ಬೆಳ್ತಂಗಡಿ : ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಹೊಸಂಗಡಿ ಗ್ರಾ.ಪಂ.ಅಡ್ಡಿ ಮಾಡುತ್ತಿದೆ. ಇದನ್ನು ಖಂಡಿಸಿ ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಭಾರತ ಮಾತಾ ಪೂಜನವನ್ನು ಹಮ್ಮಿಕೊಳ್ಳಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ವೇಣೂರು ಪ್ರಖಂಡದ ಅಧ್ಯಕ್ಷ ಶಶಾಂಕ ಭಟ್ ತಿಳಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಹೊಸಂಗಡಿ ಗ್ರಾಮದ ಪೇರಿ ಎಂಬಲ್ಲಿನ ಮೈದಾನದಲ್ಲಿರುವ ವೃಕ್ಷವೊಂದರಲ್ಲಿ ಭಗವಾಧ್ವಜ ಹಾರುತ್ತಿತ್ತು. ಅ. 4ಕ್ಕೆ ಯಾರೋ ದುಷ್ಕರ್ಮಿಗಳು, ಮಾನಸಿಕ ಅಸ್ವಾಸ್ಥರು, ದುರುದ್ದೇಶದಿಂದ ಅದನ್ನು ಕೆಳಗಿಳಿಸಿ ಸುಟ್ಟು ಅವಮಾನ ಮಾಡಿದ್ದಾರೆ. ಈ ಬಗ್ಗೆ ವೇಣೂರು ಠಾಣೆಗೆ ದೂರನ್ನು ಕೂಡ ನೀಡಲಾಗಿದೆ. ಈ ವಿಚಾರ ಹೆಚ್ಚಿನ ವಿವಾದಕ್ಕೆ ಕಾರಣವಾಗುವುದು ಬೇಡ ಎಂಬ ಹಿನ್ನಲೆಯಲ್ಲಿ ಅಲ್ಲಿನ ಕಾರ್ಯಕರ್ತರು ಅದೇ ಮರಕ್ಕೆ ಅ.6 ರಂದು ಮತ್ತೊಂದು ಭಗವಾಧ್ವಜವನ್ನು ಹಾರಿಸಿದ್ದರು.
ಆದರೆ ಅಲ್ಲಿನ ಪಂಚಾಯತ್ ಆಡಳಿತ ಏಕಾಏಕಿ ಅದನ್ನು ತೆರವುಗೊಳಿಸಿದೆ. ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವಜಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿದೆ ಎಂದು ಪಂಚಾಯತ್ ಆಡಳಿತ ತೀರ್ಮಾನಿಸಿದೆ ಎಂದು ವೇಣೂರು ಪೋಲಿಸರು ತಿಳಿಸಿದ್ದಾರೆ. ಆದರೆ ಸಭೆಯೇ ಆಗದೆ ನಿರ್ಣಯ ತೆಗೆದುಕೊಂಡಿದ್ದಾದರೂ ಹೇಗೆ ಎಂಬುದು ಪ್ರಶ್ನಾರ್ಥಕವಾಗಿದೆ ಮಾತ್ರವಲ್ಲದೆ ಈ ಪರಿಸರದಲ್ಲಿ ಹಿಂದೂಗಳೇ ಅಧಿಕವಾಗಿರುವದರಿಂದ ಸಾಮರಸ್ಯ ಕದಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದ ಅವರು ಹಿಂದುಗಳ ಭಾವನೆಗಳ ಮೇಲೆ ಸವಾರಿ ಮಾಡುವ ಪಂಚಾಯತ್ ಆಡಳಿತದ ಏಕಚಕ್ರಾಧಿಪತ್ಯದ ವಿರುದ್ದ ಜನಜಾಗೃತಿ ಮೂಡಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಗೋರಕ್ಷಾ ಪ್ರಮುಖ್ ಜಯ ಪೂಜಾರಿ, ಬಜರಂಗದಳ ವೇಣೂರು ಸಂಯೋಜಕ ರಾಮಪ್ರಸಾದ್, ಸಹ ಸಂಯೋಜಕ ಹರೀಶ್ ಗರ್ಡಾಡಿ, ವಿ.ಹಿಂ.ಪ. ವೇಣೂರು ಪ್ರಖಂಡ ಕಾರ್ಯದರ್ಶಿ ನಾಗೇಶ್ ಕಾಶಿಪಟ್ಣ, ಬಿಜೆಪಿ ಮುಖಂಡ ವಿಠಲ ಸಿ.ಪೂಜಾರಿ, ಕಿರಣ್ ಭಟ್, ಹರೀಶ್ ಹೊಸಂಗಡಿ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.