ನವದೆಹಲಿ: ಇಂದಿನಿಂದ 18 ನೇ ಲೋಕಸಭೆಯು ಇಂದು ಮೊದಲ ಅಧಿವೇಶನ ನಡೆಯುತ್ತಿದೆ. ಈ ಬಾರಿ ವಿರೋಧ ಪಕ್ಷಗಳ ಸದಸ್ಯರ ಸಂಖ್ಯೆ ಹೆಚ್ಚಿರುವ ಕಾರಣದಿಂದ ಬಿರುಸಿನ ಸಮರ ನಡೆಯುವುದು ಬಹುತೇಕ ಖಚಿತ ಎಂಬಂತಾಗಿದೆ.
ಅಧಿವೇಶನದಲ್ಲಿ ಹೊಸದಾಗಿ ಆಯ್ಕೆಯಾದ ಸದಸ್ಯರ ಪ್ರಮಾಣ ವಚನ ಮತ್ತು ದೃಢೀಕರಣ ನಡೆಯಲಿದೆ. ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿರುವ ಬಿಜೆಪಿಯ ಹಿರಿಯ ಸಂಸದ ಭರ್ತೃಹರಿ ಮಹತಾಬ್ ಅವರು ಹೊಸದಾಗಿ ಆಯ್ಕೆಯಾದ ಲೋಕಸಭಾ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಸದನ ಸಭೆ ಸೇರುವ ಮೊದಲು ಮಹತಾಬ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಸಭಾಧ್ಯಕ್ಷರ ಆಯ್ಕೆಯವರೆಗೆ ಹಂಗಾಮಿ ಸ್ಪೀಕರ್ ಆಗಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಸದನದ ಹಿರಿಯ ಸದಸ್ಯರಾದ ಕೆ ಸುರೇಶ್, ಟಿ ಆರ್ ಬಾಲು, ರಾಧಾ ಮೋಹನ್ ಸಿಂಗ್, ಫಗ್ಗನ್ ಸಿಂಗ್ ಕುಲಸ್ತೆ ಮತ್ತು ಸುದೀಪ್ ಬಂದೋಪಾಧ್ಯಾಯ ಅವರು ಹೊಸ ಸಂಸದರಿಗೆ ಪ್ರಮಾಣ ವಚನ ಬೋಧಿಸಲು ಹಂಗಾಮಿ ಸ್ಪೀಕರ್ಗೆ ಸಹಾಯ ಮಾಡುತ್ತಾರೆ.
ನೂತನ ಲೋಕಸಭಾ ಸ್ಪೀಕರ್ ಆಯ್ಕೆ ಬುಧವಾರ ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಗುರುವಾರದಿಂದ ರಾಜ್ಯಸಭೆಯ ಅಧಿವೇಶನ ಆರಂಭವಾಗಲಿದೆ. ಮುಂದಿನ ತಿಂಗಳು 3ರಂದು ಸಂಸತ್ ಅಧಿವೇಶನ ಮುಕ್ತಾಯವಾಗಲಿದೆ.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.