ಕುತ್ಲೂರು : ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಮೂಲಭೂತ ಸೌಲಭ್ಯ ವಂಚಿತ ಪ್ರದೇಶ ಕುತ್ಲೂರಿಗೆ ಬಂಟ್ವಾಳ ಉಪವಿಭಾಗದ ಎಎಸ್ಪಿ ರಾಹುಲ್ ಕುಮಾರ್ ಸೋಮವಾರ ಕುತ್ಲೂರಿಗೆ ಭೇಟಿ ನೀಡಿ ಆದಿವಾಸಿಗಳೊಂದಿಗೆ ಮಾತುಕತೆ ನಡೆಸಿ, ಪರಿಶೀಲನೆ ನಡೆಸಿದರು.
ಸ್ವಾತಂತ್ರ್ಯ ಲಭಿಸಿ 68 ವರ್ಷಗಳು ಕಳೆದರೂ ಕೂಡಾ ಶತಮಾನಗಳಿಂದ ದಟ್ಟ ಅರಣ್ಯದ ನಡುವೆ ಬದುಕುತ್ತಿರುವ ಆದಿವಾಸಿಗಳ ಜೀವನಕಂಡು ಮರುಗಿದ ಎಎಸ್ಪಿ ಅವರು ಅಲಂಬದಿಂದ ಕುರಿಯಾಡಿ ತನಕ ಸುಮಾರು ಮೂರು ಕಿ.ಮೀ. ದೂರ ಆದಿವಾಸಿಗಳೊಂದಿಗೆ ಕಾಲ್ನಡಿಗೆಯಲ್ಲೇ ನಡೆದರು. ಕುರಿಯಾಡಿ ಅಂಗನವಾಡಿಗೆ ಭೇಟಿ ನೀಡಿದ ಅವರು ಅಲ್ಲಿನ ಪುಟಾಣಿಗಳೊಂದಿಗೆ ಸ್ವಲ್ಪ ಸಮಯ ಕಳೆದರು. ಬಳಿಕ ಅಲ್ಲಿ ಸೇರಿದ್ದ ಆದಿವಾಸಿಗಳೊಂದಿಗೆ ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು. ಸ್ಥಳೀಯ ಅಂಗನವಾಡಿಗೆ ದಾಖಲೆ ಪತ್ರ ಇಲ್ಲದಿರುವ ಬಗ್ಗೆ ಗ್ರಾಮಸ್ಥರು ತಿಳಿಸಿದಾಗ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಮಾತುಕತೆ ನಡೆಸಿ ಶೀಘ್ರವಾಗಿ ದಾಖಲೆ ಪತ್ರಗಳನ್ನು ಮಾಡಿಸಿಕೊಡುವ ಬಗ್ಗೆ ಭರವಸೆ ಇತ್ತರು.
ಕುರಿಯಾಡಿ ಅಂಗನವಾಡಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡುವುದಿಲ್ಲ. ಇದರಿಂದಾಗಿ ಈ ಅಂಗನವಾಡಿ ಇಲಾಖೆಯ ಕೊಂಡಿಯಾಗಿ ಕೆಲಸ ಮಾಡಲು ಕಷ್ಟಕರವಾಗಿದೆ. ಪೌಷ್ಟಿಕ ಆಹಾರವನ್ನು ಅಲಂಬದಿಂದ 3 ಕಿ.ಮೀ. ತಲೆಹೊರೆಯಲ್ಲಿಯೇ ತರಬೇಕಾಗಿದೆ. ಇದಕ್ಕಾಗಿ ಪ್ರತೀ ತಿಂಗಳು ಪ್ರತಿ ಮನೆಯಿಂದ ನೂರು ರೂಪಾಯಿ ಪಡೆಯಬೇಕಾದ ಅನಿವಾರ್ಯತೆ ಇದೆ. ಇದು ಮಲೆಕುಡಿಯ ಸಮುದಾಯಕ್ಕೆ ದೊಡ್ಡ ಹೊರೆಯಾಗಿದೆ ಎಂಬ ವಿಚಾರವನ್ನು ಸ್ಥಳೀಯರು ಎಎಸ್ಪಿಯವರ ಗಮನಕ್ಕೆ ತರಲಾಯಿತು. ಕುಕ್ಕಾಜೆ ಕ್ರಾಸ್ನಿಂದ ಅಲಂಬ ತನಕದ ಮರುಡಾಮರೀಕರಣಕ್ಕೆ ರಾಷ್ಟ್ರೀಯ ಉದ್ಯಾನವನದ ಹೆಸರಿನಲ್ಲಿ ವನ್ಯಜೀವಿ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿರುವ ಬಗ್ಗೆ ತಿಳಿಸಿದ ವಿಠಲ ಮಲೆಕುಡಿಯ ಅವರು ಆದಿವಾಸಿಗಳು ವಾಸಿಸುವ ಪ್ರದೇಶಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪೂರಕವಾಗಿರುವ ಅರಣ್ಯ ಹಕ್ಕು ಕಾಯ್ದೆಯ ಉಲ್ಲಂಘನೆಯಾಗುತ್ತಿದ್ದು ಇದನ್ನು ತಡೆಯುವ ಮೂಲಕ ಈ ಭಾಗದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ವಿನಂತಿಸಿದ ಅವರು ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ನಾವೆಲ್ಲರೂ ಕತ್ತಲೆಯಲ್ಲಿಯೇ ಬದುಕಬೇಕಾಗಿದೆ. ನಮ್ಮ ಬದುಕಿಗೆ ಬೆಳಕು ನೀಡುವ ಕೆಲಸ ಎಲ್ಲಾ ಇಲಾಖೆಗಳು ಸೇರಿ ಮಾಡಬೇಕಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಎ.ಎಸ್ಪಿಯವರು ಈ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಈ ಭಾಗದ ಅಭಿವೃದ್ಧಿಗಾಗಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ವ್ಯವಹರಿಸುವುದಾಗಿ ತಿಳಿಸಿದರು.
ಈ ಪ್ರದೇಶದಲ್ಲಿ ವಾಸಿಸುವ ಆದಿವಾಸಿಗಳಿಗೆ ಹಕ್ಕುಪತ್ರ ಇಲ್ಲದೆ ಪರದಾಡುವಂತಾಗಿದ್ದು ಸರಕಾರದ ಯಾವುದೇ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಈ ಭಾಗದ ಆದಿವಾಸಿಗಳ ಮೇಲೆ ನಿರಂತರವಾಗಿ ದೌರ್ಜನ್ಯವೆಸಗುತ್ತಿದ್ದಾರೆ. ನಮ್ಮ ಜಮೀನಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಅವಕಾಶ ನೀಡುತ್ತಿಲ್ಲ. ಅಭಿವೃದ್ಧಿ ಕೆಲಸ ಮಾಡಿದರೆ ಅರಣ್ಯ ಲೂಟಿಯ ಹೆಸರಿನಲ್ಲಿ ಸುಳ್ಳು ಕೇಸು ಹಾಕಿ ಹಿಂಸಿಸಲಾಗುತ್ತಿದೆ. ವಿವಿಧ ಆಮೀಷ ನೀಡಿ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದ್ದಾರೆ. ಇವರ ವಿರುದ್ಧ ಇಲಾಖೆ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ಆದಿವಾಸಿಗಳು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕ ವಿಠಲ್ ಮಲೆಕುಡಿಯ, ತಾಲೂಕು ಅಧ್ಯಕ್ಷ ವಸಂತ ನಡ, ಜತೆ ಕಾರ್ಯದರ್ಶಿ ಜಯಾನಂದ ಸವಣಾಲು, ದಲಿತ ಹಕ್ಕುಗಳ ಹೋರಾಟ ಸಮಿತಿಯ ಈಶ್ವರಿ, ಸ್ಥಳೀಯರಾದ ಪೂವಪ್ಪ ಮಲೆಕುಡಿಯ, ಶಶಿಧರ, ಸುಧಾಕರ, ಸುಜಾತ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.