ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ದಿನ ಹತ್ತಿರ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿ ಇವತ್ತು ರಾಜ್ಯದಲ್ಲಿ ಉದ್ಭವವಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಹಣಕಾಸು ಇಲಾಖೆ ಸಚಿವರೂ ಆದ ಮುಖ್ಯಮಂತ್ರಿಗಳ ಸಮ್ಮತಿ ಇಲ್ಲದೇ, ಅವರ ಗಮನಕ್ಕೆ ಬಾರದೆ ಹಣ ವರ್ಗಾವಣೆ ಆಗಲು ಸಾಧ್ಯವೇ ಇರಲಿಲ್ಲ ಎಂದು ನುಡಿದರು.
ಕೇವಲ ಮಾಜಿ ಸಚಿವ ನಾಗೇಂದ್ರ, ದದ್ದಲ್ ಅವರಷ್ಟೇ ಅಲ್ಲ; ಇನ್ನೂ ದೊಡ್ಡ ದೊಡ್ಡವರ ಹೆಸರು ಮುಂದೆ ಬರಲಿದೆ. ಹಾಗಾಗಿ ಆತಂಕದಿಂದಲೇ ನಿನ್ನೆ ರಾಜ್ಯದ 5 ಸಚಿವರು ಇ.ಡಿ. ಮೇಲೆ ಆಪಾದನೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳು ಸದನದಲ್ಲಿ ಉತ್ತರ ಕೊಡುವ ಪ್ರಯತ್ನ ಮಾಡಿದ್ದು, ಸತ್ಯಸಂಗತಿಗಳನ್ನು ಮರೆಮಾಚಿ, ಸದನಕ್ಕೆ ಮತ್ತು ರಾಜ್ಯದ ಜನತೆಗೆ ತಪ್ಪು ಮಾಹಿತಿ, ತಪ್ಪು ಸಂದೇಶ ಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ಟೀಕಿಸಿದರು.
ಮಾನ್ಯ ಮುಖ್ಯಮಂತ್ರಿಗಳು ಈ ಹಗರಣದಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯ ಇಲ್ಲ ಎಂಬುದಂತೂ ಸತ್ಯ. ಮಾನ್ಯ ಸಿದ್ದರಾಮಯ್ಯನವರೇ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದಿಂದ ಪರಿಶಿಷ್ಟ ಜಾತಿ, ಪಂಗಡಗಳ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲ ಎಂದು ಎಚ್ಚರಿಸಿದರು. ಈಗಾಗಲೇ ಇ.ಡಿ, ಸಿಬಿಐ ತನಿಖೆ ನಡೆಯುತ್ತಿದ್ದು, ತಾವು ಉತ್ತರ ಕೊಡಲೇಬೇಕಾಗುತ್ತದೆ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ವಾಲ್ಮೀಕಿ ನಿಗಮದ 187 ಕೋಟಿ ಹಣವನ್ನು ಈ ಸರಕಾರದ ಒಬ್ಬ ಸಚಿವರು, ಒಬ್ಬ ಶಾಸಕ, ಮುಖ್ಯಮಂತ್ರಿ ಸೇರಿ ಹಲವಾರು ಸಚಿವರು ಲೂಟಿ ಮಾಡಿ ಲೋಕಸಭಾ ಚುನಾವಣೆಗೆ ಬಳಸಿದ್ದು, ಅದು ಇ.ಡಿ. ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟವಾಗಿದೆ. ಲೂಟಿ ಆದ ಹಣ ಎಲ್ಲೆಲ್ಲಿ ಹೋಗಿದೆ? ಯಾವಾಗ ವಾಪಸ್ ತರುತ್ತೀರಿ ಎಂದು ನಾವು ನಿಲುವಳಿ ಸೂಚನೆ ಮೂಲಕ ಪ್ರಶ್ನಿಸಿದ್ದೇವೆ ಎಂದು ತಿಳಿಸಿದರು.
ಹಣ ಎಟಿಎಂ ಮೂಲಕ ಕಾಂಗ್ರೆಸ್ ನಾಯಕರಿಗೆ ಹೋಗಿದೆಯೇ? ಎಂದು ಕೇಳಿದ ಅವರು, ಎಫ್ಐಆರ್ನಲ್ಲಿ ನಾಗೇಂದ್ರ, ನಿಗಮದ ಅಧ್ಯಕ್ಷ, ಶಾಸಕ ದದ್ದಲ್ ಹೆಸರಿಲ್ಲ. ಒತ್ತಡ ಹಾಕಿ ಅವರ ಹೆಸರನ್ನು ಕೈಬಿಟ್ಟಿದ್ದಾರೆ. ಮುಖ್ಯಮಂತ್ರಿ ವೀರಾವೇಶದ ಮಾತನಾಡಿ ತಮ್ಮ ಸರಕಾರ ಭಾಗಿಯಾಗಿಲ್ಲ ಎಂದಿದ್ದಾರೆ. ಹಾಗಿದ್ದರೆ ರಾಜೀನಾಮೆ ಕೊಟ್ಟದ್ದು ಯಾಕೆ? ಬುದ್ಧಿ ಇಲ್ಲದೇ ರಾಜೀನಾಮೆ ಕೊಟ್ಟರೇ ಎಂದು ಕೇಳಿದರು.
89 ಕೋಟಿ ಲೂಟಿ ಆಗಿದೆ ಎಂದು ನೀವೇ ಒಪ್ಪಿಕೊಂಡಿದ್ದೀರಿ. ಆತ್ಮಹತ್ಯೆಯ, ಲೂಟಿಯ ತನಿಖೆ ಮಾಡುವುದನ್ನು ಬಿಟ್ಟು ನಿಮ್ಮ ಸರಕಾರದಲ್ಲಿ ಹೀಗಾಗಿತ್ತು, ಹಾಗಾಗಿತ್ತು ಎಂದು ಹೇಳಿದ್ದು ಸರಿಯೇ? ಶೇ 40 ಸರಕಾರ ಎಂದು ನಮ್ಮ ವಿರುದ್ಧ ಪೋಸ್ಟರ್ ಅಂಟಿಸಿದ್ದೀರಲ್ಲವೇ? 14 ತಿಂಗಳಾದರೂ ಶೇ 40 ಸರಕಾರ ಎಂಬ ವಿಷಯದಲ್ಲಿ ಫಲಿತಾಂಶ ಬಂದಿದೆಯೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಏನೂ ಇಲ್ಲ; ಅದೆಲ್ಲ ಬೋಗಸ್ ಎಂದು ತಿಳಿಸಿದರು.
ದಲಿತನ ಸಾವಿಗೆ ನ್ಯಾಯ ಸಿಗಬೇಕು. ಲೂಟಿಯಾದ ಹಣ ವಾಪಸ್ ಅವರಿಗೆ ಸಿಗಬೇಕು. ಈ ಸರಕಾರದಲ್ಲಿ ಅಪರಾಧಿಗಳು ಯಾರಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು. ನಮ್ಮ ಬೇಡಿಕೆಗಳಿಗೆ ಎಳ್ಳು ನೀರು ಬಿಟ್ಟಂತೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ ಎಂದು ಆಕ್ಷೇಪಿಸಿದರು.
ಸದನ ಇವತ್ತು ನಡೆದಿದ್ದೇ ಸರಿ ಇಲ್ಲ. ಕರ್ನಾಟಕದ ಇತಿಹಾಸದಲ್ಲಿ ಈ ಥರ ಸದನ ನಡೆದುದು ಒಂದು ಕಪ್ಪು ಚುಕ್ಕಿ ಎಂದು ಟೀಕಿಸಿದರು. ಸದನ ನಡೆಸಲು ಸ್ಪೀಕರ್ ಅವರಿಗೆ ಆಗಲೇ ಇಲ್ಲ. ಸ್ಪೀಕರ್ ಅವರು ಸದನ ನಡೆಸುವಲ್ಲಿ ವಿಫಲವಾಗಿದ್ದಾರೆ. ಮೂಕಪ್ರೇಕ್ಷಕರಂತೆ ಅವರು ಕುಳಿತಿದ್ದರು. ಇಂಥ ಸ್ಪೀಕರ್ ಅವರಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಾಗದು. ಅವಮಾನಕರ ರೀತಿಯಲ್ಲಿ ಸದನ ನಡೆಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸ್ಪೀಕರ್ ಅವರ ನಡೆ ಸದನಕ್ಕೆ ಗೌರವ ತರುವಂತೆ ಇರಲಿಲ್ಲ ಎಂದು ಅವರು ತಿಳಿಸಿದರು. ಈ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವ ಕುರಿತು ಚರ್ಚೆ ಮಾಡಿ ನಿರ್ಧರಿಸಲಿದ್ದೇವೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.