ಕೋಟ : ಪಂಚಾಯತ್ರಾಜ್ ವ್ಯವಸ್ಥೆಯ ಸುಧಾರಣೆಗಾಗಿ ನೇಮಕಗೊಂಡ ಶಾಸಕ ರಮೇಶ ಕುಮಾರ್ ಸಮಿತಿಯ ವರದಿಯ 84 ಶಿಫಾರಸುಗಳು ಅನುಷ್ಠಾನವಾದರೆ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
ಅವರು ಕೋಟತಟ್ಟು ಗ್ರಾ.ಪಂ. ಸಾರಥ್ಯದಲ್ಲಿ, ಡಾ| ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಕೋಟ, ಕಾರಂತ ಟ್ರಸ್ಟ್ ಉಡುಪಿ ಆಶ್ರಯದಲ್ಲಿ, ಡಾ| ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಂಗವಾಗಿ ಅ. 9ರಂದು ಕೋಟ ಕಾರಂತ ಕಲಾಭವನದಲ್ಲಿ ಜರಗಿದ ಪಂಚಾಯತ್ ಸಮಾವೇಶ ‘ಪಂಚಾಯತ್ ಹಬ್ಬ ಸುರಾಜ್ಯ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಉಡುಪಿ ಜಿ.ಪಂ. ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್ ಮಾತನಾಡಿ, ಪಂಚಾಯತ್ ಆಡಳಿತ ವ್ಯವಸ್ಥೆಯಲ್ಲಿ ಜನಪ್ರತಿನಿಗಳು ಅಧಿಕಾರಿಗಳನ್ನು ದೂರುವ ಬದಲು ಜತೆಯಾಗಿ ಕಾರ್ಯ ನಿರ್ವಹಿಸಿದಾಗ ಅಭಿವೃದ್ಧಿ ಸಾಧ್ಯ ಎಂದರು.ಈ ಸಂದರ್ಭ ಪಂಚಾಯತ್ ಸದಸ್ಯರೊಂದಿಗೆ ಸಮಾಲೋಚನೆ ಹಾಗೂ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿ ಜನಾರ್ದನ ಮರವಂತೆ ಪಂಚಾಯತ್ರಾಜ್ ವ್ಯವಸ್ಥೆಯ ಕುರಿತು ವಿಚಾರ ಮಂಡಿಸಿದರು. ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಉಡುಪಿ ತಾ.ಪಂ. ಅಧ್ಯಕ್ಷೆ ಸುನೀತಾ ನಾಯ್ಕ, ಕುಂದಾಪುರ ತಾ.ಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ, ಕಾರ್ಕಳ ತಾ.ಪಂ. ಅಧ್ಯಕ್ಷೆ ವಿಜಯಾ, ಉಡುಪಿ ತಾ.ಪಂ. ಉಪಾಧ್ಯಕ್ಷ ಗಣೇಶ್ ಕುಮಾರ್, ಜಿ.ಪಂ. ಸದಸ್ಯೆ ಸುನೀತಾ ರಾಜಾರಾಮ್, ಬಾಬು ಹೆಗ್ಡೆ, ಮಮತಾ ಶೆಟ್ಟಿ, ತಾ.ಪಂ. ಸದಸ್ಯ ರಾಘವೇಂದ್ರ ಕಾಂಚನ್ ಹಾಗೂ ಕೋಟತಟ್ಟು ಗ್ರಾ.ಪಂ. ಉಪಾಧ್ಯಕ್ಷ ಲೋಕೇಶ ಶೆಟ್ಟಿ, ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ. ಕುಂದರ್, ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ಕೋಟ-ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ ಪ್ರಭು, ವಕೀಲ ಟಿ.ಬಿ. ಶೆಟ್ಟಿ, ಕುಂದಾಪುರ ತಾ.ಪಂ. ಇಒ ನಾರಾಯಣ ಸ್ವಾಮಿ, ಕಾರ್ಕಳ ತಾ.ಪಂ. ಇಒ ಚೆನ್ನಪ್ಪ ಹಾಗೂ ಕೋಟತಟ್ಟು ಗ್ರಾ.ಪಂ. ಸದಸ್ಯರು, ವಿವಿಧ ಪಂಚಾಯತ್ಗಳ ಅಧಿಕಾರಿಗಳು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ, ಜನಾಧಿಕಾರ ಪ್ರತಿಷ್ಠಾನ ಕೋಟ, ಸಿ.ಎ.ಬ್ಯಾಂಕ್ ಕೋಟ ಕಾರ್ಯಕ್ರಮಕ್ಕೆ ಸಹಕಾರ ನೀಡಿತು.ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ, ಉಪನ್ಯಾಸಕ ಸಂಜೀವ ಸಿ.ಕಾರ್ಯಕ್ರಮ ನಿರೂಪಿಸಿದರು.
ಉತ್ತಮ ಗ್ರಾ.ಪಂ.ಗಳಿಗೆ ಪ್ರಶಸ್ತಿ :2014-15ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಮತ್ತು ಅಲಂಕಾರು ಗ್ರಾ.ಪಂ.ಗಳಿಗೆ ತೆರಿಗೆ ಸಂಗ್ರಹಣೆಯ ಸಾಧನೆಗಾಗಿ, ತೆಂಕಮಿಜಾರು ಗ್ರಾ.ಪಂ.ಗೆ ಸ್ವಚ್ಛ ಭಾರತ್ಗಾಗಿ, ರಾಮಕುಂಜ ಗ್ರಾ.ಪಂ. ಸಮಗ್ರ ಸಾಧನೆಗಾಗಿ, ಉಡುಪಿ ಜಿಲ್ಲೆಯ ಕಿರಿಮಂಜೇಶ್ವರ ಗ್ರಾ.ಪಂ. ತೆರಿಗೆ ಸಂಗ್ರಹಣ ಸಾಧನೆಗೆ, ಯರ್ಲಪಾಡಿ ಗ್ರಾ.ಪಂ. ಸ್ವತ್ಛ ಭಾರತ್ ಅನುಷ್ಠಾನ, ಬಿಲ್ಲಾಡಿ ಗ್ರಾ.ಪಂ. ಸಮಗ್ರ ಸಾಧನೆ ಹಾಗೂ ಉಡುಪಿ ಜಿ.ಪಂ.ಗೆ ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯ ಸರಕಾರದ ಗಾಂಧೀ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ದರೆಗುಡ್ಡೆ, ಕನಕಮಜಲು, ಬೆಟ್ಟಂಪಾಡಿ, ಮುಂಡಾಜೆ, ಕಾವಳಪಡೂರು ಹಾಗೂ ಉಡುಪಿ ಜಿಲ್ಲೆಯ ವರಂಗ, ಹೆಂಗವಳ್ಳಿ ಕೋಟತಟ್ಟು ಗ್ರಾ.ಪಂ.ಗಳನ್ನು ಅಭಿನಂದಿಸಲಾಯಿತು.
ಸಮಾವೇಶದ ನಿರ್ಣಯಗಳು : ಮರಳು ಮಾಫಿಯಾವನ್ನು ನಿಯಂತ್ರಿಸುವ ದೃಷ್ಟಿಯಲ್ಲಿ ಗಣಿ ಇಲಾಖೆಯ ಅನುಮತಿ ಹೊರತುಪಡಿಸಿ ಉಳಿದೆಲ್ಲಾ ಗಣಿಗಾರಿಕೆಯ ಅಧಿಕಾರವನ್ನು ಗ್ರಾ.ಪಂ.ಗೆ ನೀಡಬೇಕು. ಹೊಸದಾಗಿ ರಚನೆಯಾದ ಗ್ರಾ.ಪಂ.ಗಳಿಗೆ ಮೂಲಸೌಕರ್ಯಗಳು ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಲು ತುರ್ತಾಗಿ ಹಣ ಬಿಡುಗಡೆ ಮಾಡಬೇಕು. ಶೇ. 60 ಶಾಸನಬದ್ಧ ಅನುದಾನ ಹಾಗೂ 14ನೇ ಹಣಕಾಸು ಆಯೋಗದ ಶಿಫಾರಸಿನ ಶೇ. 25 ಅನುದಾನವನ್ನು ಕಡಿತಗೊಳಿಸಿ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು. 94ಸಿ ಯೋಜನೆಯಡಿ ಉಚಿತ ಹಕ್ಕುಪತ್ರ ನೀಡುವಂತೆ ಒತ್ತಾಯ. ಉದ್ಯೋಗ ಖಾತ್ರಿ ಕೂಲಿ ಮೊತ್ತವನ್ನು 500 ರೂ.ಗೆ ಹೆಚ್ಚಿಸಬೇಕು. ಗ್ರಾ.ಪಂ. ಸದಸ್ಯರ ಗೌರವಧನವನ್ನು 1,000 ರೂ.ಗೆ ಹೆಚ್ಚಿಸಬೇಕು. ದೂರ ಸಂಪರ್ಕ ಟವರ್ಗಳಿಗೆ ತೆರಿಗೆ ವಸೂಲಾತಿಗೆ ಕಾನೂನಿನಲ್ಲಿ ಅವಕಾಶವಿದ್ದರೂ ಸಂಬಂಧಪಟ್ಟವರು ತೆರಿಗೆ ಪಾವತಿಗೆ ನಿರಾಕರಿಸುತ್ತಿದ್ದಾರೆ ಈ ಕುರಿತು ಕ್ರಮ ಕೈಗೊಳ್ಳಬೇಕು ಎನ್ನುವ ನಿರ್ಣಯ ಕೈಗೊಳ್ಳಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.