ಕೋಟಾ ಶ್ರೀನಿವಾಸ ಪೂಜಾರಿಯವರಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕಾಗಿ ನಡೆದ ಉಪಚುನಾವಣೆ ಹಾಗೂ ಅದರ ಫಲಿತಾಂಶ ಜಾತಿ ಮತಗಳನ್ನು ಮೀರಿದ ಪ್ರಬುದ್ಧತೆಗೆ ಮತ್ತು ಕರಾವಳಿಯ ಪ್ರಖರ ಹಿಂದುತ್ವಕ್ಕೆ ಮತ್ತೆ ಸಾಕ್ಷಿಯಾಗಿದೆ.
2021ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 3672 ಮತಗಳನ್ನು ಗಳಿಸಿದ್ದರೆ, ಕಾಂಗ್ರೇಸ್ 2079 ಮತಗಳನ್ನು ಪಡೆದಿತ್ತು. ಇನ್ನು ಎಸ್.ಡಿ.ಪಿ.ಐ ಕೇವಲ 204 ಮತಗಳಿಗೆ ತೃಪ್ತಿ ಪಟ್ಟುಕೊಂಡಿತ್ತು. ಭಾಜಪದ ಗೆಲುವಿನ ಅಂತರ 1593. ಮೊನ್ನೆ ನಡೆದ ಉಪಚುನಾವಣೆಯ ಫಲಿತಾಂಸ ಗಮನಿಸಿದಾಗ ಭಾರತೀಯ ಜನತಾ ಪಕ್ಷ ತನ್ನ ಶಕ್ತಿಯನ್ನು ಯಥೇಚ್ಛವಾಗಿ ವೃದ್ಧಿಸಿಕೊಂಡಿರುವುದು ಕಾಣುತ್ತದೆ. 1593 ಮತಗಳ ಅಂತರದಿದ ಭಾಜಪದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇಲ್ಲಿ ಮತದಾರರು, ಜನರಿಂದ ಚುನಾಯಿತರಾದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಆಗಿರುವುದರಿಂದ ಪ್ರತಿಯೊಂದು ಮತದ ಮೌಲ್ಯವೂ ಅತ್ಯಂತ ತೂಕವುಳ್ಳದ್ದು. ಕಾಂಗ್ರೇಸ್ ಈ ಹಿಂದಿನ ಚುನಾವಣೆಗಿಂತ 122 ಮತಗಳನ್ನು ಕಳೆದುಕೊಂಡಿದ್ದರೆ, ಎಸ್.ಡಿ.ಪಿ.ಐ ಕೂಡ ಕನಿಷ್ಠ ಮತಗಳನ್ನು ಪಡೆಯಿತು. ಚಲಾವಣೆಯಾದ ಮತಗಳ ಸಂಖ್ಯೆಯಲ್ಲಿ ಕಳೆದ ಬಾರಿಗಿಂತ 109 ಓಟುಗಳು ಕಡಿಮೆಯಾಗಿದ್ದರೂ ಭಾಜಪದ ಗೆಲುವಿನ ಅಂತರ ಹೆಚ್ಚಾಗಿರುವುದು ಗಮನಾರ್ಹ.
ಕಸ್ತೂರಿ ರಂಗನ್ ವರದಿಯ ಜಾರಿಯನ್ನು ವಿರೋಧಿಸಿ ಬೈಂದೂರಿನ 6 ಹಾಗೂ ಕುಂದಾಪುರದ 3 ಪಂಚಾಯತ್’ಗಳಲ್ಲಿ ಮತದಾನ ಬಹಿಷ್ಕರಿಸಿದ ಕಾರಣ ಮತ್ತು ಈಗಾಗಲೇ ತಮ್ಮ ಪಂಚಾಯತಿನ ಅಧಿಕಾರದ ಅವಧಿ ಮುಗಿದು ಮರು ಚುನಾವಣೆ ನಡೆಯದ ಕಾರಣ ಬೈಂದೂರಿನ ಗಂಗೊಳ್ಳಿ ಮತ್ತಿತರ ಕೆಲ ಪಂಚಾಯತ್ ಸದಸ್ಯರು ಮತ ಚಲಾಯಿಸಲು ಸಾಧ್ಯವಾಗದೇ ಇದ್ದ ಕಾರಣಗಳ ಹೊರತಾಗಿಯೂ ಭಾಜಪದ ಗೆಲುವಿನ ಅಂತರ ಹೆಚ್ಚಾಗಿದೆ. ರಾಜಕೀಯ ಪ್ರತಿಕೂಲ ಪರಿಸ್ಥಿತಿ ಇದ್ದಾಗಲೂ ಪಕ್ಷ ಸಾಧಿಸಿದ ಈ ಗೆಲುವು ನೀಡುತ್ತಿರುವ ಸಂದೇಶಗಳು ಹಲವು, ಅವುಗಳಲ್ಲಿ ಕೆಲವು ಪ್ರತ್ಯಕ್ಷ ಇನ್ನೂ ಕೆಲವು ಪರೋಕ್ಷ!
ಚುನಾವಣೆ ಬಂದಾಗ ಪ್ರಬಲ ಜಾತಿಗಳು, ಅವರನ್ನು ಓಲೈಸುವ ತಂತ್ರಗಳು ಇತ್ಯಾದಿ ಕಸರತ್ತುಗಳಲ್ಲಿ ರಾಜಕೀಯ ಪಕ್ಷಗಳು ತಮ್ಮನ್ನು ತೊಡಗಿಸಿಕೊಂಡು, ಕೊನೆಗೆ ಹೆಚ್ಚು ಮತದಾರರಿರುವ ಜಾತಿಯ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಆಯ್ಕೆಮಾಡುವುದು ಅಲಿಖಿತ ನಿಯಮ. ಗೆಲ್ಲುವುದೊಂದೇ ಗುರಿ ಅಂದುಕೊಂಡ ಪಕ್ಷಗಳ ಈ ನಡೆಯಿಂದಾಗುವ ಅನಾಹುತಗಳನ್ನು ನಾವು ನಮ್ಮ ಅನುಭವದಿಂದ ಅರಿಯಬಲ್ಲೆವು. ಆದರೆ ಈ ಬಾರಿಯ ಈ ಉಪಚುನಾವಣೆಗೆ ಭಾರತೀಯ ಜನತಾ ಪಕ್ಷ, ಕಳೆದ ಮೂವತ್ತು ವರ್ಷಗಳಿಂದ ಪಕ್ಷದ ಕಾರ್ಯದಲ್ಲಿ ತನ್ನನ್ನು ತೊಡಿಗಿಸಿಕೊಂಡು ಜನಾನುರಾಗಿಯಾಗಿದ, ಆದರೆ ಬೆರಳೆಣಿಕೆಯ ಮತದಾರರಿರುವ ಹಿಂದುಳಿದ ವರ್ಗದ ಯುವಕ ಕಿಶೋರ್ ಕುಮಾರ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿತು. ಎಲ್ಲಾ ರಾಜಕೀಯ ಪಕ್ಷಗಳಿಗೆ ಸಂದೇಶವೋ ಎಂಬತೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಿಂದೆಗಿತಲೂ ಹೆಚ್ಚಿನ ಸಂಖ್ಯೆಯಲ್ಲಿ ಮತನೀಡಿ ಅವರನ್ನು ಗೆಲ್ಲಿಸಿದ್ದಾರೆ. “ ಕರಾವಳಿ ಎಂದರೆ ಪ್ರಖರ ಹಿಂದುತ್ವಕ್ಕೆ ಮಾದರಿ, ನಾವುಗಳು ಜಾತಿಮತಗಳನ್ನು ಮೀರಿನಿಂತು ಮಾದರಿಯಾಗಿದ್ದೇವೆ. ನಮ್ಮ ನಡೆಯನ್ನು ನೀವು ಅರಿತುಕೊಳ್ಳುವುದು ಯಾವಾಗ?” ಎಂದು ರಾಜಕೀಯ ನಾಯಕರನ್ನು ಪ್ರಶ್ನಿಸುತ್ತಿರುವುದು ನಿಚ್ಚಳವಾಗಿ ಗೋಚರಿಸುತ್ತಿದೆ.
ಶಿಕ್ಷಣ ಸಂಸ್ಥೆಗಳೂ ಸೇರಿದಂತೆ ಎಲ್ಲಾ ಕಡೆ ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಾ, ಹಿಂದುಳಿದ ವರ್ಗದ ಜನರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡು ಹಿಂದುತ್ವದ ಹೋರಾಟದಿಂದ ಅವರನ್ನು ಬೇರ್ಪಡಿಸುವ ಪ್ರತ್ಯೇಕತಾವಾದಿಗಳಿಗೆ ಪ್ರಬಲ ಸೋಲಾಗಿರುವುದು ಈ ಚುನಾವಣೆ ಕಾಣಿಸಿರುವ ಮತ್ತೊಂದು ಚಿತ್ರಣ.
ದೇಶದಲ್ಲಿ ಚುನಾವಣೆ ನಡೆಯುವ ಕೊನೆಯ ಘಟ್ಟ ಅದು ಪಂಚಾಯತ್. ಅಂದರೆ ಪಂಚಾಯತ್ ಎಲ್ಲವುದಕ್ಕೂ ಅಡಿಪಾಯವೇ. ಪಂಚಾಗ ಎಷ್ಟು ಬಲಿಷ್ಠವಾಗಿದೆ ಎಂಬುದರ ಆಧಾರದಲ್ಲಿಯೇ ಮನೆಯ ಆಯಸ್ಸನ್ನು ನಿರ್ಧರಿಸಲು ಸಾಧ್ಯ. ಕರಾವಳಿಯಲ್ಲಿ ಭಾರತೀಯ ಜನತಾ ಪಕ್ಷದ ಪಂಚಾಯತ್ ಪಂಚಾಗ ಸದೃಢವಾಗಿದೆ, ಪಕ್ಷದ ಬೇರುಗಳು ಭುವಿಯಾಳಕ್ಕಿಳಿದಿವೆ ಅನ್ನುವುದು ಈ ಚುನಾವಣೆ ನೀಡಿದ ಸ್ಪಷ್ಟ ಸಂದೇಶ.
ಪಂಚಾಯತ್ ಸದಸ್ಯರು ಹಣ ಹೆಂಡಗಳ ದಾರಿಯನ್ನು ನಿರ್ಲಕ್ಷಿಸಿ, ಜಾತಿ ಮತ ಪಂಥಗಳನ್ನು ಮೀರಿ ತೋರಿಸಿರುವ ಪ್ರಬುದ್ಧತೆ, ನೀಡಿರುವ ಉತ್ತಮ ಸಂದೇಶವನ್ನು ಸಕಾಲದಲ್ಲಿ ಅರಿತು ನಡೆದರೆ ರಾಜಕೀಯದ ಕೆಸರಿನಲ್ಲೂ ಕಮಲ ನಿರಂತರವಾಗಿ ನಳನಳಸೀತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.