್ಸಿನಲ್ಲಿದ್ದಾರೆ. ಅವರೊಬ್ಬ ರೈತ ನಾಯಕ, ಹೋರಾಟಗಾರ. ಅದಕ್ಕಾಗಿಯೇ ರಾಜಕೀಯಪ್ರೇರಿತ ಎಫ್ಐಆರ್ ಹಾಕುತ್ತಿದ್ದಾರೆ. ಯಡಿಯೂರಪ್ಪ ಅವರು ಆವತ್ತೂ ಹೆದರಿಲ್ಲ; ಈಗಲೂ ಹೆದರಿ ಓಡಿ ಹೋಗುವುದಿಲ್ಲ. ಎಲ್ಲವನ್ನೂ ದಿಟ್ಟವಾಗಿ ಎದುರಿಸುತ್ತಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ನಮ್ಮನ್ನು ಕಟ್ಟಿ ಹಾಕುವ ಪ್ರಯತ್ನದಲ್ಲಿ ಕಾಂಗ್ರೆಸ್ಸಿಗೆ ಯಶಸ್ಸು ಸಿಗುವುದಿಲ್ಲ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.