2024 ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಅತಿಯಾದ ಆತ್ಮವಿಶ್ವಾಸದಲ್ಲಿ ತೇಲುತ್ತಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಅದರ ಅನೇಕ ನಾಯಕರಿಗೆ ರಿಯಾಲಿಟಿ ಚೆಕ್ ಆಗಿ ಹೊರಹೊಮ್ಮಿದೆ. ಪ್ರಧಾನಿ ನರೇಂದ್ರ ಮೋದಿಯವರು ನೀಡಿದ 400+ ಕರೆ ತಮಗೆ ಒಂದು ಗುರಿ ಮತ್ತು ವಿರೋಧ ಪಕ್ಷಗಳಿಗೆ ಒಂದು ಸವಾಲು ಎಂಬುದನ್ನು ಇವರುಗಳಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಯಾವತ್ತೂ ಗುರಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್ ಮತ್ತು ಸೆಲ್ಫಿಗಳನ್ನು ಹಂಚಿಕೊಳ್ಳವ ಮೂಲಕ ಅಲ್ಲ ಕ್ಷೇತ್ರಗಳಲ್ಲಿ ಕಠಿಣ ಪರಿಶ್ರಮಪಡುವ ಮೂಲಕ ಸಾಧಿಸಲಾಗುತ್ತದೆ. ಹೀಗಾಗಿ ಅವರ ಸಂತೋಷ ನೀರಿನ ಮೇಲಿನ ಗುಳ್ಳೆಯಾಗಿತ್ತು, ಮೋದಿಯವರ ಪ್ರಭೆಯಿಂದ ಪ್ರತಿಫಲಿಸುವ ಹೊಳಪನ್ನು ಅವರು ಆನಂದಿಸುತ್ತಿದ್ದರು, ಹೀಗಾಗಿ ಅವರ ಕಿವಿಗೆ ಬೀದಿಗಳಲ್ಲಿ ಮೊಳಗುತ್ತಿದ್ದ ಧ್ವನಿ ಕೇಳಲಿಲ್ಲ. ಈ ಚುನಾವಣೆಯ ಸಂಕೀರ್ಣ ಫಲಿತಾಂಶಗಳಿಂದ ಕಲಿಯಲೂ ಇನ್ನೂ ಹಲವು ಪಾಠಗಳಿವೆ ಎಂಬುದು ಸತ್ಯ.
ರಾಷ್ಟ್ರೀಯ ಸ್ವಯಂಸೇವಕ ಸಂಘ: ಈ ಚುನಾವಣೆಯಲ್ಲಿ ಆರೆಸ್ಸೆಸ್ ಬಿಜೆಪಿಗಾಗಿ ಕೆಲಸ ಮಾಡಿಲ್ಲ ಎಂಬ ಸಂಗತಿಯನ್ನು ನಾನು ಮೊದಲು ತಿಳಿಯಪಡಿಸುತ್ತೇನೆ. ಆರ್ಎಸ್ಎಸ್ ಬಿಜೆಪಿಯ ಫೀಲ್ಡ್ ಫೋರ್ಸ್ ಅಲ್ಲ ಎಂಬುದನ್ನು ನಾನು ನೇರವಾಗಿಯೇ ಹೇಳುತ್ತೇನೆ. ವಿಶ್ವದ ಅತಿದೊಡ್ಡ ಪಕ್ಷವಾದ ಬಿಜೆಪಿ ತನ್ನದೇ ಆದ ಕಾರ್ಯಕರ್ತರನ್ನು ಹೊಂದಿದೆ. ಮತದಾರರನ್ನು ತಲುಪುವುದು, ಪಕ್ಷದ ಅಜೆಂಡಾವನ್ನು ವಿವರಿಸುವುದು, ಬರಹ ಮತ್ತು ಮತದಾರರ ಚೀಟಿಗಳನ್ನು ವಿತರಿಸುವುದು ಇತ್ಯಾದಿಗಳು ಅದರ ನಿತ್ಯದ ಚುನಾವಣಾ ಜವಾಬ್ದಾರಿಯಾಗಿದೆ. ಆರ್ಎಸ್ಎಸ್ ಜನರ ಮತ್ತು ರಾಷ್ಟ್ರದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. 1973-1977ರ ಅವಧಿಯನ್ನು ಹೊರತುಪಡಿಸಿ, ಆರ್ಎಸ್ಎಸ್ ಎಂದೂ ನೇರವಾಗಿ ರಾಜಕೀಯದಲ್ಲಿ ಭಾಗವಹಿಸಿಲ್ಲ. ಅದೊಂದು ಅಸಾಧಾರಣ ಅವಧಿಯಾಗಿತ್ತು, ಹೀಗಾಗಿ ಆರ್ಎಸ್ಎಸ್ ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಸಾಕಷ್ಟು ಶ್ರಮಿಸಿತ್ತು. 2014 ರಲ್ಲಿ, ಸಂಘ “100 ಪ್ರತಿಶತ ಮತದಾನ” ಎಂಬ ಕರೆಯನ್ನು ಮೊಳಗಿಸಿತ್ತು. ಈ ಅಭಿಯಾನದಿಂದ ಮತದಾನದ ಶೇಕಡಾವಾರು ಪ್ರಮಾಣದಲ್ಲಿ ಗಮನಾರ್ಹ ಏರಿಕೆಯಾಯಿತು ಮತ್ತು ಆಡಳಿತದ ಬದಲಾವಣೆಯೂ ಆಯಿತು. ಈ ಬಾರಿಯೂ ಕಾರ್ಯಕರ್ತರು 10-15 ಜನರ ಸಣ್ಣ ಸ್ಥಳೀಯ, ಮೊಹಲ್ಲಾ, ಕಟ್ಟಡ, ಕಚೇರಿ ಮಟ್ಟದ ಸಭೆಗಳನ್ನು ಆಯೋಜಿಸಿ ಮತದಾನದ ಕರ್ತವ್ಯ ನಿಭಾಯಿಸುವಂತೆ ಮನವಿ ಮಾಡಬೇಕು ಎಂಬ ಬಗ್ಗೆ ಆರ್ಎಸ್ಎಸ್ ಅಧಿಕೃತವಾಗಿ ನಿರ್ಧಾರವನ್ನು ತೆಗೆದುಕೊಂಡಿತು. ಅಲ್ಲದೇ ರಾಷ್ಟ್ರ ನಿರ್ಮಾಣ, ರಾಷ್ಟ್ರೀಯ ಏಕೀಕರಣ ಮತ್ತು ರಾಷ್ಟ್ರೀಯತಾವಾದಿ ಶಕ್ತಿಗಳಿಗೆ ಬೆಂಬಲದ ಸಮಸ್ಯೆ ಮುಂತಾದ ಜ್ವಲಂತ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲಿತು. ದೆಹಲಿಯೊಂದರಲ್ಲೇ 1,20,000 ಇಂತಹ ಸಭೆಗಳು ನಡೆದಿವೆ. ಮುಂಬೈನಲ್ಲಿ 60,000 ಕ್ಕೂ ಹೆಚ್ಚು ಸಭೆಗಳು ನಡೆದಿವೆ ಎಂದು ನಾನು ಕೇಳಿದ್ದೆ. ಸಹಜವಾಗಿ ಹೇಳುವುದಾದರೆ, ಅಂತಹ 20 ಲಕ್ಷಕ್ಕೂ ಹೆಚ್ಚು ಸಭೆಗಳು ನಡೆದಿರಬೇಕು ಎಂದು ಊಹಿಸಬಹುದು.
ಇದಲ್ಲೆವನ್ನೂ ಹೊರತುಪಡಿಸಿ, ಚುನಾವಣಾ ಕೆಲಸದಲ್ಲಿ ಸ್ವಯಂಸೇವಕರ ಸಹಕಾರವನ್ನು ಪಡೆಯಬೇಕಾದರೆ ಬಿಜೆಪಿ ಕಾರ್ಯಕರ್ತರು, ಸ್ಥಳೀಯ ನಾಯಕರು ತಮ್ಮ ಸೈದ್ಧಾಂತಿಕ ಮಿತ್ರರನ್ನು ತಲುಪಬೇಕಾಗುತ್ತದೆ. ಹಾಗಾದರೆ ಅದನ್ನು ಅವರು ಮಾಡಿದ್ದಾರೆಯೇ? ನನ್ನ ಅನುಭವ ಮತ್ತು ಮಾಹಿತಿಯ ಪ್ರಕಾರ ಇಲ್ಲ. ಆಲಸ್ಯ, ಅತಿಯಾದ ಆತ್ಮವಿಶ್ವಾಸ, “ಆಯೇಗಾ ತೊ ಮೋದಿ ಹೇ, ಅಬ್ಕಿ ಬಾರ್ 400+? ಎಂಬ ಭಾವವೇ ಇದಕ್ಕೆ ಕಾರಣವಾ? ನನಗೆ ಗೊತ್ತಿಲ್ಲ. ಯಾವುದೇ ಪ್ರಚಾರದ ಹಂಗಿಲ್ಲದ ಹಳೆಯ ಪರಿಶ್ರಮಿ ಸಮರ್ಪಿತ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿ ನವ ಯುಗದ ಸೋಶೀಯಲ್ ಮೀಡಿಯಾ ಬೆಂಬಲಿತ ಸೆಲ್ಫಿ ಕೇಂದ್ರಿತ ಕಾರ್ಯಕರ್ತರಿಗೆ ಮಣೆ ಹಾಕಿದ್ದು ಸ್ಪಷ್ಟವಾಗಿ ಕಂಡುಬರುತ್ತದೆ. ಮಲ್ಟಿಪ್ಲೈಯರ್ ಎಫೆಕ್ಟ್ನೊಂದಿಗೆ ಸೆಲ್ಫಿಗಳನ್ನು ಪೋಸ್ಟ್ ಮಾಡಿ ಶೋ ಆಫ್ ಮಾಡುವುದು ಈಗಿನ ಹೊಸ ರೂಢಿ. ಬಿಜೆಪಿ ಸ್ವಯಂಸೇವಕರು ಆರೆಸ್ಸೆಸ್ ಅನ್ನು ತಲುಪಿಲ್ಲ, ಅದರ ಅಗತ್ಯವೂ ಇಲ್ಲ ಎಂದು ಅವರು ಭಾವಿಸಿದ್ದೇಕೆ ಎಂಬುದಕ್ಕೆ ಅವರೇ ಉತ್ತರ ನೀಡಬೇಕು.
ಅಭ್ಯರ್ಥಿಗಳ ಆಯ್ಕೆಯಲ್ಲಿ ಸಿನಿಕತನದ ವಿಧಾನ: ಮೋದಿಯವರು ಎಲ್ಲಾ 543 ಸ್ಥಾನಗಳಲ್ಲಿ ಹೋರಾಡುತ್ತಿದ್ದಾರೆ ಎಂಬ ಕಲ್ಪನೆಗೆ ಹೆಚ್ಚು ಮೌಲ್ಯವಿಲ್ಲ. ಅಭ್ಯರ್ಥಿಗಳನ್ನು ಬದಲಾಯಿಸಿದಾಗ, ಸ್ಥಳೀಯ ನಾಯಕರನ್ನು ಕಡೆಗಣಿಸಿದಾಗ ಮತ್ತು ಪಕ್ಷಾಂತರಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದಾಗ ಈ ಕಲ್ಪನೆಯು ಸ್ವಯಂ ಸೋಲು ಅನುಭವಿಸುತ್ತದೆ. ಹೊಸದಾಗಿ ಬಂದವರಿಗಾಗಿ ಉತ್ತಮ ಕಾರ್ಯಕ್ಷಮತೆ ತೋರಿದ ಸಂಸದರನ್ನು ತ್ಯಾಗ ಮಾಡುವುದು ಸಹಜವಾಗಿಯೇ ನೋವುಂಟು ಮಾಡುತ್ತದೆ. ಈ ಬಾರಿಯ ಅಂದಾಜು ಸುಮಾರು 25 ಪ್ರತಿಶತ ಅಭ್ಯರ್ಥಿಗಳು ಸಮಯಸಾಧಕ ವಲಸೆಗಾರರು. ಕಳೆದ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಕಾರಣವಾಗಿದ್ದು ಬಂಡಾಯವೆದ್ದ 30% ಮಂದಿ ಎಂಬ ಆಘಾತಕಾರಿ ಅನುಭವದ ಹೊರತಾಗಿಯೂ ಇದು ನಡೆದಿರುವುದು ದುರಾದೃಷ್ಟಕರ. ಸ್ಥಳೀಯ ಸಮಸ್ಯೆಗಳು, ಅಭ್ಯರ್ಥಿಯ ಟ್ರ್ಯಾಕ್ ರೆಕಾರ್ಡ್ ಮುಖ್ಯವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಸ್ಥಳೀಯ ಬಿಜೆಪಿ ಕಾರ್ಯಕರ್ತರ ನಿರಾಸಕ್ತಿಗೂ ಈ ಅಂಶಗಳು ಕಾರಣವಾಗುತ್ತವೆ.
ಜನರನ್ನು ತಲುಪದ ನಾಯಕರು: ಯಾವುದೇ ಬಿಜೆಪಿ ಅಥವಾ ಆರೆಸ್ಸೆಸ್ ಕಾರ್ಯಕರ್ತ ಮತ್ತು ಸಾಮಾನ್ಯ ನಾಗರಿಕರು ವರ್ಷಗಳಿಂದ ಅನುಭವಿಸುತ್ತಿರುವ ದೊಡ್ಡ ಹಿನ್ನೆಡೆಯೆಂದರೆ ಅವರಿಗೆ ಸ್ಥಳೀಯ ಸಂಸದ ಅಥವಾ ಶಾಸಕರನ್ನು ಭೇಟಿ ಮಾಡಲು ಕಷ್ಟವಾಗಿರುವುದು, ಇನ್ನು ಮಂತ್ರಿಗಳ ವಿಚಾರವನ್ನು ಮರೆತೇ ಬಿಡಿ. ಅವರ ಸಮಸ್ಯೆಗಳಿಗೆ ಸಂವೇದನಾಶೀಲತೆ ತೋರದೆ ಇರುವುದು ಇನ್ನೊಂದು ಆಯಾಮ. ಬಿಜೆಪಿಯ ಸಂಸದರು ಮತ್ತು ಸಚಿವರು ಯಾವಾಗಲೂ ಬ್ಯುಸಿ ಏಕೆ? ಅವರು ತಮ್ಮ ಕ್ಷೇತ್ರಗಳಲ್ಲಿ ಏಕೆ ಕಾಣಿಸುವುದಿಲ್ಲ? ಸಂದೇಶಗಳಿಗೆ ಪ್ರತಿಕ್ರಿಯಿಸುವುದು ಅವರಿಗೆ ಯಾಕೆ ಏಕೆ ಕಷ್ಟವಾಗುತ್ತಿದೆ? ಐದು ವರ್ಷಗಳಲ್ಲಿ ಕನಿಷ್ಠ ಮೂರು ಬಾರಿ ತನ್ನ ಕ್ಷೇತ್ರದಲ್ಲಿ ಸಂಚರಿಸಿದ ಸಂಸದರ ಸಂಖ್ಯೆ ಬೆರಳೆಣಿಕೆ ಮಾತ್ರ. ಒಂದು ಉದಾಹರಣೆ ಹೇಳಬೇಕೆಂದರೆ, ಮಹಾರಾಷ್ಟ್ರದ ಕಳೆದ ಬಿಜೆಪಿ-ಎಸ್ಎಸ್ ಸರ್ಕಾರದಲ್ಲಿ ಸಚಿವರು ಬ್ಯೂಸಿ ಇದ್ದ ಕಾರಣ ಯಾವುದೇ ಔಪಚಾರಿಕ ಕಚೇರಿ ಅಥವಾ ಸಿಬ್ಬಂದಿಗಳಿಲ್ಲದೆ ರಚನೆಯಾಗಲು ಮೂರು ವರ್ಷ ತೆಗೆದುಕೊಂಡಿದ್ದ ಹಿಂದೂ ಸಿಖ್ ಸೌಹಾರ್ದತೆ ಉತ್ತೇಜಿಸುವ ಸಾಂಸ್ಕೃತಿಕ ಸಂಸ್ಥೆ ಎಂವಿಎ ಸರ್ಕಾರ ಬಂದ ಕೇವಲ ಏಳು ದಿನಗಳಲ್ಲಿ ವಿಸರ್ಜನೆಗೊಂಡಿತು. ಮಹಾಯುತಿ ಸರ್ಕಾರ ಮರಳಿದ ನಂತರ ಈ ತಂಡವು ಒಂದು ವರ್ಷದಿಂದ ಅಪಾಯಿಂಟ್ಮೆಂಟ್ಗಾಗಿ ಕಾಯುತ್ತಿದೆ!
ಟ್ವಿಟರ್ ಮತ್ತು ಫೇಸ್ಬುಕ್ ಮುಂತಾದೆಡೆ ಶರವೇಗವಾಗಿ ಬೆರಳುಗಳನ್ನು ಕುಣಿಸುವ ನಾಯಕರು ಬಿಜೆಪಿ-ಆರ್ಎಸ್ಎಸ್ ಕಾರ್ಯಕರ್ತರ ಹತ್ಯೆಗಳ ಬಗ್ಗೆ ಹೆಚ್ಚಾಗಿ ಮೌನವಾಗಿದ್ದರು. ಬಿಜೆಪಿ ನಾಯಕತ್ವಕ್ಕೆ ತನ್ನ ಕಾರ್ಯಕರ್ತರ ಬಗ್ಗೆ ಕಾಳಜಿ ಇಲ್ಲ ಎಂಬ ಅನಿಸಿಕೆ ಆಳವಾಗಿಯೇ ಬೇರು ಬಿಟ್ಟಿದೆ. ನಾಯಕರಿಗೆ ಸಂವೇದನಾಶೀಲತೆ ತೋರಿಸುವುದು ಮತ್ತು ಸಾರ್ವಜನಿಕವಾಗಿ ಬೆಂಬಲವನ್ನು ತೋರಿಸುವುದು ಅಷ್ಟೊಂದು ಕಷ್ಟವೇ? ರಾಮ ಮತ್ತು ಹಿಂದೂ ಧರ್ಮವನ್ನು ಅವಮಾನಿಸುವವರು ರೆಡ್ ಕಾರ್ಪೆಟ್ ಸ್ವಾಗತವನ್ನು ಪಡೆಯುತ್ತಾರೆ ಆದರೆ ನೂಪುರ್ ಶರ್ಮಾ ಅವರನ್ನು ಸಾರ್ವಜನಿಕವಾಗಿ ಕಟುವಾಗಿ ನಿಂದಿಸಲಾಗುತ್ತದೆ. ನಾನು ಪದೇ ಪದೇ ಹೇಳಿದ್ದೇನೆ ಆಕೆ ಕೇವಲ ಹದಿಸ್ ಅನ್ನು ಮಾತ್ರ ಉಲ್ಲೇಖಿಸಿದ್ದಾಳೆಂದು. ಒಂದು ವೇಳೆ ಆಕೆ ತಪ್ಪೇ ಮಾಡಿದ್ದರೂ ನಿಮ್ಮ ಪರ ಮುಂಚೂಣಿಯಲ್ಲಿದ್ದು ಬೆಂಬಲಿಸುವವರನ್ನು ನೀವು ನಡೆಸಿಕೊಳ್ಳುವ ರೀತಿಯೇ ಇದು? ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು ಅಥವಾ ಕೇರಳದಂತಹ ಕ್ಲಿಷ್ಟ ಪ್ರದೇಶದಲ್ಲಿ ಕಾರ್ಯಕರ್ತ ಹೇಗೆ ತಾನೇ ಸುರಕ್ಷಿತ ಭಾವ ಹೊಂದಿರುತ್ತಾನೆ?
ಅನಾವಶ್ಯಕ ರಾಜಕೀಯ: ಅನವಶ್ಯಕ ರಾಜಕೀಯ ಮತ್ತು ನಿರ್ಲಕ್ಷ್ಯ ಮಾಡಬಹುದಾಗಿದ್ದ ಸನ್ನಿವೇಶಕ್ಕೆ ಮಹಾರಾಷ್ಟ್ರ ಒಂದು ಪ್ರಮುಖ ಉದಾಹರಣೆ. ಬಿಜೆಪಿ ಮತ್ತು ವಿಭಜಿತ ಎಸ್ಎಸ್ ಸರಳ ಬಹುಮತವನ್ನು ಹೊಂದಿದ್ದರೂ ಕೂಡ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣ ಬಿಜೆಪಿಗೆ ಸೇರ್ಪಡೆಗೊಂಡಿತು. ಸೋದರ ಸಂಬಂಧಿಗಳ ನಡುವಿನ ಜಗಳದಿಂದ ಎನ್ಸಿಪಿ ಶಕ್ತಿ ಕಳೆದುಕೊಂಡು ಶರದ್ ಪವಾರ್ ಎರಡು-ಮೂರು ವರ್ಷಗಳಲ್ಲಿ ಮರೆಯಾಗುತ್ತಿದ್ದರು. ಹೀಗಿರುವಾಗ ಬಿಜೆಪಿ ಯಾಕೆ ಅನಪೇಕ್ಷಿತ ಕ್ರಮವನ್ನು ಮೈ ಮೇಲೆ ಎಳೆದುಕೊಂಡಿತು? ಇದರಿಂದ ಕಾಂಗ್ರೆಸ್ ಸಿದ್ಧಾಂತದ ವಿರುದ್ಧ ವರ್ಷಗಳಿಂದ ಹೋರಾಟ ನಡೆಸಿ ಕಿರುಕುಳ ಅನುಭವಿಸಿದ್ದ ಬಿಜೆಪಿ ಬೆಂಬಲಿಗರಿಗೆ ನೋವಾಗಿದೆ. ಒಂದೇ ಏಟಿಗೆ ಬಿಜೆಪಿ ತನ್ನ ಬ್ರಾಂಡ್ ಮೌಲ್ಯವನ್ನು ಕಡಿಮೆ ಮಾಡಿಕೊಂಡಿತು. ಮಹಾರಾಷ್ಟ್ರದಲ್ಲಿ ಪಕ್ವವಾಗಲು ಹಲವು ವರ್ಷಗಳ ಕಾಲ ಹೋರಾಟ ನಡೆಸಿದ ನಂತರವೂ ಬಿಜೆಪಿ ಯಾವುದೇ ವ್ಯತ್ಯಾಸವಿಲ್ಲದ ಮತ್ತೊಂದು ರಾಜಕೀಯ ಪಕ್ಷವಾಗಿ ಅಲ್ಲಿ ನಿಂತಿದೆ.
26/11 ದಾಳಿ ಆರ್ಎಸ್ಎಸ್ ಷಡ್ಯಂತ್ರ ಎಂದು ಕರೆದು ಆರ್ಎಸ್ಎಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಬಿಂಬಿಸಿದ್ದ, ಕೇಸರಿ ಭಯೋತ್ಪಾದನೆ ಎಂಬ ಬೋಗಸ್ ಅನ್ನು ಸಕ್ರಿಯವಾಗಿ ಪ್ರಚಾರ ಮಾಡಿದ್ದ ಮತ್ತು ಹಿಂದೂಗಳಿಗೆ ಕಿರುಕುಳ ನೀಡಿದ್ದ ಕಾಂಗ್ರೆಸ್ಸಿಗರು ತಾವು ತಪ್ಪು ಮಾಡಿದೆವು ಅಥವಾ ತಮ್ಮ ಮೇಲಿನವರು ನಮಗೆ ಹಾಗೆ ಹೇಳಲು ಒತ್ತಾಯಿಸಿದರು ಎಂಬ ಕಿಂಚಿತ್ತೂ ಪಶ್ಚಾತಾಪವಿಲ್ಲದೆ ಬಿಜೆಪಿ ನಾಯಕರಾದರು. ಇದು ಬಿಜೆಪಿಯನ್ನು ಕಳಪೆ ಮಟ್ಟದಲ್ಲಿ ತೋರಿಸಿತು ಮತ್ತು ಆರ್ಎಸ್ಎಸ್ ಸಹಾನುಭೂತಿದಾರರಿಗೆ ಅಪಾರ ನೋವುಂಟು ಮಾಡಿತು. ಬಿಜೆಪಿ ನಾಯಕರಿಗೆ ಮಾತ್ರ ವಾಸ್ತವ ರಾಜಕೀಯ ಅರ್ಥವಾಗುತ್ತದೆ ಮತ್ತು ಆರೆಸ್ಸೆಸ್ ಸೋದರರು ಹಳ್ಳಿಗರು ಎಂಬ ಹುಸಿ ಅಹಂಕಾರದ ಬಗ್ಗೆ ನಿಜಕ್ಕೂ ನಗು ಬರುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ನನ್ನಂತಹ ಜನರು ಈ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದಾಗ, “ನೀವು ತುಂಬಾ ಸಂವೇದನಾಶೀಲರು, ಎಲ್ಲವೂ ಚೆನ್ನಾಗಿದೆ” ಎಂಬ ಸಮಾನ್ಯ ಉತ್ತರಗಳು ನಾಯಕರಿಂದ ಬಂದಿವೆ. ಹೊಸ ಹೈಪರ್ ಸೋಶಿಯಲ್ ಮೀಡಿಯಾ ವಾರಿಯರ್ಗಳು ಕೆಲವು ವಿಷಯಗಳಲ್ಲಿ ಬಿಜೆಪಿಯನ್ನು ಟೀಕಿಸುವ ನಮ್ಮಂತಹರನ್ನು ಟ್ರೋಲ್ ಮಾಡುವುದು ತಮಾಷೆಯೆನಿಸುತ್ತದೆ.
ಸಮುದಾಯಗಳೊಂದಿಗೆ ಸಂವಾದದ ಪ್ರಾಮುಖ್ಯತೆ: ಮೋದಿ 3.0 ರ ನಿರೀಕ್ಷೆಗಳ ಕುರಿತು ನಾನು ನನ್ನ ಹಿಂದಿನ ಲೇಖನದಲ್ಲೇ ಹೇಳಿದ್ದೇನೆ, ಸೆಮಿನಾರ್ ಕೊಠಡಿಗಳು ಮತ್ತು ಸರ್ಕಾರಿ ಕಛೇರಿಯಲ್ಲಿ ಆರಾಮವಾಗಿ ಕುಳಿತಿರುವ ಜನರ ಆಲೋಚನೆಗಳನ್ನು ಹೇರುವ ಬದಲು ಸಮುದಾಯಗಳು, ಗುಂಪುಗಳೊಂದಿಗೆ ಅಭಿವೃದ್ಧಿಯ ವಿಚಾರಗಳ ಬಗ್ಗೆ ಸಂವಾದ ನಡೆಸುವ ಬಗ್ಗೆ ನಾನು ಗಮನಸೆಳೆದಿದ್ದೇನೆ. ಈ ವಿಷಯದಲ್ಲಿ ನಿರ್ವಹಣಾ ಸಲಹೆಗಾರರ ಮಹತ್ವಾಕಾಂಕ್ಷೆಯ ವಿಚಾರಗಳ ಬಗ್ಗೆ ನಾನು ಮಾತನಾಡಲಾರೆ. ಖಾಸಗಿ ಅಥವಾ ಸರ್ಕಾರದ ಬೆಂಬಲದ ಕೊರತೆಯಿಂದಾಗಿ ನಿಧಿಗಳು ಬತ್ತಿಹೋಗುವ ಮೊದಲು ಅವರು ಅಂತಹ 100 ಸಭೆಗಳನ್ನು ನಡೆಸಿದ್ದಾರೆ. ಉತ್ತಮ ಒಳಹರಿವುಗಳನ್ನು ಇಲ್ಲಿ ಪಡೆಯಲಾಗಿದೆ. ತಳಮಟ್ಟದ ಬಿಜೆಪಿ ಕಾರ್ಯಕರ್ತರು ಖಂಡಿತವಾಗಿಯೂ ಈ ಕಸರತ್ತು ನಡೆಸಬಹುದು. ಜನರೊಂದಿಗೆ ಮರುಸಂಪರ್ಕಿಸಲು, ಒಳಹರಿವುಗಳನ್ನು ಪಡೆಯಲು ಮತ್ತು ಅದನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು ಇದು ಉತ್ತಮ ಮಾರ್ಗವಾಗಿದೆ. ಅಂತಹ ಸಂಭಾಷಣೆಗಳು ಉತ್ತಮ ಫಲಿತಾಂಶ ನೀಡಬಲ್ಲದು, ಭೂಸ್ವಾಧೀನ ಕಾನೂನುಗಳು, ಕೃಷಿ ಕಾನೂನುಗಳು ಮತ್ತು ಅಗ್ನಿವೀರ್ ಯೋಜನೆಯಂತಹ ಪ್ರಮುಖ ಕಾನೂನುಗಳನ್ನು ಸಂಧಾನದಿಂದ ಬಂದ ಫಲಿತಾಂಶದ ಮೂಲಕ ಉಳಿಸಿಕೊಳ್ಳಬಹುದು.
ಹಿಂದುತ್ವ: ಯಾರು ಇಷ್ಟಪಟ್ಟರೂ ಇಷ್ಟಪಡದಿದ್ದರೂ ಹಿಂದುತ್ವ ಬಿಜೆಪಿಯ ಕೇಂದ್ರ ವಿಷಯವಾಗಿ ಉಳಿದಿದೆ. ಅದರ ಹಿತೈಷಿಗಳು ಅದಕ್ಕೆ ಅಂಟಿಕೊಳ್ಳುವಂತೆ ಇದು ಮಾಡಿದೆ. ರಾಷ್ಟ್ರೀಯ ಪುನರುಜ್ಜೀವನಕ್ಕೆ ಕಾರಣವಾಗುವ ಸಾಂಸ್ಕೃತಿಕ ಪುನರುಜ್ಜೀವನದ ಪ್ರಾಮುಖ್ಯತೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಾಗಿದೆ. ಮೋದಿಜಿಯವರ ವಿಕಾಸ್ ಮತ್ತು ವಿರಾಸತ್ ಘೋಷಣೆಯು ಅದನ್ನು ಸೂಚಿಸುತ್ತದೆ. ಈ ಕಾರ್ಯಗಳಿಂದ ಮತ್ತು ಧಾರ್ಮಿಕ ಸಕಾರಾತ್ಮಕತೆಯಿಂದ ಆಧ್ಯಾತ್ಮಿಕತೆ ಮತ್ತು ಧಾರ್ಮಿಕತೆಯಲ್ಲಿ ಭಾರಿ ಏರಿಕೆಯಾಗಿದೆ. ಆದರೆ, ನಮ್ಮ ಸಾಂಸ್ಕೃತಿಕ ರಾಷ್ಟ್ರೀಯತೆ ನೆಲೆಗೊಂಡಿರುವ ಕೆಲವು ಪ್ರಮುಖ ವಿಷಯಗಳು ಇನ್ನೂ ಗಮನಕ್ಕೆ ಬಂದಿಲ್ಲ. ಚರ್ಚೆಗಳಲ್ಲಿ ಮೇಲುಗೈ ಸಾಧಿಸಬಹುದು ಆದರೆ ಈ ವಿಷಯಗಳ ಬಗ್ಗೆ ಕಾರ್ಯನಿರ್ವಹಿಸದಿರುವುದು ಯಾರಿಗೂ ಸಹಾಯ ಮಾಡುವುದಿಲ್ಲ. ಮೂಲ ಮತ್ತು ಬದ್ಧ ಮತದಾರರು ಅದರ ಬಗ್ಗೆ ಅತೃಪ್ತಿ ಹೊಂದಿದ್ದಾರೆ.
ಉದಾಹರಣೆಗೆ, ಜಾತ್ಯತೀತ ಸರ್ಕಾರಗಳು ಧಾರ್ಮಿಕ ಜ್ಞಾನ ವ್ಯವಸ್ಥೆ ಅಥವಾ ಶಿಕ್ಷಣವನ್ನು ಪೋಷಿಸಲು ಹೋಗದಿದ್ದರೆ, ಅದನ್ನು ಹಿಂದೂಗಳೇ ಮಾಡಬೇಕು. ಆದರೆ, ಹಿಂದೂ ದೇವಾಲಯದಲ್ಲಿ ಭಕ್ತರಿಂದ ಸಂಗ್ರಹವಾದ ಹಣವನ್ನು ಸರ್ಕಾರ ತನ್ನಲ್ಲಿ ಇಟ್ಟುಕೊಂಡು ಹಿಂದೂಗಳ ಬದಲು ಇತರ ಜಾತ್ಯತೀತ ಮತ್ತು ಹಿಂದೂಯೇತರ ಉದ್ದೇಶಗಳಿಗಾಗಿ ಬಳಸುತ್ತಿದೆ. ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿದರೆ ಅವು ಕಲೆ, ಸಂಸ್ಕೃತಿ, ಶಿಕ್ಷಣ ಮತ್ತು ಉದ್ಯಮದ ಕೇಂದ್ರವಾಗುವುದು ವಾಸ್ತವವಾಗಬಹುದು.
- ಬಿಜೆಪಿ ಮತ್ತು ಆರ್ಎಸ್ಎಸ್ ಶಿಕ್ಷಣ ವ್ಯವಸ್ಥೆ ಮತ್ತು ಪಠ್ಯ ಪುಸ್ತಕಗಳನ್ನು ಟೀಕಿಸುತ್ತಲೇ ಬಂದಿವೆ. NEP ತುಂಬಾ ಸಮಯ ತೆಗೆದುಕೊಂಡಿದೆ. ಅದು ಇನ್ನೂ ಜಾರಿಯಾಗಬೇಕಷ್ಟೇ. ಆದರೆ ಸಿಬಿಎಸ್ಇ ಪುಸ್ತಕಗಳನ್ನು ಬದಲಾಯಿಸದಂತೆ ಬಿಜೆಪಿಯನ್ನು ತಡೆದದ್ದು ಯಾವುದು? ಹೊಸ ಪುಸ್ತಕಗಳನ್ನು ನೀಡಲು ಆರ್ಎಸ್ಎಸ್ಗೆ ಸಾಧ್ಯವೇ? ವಿಪರ್ಯಾಸವೆಂದರೆ ಎನ್ಸಿಇಆರ್ಟಿ ಒಂದು ವರ್ಷದ ಹಿಂದೆ ಎಡಪಂಥೀಯರು ಮತ್ತು ಜಾತ್ಯತೀತರು ತಮ್ಮ ಮಂಡಳಿಗಳಲ್ಲಿ ಇರುವುದನ್ನು ದೃಢಪಡಿಸಿತ್ತು. 2014 ರಿಂದ ಇಡೀ ಪೀಳಿಗೆಯು ಶಿಕ್ಷಣ ಪಡೆದಿದೆ ಆದರೆ ನೈತಿಕ ಪಕ್ಷಪಾತದ ನಿರೂಪಣೆಗಳಿಗೆ ಮಾರುಹೋಗಿದೆ.
- ಗೋವು ಕಳ್ಳಸಾಗಾಣಿಕೆದಾರರಿಗಿಂತ ಹೆಚ್ಚು ಗೋರಕ್ಷಕರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಬಗ್ಗೆ ಯಾವುದೇ ಸಹಾನುಭೂತಿ ತೋರಿಸಿಲ್ಲ.
- ಎಎಸ್ಐ ಆಸ್ತಿಗಳ ಮೇಲೆ ಇರುವ ತಪ್ಪುದಾರಿಗೆಳೆಯುವ ಬೋರ್ಡ್ಗಳನ್ನು ಸಹ ಸಂಸ್ಕೃತಿ ಸಚಿವಾಲಯಕ್ಕೆ ಬದಲಾಯಿಸಲು ಸಾಧ್ಯವಾಗಲಿಲ್ಲ. ಮೊಘಲ್ ರಚನೆಗಳನ್ನು ಸಂರಕ್ಷಿಸಲು ಮತ್ತು ಸುಂದರಗೊಳಿಸಲು ಅಗಾ ಖಾನ್ ಫೌಂಡೇಶನ್ನಿಂದ ಅದು ಹಣವನ್ನು ತೆಗೆದುಕೊಂಡಿತು. ಆದರೆ ಪ್ರಾಚೀನ ಹಿಂದೂ ಕೋಟೆಗಳು ಮತ್ತು ಇತರ ರಚನೆಗಳಿಗೆ ಅಂತಹ ಅದೃಷ್ಟ ಇರಲಿಲ್ಲ. ಬಹುತೇಕ ಕಡೆ ಅವುಗಳನ್ನು ನಿರ್ಲಕ್ಷಿಸಲಾಗಿದೆ.
- WAQF ಕಾಯ್ದೆಯು ಈ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವ ಯಾವುದೇ ಆಸ್ತಿಯನ್ನು ಸುಪರ್ದಿಗೆ ತೆಗೆದುಕೊಳ್ಳುವ ಅವಕಾಶವನ್ನು ಮುಸ್ಲಿಮರಿಗೆ ನೀಡಿದೆ. ಈ ಭೂ ಕಬಳಿಕೆ ಕಾನೂನನ್ನು ಅಸ್ಪೃಶ್ಯವಾಗಿ ಬಿಡಲಾಗಿದೆ ಮತ್ತು ಅದನ್ನು ಮಾರ್ಪಡಿಸುವ ಅಥವಾ ರದ್ದುಗೊಳಿಸುವ ಯಾವುದೇ ಪ್ರಸ್ತಾಪವನ್ನು ಮುಂದಿಡುವ ಪ್ರಯತ್ನ ನಡೆದಿಲ್ಲ.
ವಿಭಜಕ ರಾಜಕೀಯದಿಂದ ಬೆದರಿಕೆ: ಶಿಕ್ಷಣ ಹಕ್ಕು ತಿದ್ದುಪಡಿ 93ಎ ಅಲ್ಪಸಂಖ್ಯಾತರಿಗೆ ಅದನ್ನು ಜಾರಿಗೊಳಿಸುವುದರಿಂದ ವಿನಾಯಿತಿ ನೀಡುತ್ತದೆ. ಅನೇಕರು ತಮ್ಮ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಹಿಂದೂ ಧರ್ಮವನ್ನು ತೊರೆದರು. ಈ ವಿನಾಯಿತಿಯನ್ನು ತೆಗೆದುಹಾಕಿದರೆ ಅದು ಜಾತ್ಯತೀತವಲ್ಲದ ಅಥವಾ ಕೋಮುವಾದಿ ಕ್ರಮವಾಗುತ್ತಿರಲಿಲ್ಲ. ಎಲ್ಲದಕ್ಕೂ ಮಿಗಿಲಾಗಿ, ಅತ್ಯುತ್ತಮ ಅಲ್ಪಸಂಖ್ಯಾತ ಸಂಸ್ಥೆಗಳಿವೆ, ಅವರು ಸಹ ವಂಚಿತರಿಗೆ ಸೇವೆ ಸಲ್ಲಿಸಬೇಕು.
ಇಂತಹ ಅಜೆಂಡಾದಿಂದ ಸಮಾಜದಲ್ಲಿ ವಿಪತ್ತನ್ನು ಸೃಷ್ಟಿಸಲು ಬಯಸುವುದು ಸರಿಯೇ ಎಂಬುದನ್ನು ಕಾಂಗ್ರೆಸ್ ಮತ್ತು ಅದರ ಸ್ನೇಹಿತರು ಯೋಚಿಸಬೇಕು. ಈ ಚುನಾವಣೆಗಳಲ್ಲಿ ಅವರು ಉತ್ತಮ ಸಾಧನೆ ಮಾಡಿದ್ದಾರೆ. ಇದೇ ಅಜೆಂಡಾವನ್ನು ಮುಂದುವರಿಸಲು ಅವು ಇಷ್ಟಪಡುತ್ತಾರೆ, ಆದರೆ ಯಾವ ಬೆಲೆ ತೆತ್ತು? ಅವರು ಸ್ವಸ್ಥ ರಾಜಕಾರಣಕ್ಕೆ ಮರಳಬೇಕು. ಬಿಜೆಪಿ ಅವರಿಗೆ ತರ್ಕ ಮತ್ತು ಡೇಟಾದೊಂದಿಗೆ ತೀವ್ರವಾಗಿ ಪ್ರತಿಕ್ರಿಯಿಸಬೇಕಾಗಿದೆ. ಮೀಮ್ಸ್ ಸೃಷ್ಟಿಸುವ ಮೂಲಕ ಉತ್ತರುಸವುದು ಸೂಕ್ತ ಪ್ರತಿಕ್ರಿಯೆಯಲ್ಲ. ಐಟಿ ಸೆಲ್ಗೆ ಪುನರ್ರಚನೆ ಮತ್ತು ಮರುತರಬೇತಿಯ ಅಗತ್ಯವಿದೆ. ಜಾತಿ ಮತ್ತು ಧರ್ಮದ ಆಧಾರದಲ್ಲಿ ಪ್ರತಿಪಕ್ಷಗಳು ಆಡಿದ ಈ ಆಟಕ್ಕೆ ಅಸಮರ್ಪಕ ಪ್ರತಿಕ್ರಿಯೆ ವ್ಯಕ್ತವಾಗಬೇಕಿದೆ. ಸುಮಾರು 11 ಕೋಟಿ ಅಮಾಯಕ ನಾಗರಿಕರ ಹತ್ಯೆಗೆ ಕಾರಣವಾದ 1960 ರ ಕಮ್ಯುನಿಸ್ಟ್ ಮಾದರಿಯ ಕಲ್ಪನೆಗಳೊಂದಿಗೆ ಆರ್ಥಿಕ ಅಶಾಂತಿಯ ಅಪಾಯದ ಬಗ್ಗೆ ಮೋದಿ ಅವರು ಪ್ರಸ್ತಾಪಿಸುವವರೆಗೂ ಗುರುತಿಸಲಾಗಿರಲಿಲ್ಲ ಮತ್ತು ಎತ್ತಿ ತೋರಿಸಲಾಗಿರಲಿಲ್ಲ. ಇದು ಬೌದ್ಧಿಕ ಆಲಸ್ಯವೇ?
ಬಿಜೆಪಿ ಮತ್ತು ಹಿಂದೂಗಳನ್ನು ಫ್ಯಾಸಿಸ್ಟ್ಗಳು ಎಂದು ಕಳಂಕ ತರುವ AI ಮತ್ತು ಅಂತಾರಾಷ್ಟ್ರೀಯ ಯತ್ನ: ಬೆದರಿಕೆಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದರೂ, ಪೂರ್ವಭಾವಿ ಕ್ರಮಗಳ ಕೊರತೆಯು ತೀವ್ರ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಯಿತು. ಬಿಜೆಪಿಯು ಎಸ್ಸಿ/ಎಸ್ಟಿ ಸಮುದಾಯಗಳ ಶೇಕಡಾ 10ರಷ್ಟು ಮತಗಳನ್ನು ಮತ್ತು ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಕಳೆದುಕೊಂಡಿತು, ಜೊತೆಗೆ ಅನುಮಾನದಿಂದ ನೋಡುವಂತೆ ಮಾಡಿಕೊಂಡಿತು. ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಚುನಾವಣಾ ವೇದಿಕೆಗಳಲ್ಲಿ ಖಂಡನೆಗಳು ಸಮರ್ಪಕವಾಗಿ ಬರಲಿಲ್ಲ. ಇದಕ್ಕೆ ಗಂಭೀರ ಪ್ರತಿಕ್ರಿಯೆಯ ಅಗತ್ಯವಿತ್ತು. ಮೀಸಲಾತಿ ರದ್ದತಿ ಮತ್ತು ಸಂವಿಧಾನವನ್ನು ನಾಶಪಡಿಸುವ ಬಗ್ಗೆ ಸುಳ್ಳು ಸುದ್ದಿ ಹರಡಿಸಿ ಚುನಾವಣೆಯನ್ನು ಎದುರಿಸಲು ಹೋದವರನ್ನು ಬಿಜೆಪಿ ತಕ್ಷಣವೇ ನ್ಯಾಯಾಲಯಕ್ಕೆ ಎಳೆಯಬೇಕು. ಇದು ಎರಡು ಅಲಗಿನ ಕತ್ತಿ ಮತ್ತು ಇದರಿಂದ ತನಗೂ ನೋವಾಗಬಹುದು ಎಂದು ವಿರೋಧ ಪಕ್ಷದವರೂ ಅರ್ಥ ಮಾಡಿಕೊಳ್ಳಬೇಕು. ಇದು ಖಂಡಿತವಾಗಿಯೂ ನಮ್ಮ ಸಮಾಜ ಮತ್ತು ರಾಷ್ಟ್ರಕ್ಕೆ ಹಾನಿ ಮಾಡುತ್ತದೆ. AI- ರಚಿತವಾದ ಸುಳ್ಳು ನಿರೂಪಣೆಗಳು, ನಕಲಿ ವೀಡಿಯೊಗಳು ಮತ್ತು ಸುಳ್ಳು ಸುದ್ದಿಗಳ ವಿರುದ್ಧ ಸರ್ಕಾರವು ಅತ್ಯಂತ ಕಠಿಣವಾಗಿ ವರ್ತಿಸಬೇಕು.
ಒಂದು ವೇಳೆ ಪ್ರತಿಪಕ್ಷಗಳು ತಾನು ಸಂವಿಧಾನ ಮತ್ತು ರಾಷ್ಟ್ರದ ಪಾಲಕ ಎಂದು ಭಾವಿಸುವುದೇ ಆದರೆ, ಅದು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಮತ್ತು ಅಧಿಕಾರವನ್ನು ಹಿಡಿಯಲು ಇಂತಹ ವಿನಾಶಕಾರಿ ವಿಧಾನವನ್ನು ಅನುಸರಿಸುವುದನ್ನು ತ್ಯಜಿಸಬೇಕು. ಬಿಜೆಪಿ ಹೊಸ ಸವಾಲುಗಳಿಗೆ ಜಾಣತನದಿಂದ ಉತ್ತರಿಸುವುದನ್ನು ನಾವು ನೋಡಿದ್ದೇವೆ. ತನ್ನ ಲೋಪದೋಷಗಳನ್ನು ಒಪ್ಪಿಕೊಂಡು ಸರಿಪಡಿಸುವ ಕ್ರಮ ಕೈಗೊಳ್ಳುವ ಪ್ರಾಮಾಣಿಕತೆ ಅದಕ್ಕೆ ಇದೆ. ಅದೇ ಕಾರಣದಿಂದ ಕೆಟ್ಟ ಸವಾಲುಗಳ ನಡುವೆಯೂ ಅದು ಎಲ್ಲಿಗೆ ತಲುಪಬೇಕಿತ್ತೋ ಇಂದು ಅಲ್ಲಿಗೆ ತಲುಪಿದೆ. ಅದು ಈ ತಾತ್ಕಾಲಿಕ ಹಿನ್ನಡೆಯನ್ನೂ ಮೆಟ್ಟಿ ನಿಲ್ಲುತ್ತದೆ. ಹುರುಪಿನ ಪರಿಶ್ರಮದ ಫಲವಾಗಿ ಅದು ಹೊಸ ಕ್ಷೇತ್ರಗಳನ್ನು ಗೆದ್ದಿರುವುದು ಸಕಾರಾತ್ಮಕ ಸುದ್ದಿ. ಸುಳ್ಳು ಸುದ್ದಿಗಳು ಮತ್ತು ಸ್ವಲ್ಪ ಮಟ್ಟಿಗೆ ಸ್ಥಳೀಯ ನಾಯಕತ್ವಗಳಿಂದಾಗಿ ಅದು ಬೆಂಬಲವನ್ನು ಕಳೆದುಕೊಂಡಿರುವ ಕ್ಷೇತ್ರಗಳಲ್ಲಿ ವಿಶ್ವಾಸವನ್ನು ಮರಳಿ ಪಡೆಯಬೇಕಾಗಿದೆ. ಅದು ತನ್ನ ಪ್ರಮುಖ ಸೈದ್ಧಾಂತಿಕ ವಿಷಯಗಳನ್ನು ಮರು-ತರಬೇತುಗೊಳಿಸಿ, ತಂಡಗಳನ್ನು ಮರುಸಂಘಟಿಸಿ ಮತ್ತು ಜನರ ಮತ್ತು ಹಿತೈಷಿಗಳ ಅಭಿಮಾನವನ್ನು ಮರಳಿ ಗಳಿಸುವ ಮೂಲಕ ಮತ್ತಷ್ಟು ಸದೃಢವಾಗಿ ಎದ್ದು ಬರಲಿದೆ ಎಂಬ ಖಚಿತ ಭರವಸೆ ನನಗಿದೆ.
ಮೂಲ ಲೇಖನ: ಆರ್ಗನೈಝರ್
ಲೇಖಕ: ರತನ್ ಶಾರ್ದ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.