ಬೆಂಗಳೂರು: ಮುಖ್ಯಮಂತ್ರಿಯವರು ಲೋಕಾಯುಕ್ತದ ಮುಂದೆ ತನಿಖೆಗೆ ಟೈಂಟೇಬಲ್ ಹಾಕಿದ್ದಾರೆ. 10 ಗಂಟೆಗೆ ಲೋಕಾಯುಕ್ತ, 12 ಗಂಟೆಗೆ ಚನ್ನಪಟ್ಟಣ ಎಂದು ತಿಳಿಸಿದ್ದಾರೆ. ಇದೇನು ಮ್ಯಾಚ್ ಫಿಕ್ಸಿಂಗಾ? ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪ್ರಶ್ನಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ತನಿಖಾಧಿಕಾರಿಗಳು ಎಷ್ಟು ಗಂಟೆಗೆ ತನಿಖೆ ಮುಗಿಸುತ್ತಾರೆ ಎಂಬುದು ಹೇಗೆ ಗೊತ್ತಾಗಿದೆ? ಕೆಲವರು 5 ಗಂಟೆ ತೆಗೆದುಕೊಳ್ಳುತ್ತಾರೆ. ಇವರೇನು ಮೊದಲೇ ಫಿಕ್ಸ್ ಮಾಡಿದ್ದಾರಾ ಎಂದು ಜನರು ಕೇಳುತ್ತಿದ್ದಾರೆ ಎಂದರು.
ಯಾರಾದರೂ ಎ4 ನಿಂದ ತನಿಖೆಗೆ ಕರೀತಾರಾ? ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಿಬಿಐ ತನಿಖೆಗೆ ಕೋರಿದ್ದರಿಂದ ಇವತ್ತು ಎ1 ಸಿದ್ದರಾಮಯ್ಯರ ತನಿಖೆ ನಡೆದಿದೆ ಎಂದು ಆರೋಪಿಸಿದರು. ಸಿದ್ದರಾಮಯ್ಯನವರ ‘ತೆರೆದ ಪುಸ್ತಕ’ದಲ್ಲಿ ಕಳೆದ 16 ತಿಂಗಳುಗಳಲ್ಲಿ ಜನರಿಗೆ ಲೂಟಿ ಬಿಟ್ಟರೆ ಬೇರೇನೂ ಕಾಣಿಸುತ್ತಿಲ್ಲ ಎಂದು ವ್ಯಂಗ್ಯವಾಗಿ ನುಡಿದರು.
ಸಿದ್ದರಾಮಯ್ಯನವರು ತಮ್ಮ 40 ವರ್ಷಗಳ ಜೀವನ ತೆರೆದ ಪುಸ್ತಕ ಎಂದಿದ್ದಾರೆ. ಪುಸ್ತಕ ತೆರೆದರೆ ಲೂಟಿ, ಲೂಟಿಯ ಕಪ್ಪುಚುಕ್ಕಿಗಳಿದ್ದು, ಒಂದೂ ಬಿಳಿ ಚುಕ್ಕಿ ಇಲ್ಲ. ಸ್ವತಃ ಮುಖ್ಯಮಂತ್ರಿಯೇ ನಿವೇಶನ ಲೂಟಿ ಮಾಡಿ ತಾವೇ ನೇಮಿಸಿದ ಪೊಲೀಸ್ ಅಧಿಕಾರಿ ಮುಂದೆ ತನಿಖೆಗೆ ಕುಳಿತುಕೊಳ್ಳಲು ನಾಚಿಕೆ ಆಗಬೇಕಲ್ಲವೇ ಎಂದು ಪ್ರಶ್ನಿಸಿದರು. ರಾಜ್ಯದ ಕಾಂಗ್ರೆಸ್ ಸರಕಾರವು ಜನತೆ ಮೇಲೆ ತೆರಿಗೆ ಭಾರ ಹೇರಿದೆ. ಇನ್ನೊಂದೆಡೆ ರಸ್ತೆಗಳಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಎಲ್ಲ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ ಎಂದು ತಿಳಿಸಿದರು.
ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. 1992ರಲ್ಲಿ ರೌಡಿಗಳು ಬೆಂಗಳೂರಿನಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದರು. ಅವರೆಲ್ಲ ನಾಚಿ ನೀರಾಗಿದ್ದಾರೆ. ಗೌರವಾನ್ವಿತ ತಿಮ್ಮಾಪುರ ಅವರು ವಾರಕ್ಕೆ 18 ಕೋಟಿ ಎಂದರೆ ವರ್ಷಕ್ಕೆ 500ರಿಂದ 900 ಕೋಟಿ ತಿಮ್ಮಾಪುರ ತೆರಿಗೆ ವಿಧಿಸುತ್ತಿದ್ದಾರೆ. ಇದು ಟಿಪಿಟಿ ಎಂದು ಆರ್.ಅಶೋಕ್ ಆರೋಪಿಸಿದರು.
ಪ್ರತಿಯೊಬ್ಬ ಡಿ.ಸಿ.ಗಳು 3ರಿಂದ 4 ಕೋಟಿ ಕೊಡಬೇಕು, ಡಿವೈಎಸ್ಪಿಗಳು 40 ಲಕ್ಷ, ಪ್ರತಿ ವೈನ್ ಸ್ಟೋರ್ಗೂ 20 ಸಾವಿರ ನಿಗದಿ ಪಡಿಸಿದ್ದಾರೆ. ಬೆಂಗಳೂರು ನಗರಕ್ಕೆ ಹೆಚ್ಚು ಹಣ ನಿಗದಿ ಮಾಡಿದ್ದಾರೆ. ಇದರ ಕುರಿತು ರಾಜ್ಯಪಾಲರಿಗೆ ದೂರು ಹೋಗಿದೆ. ಕಾಂಗ್ರೆಸ್ ಪಾರ್ಟಿಯ ಲೂಟಿಯದೂ ಪೋಸ್ಟರ್ ಅಂಟಿಸಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ನೀವು ಪೋಸ್ಟರ್ ಅಂಟಿಸುವಾಗ ಬಂದು ಸನ್ಮಾನ ಮಾಡುತ್ತೇವೆ ಎಂದರು.
ಮುಖ್ಯಮಂತ್ರಿಗಳೇ, ಒಂದೆಡೆ ನೀವೇ ತನಿಖೆಗೆ ಕೂತಿದ್ದೀರಿ. ಇನ್ನೊಂದು ಕಡೆ ತಿಮ್ಮಾಪುರ ಟ್ಯಾಕ್ಸ್ ಹಗರಣ ನಡೆದಿದೆ. ಲೂಟಿ ಮಾಡುವ ಸಚಿವರು ಮುಖ್ಯಮಂತ್ರಿಗಳಿಗೆ ಬಲಗೈ. ಸಿಎಂ ಕಚೇರಿಯೂ ಇದರಲ್ಲಿ ಭಾಗೀದಾರ ಎಂದಿದ್ದಾರೆ. ಸಮಪಾಲು, ಸಮಬಾಳು ವಾಕ್ಯವನ್ನು ಚಾಚೂತಪ್ಪದೇ ಅಬಕಾರಿ ಸಚಿವರು ಪಾಲಿಸಿದ್ದಾರೆ ಎಂದು ವ್ಯಂಗ್ಯವಾಗಿ ತಿಳಿಸಿದರು. ಇದು ಆರ್ಟಿಐ ಕಾರ್ಯಕರ್ತ, ಮದ್ಯ ಮಾರಾಟಗಾರರ ಸಂಘದ ಸರ್ಟಿಫಿಕೇಟ್ ಎಂದರು. ಪತ್ರ, ದಾಖಲೆಗಳನ್ನೂ ಪ್ರದರ್ಶಿಸಿದರು. ತಿಮ್ಮಾಪುರ ಹಗರಣವನ್ನು ಸಿಬಿಐ, ಇ.ಡಿ. ತನಿಖೆಗೆ ಒಪ್ಪಿಸುವಂತೆ ಅವರು ಆಗ್ರಹಿಸಿದರು. ತಿಮ್ಮಾಪುರ ಅವರು ಕೂಡಲೇ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು.
ಸಿದ್ದರಾಮಯ್ಯರ ಪುಸ್ತಕದಲ್ಲಿ ನಾವು ತೆರೆದ ಪುಟದಲ್ಲೆಲ್ಲ ಮುಡಾ ಹಗರಣ, ಅಬಕಾರಿ ಹಗರಣ, ವಾಲ್ಮೀಕಿ ನಿಗಮದ ಹಗರಣ ಸೇರಿ ಹಗರಣಗಳೇ ತುಂಬಿವೆ ಎಂದು ತಿಳಿಸಿದರು. ಸಿದ್ದರಾಮಯ್ಯನವರು 62 ಕೋಟಿ ಕೊಟ್ಟರೆ ಸೈಟ್ ವಾಪಸ್ ಕೊಡುವುದಾಗಿ ಹೇಳಿದ್ದರು. ಬಳಿಕ 14 ಸೈಟ್ ಹಾಗೇ ಯಾಕೆ ವಾಪಸ್ ಕೊಟ್ಟರು? ವಾಲ್ಮೀಕಿ ನಿಗಮದ ಹಗರಣ ಸಂಬಂಧ ನಾಗೇಂದ್ರ ಪತ್ರಿಕಾಗೋಷ್ಠಿ ಮಾಡಿ ನಾನು ನಿರಪರಾಧಿ ಎಂದಿದ್ದರು. ಯಾಕೆ ಅವರು ಜೈಲಿಗೆ ಹೋದರು? ಎಂದು ಕೇಳಿದರು.
ಬೆಳಗಾವಿ ತಹಸೀಲ್ದಾರ್ ಕಚೇರಿಯಲ್ಲಿ ಎಸ್ಡಿಎ ರುದ್ರಣ್ಣ ಸರಕಾರಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಹಿಂದಿನ ದಿನ ಗ್ರೂಪಿಗೆ ಮೆಸೇಜ್ ಹಾಕಿದ್ದರು. ಮೆಸೇಜ್ ಡಿಲೀಟ್ ಮಾಡಿದ್ದ ತಹಸೀಲ್ದಾರ್ ಆತ್ಮಹತ್ಯೆಗೆ ಗ್ರೀನ್ ಸಿಗ್ನಲ್ ಕೊಟ್ಟರೇ? ಎಂದು ಕೇಳಿದರು. ರುದ್ರಣ್ಣನ ಪತ್ನಿಯೂ ಗರ್ಭಿಣಿ. ಈ ಸರಕಾರಕ್ಕೆ ಕರುಣೆ ಇಲ್ಲವೇ? ವಾಲ್ಮೀಕಿ ನಿಗಮದ ಹಗರಣದಲ್ಲೂ ಚಂದ್ರಶೇಖರ್ ಸಾವನ್ನಪ್ಪಿದ್ದು, ಸರಕಾರ ಲೂಟಿ ಮಾಡುವ ಸಂದೇಶ ಇದರಿಂದ ದೃಢವಾಗಿದೆ. ಲಂಚಕ್ಕಾಗಿ ಅಮಾಯಕರ ಬಲಿ ಆಗಿದೆ ಎಂದು ಆರ್.ಅಶೋಕ್ ಆರೋಪಿಸಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಸರಕಾರಕ್ಕೆ ಎರಡು ನಾಲಿಗೆಯೇ? ಈಶ್ವರಪ್ಪ ಅವರ ರಾಜೀನಾಮೆಗೆ ತೊಡೆತಟ್ಟಿ ಆಗ್ರಹಿಸಿದ ಸಿದ್ದರಾಮಯ್ಯ, ಕಾಂಗ್ರೆಸ್ ನವರು ಏನು ಹೇಳುತ್ತಾರೆ ಎಂದು ಕೇಳಿದರು.
ಕರ್ನಾಟಕ ರಾಜ್ಯ ಸಹ-ಉಸ್ತುವಾರಿ ಸುಧಾಕರ್ ರೆಡ್ಡಿ, ಶಾಸಕ ಉದಯ್ ಗರುಡಾಚಾರ್, ಬಿಜೆಪಿ ರಾಜ್ಯ ವಕ್ತಾರರಾದ ಡಾ. ನರೇಂದ್ರ ರಂಗಪ್ಪ, ಪ್ರಕಾಶ್ ಶೇಷರಾಘವಾಚಾರ್ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.