ಇದು ಬಿಹಾರದ ರಾಜಧಾನಿಯಾದ ಪಾಟ್ನಾದ ಆಗ್ನೇಯ ಭಾಗದಲ್ಲಿ ಸುಮಾರು 55 ಮೈಲು ದೂರದಲ್ಲಿದೆ ಮತ್ತು ಕ್ರಿ.ಶ. 427 ರಿಂದ 1197 ವರೆಗೆ ಬುದ್ಧ ಪ್ರಣೀತ ತತ್ವಜ್ಞಾನದ ವ್ಯಾಸಂಗ ಕೇಂದ್ರವಾಗಿತ್ತು. ಇದು “ಇತಿಹಾಸದಲ್ಲಿ ನಮೂದಿತವಾದ ಮೊದಲ ಅತಿ ಶ್ರೇಷ್ಠವಾದ ವಿಶ್ವವಿದ್ಯಾಲಯ” ಎಂದು ಕರೆಯಲ್ಪಟ್ಟಿದೆ.ಸಾಕಷ್ಟು ಜನರಿಗೆ ನಳಂದ ಚಿರಪರಿಚಿತ. ನಳಂದ ವಿಶ್ವದ ಅತ್ಯಂತ ಹಳೆಯ ವಸತಿ ವಿಶ್ವವಿದ್ಯಾಲಯ . ಪ್ರಸ್ತುತ ನಳಂದದ ಬಹುತೇಕ ಭಾಗಗಳು ಅವಶೇಷಗಳಾಗಿದ್ದರೂ ಅದರ ಪ್ರತಿಯೊಂದು ಭಾಗವನ್ನು ವೀಕ್ಷಿಸುತ್ತಿದ್ದರೆ ರೋಮಾಂಚನವಾಗುತ್ತದೆ. ಜತೆಗೆ ಈ ಅವಶೇಷಗಳನ್ನು ನೋಡುತ್ತಿದ್ದರೆ ಗತ ಇತಿಹಾಸದ ಭವ್ಯವಾದ ದಿನಗಳು ಕಣ್ಣೆದುರು ಸುಳಿದಂತಾಗುತ್ತದೆ. ದೇಶ ವಿದೇಶಗಳಿಂದ ನಿತ್ಯ ಸಹಸ್ರಾರು ಪ್ರವಾಸಿಗಳು ಇಲ್ಲಿಗೆ ಬಂದು ವೀಕ್ಷಿಸಿ, ಧನ್ಯತೆ/ಸಾರ್ಥಕತೆಯ ಅನುಭವವನ್ನು ಪಡೆಯುತ್ತಾರೆ.ನನಗೂ ಈ ಪವಿತ್ರ ಸ್ಥಳವನ್ನು ಕಣ್ಣು,ಮನ, ಹೃದಯಳಲ್ಲಿ ತುಂಬಿಕೊಳ್ಳುವ ಸುವರ್ಣ ಅವಕಾಶ ಒದಗಿಬಂತು.
ಗೌತಮ ಬುದ್ಧ, ನಳಂದದ ಮಾವಿನ ತೋಪಿನ ಬಳಿ ಉಪನ್ಯಾಸಗಳನ್ನು ನೀಡಿದ್ದಾಗಿಯೂ ಹೇಳಲಾಗುತ್ತದೆ. ನಳಂದಾ ವಿಶ್ವವಿದ್ಯಾಲಯದ ಸ್ಥಾಪನೆಗೆ ಬಹಳ ಹಿಂದೆಯೇ ಗೌತಮ ಬುದ್ಧ ತನ್ನ ಜೀವಿತಾವಧಿಯಲ್ಲಿ ಅನೇಕ ಬಾರಿ ಈ ಸ್ಥಳಕ್ಕೆ ಬಂದು ಉಳಿದುಕೊಂಡಿದ್ದರೆಂದು ಹೇಳಲಾಗಿದೆ. ಹಾಗೆಯೇ ತೀರ್ಥಂಕರ ಮಹಾವೀರರು ತಮ್ಮ ಜೀವಿತಾವಧಿಯಲ್ಲಿ ಈ ಸ್ಥಳಕ್ಕೆ ಬಂದು ಸುಮಾರು 14 ವರ್ಷಗಳ ಕಾಲ ಇಲ್ಲಿಯೇ ಇದ್ದರು. ಹಿಂದೂಗಳು, ಬೌದ್ಧರು ಮತ್ತು ಜೈನರಿಗೆ ಈ ಸ್ಥಳದ ಪ್ರಾಮುಖ್ಯತೆ ಅಪಾರವಾಗಿದೆ. ಇದು ಪವಿತ್ರ ಸ್ಥಳ ಹಾಗೂ ಕಲಿಕೆಯ ಸ್ಥಳವಾಗಿತ್ತು.
ನಾಲಂದ ( ಹಿಂದಿ/ ಸಂಸ್ಕೃತ/ ಪಾಲಿ: ನಾಲಂದ) . ನಳಂದ
“𝑁𝑎𝑙𝑎𝑚” ಎಂಬ ಪದದ ಅರ್ಥ 𝐿𝑜𝑢𝑡𝑎𝑠 ಮತ್ತು “𝐷𝑎” ಎಂಬ ಪದದ ಅರ್ಥ “𝐺𝑖𝑣𝑖𝑛𝑔”. ಕಮಲವು ಮತ್ತೊಮ್ಮೆ “ಜ್ಞಾನದ” ಸಂಕೇತವಾಗಿದೆ. ಈ ಎರಡು ಪದಗಳು ನಲಂ ಮತ್ತು ದಾ ,ನಳಂದಾ ಆಗಿವೆ. ಇದರ ಅರ್ಥ “ಜ್ಞಾನವನ್ನು ನೀಡುವುದು”.
ಕೆಲವು ಕಟ್ಟಡಗಳನ್ನು ಮೌರ್ಯ ವಂಶದ ಚಕ್ರವರ್ತಿ ಅಶೋಕನು ನಿರ್ಮಿಸಿದ್ದಾನೆ. ಗುಪ್ತಾ ಸಾಮ್ರಾಜ್ಯವೂ ಕೆಲವು ಮಠಗಳನ್ನು ನಿರ್ಮಿಸಲು ಪ್ರೋತ್ಸಾಹಿಸಿತು. ಇದನ್ನು ಮೂರು ಹಂತಗಳಲ್ಲಿ ನಿರ್ಮಿಸಲಾಗಿದೆ ಅನ್ನುವ ಮಾಹಿತಿ ಇದೆ. ಅದಕ್ಕೆ ಪುರಾವೆಯಾಗಿ ಮೂರು ಅಂತಸ್ತುಗಳ ರಚನಾ ಶೈಲಿಯಲ್ಲಿ ವ್ಯತ್ಯಾಸವನ್ನು ಗಮನಿಸಬಹುದು. ಇತಿಹಾಸಜ್ಞರ ಪ್ರಕಾರ, ನಳಂದವು ಗುಪ್ತ ರಾಜ ಶಕ್ರಾದಿತ್ಯ(ಕುಮಾರಗುಪ್ತನೆಂದೂ ಕರೆಯುವರು, ಆಳ್ವಿಕೆ 415-55) ಮತ್ತು ಬೌದ್ಧ ಸಾಮ್ರಾಟರಾದ ಹರ್ಷ ಹಾಗೂ ಪಾಲ ಸಾಮ್ರಾಜ್ಯದ ನಂತರದ ಕೆಲವು ಚಕ್ರವರ್ತಿಗಳ ಕಾಲದಲ್ಲಿ ಪ್ರವರ್ಧಮಾನದಲ್ಲಿತ್ತು.ಅಲ್ಲಿಯ ಸಂಕೀರ್ಣವು ಕೆಂಪು ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿತ್ತು . ಐದು ಕಿಲೋಮೀಟರ್ ಅಗಲ, ಏಳು ಕಿಲೋಮೀಟರ್ ಉದ್ದ(35 ಚದರ ಕಿಲೋಮೀಟರ್) ಇದು ವ್ಯಾಪಿಸಿಕೊಂಡಿರುವ ವಿಸ್ತೀರ್ಣ. ತನ್ನ ಉತ್ತುಂಗ ಸ್ಥಿತಿಯಲ್ಲಿ ಈ ವಿಶ್ವವಿದ್ಯಾಲಯವು ಚೈನಾ, ಗ್ರೀಸ್ ಮತ್ತು ಪರ್ಶಿಯಾದಂತಹ ದೂರದೂರುಗಳ ಪಂಡಿತರು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಿತ್ತು. ಈ ವಿಶ್ವವಿದ್ಯಾನಿಲಯದ ದ್ವಾರಪಾಲಕ ವಿದ್ಯಾರ್ಥಿಗಳ ಸಂದರ್ಶನವನ್ನು ಮಾಡಿ ಆಯ್ಕೆ ಮಾಡುವಷ್ಟು ಪಾಂಡಿತ್ಯವನ್ನು ಹೊಂದಿದ್ದ ಎಂಬುದು ಇಲ್ಲಿನ ಹೆಗ್ಗಳಿಕೆ. ಇಲ್ಲಿ 108 ವಿಷಯಗಳನ್ನು ಕಲಿಸಲಾಗುತ್ತಿತ್ತು. ಪ್ರತಿಯೊಂದು ವಿಷಯಕ್ಕೆ 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಇಲ್ಲಿನ ಅವಶೇಷಗಳಲ್ಲಿ ವಿದ್ಯಾರ್ಥಿ ವಸತಿ ನಿಲಯದ 30 ಕೊಠಡಿಗಳು ಇದ್ದುದನ್ನು ಈಗಲೂ ನೋಡಬಹುದು. ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಇಲ್ಲಿತ್ತು. ಪುಸ್ತಕ ಇಡುವ ಜಾಗವನ್ನು ಈಗಲೂ ನೋಡಬಹುದು. ಇಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಪುಸ್ತಕಕ್ಕೆ ಕಡಿಮೆ ಜ್ಞಾನಕ್ಕೆ ಹೆಚ್ಚು ಮಹತ್ವ ಇತ್ತು. ಹಾಗಾಗಿ ಪುಸ್ತಕ ಇಡುವ ಜಾಗ ಸಣ್ಣದಿದೆ ಎಂದು ಮಾಹಿತಿದಾರರು ವಿವರಿಸಿದರು. ಪಾಠ ನಡೆಯುವ ಪ್ರಾಂಗಣವನ್ನು ಇಲ್ಲಿ ನಾವು ನೋಡಬಹುದು.ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಪರ್ಯಾಪ್ತ ಸಂಖ್ಯೆಯಲ್ಲಿ ಪ್ರಾಚಾರ್ಯರು, ಪಂಡಿತರು ಇಲ್ಲಿ ಲಭ್ಯವಿದ್ದರು. ರಾಜಶ್ರಯದಿಂದ ಉಚಿತ ಶಿಕ್ಷಣ ವ್ಯವಸ್ಥೆ ರೂಪುಗೊಂಡಿತ್ತು. ಅದರ ಹೊರತಾಗಿ,ಸಾವಿರಾರು ಮಂದಿ ಪ್ರಾಚಾರ್ಯರು ಹಾಗೂ ವಿದ್ಯಾರ್ಥಿಗಳಿಗೆ ಬೇಕಾದ ದವಸ ಧಾನ್ಯ ಹಾಲು ಇತ್ಯಾದಿಗಳು ಸುತ್ತಲಿನ ಹಳ್ಳಿಗಳ ರೈತರಿಂದ ನಿತ್ಯವೂ ಉಚಿತವಾಗಿ ಸರಬರಾಜು ಆಗುತ್ತಿತ್ತು. ಗುರುಕುಲದ ಬಹುದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಸಮಾಜವೇ ಭರಿಸುತ್ತಿತ್ತು. ನೀರಿನ ಬಾವಿಗಳು, ಧವಸ,ಧಾನ್ಯ ಸಂಗ್ರಹದ ಸಂಗ್ರಹಗಾರಗಳು ಇಂದಿಗೂ ಕಾಣಲು ಸಿಗುತ್ತವೆ. ಒಳಗಿನ ನೀರಿನ ಹರಿವಿಗೆ ರಚಿಸಲಾದ ಅತ್ಯಂತ ವೈಜ್ಞಾನಿಕ, ಸುದೃಢ ಕಾಲುವೆ ವ್ಯವಸ್ಥೆ ಇಂದಿಗೂ ಉಳಿದುಕೊಂಡಿದೆ.
ಇಲ್ಲಿನ ವಿದ್ಯಾರ್ಥಿಗಳು ಸ್ನಾನ ಹಾಗೂ ಶೌಚಕ್ಕಾಗಿ ಪಕ್ಕದ ನದೀ ತೀರವನ್ನು ಅವಲಂಬಿಸಿದ್ದರು ಅನ್ನುವ ಮಾಹಿತಿ ಸಿಕ್ಕಿತು.ಪರಿಸರದಲ್ಲಿ ಸಿಕ್ಕಿರುವ ಮೂರ್ತಿಗಳು, ಪಾತ್ರೆಗಳು ಹಾಗೂ ಇತರ ಪರಿಕರಗಳನ್ನು ಪಕ್ಕದಲ್ಲಿ ಒಂದು ಮ್ಯೂಸಿಯಂ ರಚಿಸಿ ಅದರಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ,ಇದರ ವೀಕ್ಷಣೆಯೂ ಒಂದು ವಿಶೇಷ ಅನುಭವ. ಒಟ್ಟಿನಲ್ಲಿ ಒಂದು ಜೀವಂತ ವಿಶ್ವವಿದ್ಯಾಲಯದ ಒಳಗೆ ನಡೆದಾಡುತ್ತಿದ್ದೇವೆ ಅನ್ನುವ ಅನುಭವ ನಮಗಾಯಿತು.
ಇಂತಹ ಮಹಾನ್ ಜ್ಞಾನ ದೇಗುಲವು 1193ರಲ್ಲಿ ಭಕ್ತಿಯಾರ್ ಖಿಲ್ಜಿಯ ನೇತೃತ್ವದಲ್ಲಿ ಮುಸ್ಲಿಮ್ ಧಾಳಿಕೋರರಿಂದ ದೋಚಲ್ಪಟ್ಟಿತು, ನಾಶಗೊಂಡಿತು. ವಿಶ್ವವಿದ್ಯಾಲಯದ ಗ್ರಂಥಾಲಯವು ಎಷ್ಟು ದೊಡ್ಡದಿತ್ತೆಂದರೆ, ಮೊಘಲರು ಅಲ್ಲಿ ಬೆಂಕಿ ಹಚ್ಚಿದ ಮೂರು ತಿಂಗಳವರೆಗೂ ಆ ಸ್ಥಳವು ಉರಿಯುತ್ತಿತ್ತೆಂದು ವರದಿಯಾಗಿತ್ತು. ಆ ಸ್ಥಳದಿಂದ ಸಂತರನ್ನು ಹೊರಗೆ ಕಳಿಸಿ, ಮಠಗಳನ್ನು ನಾಶಮಾಡಿದ್ದರು..
2006ರಲ್ಲಿ ಸಿಂಗಪೂರ್, ಚೈನಾ, ಭಾರತ, ಜಪಾನ್ ಮತ್ತು ಇತರ ದೇಶಗಳು ಈ ಐತಿಹಾಸಿಕ ಪ್ರಾಂತ್ಯವನ್ನು ನಳಂದ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಎಂದು ನವೀಕರಿಸುವ ಮತ್ತು ಪುನರುಜ್ಜೀವನಗೊಳಿಸುವ ಯೋಜನೆಯ ಪ್ರಸ್ತಾಪವನ್ನು ಮುಂದಿಟ್ಟಿತು. ಈಗ ಆ ಕಾರ್ಯ ಪ್ರಗತಿಯಲ್ಲಿದೆ.
✍️ಪ್ರವೀಣ ಸರಳಾಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.