ಕುದ್ಮುಲ್ ರಂಗರಾಯರು ದಲಿತೋದ್ಧಾರದ ವಿಷಯದಲ್ಲಿ ಕರ್ನಾಟಕದ ಅಪ್ರತಿಮ ಸಾಧಕ. 1959ರಲ್ಲಿಯೇ ಅವರ ಜನ್ಮ ಶತಮಾನೋತ್ಸವ ಬಂದು ಹೋಯಿತು. ಒಂದು ಪುಟ್ಟ ಕಾರ್ಯಕ್ರಮವೂ ಆಗಲಿಲ್ಲ. ‘ನನ್ನ ನೆನಪು ಉಳಿಯಬಾರದು, ನನ್ನ ಕೆಲಸವಷ್ಟೆ ಉಳಿಯಬೇಕು ‘ ಎಂದಿದ್ದರು ಕುದ್ಮುಲ್ ರಂಗರಾಯರು . ಅವರ ಕುರಿತಾದ ಸ್ಮರಣ ಸಂಚಿಕೆಯೊಂದು 1961ರ ಸುಮಾರಿಗೆ ಹೊರಬಂತು . ಆನಂತರ 1985 ರಲ್ಲಿ ದಲಿತ ಹೋರಾಟಗಾರ ಕಾಸರಗೋಡು ಸಮೀಪದ ಮೊಗ್ರಾಲ್ ಪುತ್ತೂರು ಗ್ರಾಮದ ಪಿ ಕಮಲಾಕ್ಷ ವರ್ಷಗಟ್ಟಲೆ ಶ್ರಮಪಟ್ಟು ಮಾಹಿತಿ ಸಂಗ್ರಹಿಸಿ ಬರೆದ ಪುಸ್ತಕವೆ – ‘ ದಲಿತೋದ್ಧಾರಕ ಕುದ್ಮುಲ್ ರಂಗರಾವ್ ‘. ನಂತರದ ವರ್ಷಗಳಲ್ಲಿ ಮತ್ತೂ ಕೆಲವು ಪುಸ್ತಕ ಬಂದವಾದರೂ ಹೊಸ ಮಾಹಿತಿಗಳು ಇದ್ದದ್ದು ಕಡಿಮೆ. ಇತ್ತೀಚಿಗೆ ಬಂದ ಎರಡು ಪುಸ್ತಕಗಳು ಕುದ್ಮುಲ್ ರಂಗರಾಯರ ಬದುಕಿನಲ್ಲಿ ಅಸ್ಪಷ್ಟವಾಗಿ ಉಳಿದು ಹೋಗಿದ್ದ ಸಂಗತಿಗಳ ಮೇಲೆ ಬೆಳಕು ಚೆಲ್ಲಿವೆ. 85 ವರ್ಷದ ಡಿ ಅಣ್ಣು , ಕುದ್ಮುಲ್ ರಂಗರಾಯರು ದಲಿತರಿಗೆ ಶುರು ಮಾಡಿದ ಶಾಲೆಯ ಮೂರನೇ ತಲೆಮಾರಿನ ಫಲಾನುಭವಿಯಾಗಿದ್ದವರು. ಮೊದಲ ಪುಸ್ತಕ ಬರೆದ ಕಮಲಾಕ್ಷ ಅವರ ಜೊತೆ ಮಾಹಿತಿ ಸಂಗ್ರಹಕ್ಕೆ ಓಡಾಡಿದ್ದ ಅಣ್ಣು ಅವರು ಕ್ಷೇತ್ರಕಾರ್ಯ ನಿಲ್ಲಿಸಲಿಲ್ಲ. ಪರಿಣಾಮವಾಗಿ ‘ರಾವ್ ಸಾಹೇಬ್ ಕುದ್ಮುಲ್ ರಂಗರಾವ್ ‘ ಪುಸ್ತಕ ಇತ್ತೀಚಿಗೆ ಹೊರಬಂದಿದೆ. ಇನ್ನೊಂದು ಕುದ್ಮುಲ್ ರಂಗರಾಯರ ಮರಿಮಗಳು ಪ್ರೇಮಿ ಎಂ ರಾವ್ ಮತ್ತವರ ಮಗ ಜಿ ಪಾಂಡುರಂಗ ರಾವ್ ಬರೆದಿರುವ ಇಂಗ್ಲೀಷ್ ಪುಸ್ತಕ The Man Who Inspired Gandhi . ಈ ಪುಸ್ತಕವನ್ನು ಬಿ ಎ ವಿವೇಕ್ ರೈ ಕನ್ನಡಕ್ಕೆ ತಂದಿದ್ದಾರೆ.
ಈ ಎರಡೂ ಪುಸ್ತಕಗಳದ್ದು ಭಿನ್ನ ನೆಲೆ . ಕುದ್ಮುಲ್ ಅವರು ದಲಿತರ ನಡುವೆ ಮಾಡಿದ ಕೆಲಸದಿಂದ ಅಕ್ಷರ ಜಗತ್ತಿಗೆ ಬಂದ ಡಿ ಅಣ್ಣು ಕೃತಜ್ಞತೆಯಿಂದ ಕೃತಿ ಕಟ್ಟಿದ್ದಾರೆ. ಇತ್ತ ಪ್ರೇಮಿರಾವ್ , ಕುದ್ಮುಲ್ ಕುಟುಂಬದ್ದೇ ಕುಡಿ. ‘ಕುದ್ಮುಲ್ ಪಿಜ್ಜಾ ( ಮುತ್ತಜ್ಜ ) ‘ಸಾಗಿದ ಹಾದಿಯನ್ನು ಕುಟುಂಬದ ಒಳ ಅನುಭವಗಳಿಂದ ಚಿತ್ರಿಸಿದ್ದಾರೆ .
ತುಂಡುಭೂಮಿಗಾಗಿ ದಲಿತನೊಬ್ಬನು ನೆಡೆಸುವ ಹೋರಾಟವನ್ನು ಶಿವರಾಮ ಕಾರಂತರು ‘ ಚೋಮನ ದುಡಿ’ ಯಾಗಿ ಬರೆದದ್ದು 1930ರಲ್ಲಿ. ಅದಕ್ಕೂ ಮೂರು ದಶಕ ಮೊದಲೇ ರಂಗರಾಯರು ನೂರಾರು ದಲಿತ ಕುಟುಂಬಗಳಿಗೆ ಭೂಮಿ ಕೊಟ್ಟರು. ತಮ್ಮ ವಕಾಲತ್ತಿನಿಂದ ಕೇಸು ಗೆಲ್ಲಿಸಿಕೊಟ್ಟಿದ್ದಕ್ಕೆ ಕ್ರೈಸ್ತ ಮಹಿಳೆಯೊಬ್ಬರಿಂದ ಶುಲ್ಕದ ಬದಲಾಗಿ ದೇರಬೈಲ್ ಗ್ರಾಮದಲ್ಲಿ 13.5 ಎಕರೆ ಭೂಮಿ ಪಡೆದ ರಂಗರಾಯರು 25 ದಲಿತ ಕುಟುಂಬಗಳಿಗೆ ತಲಾ ಅರ್ಧ ಎಕರೆ ಹಂಚಿದರು . ಈಗಲೂ ಮಂಗಳೂರಿನ ದಡ್ಡಲಕಾಡಿನ ಈ ಮನೆಗಳಲ್ಲಿ ರಂಗರಾಯನ್ನು ಭಾವಚಿತ್ರವಿಟ್ಟು ನೆನೆಯುತ್ತಾರೆ. ಮಂಗಳೂರಿನ ಬಿಜೈ ಕಾಪಿಕಾಡ್, ಕೋಡಿಕಲ್, ಬಾಬುಗುಡ್ಡೆ, ಉಡುಪಿ ಸಮೀಪದ ಪುತ್ತೂರು, ಕುಂಜಿಬೆಟ್ಟು, ಬನ್ನಂಜೆ, ಉದ್ಯಾವರ, ನೇಜಾರು ಇಲ್ಲೆಲ್ಲ ದಲಿತರಿಗೆ ಭೂಮಿಕೊಟ್ಟು ನೆಲೆ ಕಲ್ಪಿಸಿದ್ದು ರಂಗರಾಯರು.
ತಮ್ಮ 28 ನೇ ವಯಸ್ಸಿನಲ್ಲಿ ಅಂದರೆ 1887 ರಲ್ಲಿ ಮಂಗಳೂರಿನ ಚಿಲಿಂಬಿಯಲ್ಲಿ ದಲಿತರಿಗೆ ಮೊದಲ ಶಾಲೆ ತೆರೆದು ರಂಗರಾಯರು ತಮ್ಮ ಸ್ವಜಾತಿಗರಿಂದ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದರು . ಶಾಲೆಯ ಅಂಗಳಕ್ಕೆ ಮಲ , ಮೂತ್ರ ತಂದು ಸುರಿದಿದ್ದರು . ಕಲ್ಲೇಟು ತಿಂದರೂ ರಾಯರು ವಿಚಲಿತರಾಗಲಿಲ್ಲ.ಕಂಕನಾಡಿ, ಬೋಳಾರು, ಕೋರ್ಟ್ ಹಿಲ್, ದೇರಬೈಲ್, ಅತ್ತಾವರ, ಉಲ್ಲಾಳ, ಉಡುಪಿಪುತ್ತೂರು, ಮಲ್ಪೆ, ಬನ್ನಂಜೆ, ನೇಜಾರು, ಬ್ರಹ್ಮಾವರ, ಚಿಟ್ಟಾಡಿ, ಹಂಗಾರುಕಟ್ಟೆ, ತೋನ್ಸೆ, ಉದ್ಯಾವರ , ಕುಂದಾಪುರ ಹೀಗೆ ದಲಿತರಿಗೆ 20 ಶಾಲೆಗಳನ್ನು ತೆರೆದರು. ಸೇತುವೆಗಳೇ ಇಲ್ಲದ ಆ ಕಾಲದಲ್ಲಿ ನೆಡೆದು, ಚಕ್ಕಡಿಯನ್ನೋ, ದೋಣಿಯನ್ನೋ ಅಶ್ರಯಿಸಿ ರಂಗರಾಯರು ಓಡಾಡಿದರು. ತಾವೇ ಸಾಮಾಜಿಕ ಸೇತುವೆಯಾದರು.
ಶಾಲೆಗಳಲ್ಲಿ ಮಧ್ಯಾಹ್ನದ ನಂತರ ನೇಕಾರಿಕೆ , ಕುಂಬಾರಿಕೆ , ಮರಗೆಲಸ , ರೇಶ್ಮೆ ಕೃಷಿ , ಹೊಲಿಗೆ ತರಗತಿಗಳನ್ನು ಜೋಡಿಸಿದರು . ಕೂಲಿಯ ಆಸೆಗೆ ಮರುಳಾಗದೆ ಮಕ್ಕಳನ್ನು ನಿಯಮಿತವಾಗಿ ಶಾಲೆಗೆ ಕಳುಹಿಸಿದ ಹೆತ್ತವರಿಗೆ ಇನಾಮು ಕೊಟ್ಟರು . ಮಧ್ಯಾಹ್ನದ ಬಿಸಿಊಟ ಬಡಿಸಿದರು . ವಸತಿನಿಲಯಗಳನ್ನು ತೆರೆದರು . ಇದೆಲ್ಲವನ್ನು ನಿಭಾಯಿಸಲು 1897ರಲ್ಲಿ ಡಿಪ್ರೆಸ್ಸೆಡ್ ಕ್ಲಾಸ್ ಮಿಷನ್ ಸಂಸ್ಥೆಯನ್ನು ಹುಟ್ಟುಹಾಕಿದರು . ತಮ್ಮ ವಕೀಲಿಕೆಯ ಗಳಿಕೆಯನ್ನು ಸುರಿದರು . ಸಾಲದಾದಾಗ ದೇಣಿಗೆಯ ಮೊರೆ ಹೋದರು . ಮನೆ , ಮನೆಗಳಲ್ಲಿ ಪ್ರತಿದಿನ ಈ ಮಕ್ಕಳಿಗಾಗಿ ‘ಒಂದು ಮುಷ್ಟಿ ಅಕ್ಕಿ ‘ ತೆಗೆದಿಡುವಂತೆ ವಿನಂತಿಸಿದರು . ದೂರದ ಮುಂಬೈ , ಬೆಂಗಳೂರು , ಮದ್ರಾಸಿನ ಪರಿಚಿತರಿಗೆ ಧನಸಹಾಯಕ್ಕೆ ವಿನಂತಿಸಿ ಪತ್ರ ಬರೆದರು . ದೇವರೆದರು ಮೊಣಕಾಲೂರಿ ಪ್ರಾರ್ಥಿಸಿದ ನಂತರವೇ ಪತ್ರ ಬರೆಯುತ್ತಿದ್ದರು . ಬರೆದ ಪತ್ರವನ್ನು ದೇವರೆದುರಿಟ್ಟು ವಿದ್ಯಾರ್ಥಿಗಳಿಗೂ ಪ್ರಾರ್ಥನೆ ಮಾಡಿಸುತ್ತಿದ್ದರು . ವಿದ್ಯೆಯಷ್ಟೆ , ವಿನಯವೂ ಮೇಲೆಂಬ ಬೀಜಮಂತ್ರ ಬಿತ್ತುತ್ತಿದ್ದರು .
ಅಸ್ಪೃಶ್ಯ ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ ಸಹಾಯ ಮಾಡಲು ಗೋಮತಿಯಮ್ಮ ಮೆಟರ್ನಿಟಿ ಫಂಡ್ ಸ್ಥಾಪಿಸಿದರು. 6 ತಿಂಗಳು ಕಾಲ ಉಚಿತ ಅಕ್ಕಿ, ಎರಡು ಸೀರೆ ಉಚಿತ ವೈದ್ಯಕೀಯ ನೆರವನ್ನು ಕೊಟ್ಟರು. ದಲಿತರ ಮೊದಲ ಸಹಕಾರ ಸಂಘ ತೆರೆದವರು ರಂಗರಾಯರು. ಆ ಕಾಲದಲ್ಲಿ ಆದಿ ದ್ರಾವಿಡ ಸಹಕಾರಿ ಸಂಘದ 40 ಶಾಖೆಗಳಿದ್ದವು. ಅಂದಿನ ಮಂಗಳೂರು ಪುರಸಭೆಗೆ ದಲಿತರಿಬ್ಬರು – ಗೋವಿಂದ ಮಾಸ್ಟರ್ , ಅಂಗಾರ ಮಾಸ್ಟರ್ – ಸದಸ್ಯರಾಗುವಂತೆ ಮಾಡಿದರು.
ಬಹಿಷ್ಕರಿಸಿದ್ದ ಸ್ವಜಾತಿಗರು ನಿಧಾನವಾಗಿ ಜೊತೆಯಾದರು . ಕೊನೆಗೊಮ್ಮೆ ಬಹಿಷ್ಕಾರವೂ ತೆರವಾಯಿತು . ಹಠಕ್ಕೆ ಬಿದ್ದಿದ್ದ ಕೆಲವರು ವಾಪಸ್ ಜಾತಿ ಪ್ರವೇಶ ಸಿಗಬೇಕಾದರೆ ಜುಲ್ಮಾನೆ ಕಟ್ಟಬೇಕೆಂದರು . ರಂಗರಾಯರು ದಂಡ ತುಂಬಲು ಹಿಂಜರಿಯಲಿಲ್ಲ . ಹಿಗ್ಗದ , ಕುಗ್ಗದ ಮಾಗಿದ ಮನಸ್ಸಿನ ಸಾಧಕ ಅವರು .
ಅಪವ್ಯಯದಿಂದ ರಾಯರು ಬಲುದೂರ. ತಮಗೆ ಬಂದ ಲಕೋಟೆಗಳನ್ನು ಅಂದವಾಗಿ ಕತ್ತರಿಸಿ ಅದರ ಒಳಮೈಯನ್ನು ಟಿಪ್ಪಣಿ ಬರೆಯಲು ಬಳಸುತ್ತಿದ್ದರು. ರಾಯರು ಏನನ್ನೂ ಬಿಸಾಕುತ್ತಿರಲಿಲ್ಲ. ಹಳೆಯ ನಿಬ್ಬು , ತುಂಡಾದ ಪಿನ್ನು , ಪೆನ್ಸಿಲ್ಲು ಎಲ್ಲವೂ ರಾಯರ ಟೇಬಲ್ಲಿನ ಡ್ರಾನಲ್ಲಿ ಸುರಕ್ಷಿತ. ವಿದ್ಯಾರ್ಥಿಗಳು ಏನನ್ನಾದರು ಇದೆಯೇ ಎಂದು ಕೇಳುವಂತಿರಲಿಲ್ಲ. ಎಲ್ಲವೂ ಇದ್ದೇ ಇರುತ್ತಿತ್ತು ಆ ಖಜಾನೆಯಲ್ಲಿ.
ದಲಿತರ ಏಳ್ಗೆಗಾಗಿ ತಪಸ್ಸಿನಂತೆ ಬದುಕಿದ ರಾಯರು ವಯಸ್ಸು 65 ತಲುಪಿದಾಗ ಸಂನ್ಯಾಸದತ್ತ ಹೊರಳಿದರು. ಬ್ರಿಟಿಷ್ ಸರ್ಕಾರಕೊಟ್ಟಿದ್ದ ರಾವ್ ಬಹದ್ದೂರ್ ಪ್ರಶಸ್ತಿಯೂ ಸೇರಿದಂತೆ ಎಲ್ಲ ಬಿರುದು ಬಾವಲಿಗಳನ್ನು ಸಂನ್ಯಾಸದ ಹೋಮಕುಂಡಕ್ಕೆ ಹಾಕಿದರು . ಮರದ ಕುಟೀರದಲ್ಲಿ ಕೊನೆದಿನಗಳನ್ನು ಕಳೆದರು.
ತಮ್ಮ ಸ್ವಂತ ಮಕ್ಕಳಿಗೆ ರಾಯರು ವಿದ್ಯೆಯನ್ನು ಕೊಟ್ಟಿದ್ದು ಬಿಟ್ಟರೆ ಏನನ್ನು ಮಾಡಲಿಲ್ಲ. ಆದರೆ ಅವರ ಮಕ್ಕಳು ಸ್ವಪ್ರಯತ್ನದಿಂದ ಸಾಧನೆಯ ಶಿಖರ ಏರಿದರು . ಮೊದಲು ಮಗಳು ಲಲಿತಾ ಮದುವೆಯಾಗಿ, ಮಕ್ಕಳಾದ ನಂತರವೂ ಕಾಲೇಜು ವಿದ್ಯಾಭ್ಯಾಸ ಮುಂದುವರಿಸಿದ ಧೀರೆ . ಆ ಕಾಲದ ಬ್ರಿಟಿಷ್ ಸರಕಾರದ ದಿಲ್ಲಿಯ ಐಶಾರಾಮದ ಸಭೆಯಲ್ಲಿ ಪಾಲ್ಗೊಳ್ಳುವ ಲಲಿತಾ ಅಲ್ಲಿಂದ ಅಪ್ಪನಿಗೆ ಬರೆಯುವ ಪತ್ರ ಮನಕಲುಕುವಂತಿದೆ . ಕುಟುಂಬದ ಒಪ್ಪಿಗೆಯೊಂದಿಗೆ ಅಂತರ್ ಜಾತಿಯ ವಿವಾಹವಾದ ಎರಡನೇಯ ಮಗಳು ರಾಧಾ ಉನ್ನತ ವ್ಯಾಸಂಗ ಪೂರೈಸಿದ್ದು ಇಂಗ್ಲೆಂಡಿನಲ್ಲಿ . 1930 ರಲ್ಲಿ ನೆಡೆದ ದುಂಡು ಮೇಜಿನ ಸಭೆಯಲ್ಲಿ ಮಹಾತ್ಮ ಗಾಂಧಿ , ಡಾ ಅಂಬೇಡ್ಕರ್ ಜೊತೆ ಭಾರತದ ಮಹಿಳಾ ಪ್ರತಿನಿಧಿಯಾಗಿ ರಾಧಾ ಭಾಗವಹಿಸಿದರು . ಶೇ 5 ರ ಮಹಿಳಾ ಮೀಸಲಾತಿಗಾಗಿ ಸಭೆಯಲ್ಲಿ ಪ್ರತಿಪಾದಿಸಿದರು. ಅವಿವಾಹಿತರಾಗಿದ್ದ ಮೂರನೇ ಮಗಳು ಶಾಂತಾ ಲಂಡನ್ನಿನ ಬೆಡ್ ಫೋರ್ಡ್ ಕಾಲೇಜಿನಲ್ಲಿ ಭೂಗೋಳಶಾಸ್ತ್ರದ ಮುಖ್ಯಸ್ಥೆಯಾದರು. ಮಹಾರಾಷ್ಟ್ರದ ನಾಗಪುರದ ಲೇಡಿ ಅಮೃತಾಬಾಯಿ ಡಾಗಾ ಮಹಿಳಾ ಕಾಲೇಜಿನ ಮೊದಲ ಪ್ರಾಂಶುಪಾಲೆಯಾಗಿದ್ದವರು.
1928 ಜನವರಿ 30ರಂದು ಕುದ್ಮುಲ್ ರಂಗರಾಯರು ಕೊನೆಯುಸಿರೆಳೆದರು. ತಮ್ಮ ಉಯಿಲಿನಲ್ಲಿ ರಂಗರಾಯರು ಅಂತ್ಯಕ್ರಿಯೆ ಮಾಡುವ ಹಕ್ಕನ್ನು ಪೌರಕಾರ್ಮಿಕ ವೃತ್ತಿ ಮಾಡುವ ತೋಟಿ ಸಮುದಾಯದವರಿಗೆ ಕೊಟ್ಟಿದ್ದರು. ಅವರ ಉಯಿಲಿನ ಆಶಯದಂತೆಯೇ ಎಲ್ಲವೂ ನೆರವೇರಿತು.
ಡಿ ಅಣ್ಣು ಅಗಲಿ, ಪ್ರೇಮಿರಾವ್ ಅಗಲಿ ಲೇಖಕರಾಗಿ ಗುರುತಿಸಿಕೊಂಡವರಲ್ಲ. ಆದರೆ ಅಪರೂಪದ ದಾಖಲೆಗಳನ್ನು ಸಂಗ್ರಹಿಸಿ, ಸರಳ ನಿರೂಪಣೆಯೊಂದಿಗೆ ಉಳಿದುಹೋಗಿದ್ದ ಅಪೂರ್ಣ ಅಧ್ಯಾಯಗಳಿಗೆ ಜೀವಕೊಟ್ಟಿದ್ದಾರೆ.
‘ಉಡುಪಿ, ದಕ್ಷಿಣ ಕನ್ನಡ ಭಾಗದ ಕನಿಷ್ಟ 6 ಸಾವಿರ ದಲಿತರ ಮನೆಗಳಲ್ಲಿ ರಾಯರು ಒಂದಲ್ಲ, ಒಂದು ರೀತಿಯಲ್ಲಿ ಬೆಳಕು ಹಚ್ಚಿದ್ದಾರೆ. ರಂಗರಾಯರೂ ಯಾರೊಂದಿಗೂ ಘರ್ಷಣೆ ನೆಡಸಿ ಅಥವಾ ಇನ್ನೊಬ್ಬರ ಮೇಲೆ ತಮ್ಮ ತತ್ವ ಹೇರಿ ಸಾಮಾಜಿಕ ಬದಲಾವಣೆ ಬಯಸಿದವರಲ್ಲ’ ಎಂದು ಲೇಖಕ ಡಿ ಅಣ್ಣು ಗುರುತಿಸಿದ್ದಾರೆ .
‘ಅನ್ಯಭಾಗದ ದಲಿತರಿಗೆ ಹೋಲಿಸಿದರೆ ಕರಾವಳಿಯ ದಲಿತರು ತಕ್ಕಮಟ್ಟಿಗೆ ಸ್ವಾವಲಂಬಿಗಳಾಗಿದ್ದಾರೆ. ಇದರಲ್ಲಿ ಕುದ್ಮುಲ್ ಪಿಜ್ಜಾನ ದಣಿವಿಲ್ಲದ ಪರಿಶ್ರಮವಿದೆ . ಒಂದು ಚಿಂತನೆಯನ್ನು ನಂಬಿದರೆ, ಅದಕ್ಕಾಗಿ ಜೀವನವನ್ನು ತೇಯ್ದರೆ ಬದಲಾವಣೆ ಸಾಧ್ಯ. ಇದನ್ನು ನನ್ನ ಕುದ್ಮುಲ್ ಪಿಜ್ಜಾ ಮಾಡಿತೋರಿಸಿದ್ದಾರೆ ‘ ಎಂದು ಲೇಖಕಿ ಪ್ರೇಮಿರಾವ್ ದಾಖಲಿಸಿದ್ದಾರೆ.
ಎರಡೂ ಪುಸ್ತಕಗಳನ್ನು ಓದಿದ ತರುವಾಯ ರಾಯರು ನೆಡದಾಡಿದ ದಡ್ಡಲಕಾಡಿನ ದಲಿತ ಕುಟುಂಬಗಳನ್ನು ಭೇಟಿ ಮಾಡಿದೆ . ಪ್ರತಿಮನೆಯಲ್ಲೂ ರಂಗರಾಯರ ಭಾವಚಿತ್ರ ನೋಡುವಾಗ ಕಣ್ಣಂಚು ಒದ್ದೆಯಾಯಿತು. ನಾಲ್ಕನೇ ತಲೆಮಾರಿನ ಯುವಕ ವಿನಯ್ ನೇತ್ರ ಮುಂಡಾಳ ಯುವ ವೇದಿಕೆಯ ಮೂಲಕ ಪ್ರತಿವರ್ಷ ಬಡ ಶಾಲಾ ಮಕ್ಕಳಿಗೆ ಐದು ಸಾವಿರಕ್ಕೂ ಮಿಕ್ಕು ನೋಟ್ ಬುಕ್ಕು ವಿತರಿಸುತ್ತಾರೆ . ಪ್ರತಿ ನೋಟ್ ಬುಕ್ಕಿನ ಮೇಲೆ ಕುದ್ಮುಲ್ ರಂಗರಾಯರ ಚಿತ್ರ , ಕೆಳಗೊಂದು ವಾಕ್ಯ – ‘ ಕೈ ಮುಗಿದು ಪುಟ ತೆಗಿ , ಮಗುವೇ ‘ !
✍️- ವಾದಿರಾಜ್ , ಬೆಂಗಳೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.