ಬೆಂಗಳೂರು: ರಾಹುಲ್ ಗಾಂಧಿಯವರ ಮೀಸಲಾತಿ ವಿರೋಧಿ ಹೇಳಿಕೆಯು ಅವರ ಕುಟುಂಬದ ಚಿಂತನೆಯ ಮುಂದುವರಿದ ಭಾಗ ಎಂದು ಬಿಜೆಪಿ ರಾಷ್ಟೀಯ ವಕ್ತಾರ ಗುರುಪ್ರಕಾಶ್ ಪಾಸ್ವಾನ್ ಅವರು ವಿಶ್ಲೇಷಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಜವಾಹರಲಾಲ್ ನೆಹರೂ ಅವರು 1961ರಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಯಾವುದೇ ರೀತಿಯ ಮೀಸಲಾತಿಯನ್ನು ತಾವು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದನ್ನು ಉಲ್ಲೇಖಿಸಿದರು. ನೆಹರೂ ಅವರ ಪತ್ರವನ್ನೂ ಪ್ರದರ್ಶಿಸಿದರು. ಮೀಸಲಾತಿ ಸಮುದಾಯದಿಂದ ಅಸಮರ್ಥತೆ, ದ್ವಿತೀಯ ದರ್ಜೆಯ ಅಧಿಕಾರಿಗಳ ಆಯ್ಕೆ ಆಗಲಿದೆ ಎಂದಿದ್ದುದನ್ನು ವಿವರಿಸಿದರು.
ಪ್ರಧಾನಿ, ಮುಖ್ಯಮಂತ್ರಿಗಳ ಇಂಥ ಮನಸ್ಥಿತಿ ಇದ್ದಾಗ ಮೀಸಲಾತಿ ಮೂಲಕ ಉದ್ಯೋಗ ಭರ್ತಿ ಆಗುವುದು ಹೇಗೆ? ಬ್ಯಾಕ್ಲಾಗ್ ಇರದಿರಲು ಸಾಧ್ಯವೇ ಎಂದು ಕೇಳಿದರು. ಇಂದಿರಾ ಗಾಂಧಿಯವರು ಕೆಂಪು ಕೋಟೆಯಿಂದ ತಮ್ಮ ಭಾಷಣದಲ್ಲಿ ಜಾತಿವಾದ ಈ ದೇಶದಿಂದ ದೂರವಾಗಬೇಕು ಎಂದಿದ್ದರು. ರಾಜೀವ್ ಗಾಂಧಿಯವರು ಸಂಸತ್ತಿನ ಸದನದಲ್ಲಿ ಮಂಡಲ್ ಆಯೋಗದ ಮೀಸಲಾತಿ ಶಿಫಾರಸನ್ನು ವಿರೋಧಿಸಿದ್ದರು ಎಂದು ತಿಳಿಸಿದರು. ದೇಶವನ್ನು ಜಾತಿ ಸಂಘರ್ಷದತ್ತ ತಂದಿದ್ದೀರಿ ಎಂದು ರಾಜೀವ್ ಅವರು ನುಡಿದಿದ್ದರು ಎಂದು ವಿವರಿಸಿದರು.
ವಿದೇಶಿ ನೆಲದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಮೀಸಲಾತಿ ರದ್ದು ಮಾಡುವುದಾಗಿ ಹೇಳಿದ್ದಾರೆ. ಬಿಜೆಪಿ ಅಂತ್ಯೋದಯ ಪರಿಕಲ್ಪನೆಯಡಿ ಕಾರ್ಯ ನಿರ್ವಹಿಸುತ್ತಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಲ್ಯಾಣ- ಅಭಿವೃದ್ಧಿಗೆ ಬಿಜೆಪಿ ಒತ್ತು ಕೊಡುತ್ತಿದೆ. ಕಳೆದ 10 ವರ್ಷಗಳಲ್ಲಿ ಬಿಜೆಪಿ, ಪರಿಶಿಷ್ಟ ಜಾತಿ, ಪಂಗಡಗಳ, ಹಿಂದುಳಿದ ವರ್ಗಗಳ ಜನಾದೇಶ ಲಭಿಸುತ್ತಿದೆ. ಬಿಜೆಪಿ ವತಿಯಿಂದ ಕಾಂಗ್ರೆಸ್ ಪಕ್ಷದ ಬೂಟಾಟಿಕೆ ತಂತ್ರ ಮತ್ತು ಮೀಸಲಾತಿ ವಿರೋಧಿ ಮನಸ್ಥಿತಿ ವಿರುದ್ಧ ರಾಷ್ಟ್ರಾದ್ಯಂತ ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಎಸ್ಸಿ, ಎಸ್ಟಿ, ಒಬಿಸಿ ಬಗ್ಗೆಯೇ ರಾಹುಲ್ ಗಾಂಧಿಯವರು ದೇಶದೊಳಗೆ ಮಾತನಾಡುತ್ತಾರೆ. ಇದೀಗ ರಾಹುಲ್ ಅವರು ವಿದೇಶದಲ್ಲಿ ಮೀಸಲಾತಿ ವಿರೋಧಿ ಹೇಳಿಕೆ ಕೊಟ್ಟಿದ್ದು, ಈ ಹುಚ್ಚುತನಕ್ಕೆ ಕೌಟುಂಬಿಕ ಹಿನ್ನೆಲೆ ಇದೆ. ಮೀಸಲಾತಿ ವಿರೋಧಿ ಮಾನಸಿಕತೆ ಇಂದು ನಿನ್ನೆಯದಲ್ಲ ಎಂದು ಟೀಕಿಸಿದ ಅವರು, ಕಾಂಗ್ರೆಸ್, ‘ಇಂಡಿ’ ಒಕ್ಕೂಟ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಎಷ್ಟು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಎಸ್ಸಿ, ಎಸ್ಟಿ ಸಮುದಾಯಗಳಿಗೆ ಸೇರಿದವರು ಇದ್ದಾರೆ ಎಂಬುದನ್ನು ರಾಹುಲ್ ಅವರು ಸ್ಪಷ್ಟಪಡಿಸಬೇಕು ಎಂದು ಗುರುಪ್ರಕಾಶ್ ಪಾಸ್ವಾನ್ ಅವರು ಆಗ್ರಹಿಸಿದರು.
ಸಿಎಂ, ಡಿಸಿಎಂ, ವಿಪಕ್ಷ ನಾಯಕನ ನೇಮಕಾತಿ ವಿಚಾರ ಬಂದಾಗ ಕಾಂಗ್ರೆಸ್ ಪಕ್ಷವು ಎಸ್ಸಿ, ಎಸ್ಟಿ, ಒಬಿಸಿ ಸಮುದಾಯವನ್ನು ಮರೆಯುತ್ತದೆ. ಅತ್ಯಂತ ಸಣ್ಣ ಜನಾಂಗದ ಸಿದ್ದಿ ಸಮುದಾಯದ ಪ್ರತಿನಿಧಿಗೆ ಬಿಜೆಪಿ, ವಿಧಾನಪರಿಷತ್ತಿನಲ್ಲಿ ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಮೊದಲ ಬಾರಿಗೆ ವಿಧಾನಪರಿಷತ್ತಿನ ವಿಪಕ್ಷ ನಾಯಕರಾಗಿ ಎಸ್ಸಿ ಸಮುದಾಯದವರು ಆಯ್ಕೆ ಆಗಿದ್ದಾರೆ. ಡಾ. ಅಂಬೇಡ್ಕರ್ ಅವರ ಬಳಿಕ ಮೊದಲ ಬಾರಿಗೆ ದಲಿತರಾದ ಅರ್ಜುನ್ರಾಮ್ ಮೇಘವಾಲ್ ಅವರು ಕೇಂದ್ರ ಕಾನೂನು ಸಚಿವರಾಗಿ ಅವಕಾಶ ಪಡೆದಿದ್ದಾರೆ. ಬಿಜೆಪಿ ಈ ಅವಕಾಶ ಕೊಟ್ಟಿದೆ ಎಂದು ವಿವರಿಸಿದರು.
ಮುಖ್ಯ ಮಾಹಿತಿ ಅಧಿಕಾರಿಯಾಗಿ ಎಸ್ಸಿ ಸಮುದಾಯದ ವ್ಯಕ್ತಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ರೈಲ್ವೆ ಮಂಡಳಿಯಲ್ಲೂ ಎಸ್ಸಿ ಸಮುದಾಯದವರಿಗೆ ಬಿಜೆಪಿ ಅವಕಾಶ ಕೊಟ್ಟಿದೆ. ಎಸ್ಸಿ ಸಮುದಾಯದವರನ್ನು ರಾಜ್ಯಸಭೆಗೆ ಕಳಿಸಲು ರಾಷ್ಟ್ರಪತಿಗಳಿಗೆ ಅವಕಾಶವಿದ್ದರೂ ಅದನ್ನು 1952ರಿಂದ ಇಲ್ಲಿನವರೆಗೆ ಬಳಸಿರಲಿಲ್ಲ. 2020ರಲ್ಲಿ ಇದೇ ಸಮುದಾಯದ ತಮಿಳುನಾಡಿನ ಇಳಯರಾಜ ಅವರನ್ನು ಆಯ್ಕೆ ಮಾಡುವ ಅವಕಾಶವನ್ನು ಬಿಜೆಪಿ ನೀಡಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ದಲಿತರು, ಪರಿಶಿಷ್ಟ ಪಂಗಡದವರನ್ನು ಮತಬ್ಯಾಂಕಾಗಿ ಪರಿಗಣಿಸಿದೆ. ಹರಿಯಾಣದಲ್ಲಿ ಈಗ ವಿಧಾನಸಭಾ ಚುನಾವಣಾ ಪ್ರಚಾರ ನಡೆದಿದೆ. ಎಸ್ಸಿ ಹಿರಿಯ ನಾಯಕಿ, ಕೇಂದ್ರದ ಮಾಜಿ ಸಚಿವೆ ಕು. ಸೆಲ್ಜಾ ಅವರು ನಾಪತ್ತೆಯಾಗಿದ್ದಾರೆ. ಕಾಂಗ್ರೆಸ್ಸಿನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಸೆಲ್ಜಾ ಮತ್ತು ದಲಿತ ನಾಯಕರಿಗೆ ಅವಕಾಶ ಇರಲಿಲ್ಲ ಎಂದು ಆಕ್ಷೇಪಿಸಿದರು.
ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜುನಾಥ್, ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕಾರಜೋಳ, ಮಹೇಂದ್ರ ಕೌತಾಳ ಹಿರಿಯರಾದ ರುದ್ರಯ್ಯ, ಅನಿಲ್ಕುಮಾರ್ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.